Wednesday, January 7, 2009

ಕಡೆಗೋಲ ತಾರೆನ್ನ ಚಿನ್ನ....

ದಾಸರ ಪದದ ಸಾಲು ಇಲ್ಲೇಕೆ ಬಂತೆಂದು ಹುಬ್ಬೇರಿಸಬೇಡಿ. ಇದರ ಜೊತೆ ಕಾನೂರು ಹೆಗ್ಗಡಿತಿ ಕಾದಂಬರಿಯ ಕೆಲವು ಸಾಲುಗಳೂ ಬರಬೇಕಿತ್ತು. ಆದರೆ ಅದು ಯೋಚನೆಗಳ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಾಕೊಂಡಿದೆಯಾದ್ದರಿಂದ ಸದ್ಯಕ್ಕೆ ಇದನ್ನೇ ಅಡ್ಜಸ್ಟ್ ಮಾಡಿಕೊಳ್ಳಿ.

ನಮ್ಮ ತಂದೆ ತಾಯಿಗಳ ಜೊತೆ ನಾನು ತೀರ್ಥಯಾತ್ರೆಗೆ ಹೋಗಿದ್ದವಳು ಇಲ್ಲಿಗೆ ಬಂದು ಐದು ದಿನ ಆಯ್ತು. ನಾವು ಬರುವಷ್ಟರಲ್ಲಿ ನಮ್ಮ ತಂದೆಯ ಆಫೀಸಿಗೆ ಮಹಾಶಯರೊಬ್ಬರು ಕಾಲಿಟ್ಟು ಉಪದೇಶವೊಂದನ್ನು ಬಿಟ್ಟಿಯಾಗಿ ನೀಡಿ ಕಡೆಗೋಲೊಂದನ್ನು ಕೊಟ್ಟು ಹೋಗಿದ್ದಾರೆ. ಗಾಬರಿಯಾಗಬೇಡಿ. ನಿಜವಾಗಲೂ ಕಡೆಗೋಲನ್ನು ತಂದುಕೊಟ್ಟಿದ್ದಾರೆ.

ಏನು ಉಪದೇಶ ನೀಡಿದ್ದಾರೆ ಅಂದರೆ....

" ನೋಡಿ....ಮಥುರಾ ಇದೆಯಲ್ಲಾ...ಅದೇ ಕೃಷ್ಣ ಪರಮಾತ್ಮ ಇದ್ದ ಜಾಗ...ಅಲ್ಲೆಲ್ಲಾ ಮಜ್ಜಿಗೆ ಕಡಿತಿದ್ರು ಜನ. (ಪ್ರಪಂಚದಲ್ಲಿ ಇನ್ನೆಲ್ಲೂ ಮಜ್ಜಿಗೆ ಕಡಿಯುತ್ತಿರಲಿಲ್ಲವಾ ಅಂತ ನನಗೆ ಡೌಟಾಯ್ತು...ಆದ್ರೆ ದುರದೃಷ್ಟವಷಾತ್ ಕೇಳಲಾಗಲಿಲ್ಲ...ಯಾಕಂದ್ರೆ ನಾನು ಅಲ್ಲಿರಲಿಲ್ಲ)ಅವ್ರಿಗೆಲ್ಲಾ heart problem ಇರಲೇ ಇಲ್ಲ. ಇದನ್ನ research ನಲ್ಲಿ ಕೂಡಾ ಸಾಬೀತುಮಾಡಲಾಗಿದೆ.(Excellent job. ಆದ್ರೆ ಯಾರು ಮಾಡಿದ್ದಾರೆ ಅಂತ ಗೊತ್ತಾಗ್ಲಿಲ್ಲ. ನಾನು ಇನ್ನು ಗೂಗಲ್ಲಿಸಬೇಕಿದೆ) ಈಗ ನೋಡಿ,ಎಲ್ಲಾರು ನಂದಿನಿ ಮೊಸರಿಗೆ ಒಗ್ಗಿ ಹೋಗಿದ್ದಾರೆ.ಮಜ್ಜಿಗೆ ಎಲ್ಲಿ ಕಡಿಯುತ್ತೇವೆ? Naturally,ಮನೆಯಿಂದ ಕಡೆಗೋಲು ನಾಪತ್ತೆಯಾಗಿದೆ.ಅದಕ್ಕೆ, ಕಡೆಗೋಲು ಹಿಡಿದು ನಾವು ಮಜ್ಜಿಗೆ ಕಡೆಯೋ ಹಾಗೆ action ಮಾಡಿದ್ರೆ ನಮಗೆ heart problem ಬರಲ್ಲ.(ಚಿಕ್ಕ ಮಕ್ಕಳಾಗಿದ್ದಾಗ action songs ಮಾಡಿಸುತ್ತಿದ್ದರಲ್ಲ play home ಗಳಲ್ಲಿ, ಹಾಗಾ ? ಅಂತ ಕೇಳಬೇಕಿತ್ತು ನಾನು. ಆದ್ರೆ...) ಅದಕ್ಕೆ ಈ ಕಡೆಗೋಲು ಕೊಡುತ್ತಿರೋದು. ಇದನ್ನ ಎರಡು palmಗಳ ಮಧ್ಯ ಹೀಗೆ ಹಿಡಿದು churn ಮಾಡ್ಬೇಕು. ಆಗ, blood circulation ಚೆನ್ನಾಗಿ ಆಗಿ, ಹೃದಯ ಸಕತ್ತಾಗಿ ಕೆಲಸ ಮಾಡತ್ತೆ. ತಗೊಳ್ಳಿ. free ಆದಾಗಲೆಲ್ಲಾ ಹೀಗೆ ಮಾಡಿ. ನೋಡೀ ನಿಮಗೆ ಹಾರ್ಟ್ ಪ್ರಾಬ್ಲಮ್ ಬರಲ್ಲ."

ಇದು ಉಪದೇಶ. ನಮ್ಮ ಆಫೀಸಿನವರು ನಮ್ಮ ತಂದೆಗೆ ಹೇಳಿ, ಅವರು ನಮಗೆ ಹೇಳಿದ ಮೇಲೆ ನನಗೆ ಬಂದ ಅನುಮಾನಗಳಿವು. ಆ ಮಹಾಶಯ ಮತ್ತೆ ಸಿಕ್ಕರೆ ಇದನ್ನು ಕೇಳಬೇಕು ಅಂತ ಅಂದುಕೊಂಡಿದ್ದೀನಿ. ನಿಮಗೂ ಡೌಟುಗಳು ಬಂದರೆ ದಯವಿಟ್ಟು ಕಮೆಂಟ್ ಬಾಕ್ಸಿನಲ್ಲಿ ದಾಖಲಿಸಿ. ಕೇಳಿಯೇಬಿಡೋಣ. ಏನಂತೀರಿ ?

೧. ಮೆಟ್ಟಿಲು ಹತ್ತುವ ಬದಲು ಲಿಫ್ಟ್ ಹತ್ತಿ, ಕೊತ್ತಂಬರಿ ಸೊಪ್ಪು ತರಲು ಕಾರಿಯಲ್ಲಿ ಹೋಗಿ,ಮನೆಯ ಕಸವನ್ನು vacuum cleaner ನಲ್ಲಿ ಗುಡಿಸಿ, dish washer ನಲ್ಲಿ ಪಾತ್ರೆ ತೊಳೆದು,washing machine ನಲ್ಲಿ ಬಟ್ಟೆ ಒಗೆದು, mechanized blender ನಲ್ಲಿ ಬೆಣ್ಣೆ ತೆಗೆದು,ಅಂಕಲ್ ಚಿಪ್ಸ್, ಆಂಟಿ ಚಿಪ್ಸ್, ಕುರ್ಕುರೆ, ಸಮೋಸ, ಭೇಲ್ ಪುರಿ, ಪಿಜ್ಜಾ ಮತ್ತು ಕೋಕ್ ಗಳಿಂದ ಹೊಟ್ಟೆ ತುಂಬಿಸಿಕೊಂಡ ಮೇಲೆ ಕಡೆಗೋಲು ಹಿಡಿಯಬಹುದೇ ?

೨. ಇದನ್ನ ಏರೋಬಿಕ್ಸ್ ಸ್ಟೈಲಲ್ಲಿ ಮಾಡಬಹುದೇ ? ೧ ೨ ೩ ೪ ...೪ ೩ ೨ ೧ next change... ಆ ಥರ.

೩. ಎಷ್ಟು ದಿನಗಳ ಕೋರ್ಸ್ ಇದು ? ಇದಾದ ಮೇಲೆ ನಾವು ನಮ್ಮ regular routine ( visit to chat street daily) ಶುರು ಮಾಡಿಕೊಳ್ಳಬಹುದಲ್ಲವೇ ?

ನಿಮ್ಮ ಡೌಟುಗಳಿಗೆ ಸ್ವಾಗತ :)

ನನಗನ್ನಿಸಿದ್ದು ಇಷ್ಟು :

ನಮ್ಮ ಅಜ್ಜಿಯ ಕಾಲದವರು ಬಾವಿಯಲ್ಲಿ ನೀರು ಸೇದುತ್ತಿದ್ದರು...ರಟ್ಟೆ ಬಲವಾಗುತ್ತಿತ್ತು. ಕೊಡದಲ್ಲಿ ನೀರು ತರುತ್ತಿದ್ದರು, ಸೊಂಟ ಗಟ್ಟಿಯಿರುತ್ತಿತ್ತು. ಮನೆ ಗುಡಿಸಿ ಸಾರಿಸಿ ಮಾಡುತ್ತಿದ್ದರು,flexibility ಇರ್ತಿತ್ತು. ನಾವೀಗ ಹೇಗಿದ್ದೇವೆ ಅಂತ ನಾನೇನು ಹೇಳಬೇಕಿಲ್ಲ ಅಲ್ವಾ ?

ನಮ್ಮ ಮನೆಯ ಕೆಲಸವನ್ನ ನಾವೇ ಮಾಡಿಕೊಂಡರೆ(ಕೆಲಸದವರನ್ನಿಟ್ಟುಕೊಂಡರೂ ಮನಕೆಲಸ ಅಂತ ಇದ್ದೇ ಇರತ್ತೆ ಅಲ್ವಾ ?) ನಮಗೆ ವ್ಯಾಯಾಮವೂ ಆಗತ್ತೆ, ರೋಗಗಳನ್ನು ದೂರವೂ ಇಟ್ಟಂತಾಗುತ್ತದೆ ಅಲ್ಲವೇ ? ನಮ್ಮ ಶರೀರ ನಮಗೇ heavy ಅನ್ನಿಸದ ಹಾಗೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

ಮನೆಕೆಲಸ ಮಾಡುವುದನ್ನು ಬಿಟ್ಟು ದುಡ್ಡು ಕೊಟ್ಟು ಏರೋಬಿಕ್ಸ್ ಸೇರಿ... hand picking exercise, roof cleaning exercise,ಎಲ್ಲಾ ಮಾಡುತ್ತೀವಲ್ಲ...ನಾವೇಕೆ ಹೀಗೆ ?