Sunday, November 22, 2009

ಸಂಸಾರ.....ವ್ಯಾಧಿ.....

ನಾನು ಅಧ್ಯಾಪಕಿಯಾದ ಮೇಲೆ ಮಕ್ಕಳಿಗೆ ಪರೀಕ್ಷೆಗಳನ್ನು ಕೊಟ್ಟೂ ಕೊಟ್ಟೂ ಅಭ್ಯಾಸ ಆಗಿ, ಈ ಬಾರಿ ನಿಮಗೂ ಪರೀಕ್ಷೆ ಕೊಡೋಣ ಅಂತ ಅನಿಸುತ್ತಿದೆ :) ಸಿಲಬಸ್ಸು ಏನು ,ಒಂದು ವಾಕ್ಯದ, ಐದು ವಾಕ್ಯದ ಪ್ರಶ್ನೋತ್ತರ ಇರುತ್ತದೆಯೇ ಅಂತೆಲ್ಲಾ ಹೆದರಬೇಡಿ. ಜಾಸ್ತಿ ಕಷ್ಟ ಏನು ಇಲ್ಲ. ನಾನು ಕೇಳೋದು ಎರಡೇ ಪ್ರಶ್ನೆಗಳು. ಮೊದಲ ಪ್ರಶ್ನೆ ಹೀಗಿದೆ-

ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿರಿ- ಸಂಸಾರ........ವ್ಯಾಧಿ..........

ಸಿಕ್ಕಾಪಟ್ಟೆ ಸುಲಭದ ಪ್ರಶ್ನೆ ಅಂತೆಲ್ಲಾ ಹಿಗ್ಗಬೇಡಿ. ಪ್ರಶ್ನೆ ಇನ್ನು ಮುಗಿದಿಲ್ಲ. ನಾನು ಈಗ ಎರಡು ಘಟನೆಗಳನ್ನು ವಿವರಿಸುತ್ತೇನೆ. ಈ ಎರಡೂ ಘಟನೆಗಳ ಆಧಾರದ ಮೇಲೆ ನೀವು ಎರಡೂ ಸ್ಥಳಗಳನ್ನು ತುಂಬಬೇಕು. ಪರೀಕ್ಷೆಯ ನಿಯಮಗಳು ಇಂತಿವೆ.

ಒಂದೇ ಸ್ಥಳ ತುಂಬಿದರೆ ನಪಾಸು.ಕನಿಷ್ಟ/ಗರಿಷ್ಟ ಅಂಕಗಳೆಲ್ಲಾ ಇಲ್ಲ. ಎರಡೇ ದರ್ಜೆಗಳು - ಉತ್ತೀರ್ಣ/ಅನುತ್ತೀರ್ಣ.

ಈಗ ಎರಡು ಘಟನೆಗಳನ್ನು ವಿವರಿಸುತ್ತೇನೆ. ಗಮನವಿಟ್ಟು ಓದಿ.

ಘಟನೆ ೧:

ಎಚ್ ೧ ಎನ್ ೧ ಎಲ್ಲಾ ಪೇಪರಿನ ಹೆಡ್ಲೈನ್ ಆಗಿದ್ದ ಸಮಯ. ಚಿಕುನ್ ಗುನ್ಯಾ ಕೂಡಾ ತನ್ನ ಅಟ್ಟಹಾಸ ಮೆರೆಯುತ್ತಿತ್ತು. ಜ್ವರವಿಲ್ಲದವರೂ ಜ್ವರ ಬಂದವರಂತೆ ಆಡುತ್ತಿದ್ದರು. ಜ್ವರ ಬಂದವರು ಪ್ರಾಣದ ಮೇಲಿನ ಆಸೆ ಕಳೆದುಕೊಳ್ಳುತ್ತಿದ್ದರು. ಆಸ್ಪತ್ರೆಗಳು, ಲ್ಯಾಬ್ ಗಳು ರೋಗಿಗಳು ಮತ್ತು ಟೆಸ್ಟ್ ಮಾಡಿಸಿಕೊಳ್ಳುವವರಿಂದ ಕಿಕ್ಕಿರಿದಿತ್ತು. ನಾನು ಕಾಲೇಜಿಗೆ ಸೇರಿದ ಹೊಸದು. ವಿದ್ಯಾರ್ಥಿಗಳೂ ಮಾಸ್ಕು, ನಾವೂ ಮಾಸ್ಕು ! ಎಲ್ಲರೂ ನಮ್ಮನಮ್ಮ ಎಚ್ಚರದಲ್ಲಿದ್ದೆವು.

ಒಂದು ದಿನ ನಮ್ಮ ಸಂಬಂಧಿಕರೊಬ್ಬರಿಗೆ ಹುಷಾರಿಲ್ಲ ಅನ್ನುವುದು ಗೊತ್ತಾಯ್ತು.ನಮ್ಮ ತಂದೆ ತಾಯಿ ಅವರನ್ನು ನೋಡಿಕೊಂಡು ಬರಲು ಹೊರಟಿದ್ದರು. ದಾರಿಯಲ್ಲಿ ನಾನು ಸಿಕ್ಕೆ ಆದ್ದರಿಂದ ನಾನೂ ಅವರೊಟ್ಟಿಗೆ ಹೋದೆ.ಹೋದ ತಕ್ಷಣ ಅವರ ಕುಶಲ ವಿಚಾರಿಸಿ, ಇವೆಲ್ಲಾ ಯಾವಾಗ ಹೇಗಾಯ್ತು ಅಂತ ಕೇಳಲು ಅವರು ಎರಡು ವಾರಗಳಿಂದ ಹೀಗೆ ನರಳುತ್ತಿರುವುದಾಗಿ ಹೇಳಿದರು. ನಾವು ನಮಗೆ ಹೇಳಿದ್ದಿದ್ದರೆ ಅವರ ಊಟ ತಿಂಡಿ ವ್ಯವಸ್ಥೆ ಮಾಡಬಹುದಿತ್ತಲ್ಲಾ ಎಂದು ಹೇಳಿದೆವು. ನಿಮಗೇಕೆ ತೊಂದರೆ ಎಂದು ಅವರು ಹೇಳಿದರಾದರು ಅದು ನಮಗೆ ಖಂಡಿತಾ ತೊಂದರೆ ಆಗುತ್ತಿರಲಿಲ್ಲ. ಇವರು ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿಕೊಂಡು " ವೈರಲ್ ಇನ್ ಫೆಕ್ಷನ್ " ಎಂದಷ್ಟೇ ಹೇಳಿದರೂ ಅದು ಚಿಕುನ್ ಗುನ್ಯಾ ನೇ ಅಂತ ನೋಡಿದೊಡನೆ ಗೊತ್ತಗುತ್ತಿತ್ತು. ಇವರೂ ಯಾರಿಗೂ ಹೇಳದೇ ನರಳಿದ್ದಕ್ಕೆ ಅವರ ಮಕ್ಕಳೂ ಕೂಡಾ ಹಾಸಿಗೆ ಹಿಡಿದಿದ್ದರು. ಕಾಲೇಜುಗಳಿಗೆ ಅನಿವಾರ್ಯವಾಗಿ ರಜೆ ಹಾಕಿ, ಲ್ಯಾಬ್ ಮಿಸ್ಸ್ ಆಗಿದ್ದಕ್ಕೆ ನನ್ನ ಹತ್ತಿರ ಅಳಲು ತೋಡಿಕೊಂಡರು ಅವರ ಮಕ್ಕಳು. ಒಂದು ಮಾತು ನಮಗಾಗಲಿ, ಇನ್ಯಾರಿಗಾದರೂ ಹೇಳಿದ್ದಲ್ಲಿ ನಾವು ಅವರನ್ನು ಮನೆಗೆ ಕರೆಸಿಕೊಂಡು ರೋಗ ಹರಡುವುದನ್ನು ತಪ್ಪಿಸಬಹುದಿತ್ತು. ಬೇಕಿಲ್ಲದ ಕಡೆ ಸಂಕೋಚ ದಾಕ್ಷಿಣ್ಯ ತೋರಿಸಿ, ಕಡೆಗೆ ಜ್ವರ relapse ಆಗಿ ಇವರು ನಾವು ಹೋದಾಗ ಒದ್ದಾಡುತ್ತಿದ್ದರು. ರೋಗ ಬಂದಾಗ ಮುಚ್ಚಿಟ್ಟು ಅವರು ಅದೇನು ಸಾಧಿಸಿದರೋ, ಚಿಕುನ್ ಗುನ್ಯಾ ಅಂದಾಕ್ಷಣ ನಾವು ಅವರನ್ನು ಎಲ್ಲಿ ಬಹಿಷ್ಕರಿಸುತ್ತೇವೋ ಅಂತ ಹೆದರಿದರೋ ಗೊತ್ತಿಲ್ಲ.

ಇದು ಭಾರತದಲ್ಲಿ.

ಎಚ್೧ಎನ್೧ ಅನ್ನು ತಡೆಗಟ್ಟಲು ಲಂಡನ್ ನಗರಿ ಹೇಗೆ ಸಜ್ಜಾಗಬೇಕೆಂದು ಬ್ರಿಟನ್ ಸರ್ಕಾರ ಆಜ್ಞೆ ಮಾಡಿತು ಅನ್ನೋದನ್ನ ನೋಡೋಣ.ಪ್ರತಿಯೊಬ್ಬ ಎಚ್೧ಎನ್೧ ಪೀಡಿತ ಪ್ರಜೆಯೂ ತಮ್ಮ ಅತಿ ನಂಬಿಕಸ್ಥ ಮಿತ್ರನನ್ನ "flu friend" ಅಂತ ಗುರುತಿಸಬೇಕು. ಅವರ ಇತ್ಯೋಪರಿಯೆಲ್ಲಾ ಸರ್ಕಾರಕ್ಕೆ ತಿಳಿಸಬೇಕು.ರೋಗಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು. ಔಷಧಿಗಳನ್ನು ಈ ಮಿತ್ರನಿಗೆ ಫೋನಿಸಿ ಹೇಳತಕ್ಕದ್ದು. ಈ flu friend ಔಷಧಾಲಯಕ್ಕೆ ಹೋಗಿ ಔಷಧ ತಂದು ಮನೆಯ ಮೈಲ್ ಬಾಕ್ಸ್ ಗೆ ಹಾಕತಕ್ಕದ್ದು.ಆ ಮಿತ್ರನಿಗೂ ರೋಗ ಹರಡದಂತೆ ಆಯ್ತು. ರೋಗಿಗಳ ಓಡಾಟದಿಂದ ರೋಗ ಹರಡುವುದು ತಪ್ಪಿತು !

ಘಟನೆ ೨ :

ಸುವರ್ಣ ಚಾನೆಲ್ ನಲ್ಲಿ " ಇದು ಕಥೆಯಲ್ಲ ಜೀವನ" ಅಂತ ಒಂದು ರಿಯಾಲಿಟಿ ಶೋ ಪ್ರಾರಂಭವಾಯ್ತು. ಮಿಕ್ಕಿದ್ದೆಲ್ಲಾ ಚಾನೆಲ್ ಗಳೂ ಜಟಕಾಬಂಡಿ, ಕಥೆ ಕಾದಂಬರಿ ಅಂತೆಲ್ಲಾ ಶುರುಹಚ್ಚಿಕೊಂಡವು. ಗಂಡ ಹೆಂಡಿರ ವಿರಸ, ರಂಪ ರಾದ್ಧಾಂತ, ಅನೈತಿಕ ಸಂಬಂಧಗಳು,ಕೋರ್ಟಿನ ವ್ಯಾಜ್ಯಗಳು, ಅಣ್ಣ ತಮ್ಮಂದಿರ ಆಸ್ತಿ ಜಗಳ ಮುಂತಾದವು ಎಲ್ಲರಿಗೂ ಗೊತ್ತಾಗುತ್ತಾ ಹೋದವು. ಅತ್ತೆ ತನ್ನ ಸ್ವಂತ ಸೊಸೆಗೇ ಇಲ್ಲಿ ಕಾಟಕೊಡುತ್ತಿದ್ದರೂ, ಟಿವಿಯಲ್ಲಿ ಶೋ ನೋಡುತ್ತಾ, " ಎಂಥಾ ಕ್ರೂರ ಅತ್ತೆ ! " ಎಂದು ಉದ್ಗರಿಸುತ್ತಿರುತ್ತಾರೆ. ಸೊಸೆ ತನ್ನ ಅತ್ತೆಯನ್ನೇ ಮನೆಯಿಂದ ಆಚೆಗೆ ಅಟ್ಟಿದ್ದರೂ, " ಎಂಥಾ ಅನ್ಯಾಯ" ಎಂದು ನಿರಾಶ್ರಿತ ಅತ್ತೆಗೆ ಮರುಗುತ್ತಿರುತ್ತಾರೆ. ಹಾಗಂತ ಅವರ ಬುದ್ಧಿಗೆ ತಾವು ಸುಧಾರಿಸಬೇಕು ಎಂದು ಹೊಳೆಯುತ್ತದೋ ಬಿಡುತ್ತದೋ ಅದು ಅವರವರ ಸಂಸ್ಕಾರಕ್ಕೆ ಬಿಟ್ಟಿದ್ದು. ಈ ರಿಯಾಲಿಟಿ ಶೋಗಳು ಸಮಸ್ಯೆಯನ್ನು ನೈಜವಾಗಿ ಬಿಂಬಿಸಿದರೂ ಅದಕ್ಕೆ ದೊರಕುವ ಪರಿಹಾರ ಮಾತ್ರ ನಾಟಕೀಯ. The problem is real, but the solution is just realistic. ಜನರ ಅಭಿಪ್ರಾಯವನ್ನೇ ನ್ಯಾಯ ಎಂದು ಪರಿಗಣಿಸುವುದಾಗಲೀ, ಎಸ್ ಎಮ್ ಎಸ್ಸುಗಳ ಮಹಾಪೂರ ಹರಿಸುವುದಾಗಲಿ ಸರಿಯೆಂದು ವೈಯಕ್ತಿವಾಗಿ ನನಗನ್ನಿಸುವುದಿಲ್ಲ.ಕೆಲವು ಕಡೆ ಮುಖವನ್ನು ಮರೆಮಾಡಿ ಶೋ ನಡೆಸಲಾಗುತ್ತೆ. ಈ ಪುರುಷಾರ್ಥಕ್ಕೆ ಅವರು ಟಿವಿ ಮುಂದೆ ಯಾಕೆ ? ಅವರವರೇ ಲಾಯರ್ ಬಳಿ ಮಾತಾಡಿ ಬಗೆಹರಿಸಿಕೊಳ್ಳಬಹುದಲ್ಲ, ತಮ್ಮ ಮುಖದ ಮೇಲಿನ ಹಾಗೂ ಮನಸ್ಸಿನೊಳಗಿನ ಪರದೆಯನ್ನು ಕಳಚಿ ! ಟಿವಿಯ ಆಚೆಗಿನ ಪ್ರಪಂಚದಲ್ಲಿ ಮಾಡಬಹುದಾದದ್ದನ್ನ ಮಾಡದೇ ಟಿವಿಯಲ್ಲಿ ನೋಡಿ ಸಮಸ್ಯೆಗೆ ಪರಿಹಾರ ಹುಡುಕುವುದು ಕನ್ನಡಿಯೊಳಗಿನ ಗಂಟನ್ನು ಹಿಡಿಯಲು ಹೋದಂತೆ. ಟಿವಿಯ ಟಿ ಆರ್ ಪಿ ದಾಹಕ್ಕೆ ನಾವು ಶೋಗಳನ್ನು ನೋಡುತ್ತಾ ಹೇಗೆ ಹಾಳಾಗುತ್ತಿದ್ದೇವೆ ಅಂತ ನಾನು ವಿವರಿಸಬೇಕಿಲ್ಲ.

ಈ ಎರಡೂ ಘಟನೆಗಳನ್ನು ಓದಿದಿರಲ್ಲಾ, ಈಗ ಖಾಲಿ ಬಿಟ್ಟ ಸ್ಥಳ ತುಂಬಿರಿ !

ಇನ್ನೊಂದು - ಪ್ರತಿ ಪೋಸ್ಟಿನ ಕಡೆಗೂ ನಾನು ಕೇಳುವ ಪ್ರಶ್ನೆ ಏನೂ ಅಂತ ಗೊತ್ತಲ್ಲಾ, ಅದೂ ಏನೆಂದು ಬರೆಯಿರಿ ! :)

Saturday, October 10, 2009

ಕಾಲದ ಬಂಡಿಯಲ್ಲಿ ನಾವು ಎಷ್ಟು ಮುಂದೆ ಸಾಗಿದ್ದೇವೆ ?

ಪ್ರಪಂಚದಲ್ಲಿ ನಾಗರಿಕತೆ ಆರಂಭವಾಗಿದ್ದು ಸಾವಿರಾರು ವರ್ಷಗಳ ಹಿಂದೆ.ಪ್ರಾಣಿಗಳಿಗಿಂತ ನಾವು ವಿಕಾಸಪಥದಲ್ಲಿ ಮುಂದೆ ಸಾಗತೊಡಗಿದ್ದೆವು. ಕಾಲಚಕ್ರದ ವೇಗದ ಗತಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳತೊಡಗಿದೆವು.ಪ್ರಾಣಿಗಳಿಗಿಂತ ಚೆನ್ನಾಗಿ ಯೋಚಿಸಿ ಅವನ್ನು ವ್ಯಕ್ತಪಡಿಸಬಲ್ಲ, ಕಾರ್ಯಗತಗೊಳಿಸಬಲ್ಲ ನಮ್ಮ ಸಾಮರ್ಥ್ಯ ನಾಗರಿಕತೆಗಳಿಗೆ ನಾಂದಿ ಹಾಡಿತು. ನಾಗರಿಕತೆಯಿಂದ ಸಮಾಜ ಬೆಳೆಯಿತು,ಸಮಾಜದಲ್ಲಿ ರೀತಿ, ನೀತಿ, ಆಚಾರ, ವಿಚಾರ, ಸಂಪ್ರದಾಯ ಸಂಸ್ಕೃತಿಗಳು ಮೇಳೈಸತೊಡಗಿದವು. ಕಾನೂನು, ದಂಡ ಸಂಹಿತೆ, ನೀತಿ ಸಂಹಿತೆ, ಧರ್ಮಶಾಸ್ತ್ರಗಳ ಪುಸ್ತಕಗಳೂ ಸಹ ಬರೆಯಲ್ಪಟ್ಟು, ಅದರಂತೆ ಜನ ನಡೆದುಕೊಳ್ಳುತ್ತಲೂ ಇದ್ದರು...ದಂಗೆಗಳು ಏಳುವವರೆಗೂ.ದಂಗೆ ಚಾರಿತ್ರಿಕವಾಗಿ ಎಷ್ಟು ಮಹತ್ವದ್ದೋ ಅಷ್ಟೇ ನಮ್ಮ ಮಾನಸಿಕ ವಿಕಾಸಪಥದಲ್ಲಿಯೂ ಒಂದು ಬಹುದೊಡ್ಡ ಘಟ್ಟ. ಮನಸ್ಸು, ಬುದ್ಧಿ ಎರಡನ್ನೂ ಉಪಯೋಗಿಸಿ ಇಂಥದ್ದು ಸರಿ ಇಲ್ಲ, ನಮಗೆ ಇದರ ಅವಶ್ಯಕತೆ ಇದೆ,ಇದು ಬೇಕು, ಇದು ಬೇಡ, ಇಂಥದ್ದಕ್ಕೆಲ್ಲಾ ಜನತೆ ಗಮನ ಹರಿಸತೊಡಗಿತು. ವಿಜ್ಞಾನ ತಂತ್ರಜ್ಞಾನಗಳಲ್ಲಿಯೂ ಪ್ರಗತಿಗಳಾದವು. ಸರಿ ತಪ್ಪುಗಳ ಪುನರ್ವಿಮರ್ಶೆ, ಪುನರ್ವಿಂಗಡನೆಗಳಾದವು. ಕಾಲದ ಗಾಲಿಯಲ್ಲಿ ಸಿಲುಕಿ ಈಗ ಭಾವನೆಗಳು ಮತ್ತು ಬಹುಕಾಲ ಸತ್ಯವಾಗಿದ್ದ ಕೆಲ ನಂಬಿಕೆಗಳು ಪುನರ್ವಿಮರ್ಶಾಯೋಗ್ಯವಾಗಿದೆ.

ಭಾವನೆಗಳಲ್ಲಿ ಕೋಟ್ಯಂತರ ವಿಧಗಳಿವೆ. ನಾವು ಗೆಳೆತನದ ಬಗ್ಗೆ ಗಮನ ಹರಿಸೋಣ. ಗೆಳೆತನ ಹುಡುಗರಲ್ಲಿ, ಹುಡುಗಿಯರಲ್ಲಿ ಗುಂಪಾಗಿ ಸಾಮಾನ್ಯ. ಹುಡುಗ ಮತ್ತು ಹುಡುಗಿಯ ನಡುವೆ ಕೇವಲ ಗೆಳೆತನ ಅಪರೂಪದ ಸಂಗತಿ. Confucius ಎಂಬ ಸಂತ ಪುಣ್ಯಾತ್ಮ "There can be no other emotional relationship between a man and a woman other than love" ಎಂದು ಅಪ್ಪಣೆ ಕೊಡಿಸಿದುದರ ಪರಿಣಾಮ ಹುಡುಗ ಹುಡುಗಿಯರು ಜೊತೆಯಾದರೆಂದರೆ ಬಾಳೆ ಎಲೆ ಊಟಕ್ಕೆ ದಿನ ಎಣಿಸಬಹುದೆನ್ನುವುದು ಲೋಕರೂಢಿಯಾಯ್ತು. ಇಂದೂ ಹಾಗೆಯೇ ಇದೆ.ಈ ನಂಬಿಕೆಯನ್ನು ಬುಡಸಮೇತ ಯಾರೂ ಕಿತ್ತೂ ಹಾಕಲಿಲ್ಲ, ನೈಜ ಗೆಳೆತನ ಹೆಚ್ಚು ಕಾಲ ಉಳಿಯಲೂ ಇಲ್ಲ. ಯಾಕೋ, ಯಾರೂ ದಂಗೆಯೂ ಏಳಲಿಲ್ಲ. Confucious ದಯೆ, ಬಾಲಿವುಡ್ಡು ಇಂದು ಈ ರೀತಿ ಇದೆ. ಅಂತೆಯೇ ಬಹುತೇಕ ಜನರ ಕಲ್ಪನೆ, ಭಾವನೆ, ನಂಬಿಕೆಗಳೂ !

ಹಿಂದೆಲ್ಲಾ ಅಕ್ಕಪಕ್ಕದಮನೆಯವರು ಒಟ್ಟಿಗೆ ಸೇರಿ ಆಟ ಆಡುತ್ತಿದ್ದರು. ನಾನೂ ಆಡಿದ್ದೆ. ನಾವು ಹುಡುಗಿಯರು ಇನ್ನೂ ಸಿಕ್ಕಾಗ ಮಾತಾಡುತ್ತೇವೆ. ಹುಡುಗರನ್ನೆಲ್ಲ ಮಾತಾಡಿಸುವುದು ಕಷ್ಟ. ಕನ್ಫ್ಯೂಷಿಯಸ್ ಕೃಪೆ !

ಕಾಲದ ಗಾಲಿ ಮುಂದೆ ಓಡಿದೆ. ಈಗ ಮಕ್ಕಳೆಲ್ಲಾ ಮನೆಯಲ್ಲಿ ಪ್ಲೇ ಸ್ಟೇಷನ್ ಆಡುವುದರಲ್ಲಿ ನಿರತರಾಗಿರುತ್ತಾರೆ ಆದ್ದರಿಂದ ಅವರಿಗೆ ಅಕ್ಕಪಕ್ಕದ ಮನೆಯವರ ಅವರ ವಾರಿಗೆಯ ಹುಡುಗರ ಅರಿವಿಲ್ಲ. ಹುಡುಗಿಯರ ಮೇಲೆ ಕಣ್ಣಿಟ್ಟಿರುತ್ತಾರೆ ಅನ್ನೋ ಭಯಕ್ಕೆ ತಂದೆ ತಾಯಿಗಳೂ ಈಗಿನಿಂದಲೇ ಎಚ್ಚರ ವಹಿಸುತ್ತಾರಾದ್ದರಿಂದ ಅವರಿಗೆ ಪ್ಲೇ ಸ್ಟೇಷನ್ನಿನ ಹುಡುಗಿಯರೇ ಗತಿ. ಸ್ಕೂಲುಗಳಲ್ಲೇ ಲವ್ ಸ್ಟೋರಿಗಳು ಬೆಳೆಯುವುದು ಬಾಲಿವುಡ್ಡಿನ ದೊಡ್ಡ ಸಾಮಾಜಿಕ ಕೊಡುಗೆ. ಪೀಳಿಗೆಗಳು ಮುಂದೆ ಸಾಗಿವೆ, ಈ ಭಾವನೆ, ಕಲ್ಪನೆಗಳೂ ಬಲಿತಿವೆ.

ಮನೆಯ ಮುಂದಿನ ಹರಟೆ ಕಟ್ಟೆಗಳು ಈಗ social networking sites ಗಳಾಗಿ ರೂಪಾಂತರಗೊಂಡು ಬ್ಲಾಗ್ ಎಂಬ ಹೊಸ ವೇದಿಕೆಯೊಂದು ಹರಟೆಗೆ ಸೃಷ್ಟಿಯಾಗಿದೆ. ನೈಜ ಪ್ರಪಂಚದಲ್ಲಿ ಮಾಡಲು ಸಾಧ್ಯವಿಲ್ಲದಿರುವ ಕೆಲವು ಅದ್ಭುತ (?) ಕೆಲಸಗಳನ್ನು ಆರ್ಕುಟ್, ಫೇಸ್ ಬುಕ್ನಲ್ಲಿ ಮಾಡಬಹುದಾಗಿದೆ. ಅದೇನೆಂದರೆ, ನಾವು "ನಾವು" ಎಂದು ಹೇಳಿಕೊಳ್ಳದೇ ಇನ್ಯಾರ ತರಹವೋ ಬಿಂಬಿಸಿಕೊಳ್ಳುವುದು. ಕನ್ನಡಿಯ ಮೇಲಿನ ಬಿಂಬ ನೈಜ ಬಿಂಬವಲ್ಲ ಹೇಗೋ, ಈ ಪ್ರೊಫೈಲುಗಳೂ ಬಹುಪಾಲು ನೈಜವಲ್ಲ. ಮನಸ್ಸು ಮಾಯಾಪೀಡಿತವಾಗಿರುವುದರಿಂದ ನಾವು ನಮಗೆ ಗೊತ್ತಿರುವ ಪ್ರೊಫೈಲಿನ ಜನರನ್ನು ( ಪ್ರಾಣಿಗಳು ಇನ್ನೂ ತಮ್ಮ ಪ್ರೊಫೈಲುಗಳನ್ನು ಮಾಡಿಕೊಂಡಿರುವ ಬಗ್ಗೆ ವರದಿ ಬಂದಿಲ್ಲ ಆದ್ದರಿಂದ ಜನ ಎಂದು ಧೈರ್ಯವಾಗಿ ಹೇಳುತ್ತೇನೆ !) ನಮ್ಮವರೆಂದೇ ನಂಬಿ, ಗೆಳೆತನ ಮಾಡಿ ಕೆಟ್ಟಿದ್ದೇವೆಯೇ ಹೊರತು ಮೋಸಗಳು ಬಯಲಾದಾಗ ಅದರ ವಿರುದ್ಧ ದಂಗೆ ಎದ್ದವರು ಕೋಟಿಗೊಬ್ಬರು. ನಂಬಿಕೆಗಳ, ಭಾವನೆಗಳ, ಸಂಬಂಧಗಳ ವ್ಯಾಖ್ಯಾನಗಳೇ ತಲೆಕೆಳಗಾದಾಗ ನಮಗಾದ ಆಘಾತವನ್ನು ಅರಿಯದೇ " ಎಲ್ಲಾ ಮಾಯೆ ! " ಅಂತ ವೇದಾಂತವನ್ನು, "virtual world ನಲ್ಲಿ ಇದೆಲ್ಲಾ ಕಾಮನ್ನು, ಸುಮ್ನೆ ತಲೆ ಕೆಡಿಸಿಕೊಳ್ತಾರೆ ಜನ ! they don’t know how to move on in life" ಅನ್ನೋ "practical" ಜನರು ತಮ್ಮ ತಮ್ಮ ಕ್ಲೀಷೆಯ ವಾದವನ್ನು ಮುಂದುವರೆಸಿದರೆ, ಹುಡುಗರೆಂದು ಮೋಸ ಹೋಗಿ ಕಡೆಗೆ ಅದೇನಾದರೂ ಹುಡುಗಿಯ ಪ್ರೊಫೈಲ್ ಆಗಿದ್ದರೆ ಹುಡುಗರು ಕನ್ ಫ್ಯೂಷಿಯಸ್ ಮಹಿಮೆಯಿಂದ confuse ಆಗುತ್ತಾರೆ. ಹುಡುಗಿಯ ಪ್ರೊಫೈಲೆಂದು ಮೊದಲು ಗೆಳೆತನ ಬೆಳೆಸಿದ್ದರೆ, ಅದು ಮುಂದೆ ಹೋಗಿರತ್ತೋ ಬಿಡತ್ತೋ, ಮೋಸವನ್ನು ಬಯಲಿಗೆಳೆಯುವ ವಿಷಯದಲ್ಲಿ ಅಡಕತ್ತರಿಯಲ್ಲಿ ಸಿಕ್ಕಿಬೀಳುತ್ತಾರೆ. ಪ್ರತಿಭಟನೆ ಮಾಡಲು ಬುದ್ಧಿ ಹೇಳತ್ತೆ , ಅವರ ಮೋಸ ಬಯಲಿಗೆಳೆಯಲು ಪುರಾವೆಯೂ ಇರತ್ತೆ, ಆದರೆ ಅದನ್ನು ತಪ್ಪೆಂದು ವಾದಿಸುವ ಜನರನ್ನು ಎದುರಿಸಲು ಬೇಕಾಗಿರುವ ಧೈರ್ಯದ ದಾಸ್ತಾನು ಮಾತ್ರ ಖಾಲಿಯಾಗಿರತ್ತೆ. ಇದು ಯಾರ ತಪ್ಪೂ ಅಲ್ಲ. ಧೈರ್ಯ ಖಾಲಿಯಾಗಲು ಕಾರಣ ಅದೇ ಕನ್ ಫ್ಯೂಷಿಯಸ್ ಮಹಿಮೆ. ಭಾವನೆಗಳ ಬಗ್ಗೆ ಕೇಳುವವರಿಲ್ಲ, ಅದು ಸ್ನೇಹದ್ದಾಗಿರಲಿ, ಪ್ರೀತಿಯದ್ದಾಗಿರಲಿ. ಆದ ಅನ್ಯಾಯದ ವಿರುದ್ಧ ದನಿ ಎತ್ತಿದವರೆಷ್ಟು ಜನ ?

ಇನ್ನು ಇನ್ನೊಂದು ವಿಧದ ಗೆಳೆತನಕ್ಕೆ ಬರೋಣ. ಹುಡುಗಿಯೆಂದು ಸಹಜ ಸಖ್ಯ ಬೆಳೆಸಿಕೊಂಡೂ ಅದೇನಾದರೂ ಹುಡುಗನ ಪ್ರೊಫೈಲ್ ಆಗಿದ್ದರೆ ಅದೂ ಸಹ ಆಘಾತಕಾರಿಯಾಗಿರುತ್ತದೆ.ಇಲ್ಲೂ confusion ಮತ್ತು Confucius ರಾರಾಜಿಸುತ್ತಾರೆ ಆದ್ದರಿಂದ ಪ್ರತಿಭಟನೆ ದೂರವಾಗಿಯೇ ಉಳಿಯುತ್ತದೆ. ಸ್ನೇಹದಲ್ಲಿ ಸತ್ಯಕ್ಕೆ ಬೆಲೆಕೊಡದವರ ಬಗ್ಗೆ ತಿರಸ್ಕಾರ ಹುಟ್ಟಿದರೆ, ಸಖ್ಯದಲ್ಲಿ ವಿನಿಮಯಗೊಂಡ ಕೆಲವು ವಿಷಯಗಳು ಎಲ್ಲಿ ಅಪಾಯಕಾರಿ ಕೈ ಸೇರಿಬಿಟ್ಟವೋ ಅನ್ನುವ ಹೆದರಿಕೆ ನಮ್ಮನ್ನು ಮುಕ್ಕಾಲು ಸಾಯಿಸಿಯೇಬಿಟ್ಟಿರುತ್ತವೆ !

ಕಾಲದ ಬಂಡಿ ಏರಿ ಕಟ್ಟೆ ಬಿಟ್ಟು ನಾವು ಕೀಬೋರ್ಡನ್ನು ಕುಟ್ಟುವಷ್ಟು ಮುಂದೆ ಸಾಗಿದರೂ ಸರಿ ತಪ್ಪನ್ನು ಖಂಡಿಸುವಷ್ಟು , ಮುಕ್ತವಾಗಿ ಪ್ರತಿಭಟನೆ ಮಾಡುವಷ್ಟು ಮುಂದೆ ಬಂದಿಲ್ಲ. ಯಾಕಂದರೆ, ವರ್ಷಾನುಗಟ್ಟಲೆಯ ಹಿಂದಿನ ಅಪ್ಪಣೆಯನ್ನೇ , "ಅಯ್ಯೋ ನಮಗೆ ಯಾಕೆ ಬೇಕು ಇವೆಲ್ಲ ? " ಅನ್ನುವ ಧೋರಣೆಯನ್ನೇ ನಾವು ಬಿಟ್ಟಿಲ್ಲವಲ್ಲ ! ಆರ್ಕುಟ್ ಮದುವೆಗಳ ಬಗ್ಗೆ ನನ್ನ ಅಸಮ್ಮತಿಯಾಗಲಿ, ಆಕ್ಷೇಪಣೆಯಾಗಲಿ ಖಂಡಿತಾ ಇಲ್ಲ. ಅದನ್ನು ಪ್ರಗತಿಯೆಂದೇ ಪರಿಗಣಿಸೋಣ. ಆದರೆ ಪ್ರತಿಯೊಂದು ಸಂಬಂಧಕ್ಕೂ ಸ್ನೇಹವೇ ಮೊದಲ ಮೆಟ್ಟಿಲಾಗಿರುವುದರಿಂದ ಸ್ನೇಹಿತರಾಗಲು ಈಗ ನಾವು ಹಲವಾರು ದೃಷ್ಟಿಕೋನಗಳಲ್ಲಿ ನೂರಾರು ಬಾರಿ ಯೋಚಿಸಬೇಕಾಗತ್ತೆ. ಸಭ್ಯತೆ ಕೂಡಾ ಮುಖ್ಯವಾತ್ತೆ. ನಾನು ನನ್ನ ಆರ್ಕುಟ್ ಪ್ರೊಫೈಲ್ ನಲ್ಲಿ " please do not send friend request if we do not know each other" ಅಂತ ಹಾಕಿದ್ದಕ್ಕೆ ನನ್ನೆಲ್ಲಾ ಮಿತ್ರರು ನಕ್ಕಿದ್ದರು. ಆದರೆ ನಾನು ಆರ್ಕುಟ್ ನಲ್ಲಿ ಹಲವಾರು ಬಾರಿ ನಡೆಯುವ ಮೋಸಗಳಿಂದ ನೊಂದು ಅತ್ತ ನನ್ನ ಸ್ನೇಹಿತೆಯರ ತರಹ ಅಳಲು ಸಿದ್ಧಳಿರಲಿಲ್ಲ. ಅಷ್ಟೇ.

ಬದಲಾವಣೆ ಜಗದ ನಿಯಮವಾದರೂ, "ಬದಲಾವಣೆ ಜಗದ ನಿಯಮ" ಅನ್ನುವ ನಿಯಮಕ್ಕೆ ಬದಲಾವಣೆಯಿಲ್ಲ ! ಇನ್ನೊಂದು ಬದಲಾಗದ ನಿಯಮ Confucius ನ ನಿಯಮ ಆಗುವುದನ್ನ ನಾವು ತಡೆಯಬೇಕಿದೆ. ಭಾವನೆಯ ಈ ಕಟ್ಟಲೆಯನ್ನು ನಾವು ಇಂದು ವಿಮರ್ಶೆಗೆ ಒಳಪಕಿಡಿಸಬೇಕಿದೆ. ಭಾವನೆಗೆ ಆದ ಪೆಟ್ಟನ್ನು ಸರಿಪಡಿಸಲು ನಾವು ಹೋರಾಡಲೇಬೇಕಿದೆ. ನಾಗಾಲೋಟದಲ್ಲಿ ಪ್ರಗತಿ ಹೊಂದುತ್ತಿರುವ ತಂತ್ರಜ್ಞಾನ ಕುಮತಿಗಳ, ಭಾವನಾಶೂನ್ಯರಾದ, ಕಾರ್ಯವಾಸಿ ಮಾನವರ ವಿಕಾಸಕ್ಕೆ ಎಡೆ ಮಾಡಿಕೊಡದಿರಲಿ ಎನ್ನುವುದಷ್ಟೇ ನನ್ನ ಆಶಯ. ಸ್ನೇಹಕ್ಕೆ ನಂಬಿಕೆಯ ಭದ್ರ ಅಡಿಪಾಯದೊಂದಿಗೆ ಸಭ್ಯತೆಯ ಚೌಕಟ್ಟಿನ ಅವಶ್ಯಕತೆಯಿದೆ.

ಅಕ್ಟೋಬರ್ ಹದಿನಾರು ೨೦೦೯ ರಂದು ನಾವೇಕೆ ಹೀಗೆ ಪ್ರಾರಂಭವಾಗಿ ಎರಡು ವರ್ಷ ಆಗಿದ್ದನ್ನು ಆಚರಣೆ ಮಾಡಬೇಕು ಅಂತ ನನಗೆ ಅನ್ನಿಸಲಿಲ್ಲ. ಈ ಬಾರಿ ನಾವೇಕೆ ಹೀಗೆ ಅಂತ ಕೇಳೋದಿಲ್ಲ.


Thursday, September 3, 2009

ಗೌರಿ ಬಾಗಿನ- ನಾ ನ ನ ನಾ ನಾ? ?

ಈ ಸರ್ತಿ ಗೌರಿ ಮತ್ತು ಗಣೇಶ ಸಿಕ್ಕಾಪಟ್ಟೆ ಬ್ಯುಸಿ ಇದ್ದ ಹಾಗೆ ಕಂಡರು. ಇಬ್ಬರೂ ಒಂದೇ ದಿನ ಧರೆಗೆ ಬಂದಿದ್ದರು ! ಅಲ್ಲದೇ ಭಾನುವಾರವೇ ಬಂದಿದ್ದರು, ಎಲ್ಲರಿಗೂ ಅನುಕೂಲವಾಗಲಿ ಅಂತ ! ಇರಲಿ, ಜೈ ಗೌರಿ ಗಣೇಶ !

ಗೌರಿ ಗಣಪತಿ ಹಬ್ಬ ಹಿಂದೆ ಸಾಂಪ್ರದಾಯಿಕವಾಗಿತ್ತು, ಆಮೇಲೆ ಸಾಮಾಜಿಕವಾಯ್ತು. ಈಗ ಅಪ್ಪಟ ವ್ಯಾವಾಹಾರಿಕವಾಗಿದೆ . ಗೌರಿ ಹಬ್ಬದಲ್ಲಿ ಒಬ್ಬಟ್ಟಿಗೆ ಮೊದಲು ಪ್ರಾಮುಖ್ಯತೆ ಇದ್ದರೆ ಎರಡನೆಯದು ಗೌರಿ ಬಾಗಿನಕ್ಕೆ. ಎಲ್ಲ ಧಾನ್ಯಗಳು, ತೆಂಗಿನಕಾಯಿ, ಹಣ್ಣುಗಳು, ಮತ್ತು ಉಡುಗೊರೆಗಳನ್ನು ಬಿದಿರಿನ ಮೊರಗಳಲ್ಲಿ ನೀಡುವ ಸಂಪ್ರದಾಯವಿದೆ. ಇದರ ಉದ್ದೇಶ ಇಷ್ಟೇ. ಸಕಲ ಧಾನ್ಯಗಳನ್ನು ಕೊಡುವ ಉದ್ದೇಶ ಸ್ವಯಂಪಾಕ. ದೇವಿಗೆ ನಾವು ಸಮರ್ಪಿಸುವ ಮಹಾನೈವೇದ್ಯದ ಜೊತೆಗೆ ಇದನ್ನೂ ಕೊಡುವ ಉದ್ದೇಶ ಅವಳಿಗೆ ಇನ್ನೇನು ಏನು ಸ್ವೀಕರಿಸಲು ಇಚ್ಛೆ ಇದ್ದರೆ ಅದೂ ಸಹ ಧಾನ್ಯಗಳ ಮೂಲರೂಪದಲ್ಲಿ ನೆರವೇರಲಿ ಅಂತ. ಅವಳು ಸಂತೃಪ್ತಳಾಗಿ ನಮ್ಮನ್ನು ಹರಸಲಿ ಅಂತ.

ಈಗ ಬಾಗಿನದ ಸಾಮಾಜಿಕ ಔಚಿತ್ಯದ ವಿಷಯಕ್ಕೆ ಬರೋಣ. ಹಿಂದಿನ ಕಾಲದಲ್ಲಿ ಧಾನ್ಯಗಳ ಕಟಾವು, ಸುಗ್ಗಿ, ಎಲ್ಲ ವೈಭವೋಪೇತವಾಗಿ ಆಚರಿಸಲ್ಪಡುತ್ತಿದ್ದವು. ತಮ್ಮ ಗದ್ದೆಯಲ್ಲಿ ಬೆಳೆದ ಧಾನ್ಯಗಳ ಗುಣಮಟ್ಟ ಹೇಗಿದೆ ಅನ್ನುವುದನ್ನ ಬೇರೆಯವರು ಸವಿದು ಹೇಳುವುದು ಉಚಿತವೆಂದು ಭಾವಿಸಿ, ಹಬ್ಬದ ನೆಪ ಮಾಡಿ, ಧಾನ್ಯದ ವಿನಿಮಯ ಮಾಡಲಾಗುತ್ತದೆ. ಆಗ ಸೇರುಗಳಲ್ಲಿ ನೀಡಲಾಗುತ್ತಿತ್ತು, ಈಗ ಅದು ಚಟಾಕಿಗಿಂತ ಕಡಿಮೆಗೆ ಇಳಿದಿದೆ, ಕಾಲಾಯ ತಸ್ಮೈ ನಮಃ. ಅಕ್ಕ ತಂಗಿಯರಿಗೆ, ಮಿತ್ರವರ್ಗಕ್ಕೆ ಬಾಗಿನದ ಜೊತೆ ಉಡುಗೊರೆಗಳನ್ನು ಕೊಡಲಾಗುತ್ತಿತ್ತಾದ್ದರಿಂದ ಬಾಂಧವ್ಯ ಇನ್ನೂ ಹೆಚ್ಚುತ್ತಿತ್ತು, ಮತ್ತಷ್ಟು ಬೆಳೆಯುತ್ತಿತ್ತು.

ಈಗ ಬಾಗಿನದ ವ್ಯಾವಾಹಾರಿಕತೆಗೆ ಬರೋಣ. ಬಾಗಿನ ಕೊಡುವುದು ಈಗ ಕೇವಲ ಕಾಟಾಚಾರ ಆಗಿಹೋಗಿದೆ. ಕೆಲವರಿಗೆ ಅದು "ಹೊರೆ" ಅನ್ನಿಸಿಬಿಟ್ಟಿದೆ. ಹತ್ತು ಸಾವಿರಕ್ಕಿಂತ ಒಂದು ರುಪಾಯಿಯೂ ಕಡಿಮೆ ಇರದ ಸೀರೆ ಕೊಳ್ಳಲು ಮುಖ ಮುಲಾಜು ನೋಡದ ಅವರು, ಐದು ಜನರಿಗೆ ಬಾಗಿನ ನೀಡಲು ಬೇಕಾಗುವ ಅರ್ಧ ಕೇಜಿ ಅಕ್ಕಿ ಕೊಳ್ಳಲು ಸಾವಿರ ಸರ್ತಿ ಯೋಚನೆ ಮಾಡುತ್ತಾರೆ. ಬಾಗಿನದ ಮೊರಗಳನ್ನು ಮಾರುವವರ ಬಳಿ ಗಂಟಾನುಗಟ್ಟಲೆ ಜಗಳಕ್ಕೆ ನಿಲ್ಲಲು ತಯಾರಿರುತ್ತಾರೆ. ಮಾತಾಡಿದ್ದೂ ಆಡಿದ್ದೇ - " ಎಲ್ಲರಲ್ಲೂ ದೇವರಿರುತ್ತಾರೆ, ಅವರಿಗೆ ನಮಸ್ಕಾರ ಮಾಡಬೇಕು, ಬೇರೆಯವರಿಗೆ ದಾನ ಕೊಡುವಾಗ ಖರ್ಚಿನ ಮುಖ ನೋಡಬಾರದು" ಹಾಗೆ ಹೀಗೆ. ಆದರೆ ಬಾಗಿನ ಕೊಡುವ ಇಂತಹ ಹಬ್ಬ ಬಂದಾಗ " ನಮ್ಮನೆಯಲ್ಲಿ ಬಾಗಿನ ಕೊಡುವ ಸಂಪ್ರದಾಯ ಇಲ್ಲ, ಬರಿ ಬಾಗಿನ ತೆಗೆದುಕೊಳ್ಳುವ ಸಂಪ್ರದಾಯ ಇದೆ ! " ಮತ್ತು " ಹಬ್ಬದ ಖರ್ಚು ಹೆಚ್ಚಲ್ಲವೇ ? (?) ಬಾಗಿನ ಎಲ್ಲ ಯಾರು ಕೊಡುತ್ತಾರೆ ? ಸದ್ಯ ಪೂಜೆ ಮಾಡಿ ಊಟವಾದರೆ ಸಾಕಾಗಿದೆ ! " ಇವೇ ಮುಂತಾದ ಆಣಿ ಮುತ್ತುಗಳು ಸಾರಾಸಗಟಾಗಿ ಕೇಳಸಿಗುತ್ತವೆ. ಮತ್ತೆ ಕೆಲವರು ಬಾಗಿನ ಕೊಡುತ್ತಾರೆ- ಹುಳು ಬಂದ ಅಕ್ಕಿ, ತೂತಾದ ಬೇಳೆ ಕಾಳು ! ಈ ಪುರುಷಾರ್ಥಕ್ಕೆ ಬಾಗಿನ ಕೊಡಬೇಕ್ಯಾಕೆ ? "ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮೊಳಹಾಕಿದರು" ಅಂತ ಬೈದುಕೊಳ್ಳಬೇಡಿ ನೀವೆಲ್ಲರೂ, ಆದರೆ ವಿಷಯದ ಸೂಕ್ಷ್ಮವನ್ನು ಗಮನಿಸಿ. ಬಾಗಿನ ಕೊಡುವುದು ಏಕೆ ? ಬಾಗಿನ ತೆಗೆದುಕೊಂಡವರು ನಮ್ಮನ್ನು ಆಶೀರ್ವದಿಸಿ ಹರಸಲಿ ಅಂತಲ್ಲವೇ ? ನಮ್ಮ ಆಶೀರ್ವಾದ ಫಲಿಸುವುದು ಎಷ್ಟು ನಿಜವೋ, ಹುಳು ತುಂಬಿದ ಅಕ್ಕಿ ಬೇಳೆ ನೋಡಿದ ತಕ್ಷಣ ಬರುವ ನಿಟ್ಟುಸಿರು ಫಲಿಸುವುದೂ ಅಷ್ಟೇ ನಿಜವಲ್ಲವೇ ? ನಾವು ಒಳ್ಳೆ ವಸ್ತುಗಳನ್ನು ಕೊಟ್ಟರೆ ನಮಗೆ ಒಳ್ಳೆಯದಾಗುತ್ತದೆ, ಕೆಟ್ಟದ್ದು ಕೊಟ್ಟರೆ ಕೆಟ್ಟದಾಗುತ್ತದೆ ಅನ್ನೋದು ಭೌತಶಾಸ್ತ್ರದ ಸಹಜ ನಿಯಮ ಅಲ್ಲವೇ ? ಭೌತಶಾಸ್ತ್ರದ ವಿಷಯ ಬದಿಗಿರಲಿ, ಅದು ಸಾಮಾನ್ಯ ಪ್ರಜ್ಞೆ ಅಲ್ಲವೇ ? ನಾವು ಕೆಟ್ಟ ವಸ್ತುಗಳನ್ನು ಕೊಡಬಹುದು, ಆದರೆ ನಮಗೆ ಮಾತ್ರ ಸದಾ ಒಳ್ಳೆಯ ವಸ್ತುಗಳೇ ಸಿಗಬೇಕು, ಒಳ್ಳೆಯದೇ ಆಗುತ್ತಿರಬೇಕು ಅಂತ ಬಯಸುವುದು ಮೂರ್ಖತನದ ಪರಮಾವಧಿಯಲ್ಲವೇ ?

ಇನ್ನು ಈಗಿನ ಕಾಲದ ನನ್ನ ಪುಟ್ಟ ತಂಗಿಯರು- ಅವರಿಗೆ ಬಾಗಿನ ಕೊಡೋದು ಬೋರ್ ಅಂತೆ, ಕ್ರಿಸ್ಮಸ್ ಸಮಯದಲ್ಲಿ ಸೀಕ್ರೆಟ್ ಏಂಜೆಲ್ ಗಳಾಗಿ ಅವರ ಮಿತ್ರರಿಗೆ ಮತ್ತು ಅಕ್ಕ ತಂಗಿಯರಿಗೆ ಗಿಫ್ಟ್ ಕೊಡುವುದು ಥ್ರಿಲ್ಲ್ ಅಂತೆ ! ನಾನು ಕೇಳಿದೆ- "ಬಾಗಿನಕ್ಕೆ ಎರಡು ಮೊರಗಳಿರುತ್ತವೆ- ಬಾಗಿನವನ್ನು ಮುಚ್ಚಿ ಕೊಡಲಾಗುತ್ತೆ. ಅದನ್ನ ತೆಗೆದು ನೋಡಿದರೆ ಅದರಲ್ಲಿರುವ ಉಡುಗೊರೆ ನೋಡಿ ಥ್ರಿಲ್ ಆಗುತ್ತದೆ. ಮತ್ತು ಯಾರು ಬಾಗಿನ ಕೊಡಲು ಬರುತ್ತಾರೋ ಅವರು ಏಂಜಲ್ ಗಳಲ್ಲವೇ ? " ಇದಕ್ಕೆ ಉತ್ತರ- "Oh really ? " ಎಂಬ ಮತ್ತೊಂದು ಪ್ರಶ್ನೆ ! ನನ್ನ ತಂಗಿ ಮತ್ತು ನಾನು ನಮ್ಮ ಸ್ನೇಹಿತೆಯರು ಯಾರಿಗೂ ಬಾಗಿನ ಕೊಡದ ಕಾರಣ ಅವರಿಗೆ ಇಂತಹಾ "ಬಾಗಿನ ordeal (?!) " ಗಳಲ್ಲಿ ನಂಬಿಕೆ ಇಲ್ಲದಿರುವುದು. ನಾನು ನನ್ನ ತಂಗಿಗೆ, ಅವಳು ನನಗೆ ಬಾಗಿನ ಕೊಟ್ಟುಕೊಂಡು ಸುಮ್ಮನಾದೆವು.

ನಮ್ಮ ಆಚರಣೆಗಳ ಅರ್ಥ ತಾತ್ಪರ್ಯಗಳನ್ನು ಸರಿಯಾಗಿ ತಿಳಿದುಕೊಳ್ಳದೇ, ಅವುಗಳನ್ನು ನೆಟ್ಟಗೆ ಆಚರಿಸದೇ, ಇನ್ಯಾವುದೋ ಪದ್ಧತಿಯನ್ನೂ ಸಹ ಸರಿಯಾಗಿ ಅರ್ಥೈಸದೇ ಸುಮ್ಮನೆ ತೋರ್ಪಡಿಕೆಗಾಗಿ ಹಬ್ಬಗಳನ್ನು ಆಚರಿಸುತ್ತೀವಲ್ಲಾ...ನಾವೇಕೆ ಹೀಗೆ ?

Monday, August 3, 2009

ಮತ್ತೊಂದು ಆಹ್ವಾನ

ನಾನು ಈ ಬಾರಿಯೂ ನಾವೇಕೆ ಹೀಗೆ ಅಂತ ಕೇಳೊಲ್ಲವಾದ್ದರಿಂದ, ನನಗೆ ಗೊತ್ತು ನೀವು ಸಹ " ಲಕ್ಷ್ಮಿ ಏಕೆ ಹೀಗೆ ?" ಅಂತ ಕೇಳೊಲ್ಲ ಅಂತ. :)

ಪ್ರಣತಿ ಸಂಸ್ಥೆ ಮತ್ತೊಂದು ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಈ ಬಾರಿ ಎರಡು ಪುಸ್ತಕಗಳ ಬಿಡುಗಡೆಯಾಗಲಿದೆ. ಸಹಬ್ಲಾಗಿಗರು, ಪ್ರಣತಿಯ ಸದಸ್ಯರೂ ಮತ್ತು ಆತ್ಮೀಯರೂ ಆದ ಸುಶ್ರುತ ಬರೆದ "ಹೊಳೆಬಾಗಿಲು" ಲಲಿತ ಪ್ರಬಂಧಗಳ ಸಂಕಲನ ಮತ್ತು ಶ್ರೀನಿಧಿ ಬರೆದ "ಹೂವು ಹೆಕ್ಕುವ ಸಮಯ" ಕವನಗುಚ್ಛ- ಈ ಎರಡೂ ಪುಸ್ತಕಗಳ ಲೋಕಾರ್ಪಣೆಯ ಖುಷಿ ಪ್ರಣತಿಯದ್ದು. ನೀವು ಬಂದರೆ ನಮ್ಮ ಖುಷಿ ಖಂಡಿತಾ ನೂರ್ಮಡಿಯಾಗಲಿದೆ. ನಾಗತಿಹಳ್ಳಿ ಚಂದ್ರಶೇಖರ್, ಎಚ್. ಎಸ್. ವೆಂಕಟೇಶ ಮೂರ್ತಿ ಮತ್ತು ಜೋಗಿಯವರ ಜೊತೆ ನೀವೆಲ್ಲರೂ ಆಗಸ್ಟ್ ಒಂಭತ್ತನೆಯ ತಾರೀಖು ಬೆಳಿಗ್ಗೆ ಹತ್ತು ಮೂವತ್ತಕ್ಕೆ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಮ್ಮೊಂದಿಗೆ ಇರುತ್ತೀರಿ ಅಂತ ನಂಬಿದ್ದೇವೆ. ಖಂಡಿತಾ ಬನ್ನಿ.

Monday, July 13, 2009

ಗಮಕ ಸುಧಾ ಧಾರೆ

ಇಂದು ಮಾತ್ರ ನಾನು ನಾವೇಕೆ ಹೀಗೆ ಎಂದು ಕೇಳುವುದಿಲ್ಲ. :)

ಕರ್ನಾಟಕದಲ್ಲಿ ಜನಪದ ಸಂಗೀತದಷ್ಟೇ ಪ್ರಸಿದ್ಧವಾಗಿರುವುದು ಗಮಕ ಕಲೆ ಮತ್ತು ಗಮಕ ಶೈಲಿಯ ಗಾಯನ. ಗಮಕ ಎಂದ ತಕ್ಷಣ ಎಲ್ಲರಿಗು ನೆನಪಾಗುವುದು ಕುಮಾರವ್ಯಾಸನ "ಕರ್ನಾಟ ಭಾರತ ಕಥಾ ಮಂಜರಿ "ಯ ವಾಚನ ಮತ್ತು ವ್ಯಾಖ್ಯಾನ. ಕುಮಾರವ್ಯಾಸನ ಕಾವ್ಯ ಮಾತ್ರವಲ್ಲದೆ, ಲಕ್ಷ್ಮೀಶನ ಜೈಮಿನಿ ಭಾರತ, ತೊರವೆ ರಾಮಾಯಣ ಮುಂತಾದ ಕಾವ್ಯಗಳು ಕೂಡ ಪ್ರಚಲಿತವಾಗಿವೆ. ಹೊಸ ಪ್ರಯೋಗಗಳಿಗೆ ಹೆಸರಾದ ಪ್ರಣತಿ ಸಂಸ್ಥೆಯು [www.pranati.in] ಗಮಕ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಾಚನದ ಭಾಗ ರಾಷ್ಟ್ರಕವಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕಾವ್ಯದ "ಶಬರಿಗಾದನು ಅತಿಥಿ ದಾಶರಥಿ". ಜುಲೈ ಹದಿನೆಂಟು ಸಾಯಂಕಾಲ ಐದು ಘಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ನೀವೆಲ್ಲರೂ ಅತಿಥಿಗಳಾಗಿ ಆಗಮಿಸಿ ಗಮಕ ವಾಚನದ ಆತಿಥ್ಯವನ್ನು ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ.



ಖಂಡಿತಾ ಬನ್ನಿ.ನಿಮಗಾಗಿ ಕಾವ್ಯಸುಧೆಯ ರಸದೌತಣ ಕಾಯುತ್ತಿದೆ !

Sunday, May 10, 2009

ಫೋನ್ ಮಾಡಿ ಬನ್ನಿ...

ಈಗೀಗ ಎಲ್ಲರೂ ಬ್ಯುಸಿ ಇರುತ್ತೇವೆ. ಕೆಲವರು ಮನೆಯ ಹೊರಗೆ, ಕೆಲವರು ಮನೆಯ ಒಳಗೆ. ಆತ್ಮೀಯರ ಆಗಮನ ಮೊದಲೇ ತಿಳಿದರೆ ನಾವು ನಮ್ಮ ಸಮಯವನ್ನು ಮರುವಿಂಗಡಿಸಿಕೊಳ್ಳಬಹುದು. ಇಲ್ಲದಿದ್ದರೆ ಅವರ ಪ್ರತಿ ಇರುವ ನಮ್ಮ ಗೌರವ ಮತ್ತು ಆತ್ಮೀಯತೆಯನ್ನು ಸರಿಯಾಗಿ ವ್ಯಕ್ತಪಡಿಸಲಾಗದೇ ಒದ್ದಾಡುವುದೇ ಹೆಚ್ಚು.

ಹೋದ ವಾರ ನಮ್ಮ ಮನೆಗೆ ದಂಪತಿಗಳು ಬಂದರು,ಅವರ ಮಗನ ಮದುವೆಗೆ ನಮ್ಮನ್ನು ಆಹ್ವಾನಿಸಲು. ಹೊಸ್ತಿಲು ದಾಟುತ್ತಿದ್ದಂತೆಯೇ, " ನಾವು ನಿಮ್ಮನ್ನು ಕರೆಯಲು ಬರುತ್ತಿರುವುದು ಇದು ಮೂರನೆಯ ಬಾರಿ. ಎರಡೂ ಸರ್ತಿ ಬಂದಾಗ ಮನೆ ಬೀಗ ಹಾಕಿತ್ತು. " ಅಂದರು. ನಮ್ಮಮ್ಮ, " ಓಹ್ ಹೌದೇ ? ಎಷ್ಟೊತ್ತಿಗೆ ಬಂದಿದ್ದಿರಿ ? " ಎಂದು ಕೇಳಲು, "ಮೊದಲನೆಯ ಸರ್ತಿ ಬೆಳಿಗ್ಗೆ ಹನ್ನೊಂದಕ್ಕೆ, ಎರಡನೆಯ ಸರ್ತಿ ಸಾಯಂಕಾಲ ಏಳಕ್ಕೆ "ಎಂದು ಉತ್ತರ ನೀಡಿದ್ದಲ್ಲದೇ, " ನೀವು ತುಂಬಾ ಬ್ಯುಸಿ ಬಿಡಿ..ಮಕ್ಕಳಿರೋಲ್ವೆ ಮನೆಯಲ್ಲಿ ?" ಅಂದು ನನ್ನ ಮತ್ತು ನನ್ನ ತಂಗಿಯ ಮುಖ ನೋಡಿದರು. ನಮ್ಮಮ್ಮ " ನಾನು ಸಾಯಂಕಾಲ ವಾಕಿಂಗ್ ಹೋಗಿರುತ್ತೇನೆ. ದೊಡ್ಡವಳು ಬೆಳಿಗ್ಗೆ ಹೊರಗೆ ಹೋದರೆ ಪಾಠ ಪ್ರವಚನ, ಆಫೀಸು, ಲೈಬ್ರರಿ ಅಂತ ವಾಪಸ್ಸು ಬರುವುದು ರಾತ್ರಿ ಎಂಟಕ್ಕೇ. ಚಿಕ್ಕವಳಿಗೆ ದ್ವಿತೀಯ ಪಿಯುಸಿ ಪಾಠ. ಬೆಳಿಗ್ಗೆ ನಾವು ದೇವಸ್ಥಾನ, ಮದುವೆ ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಹೋಗುವುದಿರತ್ತೆ ನೋಡಿ.." ಅಂದರು. ಅದಕ್ಕೆ ಅವರು, "ನಾವು ಫೋನ್ ಮಾಡಿ ಬರೋಣಾ ಅಂತ ಇದ್ದೆವು. ಆದರೆ ಆತ್ಮೀಯರಿಗೆಂಥಾ ಫೋನು..ಯಾವಾಗ್ಲು ಮನೆಯಲ್ಲಿರುತ್ತಾರೆ ಅಂತ ಹಾಗೇ ಬಂದೆವು" ಅಂದರು.

ನಾವು ಆತ್ಮೀಯರು ಸರ್ವಾಂತರ್ಯಾಮಿಗಳೇ ಅಥವಾ ದೂರದೃಷ್ಟಿಯುಳ್ಳವರೇ ? ಎರಡು ಸರ್ತಿ ನಾವು ಮನೆಯಲ್ಲಿಲ್ಲದಿದ್ದಾಗಲು ಅವರು ಫೋನ್ ಮಾಡಿರಲಿಲ್ಲ. ಮೂರನೆಯ ಬಾರಿ ಕೂಡಾ ಮಾಡಿರಲಿಲ್ಲ. ಅಮ್ಮನಿಗೆ ಇದೆಲ್ಲ ಅಭ್ಯಾಸವಿರಬಹುದು, ಆದರೆ ನಾವು ಮೂವರು ಅವತ್ತು ಒಂದು ಬಹು ಮುಖ್ಯ ಕಾರ್ಯಕ್ರಮ ಒಂದಕ್ಕೆ ಹೊರಡಬೇಕಿತ್ತು. ನನಗೆ ಮತ್ತು ನನ್ನ ತಂಗಿಗೆ ಏನೂ ಮಾತಾಡಲು ತೋಚುತ್ತಿಲ್ಲ. ಅಮ್ಮ ಹಾಡಬೇಕಿತ್ತು. ಇವರ ಆಗಮನದಿಂದ ಮುಕ್ಕಾಲು ಘಂಟೆ ನಮಗೆ ಹೋಗಲು ತಡವಾಗಿ, ಅಲ್ಲಿನವರಿಗೆ ಫೋನಿಸಿ, ನಾವು ತಡವಾಗಿ ಆಗಮಿಸಬೇಕಾಗಿದ್ದಕ್ಕೆ ಕ್ಷಮೆ ಇರಲಿ ಎಂದು ಬೇಡಿಕೊಂಡಿದ್ದಾಯ್ತು. ಅವರು ನಮಗೆ ಎಷ್ಟು ಆತ್ಮೀಯರೆಂದರೆ ನಾವು ಅವರಿಗೆ ನಮ್ಮ ಪರಿಸ್ಥಿತಿ ಹೇಳಲೂ ಆಗುತ್ತಿಲ್ಲ, ಅವರ ಮೇಲಿರುವ ನಮ್ಮ ಪ್ರೀತಿ ವಿಶ್ವಾಸಗಳನ್ನು ಸರಿಯಾಗಿ ವ್ಯಕ್ತಪಡಿಸಲೂ ಆಗುತ್ತಿಲ್ಲ. ಈ ದ್ವಂದ್ವಕ್ಕೆ ನಾವು ನಿರುತ್ತರರು.ನಿಮಗೊಂದು ವಿಷಯ ಹೇಳಬೇಕು- ಬಂದಿದ್ದರಲ್ಲ ದಂಪತಿಗಳು, ಹೊರಟಾಗ ನುಡಿಮುತ್ತೊಂದನ್ನು ಆಡಿ ಹೋದರು- "You are most welcome to our house any time, But do give us a phone call before you come !"



ಆತ್ಮೀಯರ ಹಠಾತ್ ಆಗಮನದಿಂದ ಆನಂದದೊಂದಿಗೆ ಆಗುವ ಮುಜುಗರದ ಕೆಲವು ಉದಾಹರಣೆಗಳು :

1. ಅಮ್ಮ ಒಮ್ಮೆ ಮೆಣಸಿನಪುಡಿ ಮಾಡುತ್ತಿದ್ದರು...ಬಂದ ಅತಿಥಿಗಳು " ಏನಿದು ಸಿಕ್ಕಾಪಟ್ಟೆ ಘಾಟು ನಿಮ್ಮನೆ ? ಯಾವಾಗ್ಲು ಹೀಗೇನಾ ?" ಅಂದರಂತೆ !

2. ನಾನು ಒಮ್ಮೆ ಏಣಿ ಹತ್ತಿ ಅಟ್ಟ ಕ್ಲೀನ್ ಮಾಡುತ್ತಿದ್ದೆ, ಬಂದವರು ಯಾರೋ ಎಂದು ನೋಡುವ ರಭಸದಲ್ಲಿ ಬೇಗ ಅಟ್ಟ ಇಳಿಯಲು ಹೋಗಿ ಕಾಲು ಉಳುಕಿತು. ಬಂದವರು ನನ್ನ ಕುಂಟು ಕಾಲನ್ನು ಪ್ರಶ್ನಾರ್ಥಕವಾಗಿ ನೋಡಲು, ಅವರಿಗೆ ವಿವರಣೆ ನೀಡುವಷ್ಟರಲ್ಲಿ ನನಗೆ ಸಾಕುಬೇಕಾಗಿ ಹೋಯ್ತು !

3. ಒಬ್ಬರು ರಾತ್ರಿ ಹನ್ನೊಂದಕ್ಕೆ ಸಂಕ್ರಾಂತಿಯ ಎಳ್ಳು ಬೀರಲು ಬಂದರು ( ಹಬ್ಬವಾದ ಮೂರ್ನಾಲ್ಕು ದಿನಗಳಾದ ಮೇಲೆ) ಅವರು ಬಾಗಿಲು ಬಡಿದ ರಭಸಕ್ಕೆ ನಾವು ಮಲಗಿದ್ದವರು ಹೆದರಿ ಬಾಗಿಲು ತೆಗೆದೆವು..ಅವರು ಕೇಳಿದ ಪ್ರಶ್ನೆ- "ಮಲಗಿದ್ರಾ ? ಎಬ್ಬಿಸಿದೆವಾ ?"


ಹಿಂದಿನ ಕಾಲದಲ್ಲಾದರೆ ಗೋದಾಮಿನ ತುಂಬಾ ಧಾನ್ಯಗಳು, ಮನೆಯಲ್ಲಿ ಕಾಮಧೇನು ಕಲ್ಪವೃಕ್ಷಗಳಿರುತ್ತಿದ್ದವು. ಈಗ ಹಳ್ಳಿಗಳಲ್ಲಿ ಆ ಸ್ಥಿತಿ ಇರಬಹುದು, ನಾವು ನತದೃಷ್ಟ ನಗರವಾಸಿಗಳು. ಎಲ್ಲವನ್ನು ತಂದಿಟ್ಟುಕೊಂಡಿರಬೇಕಾಗತ್ತೆ. ನಮ್ಮ ಬ್ಯುಸಿ ಜೀವನದಲ್ಲಿ ಹಾಲು ಆಗೋಗಿದೆ ಅಂತ ಗೊತ್ತಾಗೋದು ಕಾಫಿಯ ನೆನಪಾದಾಗಲೇ ! ಇನ್ನು ಧಾನ್ಯ ತರಕಾರಿಗಳ ಬಗ್ಗೆ ಮಾತೇ ಇಲ್ಲ. ಅತಿಥಿಗಳು ಬಂದಾಗ ಸಾಮಾನು ತರಲು ಮುಜುಗರ, ಪಕ್ಕದ ಮನೆಯಲ್ಲಿ ಸಾಲ ಕೇಳಿದರೆ ಅವಮಾನ, ಬಂದವರ ಸತ್ಕಾರ ಮಾಡದಿದ್ದರೆ ನಿಷ್ಠುರರೆಂಬ ಪಟ್ಟ ಬೇರೆ !ಆಡುವಂತಿಲ್ಲ ಅನುಭವಿಸುವಂತಿಲ್ಲ. ಈ ಸಮಸ್ಯೆಗಳನ್ನೆಲ್ಲಾ ಒಂದು ಫೋನ್ ಕಾಲ್ ನಿವಾರಿಸುತ್ತದಲ್ಲವೇ?

ಇನ್ನು ಬಂದು ಹೋಗಲು ತಗಲುವ ಪೆಟ್ರೋಲ್ ಖರ್ಚು, ಬಸ್ ಚಾರ್ಜು ಏನು ಕಡಿಮೆಯೇ ? ಹೇಳದೆಯೇ ಬಂದು ಸರ್ಪ್ರೈಸ್ ಮಾಡಲು ಹೋಗಿ ಬೀಗ ನೋಡಿದಾಗ ಆಗುವ ಶಾಕನ್ನು ತಡೆದುಕೊಳ್ಳಲು ಸಾಧ್ಯವೇ ?

ಎಷ್ಟೋ ಬಾರಿ ನಾವೂ ಇಂತಹ ಪರಿಸ್ಥಿತಿ ಎದುರಿಸಿರುತ್ತೇವೆ, ಅದಕ್ಕಿಂತ ಹೆಚ್ಚಾಗಿ ನಾವು ಹಲವು ಜನರನ್ನು ಇಂಥದ್ದೇ ಪರಿಸ್ಥಿತಿಗೆ ಒಡ್ಡಿರುತ್ತೇವೆ. ಅಲ್ವಾ ? ನಾವು ತಿಳಿದೂ ತಿಳಿದೂ ತಪ್ಪು ಮಾಡುತ್ತೀವಾ ಅಥವಾ ಬೇರೆಯವರ ವಿಷಯದಲ್ಲಿ ನಿರಾಸಕ್ತಿ ತೋರಿಸಿ ನಮ್ಮ ಬುಡಕ್ಕೆ ಬಂದಾಗ ಮಾತ್ರ ಹೌಹಾರುತ್ತೀವಾ ?


ಸಕಲ service providers ಗಳೂ ಇದಕ್ಕಿಂತ ಹೆಚ್ಚಾಗಿ ಕಾಲ್ ದರಗಳನ್ನು ಕೆಳಗಿಳಿಸಲಾರರು. ಆದರೂ ಮಿಸ್ಡ್ ಕಾಲ್ ಮನೋಭಾವ ಜನರಿಂದ ಮಾಯವಾಗಿಲ್ಲ. ಏನೂ ಮಾಡೋಕಾಗಲ್ಲ. ಹೋಗಲಿ...ಮಿಸ್ಡ್ ಕಾಲ್ ಕೊಡಲಿ, ನಾವೇ ಫೋನಿಸೋಣಂತೆ.. ಫೋನ್ ಕರೆ ಮಾಡಿ ಆಮೇಲೆ ಮನೆಗೆ ಬರಬಾರದೆ ?

ನಾವೇಕೆ ಹೀಗೆ ?

Monday, March 23, 2009

ಛೇ ! ಇದನ್ನು ಮಾಡುವ ಬದಲು ನಾನಂದುಕೊಂಡಿದ್ದನ್ನೇ ಮಾಡಬೇಕಿತ್ತು

ಈ ಘಟನ ನಡೆದು ಸರಿಯಾಗಿ ಆರು ವರ್ಷ ಕಳೆದಿದೆ.[ ಸಾಕು...ನಿನ್ನ..ಈ ಹಳೆಯ ಫ್ಲಾಷ್ ಬ್ಯಾಕು ಅಂತ ಹಾಡದೇ ಇದೊಂದು ಫ್ಲಾಷ್ ಬ್ಯಾಕ್ ನ ಸಹಿಸಿಕೊಳ್ಳಿ ದಯವಿಟ್ಟು :) ]

ನಮ್ಮ ಮನೆಯ ಪೇಯಿಂಟಿಂಗ್ ಕೆಲಸ ನಡಿಯುತ್ತಿತ್ತು. ಮನೆಗಳ ಸಾಮಾನೆಲ್ಲ ಅಲ್ಲೋಲ ಕಲ್ಲೋಲ. ಅದೇ ಸ್ಥಿತಿ ನನ್ನ ಮನಸ್ಸಿನದ್ದೂ ! ರಿಸಲ್ಟು ಬಂದು ಒಂದು ವಾರವಾಗಿತ್ತಷ್ಟೇ. ತೊಂಭತ್ತು ಪ್ರತಿಶತ ನಿರೀಕ್ಷಿಸಿದ್ದ ನಾನು ಎಂಭತ್ತೆರಡಕ್ಕೇ ತೃಪ್ತಿ ಪಡಬೇಕಾಯ್ತು. ಭೌತಶಾಸ್ತ್ರದಲ್ಲಿ ನೂರಕ್ಕೆ ನೂರು ಗ್ಯಾರಂಟೀ ಎಂದುಕೊಂಡಿದ್ದ ನಾನು ತೊಂಭತ್ಮೂರು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದೆ. ರಿವಾಲ್ಯುಯೇಷನ್ ಹಾಕಲು ಪಟ್ಟು ಹಿಡಿದಿದ್ದೆ, ಅಣ್ಣ(ಅಪ್ಪನನ್ನು ಅಣ್ಣ ಎನ್ನುತ್ತೇವೆ ನಾವು) ಪ್ರಯೋಜನ ಇಲ್ಲ ಸುಮ್ಮನಿರು ಅಂತ ಸಮಾಧಾನ ಪಡಿಸಿ ಸುಸ್ತಾಗಿದ್ದರು. ಸಿ.ಇ.ಟಿ ಪರೀಕ್ಷೆಯ ರಿಸಲ್ಟು ನನಗೆ ಮುಖ್ಯವಾಗಿರಲಿಲ್ಲ. ನಾನು ಸುಮ್ಮನೇ ಪರೀಕ್ಷೆ ಬರೆದಿದ್ದೆ.

ಅಂದಿನ ರಾತ್ರಿ ನಮ್ಮ ತಂದೆ ಬಂದು " ಲಕ್ಷ್ಮೀ, ಇವತ್ತು ನನ್ನ ಗೆಳೆಯರೊಬ್ಬರು ದಾರಿಯಲ್ಲಿ ಸಿಕ್ಕು ನಿನ್ನ ಸಿ.ಇ.ಟಿ ಪರೀಕ್ಷೆಯ ಫಲಿತಾಂಶ ಕೇಳಿದರು. ನಾನು ಹೇಳಿದೆ. ಅದಕ್ಕೆ ಅವರು ಹೀಗಂದರು - " ಸಾರ್, ಈಗ ಸ್ಕೋಪ್ ಇರೋದು ಎಂಜಿನೀರಿಂಗ್ ನಲ್ಲೇ...ಮಾಡಿಸಿ ನಿಮ್ಮ ಮಗಳನ್ನೂ ಎಂಜಿನಿಯರ್...ಇನ್ನು ನಾಲ್ಕು ವರ್ಷ ಆದ ಮೇಲೆ ಲಕ್ಷಗಟ್ಟಲೆ ಸಂಬಳ ಎಣಿಸುತ್ತಾಳೆ ನಿಮ್ಮ ಮಗಳು." ನಿನಗೇನನ್ನಿಸತ್ತೆ ?"ಅಂತ ಕೇಳಿದರು.

ನಾನು ಬಾಯಿ ಬಿಡುವಷ್ಟರಲ್ಲಿ ಫೋನು ರಿಂಗಾಯ್ತು. ಫೋನು ನಮ್ಮ ಸಂಬಂಧಿಕರದ್ದಾಗಿತ್ತು. ಅಣ್ಣನಿಗಿಂತಾ ಹಿರಿಯರು. ನನ್ನ ಭವಿಷ್ಯದ ನಿರ್ಧಾರವನ್ನು ಅವರು ತೆಗೆದುಕೊಳ್ಳುವ ಪುಣ್ಯಕಾರ್ಯ (?) ಮಾಡುತ್ತಿದ್ದರು . ಅಣ್ಣ speakerphone ಆನ್ ಮಾಡಿದರು. " ನಮ್ಮ ವಂಶದಲ್ಲಿ ಯಾರೂ ವೈದ್ಯರಿಲ್ಲ. ಸಾಲವೋ ಸೋಲವೋ, ಡಾಕ್ಟರ್ ಮಾಡು ಅವಳನ್ನ. ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗತ್ತೆ. ಆಮೇಲೆ ಅವಳೇ ದುಡ್ಡು ತೀರಿಸುತ್ತಾಳೆ ಅಷ್ಟೇ. ಇದರಲ್ಲಿ ಯೋಚಿಸುವ ಪ್ರಶ್ನೆಯಾಗಲಿ, ಅವಳ ಇಷ್ಟ ಕಷ್ಟಗಳನ್ನು ಕೇಳುವ ಪ್ರಮೇಯವಾಗಲಿ ಬರುವುದೇ ಇಲ್ಲ. ನಾವು ದೊಡ್ಡವರು ಹೇಳಿದ ಮಾತನ್ನು ಚಾ ಚೂ ತಪ್ಪದೇ ಕೇಳಬೇಕಾಗಿರುವುದು ಅವರ ಕರ್ತವ್ಯ. ದುಡ್ಡು ಹೇಗೆ ಹೊಂದಿಸಬೇಕೆಂದು ನಾನು ಹೇಳಬೇಕಿಲ್ಲ ಅಲ್ವಾ ?" ಅಂತ ಒಂದಿಷ್ಟು ಮಾತಾಡಿ ಫೋನಿಟ್ಟರು.

ಮನೆಯ ಹಿರಿಮಗಳಾದ ನಾನು ಇದನ್ನ ಕೇಳಿ ಗಹಗಹಿಸಿ ನಕ್ಕೆ. ಅಣ್ಣ ನನ್ನ ಮುಖ ನೋಡಿದರು. " ಯಾಕೆ ನಗ್ತಿಯಾ ?" ಅಂತ ಕೇಳಿದರು. ಆಗ ನಾನಂದೆ,

"ವಂಶದ ಗೌರವ ಕಾಪಾಡಕ್ಕೆ ನಾನು ಡಾಕ್ಟರ್ ಆಗ್ಬೇಕಾ ? ನನಗೆ ವೈದ್ಯ ವೃತ್ತಿಯಲ್ಲಿ ಮೊದಲಿಂದಲೂ ಆಸಕ್ತಿಯಿಲ್ಲ ಅಣ್ಣ.."
ಅಣ್ಣ : "ಆ ವಿಷಯ ಬಿಡು..ತಲೆಗೊಂದು ಮಾತಾಡುವುದು ಜನರ characteristic. ನಿನಗೆ ಇಷ್ಟ ಇಲ್ಲ ಅಂದ್ರೆ ನನ್ನ ಬಲವಂತ ಏನೂ ಇಲ್ಲ. ಎಂಜಿನೀರ್ ಆಗ್ತ್ಯಾ ?"

"ಉಹೂಂ. ಇಲ್ಲ"

"ಮತ್ತೆ ?"

" ನನಗೆ ಚಿಕ್ಕಂದಿನಿಂದಲೂ ಸಂಶೋಧನೆಯ ಕಡೆ ಹೆಚ್ಚು ಒಲವು. ನಾನು basic sciences ತಗೊಳ್ಳಲಾ ?"

ಅಣ್ಣ: " ನಿನ್ನ ಇಷ್ಟಕ್ಕೆ ನಮ್ಮ ಅಭ್ಯಂತರ ಏನಿಲ್ಲ. ಆದರೆ mediocre B.Sc ಮತ್ತು average M.Sc ಆದ್ರೆ ಸಾಲದು. you should make a mark and prove to people that you are not wrong in the choice of your career"

ನಾನು ಒಪ್ಪಿ ಅಂದು ಒಂದು ದೃಢ ಪ್ರತಿಜ್ಞೆ ಮಾಡಿ ಮಲಗಿದೆ, ಅಲ್ಲೋಲ ಕಲ್ಲೋಲದ ಮನೆಯ ಒಂದು ಮೂಲೆಯಲ್ಲಿ.

ಬೆಳಿಗ್ಗೆ ನನ್ನ ಎಬ್ಬಿಸಿದ್ದು ಅಮ್ಮ ಅಲ್ಲ, ನಮ್ಮ ತಂದೆಯ ಸ್ನೇಹಿತರು, ಅದೂ ಮುಂಜಾನೆ ಆರುವರೆಗೆ !

ನಾನು ಕಣ್ಣೂ ಬಿಟ್ಟಿರಲಿಲ್ಲ, ಅವರು ಮಾತು ಆರಂಭಿಸಿದ್ದರು. " ತಲೆ ಕೆಟ್ಟಿದ್ಯಾ ನಿನಗೆ? ಬಿ.ಎಸ್ಸಿ ಮಾಡ್ತೀಯಂತೆ ! ಬಿ.ಎಸ್ಸಿ ಆದ್ಮೇಲೆ ಕೆಲಸ ಎಲ್ಲಿ ಸಿಕ್ಕತ್ತೆ ? ಕೆಲಸ ಸಿಗೋದು ಬಿ.ಇ. ಓದಿದರೇನೇ ! ನೀನು ನಿನ್ನ ಕಾಲ ಮೇಲೆ ನಿಂತುಕೊಳ್ಳುತ್ತೀಯೋ ಅಥವಾ ನಿಮ್ಮ ತಂದೆ ತಾಯಿಗೆ ಭಾರವಾಗಿರುತ್ತೀಯೋ ? " ಆಮೇಲೆ ನಮ್ಮ ತಂದೆಯ ಕಡೆ ತಿರುಗಿ " ಸಾರ್, ಹುಡುಗು ಬುದ್ಧಿ, ಏನೇನೋ ಹೇಳತ್ವೆ...ನನ್ನ ಮಗಳು ಚಿತ್ರಕಲಾ ಪರಿಷತ್ ಸೇರ್ತಿನಿ ಅಂತ ಕೂತಿದ್ಲು, ಬೈದು ಎಂಜಿನೀರಿಂಗ್ ಕೌನ್ಸೆಲ್ಲಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದೀನಿ ನಾಳೆ. ನಿಮ್ಮ ಮಗಳದ್ದು ಆಚೆ ನಾಡಿದ್ದಂತೆ...ಕರ್ಕೊಂಡು ಹೋಗಿ ಮೆಡೀಸನ್ನೋ ಎಂಜಿನೀರಿಂಗೋ ಕೊಡಿಸಿ, ಹೀಗೆ ಬಿಡಬೇಡಿ" ಅಂತು ಉಸಿರು ತೆಗೆದುಕೊಳ್ಳಲು ಮಾತು ನಿಲ್ಲಿಸಿದರು.

ಆಗ ಬಾಯ್ಬಿಟ್ಟೆ ನಾನು- " ಅಂಕಲ್, ನಾನು ಬಿ.ಎಸ್ಸಿ ನೇ ಮಾಡೋದು"
ಅವರು: " ಈ ಪುರುಷಾರ್ಥಕ್ಕೆ CET ಯಾಕೆ ಬರೆದೆ ?ಸಾಲದ್ದಕ್ಕೆ AIEEE. ಎಲ್ಲದರಲ್ಲೂ ಒಳ್ಳೆ ranking ಬಂದಿದೆ ? "
ನಾನು : " ಪರೀಕ್ಷೆಗಳನ್ನು ಬರೆದು ನನ್ನ ಬುದ್ಧಿವಂತಿಕೆಯನ್ನು ಓರೆಗೆ ಹಚ್ಚಿ ನೋಡಿಕೊಳ್ಳುವುದು ನನ್ನ ಹವ್ಯಾಸ, ನನ್ನ ಚಿಕ್ಕಂದಿನ ಅಭ್ಯಾಸ. ಇದನ್ನೂ ಹಾಗೇ ಮಾಡಿದೆ. ನನ್ನ ಭವಿಷ್ಯದ ನಿರ್ಧಾರ ನಾನು ಆಗಲೇ ಮಾಡಿದ್ದೆ."
ಅವರು: "ನಿನ್ನ ತಲೆ ! ಈಗ ನೀನು ತೆಗೆದುಕೊಂಡಿರುವ ನಿರ್ಧಾರದಿಂದ ನೀನು ಮುಂದೆ ಪಶ್ಚಾತ್ತಾಪ ಪಡ್ತಿಯಾ ನೋಡಿಕೋ"
ನಾನೇನೂ ಹೇಳದೆ ಸುಮ್ಮನೆ ನಕ್ಕಿದ್ದೆ.

ಇದು ಫ್ಲಾಷ್ ಬ್ಯಾಕು.

ಈಗ ಮೊನ್ನೆ ಮೊನ್ನೆ ಅವರ ಮಗಳು ಸಿಕ್ಕಿದ್ದಳು. ಕೆಲಸದಲ್ಲಿ ದುಡ್ಡಿದ್ದರೂ ನೆಮ್ಮದಿಯಿಲ್ಲವೆಂದಳು. "ನೀನು ನೋಡು, ನಿನ್ನ ಇಷ್ಟದಂತೆಯೇ ನಿನ್ನ ಹಾದಿ ಹಿಡಿದೆ...ಈಗ ಪ್ರತಿಷ್ಟಿತ ಸ್ಥಳವೊಂದರಲ್ಲಿ research assistant ಆಗಿದ್ಯಾ...ನಿನ್ನ ಮುಖದಲ್ಲಿ ಒಂದು ತೃಪ್ತಿ ಕಾಣತ್ತೆ, ನನಗೆ ಅದೇ ಇಲ್ಲ. Art, craft , painting ಅಂದರೆ ಪ್ರಾಣ ನನಗೆ.ಮಾಡಲಾಗಲಿಲ್ಲ.ಛೇ ! ನಾನು ಗಲಾಟೆ ಮಾಡಿ ಅಪ್ಪ ಹೇಳಿದಂತೆ ಇದನ್ನು ಮಾಡುವ ಬದಲು ನಾನಂದುಕೊಂಡಿದ್ದನ್ನೇ ಮಾಡಬೇಕಿತ್ತು ."

"ಅಂಕಲ್ ಗೆ ಸಂತೋಷ ತಾನೆ ?" ಅಂತ ನಾನು ಕೇಳಿದ್ದಕ್ಕೆ ಅವಳು ಒಂದು ವಿಕಟ ನಗೆ ನಕ್ಕಳು.

ಹೀಗೆಯೇ ಬಹಳಷ್ಟು ಜನ ನನ್ನ ಬಳಿ ತಂತಮ್ಮ ದುಃಖ ತೊಡಿಕೊಂಡಿದ್ದಾರೆ. ಕೆಲವರು parental and peer pressure ಸಹಿಸಲಾಗದೇ ತಮ್ಮ ವೃತ್ತಿ ಹಿಡಿದಿದ್ದರೆ, ಕೆಲವರಿಗೆ ತಮ್ಮ ಕುಟುಂಬವನ್ನ ಸಂಭಾಳಿಸಬೇಕಾದ ಅನಿವಾರ್ಯತೆ ಇದೆ. ನನ್ನ ಪ್ರಶ್ನೆ ಇಷ್ಟೇ - ನಾವು ಇಷ್ಟ ಪಟ್ಟ ದಾರಿಯಲ್ಲಿಯೇ ನಡೆದು ಕುಟುಂಬವನ್ನು ಸಂಭಾಳಿಸಲು ಸಾಧ್ಯವೇ ಇಲ್ಲವೇ ?

ಇನ್ನು ಕೆಲವರು ಇಷ್ಟ ಪಟ್ಟೇ ಕೋರ್ಸಿಗೆ ಸೇರಿ, ಮಾಡಿ, ನಂತರ core area ಬಿಟ್ಟು ಬೇರೆ ಕಡೆ ಸ್ಥಾಪಿತರಾಗಿ, "I made a wrong choice in finding out my core area of interest" ಎಂದು ಅನುಭವಾಮೃತಸಾರವನ್ನು ನುಡಿದಿದ್ದಾರೆ.

ಇನ್ನು ಕೆಲವರು ಏನೋ ಓದಿ, ಇನ್ನೇನೋ ಆಗಿ, ಎರಡೂ ಫಲಕಾರಿ ಆಗದೇ," ಏನೋ ಮಾಡಲು ಹೋಗಿ...ಏನು ಮಾಡಿದೆ ನಾನು ?" ಅಂತ ತಮ್ಮನ್ನೇ ಪ್ರಶ್ನಸಿಕೊಳ್ಳುತ್ತಾ ಹಾಡುತ್ತಿದ್ದಾರೆ.

ಮತ್ತೊಂದಿಷ್ಟು ಜನ "I consider this choice as a step to something else. I wanted to learn something in this field, I learnt it. Now I use this career option to go to another field." ಅಂತ ಅಂದು ಸಂಬಂಧವೇ ಎರಡು ವೃತ್ತಿಯಲ್ಲಿ ಸೇತುವೆ ಹುಡುಕುತ್ತಿರುತ್ತಾರೆ. ನಾನೂ ಇವರ ಮಾತನ್ನು ಒಪ್ಪುತ್ತೇನೆ. ಆದರೆ ಇದು ಯಾಕೋ "jack of all trades, master of none"ಅಂತೆ ಆಗಲಿಲ್ಲವೇ ?

ಇನ್ನು ಕೆಲವರು ಸ್ಕೋಪ್ ಇದೆಯೆಂದು ಓದಿರುತ್ತಾರೆ.They would have seen many people climbing the ladder of success under that scope. ಆದರೆ ಅವರಿಗೆ ಕೆಲಸ ಸಿಗುವ ಹೊತ್ತಿಗೆ ಆ ಸ್ಕೋಪು ಸೋಪಿನಲ್ಲಿ ತೊಳೆದಂತಾಗಿ ಕೊಚ್ಚಿಕೊಂಡು ಹೊರಟುಹೋಗಿರುತ್ತದೆ. ಹೆನ್ರಿ ಫೋರ್ಡ್ ಗೆ ಯಾರೋ ಒಬ್ಬರು ಹೇಳಿದರಂತೆ- " I am climbing the ladder of success" ಅಂತ. ಅದಕ್ಕೆ ಅವರು ಉತ್ತರಿಸಿದರಂತೆ - "Make sure the ladder is leaning on the right wall!" ಅಂತ !

ಸ್ಕೋಪು ಸ್ಕೋಪೆಂದು ಕುಣಿದಿದ್ದಕ್ಕೆ rat race ಆರಂಭವಾಯ್ತು. ಕಾಂಚಾಣ ಎಲ್ಲರನ್ನೂ ಕುರುಡು ಮಾಡಿತು. ಪೊರೆ ಸರಿಯುವ ಹೊತ್ತಿಗೆ ತಡವಾಗಿ ಹೋಯ್ತು. Years have passed...and it is an irreversible damage.

ಜನ ಕೆಲವ ವಿಷಯಗಳನ್ನು ಯೋಚನೆ ಮಾಡಲೇ ಇಲ್ಲ.

ರೈತನೊಬ್ಬ ತಾನು ಬೆಳೆವ ಧಾನ್ಯಕ್ಕೆ ಸ್ಕೋಪೆಲ್ಲಿದೆ ಅಂತ ಹಿಂದೆ ಯೋಚಿಸಿದ್ದಿದ್ದರೆ ನಮ್ಮ ಪೂರ್ವೀಕರಿಗೆ ಧಾನ್ಯ ಸಿಗುತ್ತಿರಲಿಲ್ಲ. ಈಗ ಯೋಚನೆ ಮಾಡತೊಡಗಿದ್ದಾನೆ, ಬೆಲೆಗಳು ಗಗನಕ್ಕೆ ಏರತೊಡಗಿದೆ.

ಬಾಟ ಕಂಪನಿಯವರು " ಚಪ್ಪಲಿಗೆ ಸ್ಕೋಪೆಲ್ಲಿದೆ ?" ಎಂದಿದ್ದರೆ ಇಂದು ಪ್ರಪಂಚದಾದ್ಯಂತ ಷೋ ರೂಂ ಗಳು ಇರುತ್ತಿರಲಿಲ್ಲ.

ನಮ್ಮ ಅಧ್ಯಾಪಕರು - " ಟೀಚಿಂಗ್ ಗೆ ಎಲ್ಲಿದೆ ಸ್ಕೋಪು ?" ಅಂತ ಕೇಳಿದ್ದಿದ್ದರೆ ನಮಗೆ ಪಾಠಗಳು ಕೇಳಸಿಗುತ್ತಿರಲಿಲ್ಲ. ಈಗ ಕೇಳ ತೊಡಗಿದ್ದಾರೆ, ಅದಕ್ಕೆ ಟ್ಯೂಷನ್ನಿನ ರೇಟು ಜಾಸ್ತಿಯಾಗಿದೆ.

ಯಾರೋ ಮಾಡಿದ ವರ್ಣ ಚಿತ್ರವನ್ನು ಲಕ್ಷಗಟ್ಟಲೆ ಕೊಟ್ಟು ಕೊಂಡುಕೊಳ್ಳುತ್ತಾರೆ, ಆದರೆ ತಮ್ಮ ಮಕ್ಕಳು ಬಿಡಿಸಿದ ಚಿತ್ರವನ್ನು ತಿಪ್ಪೆಗೆಸೆಯುತ್ತಾರೆ.

ಸಂಗೀತ ಧ್ವನಿ ಸುರುಳಿಗಳನ್ನೆಲ್ಲಾ ಕಲೆಕ್ಟ್ ಮಾಡಿ, ಐಪಾಡ್ ತುಂಬೆಲ್ಲಾ ಸಂಗೀತ ಫೈಲುಗಳನ್ನು ತುಂಬಿಸಿಕೊಂಡವರು ಅವರ ಮಕ್ಕಳು ಹಾಡುತ್ತೇವೆಂದಾಗ ಕಿವಿ ಮುಚ್ಚಿಕೊಂಡು " ಕೆಲಸಕ್ಕೆ ಬಾರದ ವಿದ್ಯೆ" ಎಂದು ಮೂಗುಮುರಿಯುತ್ತಾರೆ.

ತಾಜ್ ವೆಸ್ಟೆಂಡು, ಲೀ ಮೆರಿಡಿಯನ್ ನಲ್ಲಿ ಊಟವನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ತಮ್ಮ ಮಗ chef ಆಗ್ತಿನಿ ಅಂದರೆ butlers' knife ನಲ್ಲಿ ಚುಚ್ಚಿಕೊಂಡು ಪ್ರಾಣ ಬಿಡ್ತಿವಿ ಅಂತ ಹೆದರಿಸುತ್ತಾರೆ !

ರಾಜ್ ಕುಮಾರ್ ನನ್ನು ಹೊಗಳುವ ಇವರು ತಮ್ಮ ಮಗ ನಾಟಕ ಮಾಡುತ್ತಾನೆ ಅಥವಾ ಮಗಳು ನಾಟ್ಯ ಮುಂದುವರೆಸುತ್ತೇನೆ ಅಂದರೆ ಕಾಲು ಮುರಿಯುತ್ತೇನೆ ಅನ್ನುತ್ತಾರೆ.

ಮಕ್ಕಳ ಇಷ್ಟಕ್ಕೆ ಸಹಮತ ಕೊಟ್ಟು ಅವರನ್ನು ಹುರಿದುಂಬಿಸಿ, ಧೈರ್ಯ, ಛಲ ತುಂಬಬೇಕಿರುವುದು ಪಾಲಕರ ಕರ್ತವ್ಯ. ಅದನ್ನ ಬಿಟ್ಟು " ನನ್ನಿಷ್ಟದಂತೆಯೇ ಆಗಬೇಕು." ಅನ್ನುವುದು ದುರಂತ !ಶಾಶ್ವತ ನೆಮ್ಮದಿ ಮುಖ್ಯಾನೋ, ಅಥವಾ ಹಲುಬುತ್ತಾ ದುಡಿದು ದುಡ್ಡು ತಂದು ಹಾಕುವುದು ಮುಖ್ಯವೋ ಆ ಆಯ್ಕೆ ಮಕ್ಕಳಿಗೆ ಬಿಟ್ಟಿದ್ದು.

ಈಗ ದ್ವಿತೀಯ ಪಿಯೂಸಿ ಪರೀಕ್ಷೆ ನಡೆಯುತ್ತಿದೆ. "Engineering ಗೆ ಸ್ಕೋಪಿಲ್ಲ" ಅಂತ ಈಗ ಜನ ಪಿಸುಗುಡುತ್ತಿದ್ದಾರೆ. ಈ ಸ್ಕೋಪಿನ ಆಚೆಗೂ ಜೀವನವಿದೆ ಎಂದು ಪಾಲಕರಿಗೆ ಮೊದಲು ದರ್ಶನವಾಗಬೇಕಿದೆ. ಅದನ್ನು ಅವರು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಮತ್ತು ಅನಿವಾರ್ಯತೆ ಎರಡೂ ಇದೆ.

ಸಮಾಜದಲ್ಲಿ ಅಸಮತೋಲನ ಉಂಟಾಗಿರುವ ಈಗಿನ ಸಮಯದಲ್ಲಿ ನಾವೆಲ್ಲರೂ ನಾವು ಆರಿಸಿಕೊಂಡಿರುವ ವೃತ್ತಿಯ ಬಗ್ಗೆ ಯೋಚನೆ ಮಾಡಬೇಕಿರುವುದು ಉಚಿತ ಅಂತ ಅನಿಸುವುದಿಲ್ಲವೇ ? ಅದು ಬಿಟ್ಟು, " ಸ್ಕೋಪ್" ಹಿಂದೆ ಹೊರಟರೆ ಪ್ರಯೋಜನ ಇದೆಯೇ ?

ನಾವೇಕೆ ಹೀಗೆ ?