Sunday, April 20, 2008

ಮರೆತಿದ್ದೇವೆ.

ಕ್ರೌಂಚ ಪಕ್ಷಿಗಳಿಂದ ಬೇಡರೊಬ್ಬರು ಮಹಾಕವಿ ವಾಲ್ಮೀಕಿ ಎನಿಸಿಕೊಂಡರು. ನಮ್ಮ ಧರ್ಮಕ್ಕೆ ಮೂಲ ಕಾವ್ಯಗಳಲ್ಲಿ ಒಂದೆನಿಸಿಕೊಂಡ ರಾಮಾಯಣದ ರಚನೆಗೆ ಕಾರಣ ಕ್ರೌಂಚಪಕ್ಷಿ. ನಾವಿದನ್ನು ಮರೆತಿದ್ದೇವೆ.

ನಳ ದಮಯಂತಿಯರ ಪ್ರೇಮಪ್ರಕರಣದಲ್ಲಿ ಹಂಸವೇ ದೂತ. ಹಂಸವನ್ನು ನಾವು ಮರೆತದ್ದೇವೆ.

ವೈನತೇಯ ಗರುಡನನ್ನ ವಿಷ್ಣುವಿನ ಫೋಟೋ ನೋಡಿದಾಗ ಮಾತ್ರ ನೆನಪಿಸಿಕೊಳ್ಳಲಿಚ್ಛಿಸುತ್ತೇವೆ.

ಪಾರಿವಾಳಗಳನ್ನ ಪಾರ್ಕಿಂಸನ್ ರೋಗಿಗಳಿಗೆ ಆಹಾರವಾಗಿ ಮಾಡಿ ಅವುಗಳು ಒಂದು ಕಾಲದಲ್ಲಿ ನಮ್ಮ ಪೋಸ್ಟ್ ಮ್ಯಾನ್ ಗಳಾಗಿದ್ದವೆಂಬುದನ್ನು ಮರೆತಿದ್ದೇವೆ.

ಗುಬ್ಬಚ್ಚಿಗಳನ್ನು ನಾವೇ ಬೆಂಗಳೂರಿನಿಂದ ಓಡಿಸಿದ್ದೇವೆ. ಕಳವಳ ವ್ಯಕ್ತಪಡಿಸುವುದಿರಲಿ, ಅವುಗಳ ಬಗ್ಗೆ ನಾವು ಮಾತಾಡುವುದನ್ನೂ ಮರೆತಿದ್ದೇವೆ.

ಕಾಗೆಗಳನ್ನು ಎಂಜಲು ಕೈಯಲ್ಲಿಯೂ ಓಡಿಸದೇ ಗಾದೆಯ ಸತ್ಯವನ್ನು ಉಳಿಸಿದ್ದೇವೆ.

ಹೌದು . . .ಪಕ್ಷಿಗಳನ್ನು ನಾವು ಮರೆತಿದ್ದೇವೆ.

ಈ ಲೇಖನ ಬರೆಯುವುದಕ್ಕೆ ಕಾರಣ, ಪ್ರವಾಸದಿಂದ ಮರಳಿ ಬಂದ ನಮ್ಮ ಬಾಂಧವರೊಬ್ಬರು ಹೇಳಿದ ಪ್ರವಾಸ ಕಥನ ಮತ್ತು ನಮ್ಮ ಮನೆಯ ಸಜ್ಜೆಯ ಮೇಲಿನ ಎಸಿ ಡಬ್ಬದ ಹಿಂದಿದ್ದ ಪಾರಿವಾಳದ ಗೂಡು.

ಮೊನ್ನೆ ಅಮೇರಿಕೆಗೆ ಪ್ರವಾಸಕ್ಕೆ ಎಂದು ಹೋಗಿದ್ದ ನಮ್ಮ ದೊಡ್ದಪ್ಪ ದೊಡ್ದಮ್ಮ ಬಂದಿದ್ದರು ಮನೆಗೆ. ಅಲ್ಲಿಯ ಕೆಲವು ಜಾಗಗಳು ಮತ್ತವುಗಳ ವೈಶಿಷ್ಟ್ಯಗಳ ಬಗ್ಗೆ ದೀರ್ಘವಾಗಿಯೇ ಮಾತಾಡಿದರು. ಅಲ್ಲಿನ ಮಕ್ಕಳು ಮತ್ತು ಕೆಲವು ಹಿರಿಯರು ಮನೆಯ ಮುಂದೆ ಅಥವಾ ಮನೆಯ ಮೇಲೆ, ಲಾನ್ ಗಳಲ್ಲಿ ಹಕ್ಕಿಯ ಗೂಡುಗಳನ್ನು ಮಾಡಿ ನೀರು ಮತ್ತು ಧಾನ್ಯದ ಕಾಳುಗಳನ್ನು ಹಾಕುತ್ತಾರಂತೆ...ಅಲ್ಲಿನ ಪಕ್ಷಿಗಳಿಗೆ. ಇವರು ಅದನ್ನು ಮಕ್ಕಳ creativity ಮತ್ತು ದೊಡ್ದವರ ಔದಾರ್ಯ ಎನ್ನುವಂತೆ ಬಿಂಬಿಸಿದರು. ಆದರೆ ಅವರು ಒಂದು ವಿಷಯ ಮರೆತಂತಿತ್ತು. ಭಾರತೀಯರು ಭಾರತದಲ್ಲಿ ಮನೆಯಲ್ಲಿ ಯಾವುದೇ ಹಬ್ಬಆಚರಿಸಲಿ, ಅಥವ ಮನೆಯಲ್ಲಿ ಪಾಯಸದ ಊಟವಾಗಲಿ ದೇವರಿಗೆ ನೈವೇದ್ಯವಾದ ನಂತರ ಸಣ್ಣ ವೀಳ್ಯದೆಲೆ ಮೇಲೋ ಅಥವಾ ಬಾಳೇ ಎಲೆಯ ಮೇಲೋ ಮಾಡಿದ ಊಟವೆಲ್ಲವನ್ನೂ ಸ್ವಲ್ಪ ಸ್ವಲ್ಪ ಹಾಕಿ ಮಕ್ಕಳಿಗೆ " ತಾರ್ಸಿ ಮೇಲಿಟ್ಟು ಬಾ....ಆಮೇಲೆ ಊಟ ಮಾಡೋಣ " ಎಂದು ಹೇಳುತ್ತಿದ್ದುದನ್ನು ಅವರು ಮರೆತಿದ್ದಾರೆ. ನಮ್ಮ ತಾತ ನನಗೆ ಹೇಳುತ್ತಿದ್ದರು ಈ ಕೆಲಸ, ನಮ್ಮ ತಂದೆ ಈಗಲೂ ನನಗೇ ಹೇಳುತ್ತಾರೆ ಇದನ್ನ. ಅಮೇರಿಕದವರು ಅದನ್ನ ಈಗೀಗ ಅಳವಡಿಸಿಕೊಂಡರು...ನಾನು ಅದನ್ನು ವರ್ಷಾನುಗಟ್ಟಲೆಇಂದ ಈ ಥರದ ನೈವೇದ್ಯದೆಲೆ ಅರ್ಪಣ ಮತ್ತು ಕಾಗೆಗಳಿಗೆ ಪಿಂಡಪ್ರದಾನ ಮಾಡುವ ಮೂಲಕ ಆಚರಿಸಿಕೊಂಡು ಬರುತ್ತಿದ್ದೇವೆ.

ಒಂದು ತಿಂಗಳ ಹಿಂದಿನ ಮಾತು . ಮಟಮಟ ಮಧ್ಯಾಹ್ನದಲ್ಲಿ ಒಮ್ಮೆ "ಗುಟುರ್ಗೂ ಗುಟುರ್ಗು... " ಎಂಬ ಶಬ್ದ ಕಿಟಕಿಯ ಮೂಲಕ ಬಂದು ನಿದ್ದೆಯಿಂದ ನನ್ನನ್ನು ಎಬ್ಬಿಸಿತು. ಟೆರೇಸಿನ ಬಾಗಿಲ ತೆಗೆದು ಎಸಿ ಡಬ್ಬಕ್ಕೇನಾಗಿರಬಹುದೆಂದು ಪರೀಕ್ಷಿಸಲು ಹೋದೆ. ಅಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು !! ಪಾರಿವಾಳಗಳೆರಡು ಅಲ್ಲಿ ಗೂಡು ಕಟ್ಟಲು ಸಣ್ಣ ಸಣ್ಣ ಟೊಂಗೆಗಳನ್ನು ಒಟ್ಟುಗೂಡಿಸುತ್ತಿದ್ದವು. ಸತ್ಯವಾಗಲೂ ಹೇಳುತ್ತೇನೆ....ನಾನು ಹಿಂದೆಂದೂ ಪಾರಿವಾಳಗಳನ್ನು ಅಷ್ಟು ಹತ್ತಿರದಿಂದ ನೋಡಿಯೇ ಇರಲಿಲ್ಲ !! ಅವು ನನ್ನನ್ನು ನೋಡಿದಾಕ್ಷಣ ಪಾಪ ಹೆದರಿ ಹಾರಿ ಹೋದವು. ನಾನವಕ್ಕೆ ಏನೂ ಮಾಡುವುದಿಲ್ಲ ಎಂದು ಹೇಳಲು ನನಗೆ ಅವುಗಳ ಭಾಷೆ ಗೊತ್ತಿಲ್ಲ !! ಆದರೆ ಮನೆಗೆ ಬಂದಿರುವ ಈ ಪುಟ್ಟ ಅತಿಥಿಗಳಿಗೆ ನಾನು ಸತ್ಕರಿಸದಿರುವುದು ನನ್ನ ಸಂಸ್ಕಾರಕ್ಕೆ ಸರಿ ಬರಲಿಲ್ಲ. ಅವಕ್ಕೆ ನೋವಾಗದಂತೆ, ಉಪಯೋಗವಾಗುವಂತೆ ನಾನೇನಾದರೂ ಮಾಡಲೇಬೇಕಿತ್ತು. ಸರಿ, ಬೆಳಿಗ್ಗೆ ನಾನು ಕಾಲೇಜಿಗೆ ಹೋಗುವಾಗ ಮತ್ತು ಸಾಯಂಕಾಲ ಅವು ಮರಳಿ ಬರುವ ಸ್ವಲ್ಪ ಹೊತ್ತಿನ ಮುಂಚೆ ಒಂದು ಹಿಡಿ ಅಕ್ಕಿ ಕಾಳನ್ನು ಕಾಂಪೌಂಡ್ ಬಳಿ ಹಾಕಿರುತ್ತಿದ್ದೆ. ಅವಲ್ಲದಿದ್ದರೂ ಬೇರೆ ಹಕ್ಕಿಗಳಾದರೂ ಬಂದು ತಿಂದುಕೊಂಡು ಹೋಗಲಿ ಎಂದು ನಾನು ದಿನಾಗಲೂ ಒಂದು ಹಿಡಿ ಅಕ್ಕಿ ಕಾಳನ್ನು ತಾರ್ಸಿಯ ಮೇಲೆ ಹಾಕುವುದನ್ನು ಶುರು ಮಾಡಿದ್ದೇನೆ.




ಎರಡು ವಾರ....ಗೂಡಲ್ಲಿ ಒಂದು ಮೊಟ್ಟೆ ಕಂಡಿತು !!





ನನಗೆ ಪಾರಿವಾಳಗಳ ಸಂಸಾರದ ಹೊಸ ಸದಸ್ಯನ ನೋಡಲು ದಿನಾ ಕಾತರ !! ತಾಯಿ ಪಾರಿವಾಳ ಅದಕ್ಕೆ ಕಾವೂ ಕೊಡಬೇಕಿತ್ತು, ಸುತ್ತ ಹಾರಾಡುತ್ತಿದ್ದ ಹದ್ದುಗಳಿಂದ ತನ್ನ ಗೂಡನ್ನೂ ರಕ್ಷಿಸಿಕೊಳ್ಳಬೇಕಿತ್ತು. ನಾನು ಹತ್ತು ನಿಮಿಷದ ಮಟ್ಟಿಗೆ ಎಸಿ ಆನ್ ಮಾಡಿ ಶಾಖ ಉತ್ಪತ್ತಿ ಮಾಡಿ ತಾಯಿ ಪಾರಿವಾಳ ಹಾರಿ ಹೋದಾಗ ಗೂಡಲ್ಲಿ ಶಾಖ ತಲುಪುವಂತೆ ಮಾಡಲು ಪ್ರಯತ್ನಿಸಿದೆ. ಆ ಶಾಖ ಪಾರಿವಾಳ ಕೊಡುವ ಕಾವಿಗೆ ಸಮವೋ ಇಲ್ಲವೋ ನನಗೆ ತಿಳಿಯದು ... ಆದರೆ ನನಗೆ ಅವಕ್ಕೆ ಸಹಾಯ ಮಾಡಬೇಕೆಂದು ಬಹಳ ಅನಿಸುತ್ತಿತ್ತು. ಸದ್ಯೋಜಾತನಿಗೆ ನನ್ನ ಬಯಕೆ ಪೂರೈಸುವ ಇಚ್ಛೆ ಇರಲಿಲ್ಲ ಎಂದೆನಿಸುತ್ತದೆ...ಹದ್ದೊಂದು ಬಂದು ಆ ಗೂಡನ್ನು ಧ್ವಂಸ ಮಾಡಿ ಹೋಗಿತ್ತು ಎಂದು ಕಾಣತ್ತೆ ಮೊನ್ನೆ !! ಆ ಪುಟ್ಟ ಅತಿಥಿ ಈ ಪ್ರಪಂಚವನ್ನು ತನ್ನಪುಟ್ಟ ಪಿಳಿ ಪಿಳಿ ಕಣ್ಣಲ್ಲಿ ನೋಡಿತೋ ಇಲ್ಲವೋ ನಾನು ತಿಳಿಯಲಾಗಲೇ ಇಲ್ಲ . ಅಂದೇ ನಮ್ಮ ದೊಡ್ದಪ್ಪ ದೊಡ್ದಮ್ಮ ಈ ಹಕ್ಕಿಗೂಡುಗಳ ವಿಷಯ ಪ್ರಸ್ತಾಪಿಸಿದ್ದು ಕಾಕತಾಳೀಯ ಎನಿಸಿತು !

ಈಗೀಗ ಹಬ್ಬದ ಆಚರಣೆ ಮಹತ್ವ ಕಳೆದುಕೊಂಡು ಯಾಂತ್ರಿಕವೆನಿಸುತ್ತಿವೆ, ಶ್ರಾದ್ಧವು ನಂಬುಗೆಯನ್ನಾಧರಿಸಿ ಪ್ರಶ್ನಾರ್ಥಕವಾಗಿ ನಿಂತಿದೆ. ನಮ್ಮ ಬದುಕಿನಲ್ಲಿ ನಾವು ತಿಂದು, ಬೇರೆಯವರಿಗೆ ಹಾಕುವಷ್ಟು ಧನ ಧಾನ್ಯಗಳಿದ್ದರೂ ನಾವು ತೃಪ್ತಿ ಹೊಂದದೇ ಮತ್ತಷ್ಟು ಗಳಿಸಲು ನಿರಂತರ ಹೋರಾಟ ನಡೆಸಿದ್ದೇವೆ. ಹಕ್ಕಿಗಳಿಗೆ ಒಂದು ಹಿಡಿ ಕಾಳು ಹಾಕದ ನಾವು, ಹೋಟೇಲುಗಳಲ್ಲಿ ದುಡ್ದು ಕೊಟ್ಟು, ಆಹಾರವನ್ನು ಚೆಲ್ಲುತ್ತೇವೆ !!

ಅಮೇರಿಕೆಯವರನ್ನು ಅನುಕರಿಸುವುದರಲ್ಲಿಯೇ ನಮಗಾನಂದ ಲಭಿಸುವ ಹಾಗೆ ಕಾಣುತ್ತದೆ. ನಮ್ಮ ದೇಶದ ಆಚರಣೆಗಳನ್ನು ಅರಿಯುವುದನ್ನು ಮರೆತಿದ್ದೇವೆಯೇ ? ನಾವು ನಮ್ಮ ಧರ್ಮವನ್ನು ಮರೆತಿದ್ದೇವೆಯೇ ?


ನಾವೇಕೆ ಹೀಗೆ ?

9 comments:

ಅಂತರ್ವಾಣಿ said...

adbhuthavaada articleu..!!!"

hakkigaaLige sahaaya maaDo ninna guNa nODi thumbaa saMtOsha aaythu.

"ನಾನವಕ್ಕೆ ಏನೂ ಮಾಡುವುದಿಲ್ಲ ಎಂದು ಹೇಳಲು ನನಗೆ ಅವುಗಳ ಭಾಷೆ ಗೊತ್ತಿಲ್ಲ !!" - ee maathu nanna
manakke taTTitu.

Lakshmi Shashidhar Chaitanya said...

ಗಂಡಭೇರುಂಡರ ಪರವಾಗಿ :

Greece-inaa kabbagaLanOduvaru dehaliyali

Kaashiyaa shaastragaLan oxford-inavaru

Desha-kaala vibhaaga manada raajyadoLiradu,

Shvaasavadu bommanadu – mankutimma…..



Ee kagga nenpaaytu nange ee aticle odi.. J

Srikanth - ಶ್ರೀಕಾಂತ said...

'moola' bhaarateeya samskruti adbhutavaaddu... aadare eshto talemaarugaLinda samskrutiya niyamaacharaNegaLannu saDilagoLisikoLLuttaa bandiddEve... namma aa kshaNada anukoolakke!

"naavEke heege" endare nanage gottilla; "naavu 'heege' irabaaradittu... haLe kaaladavara thara 'haage' irabekaagittu" endu maatra eshto sarti ansatte.

ravikumar.a said...

namaste,
"paarivalada madnvara nadu naduve
haddina manassugalu"
- naavu namma laabakkagi aneka kaaranagalannu needi;edi pakshi sankulavanee nasha maadutteve.
namaa samskruthiya bootha-jeeva dayeyannu maretideve,
maatha karune thorisutta krithiyalli pakshigalannu panjaradalli koodi haki , avugalige svathatravanne nirbandisiddeve? eentha manavaru naavu?

danyavaadagalu inthi nimma
ravikumar.a

Parisarapremi said...

ಈ ಅಂಕಣದ ಬಗ್ಗೆ ನನ್ನದು ಹಲವಾರು ತಕರಾರುಗಳಿವೆ, ಅನಿಸಿಕೆ ಅಭಿಪ್ರಾಯಗಳಿವೆ.

1. ಭಾರತೀಯ ಸಂಸ್ಕೃತಿಯ ಆಧಾರಸ್ತಂಭಗಳಾಗಿವೆ ಎಂಬ ಕಾರಣಕ್ಕೆ ಪಕ್ಷಿಗಳನ್ನು ರಕ್ಷಿಸಬೇಕಿಲ್ಲ. ಪಕ್ಷಿಗಳನ್ನು ಆ ಗ್ರಂಥಗಳಲ್ಲಿ ಬಳಸಿಕೊಂಡಿದ್ದಾರಷ್ಟೆ. ನಂಗ್ಯಾಕೋ ಆ ಕಾರಣ ಒಪ್ಪಿಗೆಯಾಗಲಿಲ್ಲ. ರಾಮಾಯಣದಲ್ಲಿರಲಿ, ಭಾರತದಲ್ಲಿರಲಿ, ಭಾಗವತದಲ್ಲಿರಲಿ ಅಥವಾ ಎಲ್ಲೂ ಇಲ್ಲದೇ ಇರಲಿ, ರಕ್ಷಿಸಬೇಕಾದ್ದು ನಮ್ಮ ಹೊಣೆ. ಜೊತೆಗೆ, ಆ ಕಾಲದ ಗ್ರಂಥಗಳಲ್ಲಿ ಬಳಸಿಕೊಂಡಿರುವ ಅನೇಕ ಪಕ್ಷಿಗಳು ಕೇವಲ ಕಾಲ್ಪನಿಕ, ಫಾರ್ ಎಕ್ಸಾಂಪ್ಲ್, ಹಂಸ, ಗರುಡ...

2. 'ಸದ್ಯೋಜಾತ'ನ ಸೃಷ್ಟಿಯಾದ ಹದ್ದನ್ನು ಯಾಕೋ ವಿಲ್ಲನ್ ಮಾಡಿದ್ದೀಯ ಲೇಖನದಲ್ಲಿ...

3. "ಹಕ್ಕಿಗಳಿಗೆ ಒಂದು ಹಿಡಿ ಕಾಳು ಹಾಕದ ನಾವು, ಹೋಟೇಲುಗಳಲ್ಲಿ ದುಡ್ದು ಕೊಟ್ಟು, ಆಹಾರವನ್ನು ಚೆಲ್ಲುತ್ತೇವೆ !!" - ಕೊನೇ ಪಕ್ಷ ಆ ಚೆಲ್ಲುವುದನ್ನೂ ಹಕ್ಕಿಗಳಿಗೆ ಹಾಕಲಾಗುವುದಿಲ್ಲ. ಅಷ್ಟು ಪಾಪಿಗಳು ನಾವು... :-)

4. ಅಮೆರಿಕೆಯನ್ನು ಅನುಕರಿಸಿದರೆ ಹೀಗಾಗೋದಿಲ್ಲ. ನಮ್ ಕರ್ಮಕಾಂಡ, ಇತ್ಲಾಗೆ ಅಮೆರಿಕಾನೂ ಇಲ್ಲ, ಭಾರತವೂ ಇಲ್ಲ ಅನ್ನೋ ರೀತೀಲಿ ಬದುಕಿದರೆ ಹೀಗೇ ಆಗೋದು.. ನಾವು ಅದಕ್ಕೇ ಹೀಗೆ!! ಯಾವುದಾದರೂ ಒಂದು ದೋಣಿಯ ಮೇಲೆ ಯಾನ ಮಾಡಬೇಕು. ಎರಡೆರಡೂ ಬೇಕೆನ್ನುವವರ ಪಾಡು ನಮ್ಮದು!!

5. ಅಂದ ಹಾಗೆ, ಅಮೇರಿಕೆಯಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿಯಿರುವವರು ಶೇ.90!! ನಮ್ಮಲ್ಲಿ ಶೇ.10.. :-(

ನಾವಡ said...

ನನಗನ್ನಿಸಿದ್ದು,
ಬದುಕಿಗೆ ಯಾವುದೇ ಸಿದ್ಧಾಂತವಿಲ್ಲ.
ನಾವಡ

Lakshmi Shashidhar Chaitanya said...

1. ಭಾರತೀಯ ಸಂಸ್ಕೃತಿಯ ಆಧಾರಸ್ತಂಭಗಳಾಗಿವೆ ಎಂಬ ಕಾರಣಕ್ಕೆ ಪಕ್ಷಿಗಳನ್ನು ರಕ್ಷಿಸಬೇಕಿಲ್ಲ. ಪಕ್ಷಿಗಳನ್ನು ಆ ಗ್ರಂಥಗಳಲ್ಲಿ ಬಳಸಿಕೊಂಡಿದ್ದಾರಷ್ಟೆ. ನಂಗ್ಯಾಕೋ ಆ ಕಾರಣ ಒಪ್ಪಿಗೆಯಾಗಲಿಲ್ಲ. ರಾಮಾಯಣದಲ್ಲಿರಲಿ, ಭಾರತದಲ್ಲಿರಲಿ, ಭಾಗವತದಲ್ಲಿರಲಿ ಅಥವಾ ಎಲ್ಲೂ ಇಲ್ಲದೇ ಇರಲಿ, ರಕ್ಷಿಸಬೇಕಾದ್ದು ನಮ್ಮ ಹೊಣೆ. ಜೊತೆಗೆ, ಆ ಕಾಲದ ಗ್ರಂಥಗಳಲ್ಲಿ ಬಳಸಿಕೊಂಡಿರುವ ಅನೇಕ ಪಕ್ಷಿಗಳು ಕೇವಲ ಕಾಲ್ಪನಿಕ, ಫಾರ್ ಎಕ್ಸಾಂಪ್ಲ್, ಹಂಸ, ಗರುಡ...

ಗುರುಗಳೆ,
ರಾಮಾಯಣ ಮುಂತಾದ ಗ್ರಂಥಗಳಲ್ಲಿ ಪಕ್ಷಿಗಳನ್ನು ವಾಹನವಾಗಿಸಿರುವ concept ನ ನಿಜವಾದ ಅರ್ಥವೇ ನಾವದನ್ನು ಗೌರವದಿಂದ ಕಂಡು ರಕ್ಷಿಸಲಿ ಅಂತ ಎಂದು ನನ್ನ ಅಭಿಪ್ರಾಯ. ಆದರೆ ಕರ್ಮಕಾಂಡದ ವಿಶಯ ಏನೆಂದರೆ, ನಾವು ಈಗೀಗ ರಾಮಾಯಣ ಹಿತೋಪದೇಶಗಳನ್ನು ಓದುವುದನ್ನು ಬಿಟ್ಟುಬಿಟ್ಟಿದ್ದೇವೆ. ಪ್ರಾಣಿರಕ್ಷಣೆ ಸಂಸ್ಕಾರದಲ್ಲೇ ಬಂದು ಸಂಸ್ಕೃತಿಯಾಗಲಿ ಎಂಬ ಹಿರಿಯರ ಉದ್ದೇಶ ನಿಷ್ಫಲವಾಗಿರೋದು ವಿಪರ್ಯಾಸ. ಅಲ್ಲಿ ಇರಲಿ ಇಲ್ಲದಿರಲಿ ರಕ್ಷಿಸುವುದು ನಮ್ಮ ಹೊಣೆಯೇ ಎನ್ನುವುದು ಸರಿಯಾದರೂ ಪುರಾಣ ಪುಣ್ಯಕಥೆಗಳ ಶಂಖದಿಂದ ಬಿದ್ದ ನೀರೇ ತೀರ್ಥವಲ್ಲವೇ ? ದರೇ, ಏ ಶಂಖ ಇನ್ನು ಅನಾಥವಾಗಿರುವುದು ದುರಂತ.

2. 'ಸದ್ಯೋಜಾತ'ನ ಸೃಷ್ಟಿಯಾದ ಹದ್ದನ್ನು ಯಾಕೋ ವಿಲ್ಲನ್ ಮಾಡಿದ್ದೀಯ ಲೇಖನದಲ್ಲಿ...

ನನಗೆ ಸದ್ಯೋಜಾತನ ಸೃಷ್ಟಿಯಾದ ಗರುಡನನ್ನ ವಿಲ್ಲನ್ ಮಾಡುವ ಉದ್ದೇಶ ಖಂಡಿತಾ ಇಲ್ಲ. ನಡೆದ ಘಟನೆಯೊಂದನ್ನು ಹೇಳಿದೆ ಅಷ್ಟೇ !

3. "ಹಕ್ಕಿಗಳಿಗೆ ಒಂದು ಹಿಡಿ ಕಾಳು ಹಾಕದ ನಾವು, ಹೋಟೇಲುಗಳಲ್ಲಿ ದುಡ್ದು ಕೊಟ್ಟು, ಆಹಾರವನ್ನು ಚೆಲ್ಲುತ್ತೇವೆ !!" - ಕೊನೇ ಪಕ್ಷ ಆ ಚೆಲ್ಲುವುದನ್ನೂ ಹಕ್ಕಿಗಳಿಗೆ ಹಾಕಲಾಗುವುದಿಲ್ಲ. ಅಷ್ಟು ಪಾಪಿಗಳು ನಾವು... :-)

ಇದು ನಿರ್ವಾದಿತ ಸತ್ಯ...ನಾವು ಪಾಪಿಗಳೇ !!

4. ಅಮೆರಿಕೆಯನ್ನು ಅನುಕರಿಸಿದರೆ ಹೀಗಾಗೋದಿಲ್ಲ. ನಮ್ ಕರ್ಮಕಾಂಡ, ಇತ್ಲಾಗೆ ಅಮೆರಿಕಾನೂ ಇಲ್ಲ, ಭಾರತವೂ ಇಲ್ಲ ಅನ್ನೋ ರೀತೀಲಿ ಬದುಕಿದರೆ ಹೀಗೇ ಆಗೋದು.. ನಾವು ಅದಕ್ಕೇ ಹೀಗೆ!! ಯಾವುದಾದರೂ ಒಂದು ದೋಣಿಯ ಮೇಲೆ ಯಾನ ಮಾಡಬೇಕು. ಎರಡೆರಡೂ ಬೇಕೆನ್ನುವವರ ಪಾಡು ನಮ್ಮದು!!

ಒಪ್ಪಿದೆ.

5. ಅಂದ ಹಾಗೆ, ಅಮೇರಿಕೆಯಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿಯಿರುವವರು ಶೇ.90!! ನಮ್ಮಲ್ಲಿ ಶೇ.10.. :-(

ಹೌದಾ ? ನೋಡಿ...ನಾವೇಕೆ ಹೀಗೆ ?

Lakshmi Shashidhar Chaitanya said...

ಹಿಂದಿನ comment ಉ ಪರಿಸರಪ್ರೇಮಿಗೆ ಉತ್ತರಿಸಿದ್ದು.

errata :

ನಿರ್ವಿವಾತ ಅನ್ನುವುದನ್ನ ನಿರ್ವಿವಾದಿತ ಎಂದು ಓದಿಕೊಳ್ಳುವುದು.

Lakshmi Shashidhar Chaitanya said...

@ ನಾವಡರೇ,

ನಿಮ್ಮ ಮಾತು ಸತ್ಯ. ಬದುಕಿಗೆ ಸಿದ್ಧಾಂತಗಳು ಇಲ್ಲವಾದರೂ ಬದುಕಲು ಸಿದ್ಧಾಂತಗಳಿರಬೇಕಲ್ಲವೇ ?

life is not made up of principles, but one must live a principled life.

ಅಲ್ಲವೇ ??