Tuesday, March 11, 2008

ಹಾಗೆ ಸುಮ್ಮನೆ...

ಇದು ಖಂಡಿತಾ ಮುಂಗಾರು ಮಳೆಯ ಹಾಡಿನಿಂದ ಸ್ಪೂರ್ತಿಗೊಂಡ ಲೇಖನವಲ್ಲ. ಹಾಗೇ ಸುಮ್ಮನೇ ಮನೆಗೆ ಬಂದು ಹೋಗುವ ಅತಿಥಿಗಳ ಬಗ್ಗೆ.

ಅತಿಥಿ ದೇವೋಭವ ಅನ್ನುವ ಸಂಸ್ಕೃತಿ ನಮ್ಮದಾದರೂ ಕೆಲವೊಮ್ಮೆ ಈ ದೇವರುಗಳು ನಮ್ಮನ್ನು ಇಕ್ಕಟ್ಟಿನಲ್ಲಿ ಸಿಲುಕಿಸುತ್ತಾರೆ ಎಂದೇ ಹೇಳಬಹುದು. ಹೋದ ಭಾನುವಾರ ನಮ್ಮ ಮನೆಗೆ ನಮ್ಮ ತಂದೆಯ ಸ್ನೇಹಿತರೊಬ್ಬರು ಆಗಮಿಸಿದರು. ನಾವು ಅವರು ಸಂಧಿಸಿ ತಿಂಗಳುಗಳೇ ಕಳೆದಿದ್ದವು. ಅವರು ಬಂದದ್ದು ನಮಗೂ ಸಂತೋಷವಾಯಿತು. ಉಭಯ ಕುಶಲೋಪರಿ ಸಾಂಪ್ರತವಾದಮೇಲೆ ನನ್ನ ಭವಿಷ್ಯದ ಕಡೆಗೆ ಅವರ ಗಮನ ಹರಿಯಿತು.

ಅವರು : " ಹಾಗೇ ಸುಮ್ಮನೆ ಕೇಳ್ತಿನಿ, ಮುಂದೆ ಏನು ಮಾಡುತ್ತೀಯಾ ? "

ನಾನು : " ಇನ್ನೂ ತೀರ್ಮಾನವಾಗಿಲ್ಲ "

ಅವರು : " ನೀನು ವಿಜ್ಞಾನದಲ್ಲಿ ಮುಂದೆ ಓದುವ ಬದಲು ಕೆಲಸಕ್ಕೆ ಸೇರಬಾರದಿತ್ತೇನು ? ಹಾಗೇ ಸುಮ್ಮನೆ ಕೇಳಿದೆ "

ನಾನು : " ನನಗೆ ಇಷ್ಟವಿರಲಿಲ್ಲ"

ಅವರು : " ಕೆಲಸ ಮಾಡದಿದ್ದರೆ ಮುಂದೆ ಗತಿಯೇನು ? "

ನಾನು : " ಹಾಗೇ ಸುಮ್ಮನೆ ಇರ್ತಿನಿ "

ಅವರು : " ನೀನು ಕೆಲಸಕ್ಕೆ ಸೇರಲೇ ಬೇಕು ! "

ನಾನು ದಂಗಾದೆ ! ನನ್ನ ತಂದೆಯೇ ಏನೂ ಅಡ್ಡಿ ಮಾಡದೇ, ನನ್ನ ಗುರಿಯ ಹಿಂದಿನ ಉದ್ದೇಶವನ್ನು ಮನಗಂಡು ನನ್ನನ್ನು ಓದಿಸಿ ಮುಂದೆ ಏನು ಬೇಕಾದರೂ ಮಾಡುವ ಸ್ವಾತಂತ್ರ್ಯ ನೀಡಿರುವಾಗ, ಇವರ ಮಾತು ನನ್ನನ್ನು ಸಲ್ಪ ಚುಚ್ಚಿದಂತಾಯ್ತು. ಇಂತಹ ಹಲವಾರು ಜನರು ಹಾಗೇ ಸುಮ್ಮನೆ ಇನ್ನೊಬ್ಬರ "ಭವಿಷ್ಯ ನಿರ್ಧಾರ" ಮಾಡುವುದು ಸರಿಯೇ ? ಸಲಹೆಗಳಿಗೆ ಸ್ವಾಗತ, ಆದರೆ ಕಟ್ಟಪ್ಪಣೆ ಖಂಡನೀಯ !! ಪ್ರಶ್ನೆ ಸ್ವಾಗತಾರ್ಹ, ಆದರೆ ಕುಹಕ ಪ್ರಶ್ನೆಗಳು ಅಸಹನೀಯ ! ಅವರು ಬಂದಿದ್ದಾಗ ಆಗಿದ್ದ ಸಂತೋಷ ಥಟ್ಟನೆ ಮಾಯವಾಯಿತು.

ಅವರ ಮಾತಿನ ಓಘ ಸಾಗುತ್ತಲೇ ಇತ್ತು. ವಿಷಯ ಎಲ್ಲೆಲ್ಲಿಗೋ ಹೋಯಿತು. ಆಗ ನಮ್ಮ ತಂದೆ ಅವರ ಮಾತಿನ ಓಘಕ್ಕೆ ಸೂಕ್ತ ತಡೆಯನ್ನುಂಟು ಮಾಡಿದರು. ನನಗೆ ಅವರೊಂದಿಗೆ ವಾದಕ್ಕೆ ಇಳಿಯುವ ಆಸೆ ಇತ್ತು. ಆದರೆ ಅವರು ನನ್ನ ಮಾತನ್ನು, ಅದರಲ್ಲಿರುವ ಸತ್ಯವನ್ನು " ಹಾಗೇ ಸುಮ್ಮನೇ " ಕೇಳಿ ಗಾಳಿಗೆ ತೂರಿಬಿಡುತ್ತಾರೆಂದು ನನಗೆ ಗೊತ್ತಿತ್ತು. ಅವರಂತೆ ಹಾಗೇ ಸುಮ್ಮನೆ energy waste ಮಾಡಲು ನಾನು ತಯಾರಿರಲಿಲ್ಲ. ಅವರು ಹೇಳಿದಂತೆ ನಾನು ನಡೆಯುತ್ತೇನೆ ಎಂದು ಅಲ್ಲ. ಆದರೆ ಅವರು ಮಧ್ಯ ಪ್ರವೇಶಿಸುವ ಅಗತ್ಯವೂ ಇರಲಿಲ್ಲ, ಅನಿವಾರ್ಯತೆಯೂ ಇರಲಿಲ್ಲ ಅಲ್ಲವೇ ?

ಈ ಹಾಗೇ ಸುಮ್ಮನೆ ಬರುವ ಅತಿಥಿಗಳು ಇದೊಂದನ್ನೇ ಅಲ್ಲ, ಎಲ್ಲ ವಿಷಯಗಳಲ್ಲೂ ತಮ್ಮ ಕಬಂಧ ಬಾಹುವನ್ನು ಚಾಚುವುದು ನಿಜವಾಗಿಯೂ ಮನಸ್ಸಿಗೆ ಕಸಿವಿಸಿಯನ್ನುಂಟು ಮಾಡುತ್ತದೆ.

" ನಿಮ್ಮ ಅತ್ತೆ ನಿಮ್ಮೊಂದಿಗೆ ಜಗಳ ಕಾಯುತ್ತಾರಂತೆ ? ಹಾಗೇ ಸುಮ್ಮನೆ ಕೇಳಿದೆ "
ಇನ್ನೊಬ್ಬರು ತಮ್ಮ ಕಷ್ಟವನ್ನೆಲ್ಲ ಹೇಳಿಕೊಂಡ ಮೇಲೆ , " ಬಿಡಿ, ಏನು ಮಾಡೋಕಾಗತ್ತೆ ? " ಅನ್ನೋದೆ ? ಈ ಪುರುಷಾರ್ಥಕ್ಕೆ ಕೇಳಬೇಕ್ಯಾಕೆ ?

ಹಾಗೇ ಸುಮ್ಮನೆಯ ಮತ್ತಷ್ಟು ತುಣುಕುಗಳು:

" ನಿಮ್ಮ ಮಗಳು ತುಂಬಾ ಕಪ್ಪಲ್ಲವಾ ? ಬೇಜಾರು ಮಾಡ್ಕೋಬೇಡಿ, ಹಾಗೇ ಸುಮ್ಮನೆ ಕೇಳಿದೆ ! "

" ನಿಮ್ಮ ಯಜಮಾನರ ಹತ್ತಿರ ಕಾರ್ ಇಲ್ಲವೇ ? ಸುಮ್ಮನೇ ಕೇಳಿದೆ".

" ಹೇಗೆ ಓದುತ್ತಿದ್ದಾನೆ ಮಗ ? ಮನೆಯಲ್ಲೇ ಓದುತ್ತಾನ ಅಥವ combined studies ಆ ? ಹಾಗೇ ಕೇಳಿದೆ "
"ನಿಮ್ಮ ಮಗಳು ಯಾವ ಕಾಲೇಜು ಸೇರಬೇಕೆಂದಿದ್ದಾಳೆ ? ಏನು combination ಕೊಡಿಸುತ್ತೀರಿ ? "

ವಿಷಯದ ಪೂರ್ಣ ಅರಿವಿಲ್ಲದೇ, ಸೂಕ್ತ ಸಲಹೆಗಳನ್ನು ನೀಡಲಾಗದೇ, ಪೂರ್ವಾಗ್ರಹದ ಪರಿಮಾವಧಿಯಲ್ಲಿದ್ದು, ಅಲ್ಲಿಲ್ಲಿ ಕೇಳಿದ್ದೇ ಸತ್ಯವೆಂದು ನಂಬಿ, ಪ್ರಮಾಣಿಸಿ ನೋಡದಷ್ಟು ಮೂರ್ಖರಾಗಿದ್ದು, ಶುಭಕ್ಕೆ ಸಂಕೋಚ ಅಶುಭಕ್ಕೆ ಭಯ ಪಡುವ ಇಂಥವರ ಬಗ್ಗೆ ಅತಿಥಿ ದೇವೋಭವ ಭಾವನೆ ಹೇಗೆ ತಂದುಕೊಳ್ಳುವುದೋ, ಅದನ್ನು ಸದ್ಯೋಜಾತನೇ ಹೇಳಬೇಕು. ಹಾಗೇ ಸುಮ್ಮನೆ ಮಾತಾಡುವ ಬದಲು, ಹಾಗೇ " ಸುಮ್ಮನೆ" ಇರಬಾರದೇಕೆ ?

ನಮ್ಮ ಬದುಕಲ್ಲೇ ಹಾಸಿ ತಲೆಯ ಮೇಲಿನ ವರೆಗೂ ಹೊದ್ದಿಕೊಳ್ಳುವಷ್ಟು ತೊಂದರೆಗಳಿದ್ದಾಗ, ಬೇರೆಯವರ ಬದುಕಲ್ಲಿ ಅಪ್ರಸ್ತುತ, ಅನಗತ್ಯ "ಬಿಟ್ಟಿ" ಸಲಹೆಗಳನ್ನು ಕೊಡಲು ಮುಂದಾಗಿ, ಅವರ ಜೀವನದ ವಿಧಾತರಾಗಲು ಹೊರಡುತ್ತೀವಲ್ಲಾ, ನಾವೇಕೆ ಹೀಗೆ ?