Thursday, September 3, 2009

ಗೌರಿ ಬಾಗಿನ- ನಾ ನ ನ ನಾ ನಾ? ?

ಈ ಸರ್ತಿ ಗೌರಿ ಮತ್ತು ಗಣೇಶ ಸಿಕ್ಕಾಪಟ್ಟೆ ಬ್ಯುಸಿ ಇದ್ದ ಹಾಗೆ ಕಂಡರು. ಇಬ್ಬರೂ ಒಂದೇ ದಿನ ಧರೆಗೆ ಬಂದಿದ್ದರು ! ಅಲ್ಲದೇ ಭಾನುವಾರವೇ ಬಂದಿದ್ದರು, ಎಲ್ಲರಿಗೂ ಅನುಕೂಲವಾಗಲಿ ಅಂತ ! ಇರಲಿ, ಜೈ ಗೌರಿ ಗಣೇಶ !

ಗೌರಿ ಗಣಪತಿ ಹಬ್ಬ ಹಿಂದೆ ಸಾಂಪ್ರದಾಯಿಕವಾಗಿತ್ತು, ಆಮೇಲೆ ಸಾಮಾಜಿಕವಾಯ್ತು. ಈಗ ಅಪ್ಪಟ ವ್ಯಾವಾಹಾರಿಕವಾಗಿದೆ . ಗೌರಿ ಹಬ್ಬದಲ್ಲಿ ಒಬ್ಬಟ್ಟಿಗೆ ಮೊದಲು ಪ್ರಾಮುಖ್ಯತೆ ಇದ್ದರೆ ಎರಡನೆಯದು ಗೌರಿ ಬಾಗಿನಕ್ಕೆ. ಎಲ್ಲ ಧಾನ್ಯಗಳು, ತೆಂಗಿನಕಾಯಿ, ಹಣ್ಣುಗಳು, ಮತ್ತು ಉಡುಗೊರೆಗಳನ್ನು ಬಿದಿರಿನ ಮೊರಗಳಲ್ಲಿ ನೀಡುವ ಸಂಪ್ರದಾಯವಿದೆ. ಇದರ ಉದ್ದೇಶ ಇಷ್ಟೇ. ಸಕಲ ಧಾನ್ಯಗಳನ್ನು ಕೊಡುವ ಉದ್ದೇಶ ಸ್ವಯಂಪಾಕ. ದೇವಿಗೆ ನಾವು ಸಮರ್ಪಿಸುವ ಮಹಾನೈವೇದ್ಯದ ಜೊತೆಗೆ ಇದನ್ನೂ ಕೊಡುವ ಉದ್ದೇಶ ಅವಳಿಗೆ ಇನ್ನೇನು ಏನು ಸ್ವೀಕರಿಸಲು ಇಚ್ಛೆ ಇದ್ದರೆ ಅದೂ ಸಹ ಧಾನ್ಯಗಳ ಮೂಲರೂಪದಲ್ಲಿ ನೆರವೇರಲಿ ಅಂತ. ಅವಳು ಸಂತೃಪ್ತಳಾಗಿ ನಮ್ಮನ್ನು ಹರಸಲಿ ಅಂತ.

ಈಗ ಬಾಗಿನದ ಸಾಮಾಜಿಕ ಔಚಿತ್ಯದ ವಿಷಯಕ್ಕೆ ಬರೋಣ. ಹಿಂದಿನ ಕಾಲದಲ್ಲಿ ಧಾನ್ಯಗಳ ಕಟಾವು, ಸುಗ್ಗಿ, ಎಲ್ಲ ವೈಭವೋಪೇತವಾಗಿ ಆಚರಿಸಲ್ಪಡುತ್ತಿದ್ದವು. ತಮ್ಮ ಗದ್ದೆಯಲ್ಲಿ ಬೆಳೆದ ಧಾನ್ಯಗಳ ಗುಣಮಟ್ಟ ಹೇಗಿದೆ ಅನ್ನುವುದನ್ನ ಬೇರೆಯವರು ಸವಿದು ಹೇಳುವುದು ಉಚಿತವೆಂದು ಭಾವಿಸಿ, ಹಬ್ಬದ ನೆಪ ಮಾಡಿ, ಧಾನ್ಯದ ವಿನಿಮಯ ಮಾಡಲಾಗುತ್ತದೆ. ಆಗ ಸೇರುಗಳಲ್ಲಿ ನೀಡಲಾಗುತ್ತಿತ್ತು, ಈಗ ಅದು ಚಟಾಕಿಗಿಂತ ಕಡಿಮೆಗೆ ಇಳಿದಿದೆ, ಕಾಲಾಯ ತಸ್ಮೈ ನಮಃ. ಅಕ್ಕ ತಂಗಿಯರಿಗೆ, ಮಿತ್ರವರ್ಗಕ್ಕೆ ಬಾಗಿನದ ಜೊತೆ ಉಡುಗೊರೆಗಳನ್ನು ಕೊಡಲಾಗುತ್ತಿತ್ತಾದ್ದರಿಂದ ಬಾಂಧವ್ಯ ಇನ್ನೂ ಹೆಚ್ಚುತ್ತಿತ್ತು, ಮತ್ತಷ್ಟು ಬೆಳೆಯುತ್ತಿತ್ತು.

ಈಗ ಬಾಗಿನದ ವ್ಯಾವಾಹಾರಿಕತೆಗೆ ಬರೋಣ. ಬಾಗಿನ ಕೊಡುವುದು ಈಗ ಕೇವಲ ಕಾಟಾಚಾರ ಆಗಿಹೋಗಿದೆ. ಕೆಲವರಿಗೆ ಅದು "ಹೊರೆ" ಅನ್ನಿಸಿಬಿಟ್ಟಿದೆ. ಹತ್ತು ಸಾವಿರಕ್ಕಿಂತ ಒಂದು ರುಪಾಯಿಯೂ ಕಡಿಮೆ ಇರದ ಸೀರೆ ಕೊಳ್ಳಲು ಮುಖ ಮುಲಾಜು ನೋಡದ ಅವರು, ಐದು ಜನರಿಗೆ ಬಾಗಿನ ನೀಡಲು ಬೇಕಾಗುವ ಅರ್ಧ ಕೇಜಿ ಅಕ್ಕಿ ಕೊಳ್ಳಲು ಸಾವಿರ ಸರ್ತಿ ಯೋಚನೆ ಮಾಡುತ್ತಾರೆ. ಬಾಗಿನದ ಮೊರಗಳನ್ನು ಮಾರುವವರ ಬಳಿ ಗಂಟಾನುಗಟ್ಟಲೆ ಜಗಳಕ್ಕೆ ನಿಲ್ಲಲು ತಯಾರಿರುತ್ತಾರೆ. ಮಾತಾಡಿದ್ದೂ ಆಡಿದ್ದೇ - " ಎಲ್ಲರಲ್ಲೂ ದೇವರಿರುತ್ತಾರೆ, ಅವರಿಗೆ ನಮಸ್ಕಾರ ಮಾಡಬೇಕು, ಬೇರೆಯವರಿಗೆ ದಾನ ಕೊಡುವಾಗ ಖರ್ಚಿನ ಮುಖ ನೋಡಬಾರದು" ಹಾಗೆ ಹೀಗೆ. ಆದರೆ ಬಾಗಿನ ಕೊಡುವ ಇಂತಹ ಹಬ್ಬ ಬಂದಾಗ " ನಮ್ಮನೆಯಲ್ಲಿ ಬಾಗಿನ ಕೊಡುವ ಸಂಪ್ರದಾಯ ಇಲ್ಲ, ಬರಿ ಬಾಗಿನ ತೆಗೆದುಕೊಳ್ಳುವ ಸಂಪ್ರದಾಯ ಇದೆ ! " ಮತ್ತು " ಹಬ್ಬದ ಖರ್ಚು ಹೆಚ್ಚಲ್ಲವೇ ? (?) ಬಾಗಿನ ಎಲ್ಲ ಯಾರು ಕೊಡುತ್ತಾರೆ ? ಸದ್ಯ ಪೂಜೆ ಮಾಡಿ ಊಟವಾದರೆ ಸಾಕಾಗಿದೆ ! " ಇವೇ ಮುಂತಾದ ಆಣಿ ಮುತ್ತುಗಳು ಸಾರಾಸಗಟಾಗಿ ಕೇಳಸಿಗುತ್ತವೆ. ಮತ್ತೆ ಕೆಲವರು ಬಾಗಿನ ಕೊಡುತ್ತಾರೆ- ಹುಳು ಬಂದ ಅಕ್ಕಿ, ತೂತಾದ ಬೇಳೆ ಕಾಳು ! ಈ ಪುರುಷಾರ್ಥಕ್ಕೆ ಬಾಗಿನ ಕೊಡಬೇಕ್ಯಾಕೆ ? "ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮೊಳಹಾಕಿದರು" ಅಂತ ಬೈದುಕೊಳ್ಳಬೇಡಿ ನೀವೆಲ್ಲರೂ, ಆದರೆ ವಿಷಯದ ಸೂಕ್ಷ್ಮವನ್ನು ಗಮನಿಸಿ. ಬಾಗಿನ ಕೊಡುವುದು ಏಕೆ ? ಬಾಗಿನ ತೆಗೆದುಕೊಂಡವರು ನಮ್ಮನ್ನು ಆಶೀರ್ವದಿಸಿ ಹರಸಲಿ ಅಂತಲ್ಲವೇ ? ನಮ್ಮ ಆಶೀರ್ವಾದ ಫಲಿಸುವುದು ಎಷ್ಟು ನಿಜವೋ, ಹುಳು ತುಂಬಿದ ಅಕ್ಕಿ ಬೇಳೆ ನೋಡಿದ ತಕ್ಷಣ ಬರುವ ನಿಟ್ಟುಸಿರು ಫಲಿಸುವುದೂ ಅಷ್ಟೇ ನಿಜವಲ್ಲವೇ ? ನಾವು ಒಳ್ಳೆ ವಸ್ತುಗಳನ್ನು ಕೊಟ್ಟರೆ ನಮಗೆ ಒಳ್ಳೆಯದಾಗುತ್ತದೆ, ಕೆಟ್ಟದ್ದು ಕೊಟ್ಟರೆ ಕೆಟ್ಟದಾಗುತ್ತದೆ ಅನ್ನೋದು ಭೌತಶಾಸ್ತ್ರದ ಸಹಜ ನಿಯಮ ಅಲ್ಲವೇ ? ಭೌತಶಾಸ್ತ್ರದ ವಿಷಯ ಬದಿಗಿರಲಿ, ಅದು ಸಾಮಾನ್ಯ ಪ್ರಜ್ಞೆ ಅಲ್ಲವೇ ? ನಾವು ಕೆಟ್ಟ ವಸ್ತುಗಳನ್ನು ಕೊಡಬಹುದು, ಆದರೆ ನಮಗೆ ಮಾತ್ರ ಸದಾ ಒಳ್ಳೆಯ ವಸ್ತುಗಳೇ ಸಿಗಬೇಕು, ಒಳ್ಳೆಯದೇ ಆಗುತ್ತಿರಬೇಕು ಅಂತ ಬಯಸುವುದು ಮೂರ್ಖತನದ ಪರಮಾವಧಿಯಲ್ಲವೇ ?

ಇನ್ನು ಈಗಿನ ಕಾಲದ ನನ್ನ ಪುಟ್ಟ ತಂಗಿಯರು- ಅವರಿಗೆ ಬಾಗಿನ ಕೊಡೋದು ಬೋರ್ ಅಂತೆ, ಕ್ರಿಸ್ಮಸ್ ಸಮಯದಲ್ಲಿ ಸೀಕ್ರೆಟ್ ಏಂಜೆಲ್ ಗಳಾಗಿ ಅವರ ಮಿತ್ರರಿಗೆ ಮತ್ತು ಅಕ್ಕ ತಂಗಿಯರಿಗೆ ಗಿಫ್ಟ್ ಕೊಡುವುದು ಥ್ರಿಲ್ಲ್ ಅಂತೆ ! ನಾನು ಕೇಳಿದೆ- "ಬಾಗಿನಕ್ಕೆ ಎರಡು ಮೊರಗಳಿರುತ್ತವೆ- ಬಾಗಿನವನ್ನು ಮುಚ್ಚಿ ಕೊಡಲಾಗುತ್ತೆ. ಅದನ್ನ ತೆಗೆದು ನೋಡಿದರೆ ಅದರಲ್ಲಿರುವ ಉಡುಗೊರೆ ನೋಡಿ ಥ್ರಿಲ್ ಆಗುತ್ತದೆ. ಮತ್ತು ಯಾರು ಬಾಗಿನ ಕೊಡಲು ಬರುತ್ತಾರೋ ಅವರು ಏಂಜಲ್ ಗಳಲ್ಲವೇ ? " ಇದಕ್ಕೆ ಉತ್ತರ- "Oh really ? " ಎಂಬ ಮತ್ತೊಂದು ಪ್ರಶ್ನೆ ! ನನ್ನ ತಂಗಿ ಮತ್ತು ನಾನು ನಮ್ಮ ಸ್ನೇಹಿತೆಯರು ಯಾರಿಗೂ ಬಾಗಿನ ಕೊಡದ ಕಾರಣ ಅವರಿಗೆ ಇಂತಹಾ "ಬಾಗಿನ ordeal (?!) " ಗಳಲ್ಲಿ ನಂಬಿಕೆ ಇಲ್ಲದಿರುವುದು. ನಾನು ನನ್ನ ತಂಗಿಗೆ, ಅವಳು ನನಗೆ ಬಾಗಿನ ಕೊಟ್ಟುಕೊಂಡು ಸುಮ್ಮನಾದೆವು.

ನಮ್ಮ ಆಚರಣೆಗಳ ಅರ್ಥ ತಾತ್ಪರ್ಯಗಳನ್ನು ಸರಿಯಾಗಿ ತಿಳಿದುಕೊಳ್ಳದೇ, ಅವುಗಳನ್ನು ನೆಟ್ಟಗೆ ಆಚರಿಸದೇ, ಇನ್ಯಾವುದೋ ಪದ್ಧತಿಯನ್ನೂ ಸಹ ಸರಿಯಾಗಿ ಅರ್ಥೈಸದೇ ಸುಮ್ಮನೆ ತೋರ್ಪಡಿಕೆಗಾಗಿ ಹಬ್ಬಗಳನ್ನು ಆಚರಿಸುತ್ತೀವಲ್ಲಾ...ನಾವೇಕೆ ಹೀಗೆ ?

16 comments:

ಶಾಂತಲಾ ಭಂಡಿ said...

ಪ್ರಿಯ ಲಕ್ಷ್ಮಿ...
ಕರೆಕ್ಟಾಗಿ ಹೇಳಿದ್ದೀರಿ.

ಸಿಮೆಂಟು ಮರಳಿನ ಮಧ್ಯೆ said...

ಲಕ್ಷ್ಮೀ...

ತುಂಬಾ ಖುಷಿಯಾಯಿತಮ್ಮ...
ಸರಿಯಾಗಿ ಹೇಳಿದ್ದೀರಿ...

shivu said...

ಲಕ್ಷ್ಮಿಯವರೆ,

ಓದಿದ ಮೇಲೆ ನೀವು ಬರೆದಿದ್ದು ಸರಿಯನ್ನಿಸಿತು. ಮತ್ತೆ ಮನಸ್ಸಿನಲ್ಲೇ "ನಾವೇಕೆ ಹೀಗೆ" ಅನ್ನಿಸಿತು.
ಬಾಗಿನ ಬಗ್ಗೆ ವಿಚಾರ ಮಾಹಿತಿ ಇಷ್ಟವಾಯಿತು..

ರಾಜೀವ said...

ಟೀಚರ್,

ನಿಮ್ಮ ಕ್ಲಾಸ್ಗೆ ಬಂದು ತುಂಬಾ ದಿನ ಆಯಿತು. ಇವತ್ತು ಅಟೆಂಡ್ ಮಾಡ್ತಿದೀನಿ.
ನೀವು "ನಾವೇಕೆ ಹೇಗೆ?" ಅಂತ ಕೇಳೋದೇ ಮರ್ತ್ಬಿಟ್ರೇನೋ ಅಂದ್ಕೊಂಡೆ ;-)

ನೀವು ಹೇಳೋದ್ ಒಂದು ವಿಧದಲ್ಲಿ ಸೇರಿ ಅನ್ಸತ್ತೆ. ಆದರೂ ಕಾಲ ಅಷ್ಟು ಕೆಟ್ಟಿಲ್ಲಾರಿ. ನೀವು ನಿಮ್ಮ ಸ್ನೇಹಿತರಿಗೆ ಒಂದೆರಡು ಸಲ ಬಾಗಿನ ಕೊಟ್ಟರೆ ಅವರೂ ನಂಬಕ್ಕೆ ಶುರು ಮಾಡ್ತಾರೇನೋ.

Niranjan Patil said...

ಸರಿಯಾಗಿ ಹೇಳಿದ್ದಿರ ಲಕ್ಷ್ಮಿ ಅವರೇ. ಈಗಿನ ಕಾಲದಲ್ಲಿ ಬಾಗಿನ ಕೊಡುವುದಿರಲಿ ಮನೆಗ ಕರೆಯಲು ಕೂಡ ಜನರಿಗೆ ಬೇಸರ. ಕಾಫಿ/ಟೀ ತಿಂಡಿ ಮಾಡಿ ಕೊಡಬೇಕು, ಅವರ ಮುಂದೆ ಕೂತು ಅವರ ಮಾತು ಕೇಳಲು ಬೋರ್ ಆಗುತ್ತಂತೆ. ಬೇರೆಯವರು ಕರೆದರೆ ಸರಿಯಾಗಿ ಪಟ್ಟಾಂಗ ಹಾಕ್ಕೊಂಡು ಊಟ ಮಾಡಿಕೊಂಡು ಹೋಗ್ತಾರೆ. ನಮ್ಮ ಮನೆಗೆ ಬಂದರೂ ಆಟೋಗೆ ಇಷ್ಟು ದುಡ್ಡು ಕೊಟ್ಟವಲ್ಲ ಅಂತ ಹಲಹಳಸ್ತರೆ.
ಬಂದವರಿಗೆ ಅವಲಕ್ಕಿ ಚಹಾ ಮಾಡಿ ಕೊಟ್ಟು, ಕೂತು, ಬಾಯಿ ತುಂಬಾ ಹರಟೆ ಹೊಡಿಯೋದು ನಿಮ್ಮ ಕಾಲದಲ್ಲೇ ಮುಗಿದುಹೋಯಿತು ಅನ್ಸುತ್ತೆ.

ತೇಜಸ್ವಿನಿ ಹೆಗಡೆ- said...

ಲಕ್ಷ್ಮಿ,

ನೆಟ್ಟಗೆ "ಬಾಗಿನ" ಅನ್ನೋ ಪದವನ್ನೇ ಸರಿಯಾಗಿ ಉಚ್ಚರಿಸಲು ಬಾರದವರಿಂದ ಅದನ್ನು ಕೊಡು/ತೆಗೆದುಕೊಳ್ಳುವಂತಹ ಉತ್ತಮ ಕೆಲಸವನ್ನು ನಿರೀಕ್ಷಿಸುವುದೇ ತಪ್ಪು. ನಮ್ಮ ಸಂಪ್ರದಾಯ, ಸಂಸ್ಕೃತಿ, ಇವೆಲ್ಲಾ ಬರಿಯ ಕಂದಾಚಾರ, ಕೆಲಸಕ್ಕೆ ಬಾರದವು ಎಂದು ತಿಳಿದೋ ಇಲ್ಲಾ ಇಂತಹ "Silly" ವಿಷಯಗಳಿಗೆಲ್ಲ ತನ್ನ ಅಮೂಲ್ಯ ಸಮಯವನ್ನೋ ಅಲ್ಪ ಹಣವನ್ನೋ ವ್ಯಯಮಾಡುವುದು ಯಾಕೇ ಎಂದೂ ತಿಳಿದು ಇದೆಲ್ಲದರಿಂದ ಹಿಂದೆ ಸರಿಯುತ್ತಿದ್ದಾರೆ ಕೆಲವು ಜನರು. ಇದು ವಿಷಾದವೇ ಸರಿ. ನಾವು ಹೀಗೇ ಅದಕ್ಕೇ ಜಗತ್ತೂ ಹೀಗೇ ಇರುವುದು ನೋಡು.. ಏನಂತೀ? :)

P Kalyan said...

ಕಾಲ ಬದಲಾದಂತೆ ನಮ್ಮ ದೈನಂದಿಕ ಆಚರಣೆಗಳು ಬದಲಾಗುತ್ತಿವೆ. ಆದರೆ ಹಬ್ಬದ ಆಚರಣೆ, ಶಾಸ್ತ್ರಗಳು ಬದಲಾಗುತ್ತಿಲ್ಲ. ಗಣೇಶನ ಪ್ರತಿಷ್ಠಾಪನೆ ನಂತರ ಅರ್ಘ್ಯ, ಪಾದ್ಯಗಳನ್ನು ನೀಡುತ್ತೇವೆ. ಆದರೆ, ನಿಜ ಜೀವನದಲ್ಲಿ ಯಾರಾದರು ಮನಗೆ ಬಂದರೆ ಕಾಫಿ, ಟೀ ಕೊಡುತ್ತೇವೆ, ಕೈ-ಕಾಲು ತೊಳೆಯಿರಿ ಎಂದೇನು ಹೇಳುವುದಿಲ್ಲ (ಬೆಂಗಳೂರಿನಲ್ಲಂತೂ ನಿಜ). ಗಣೇಶನಿಗೆ ಕಾಫಿ, ಟೀ ಕೊಡುತ್ತೇವೆ ಎನ್ನಲು ನಮಗೆ ಅಷ್ಟು ಭಕ್ತಿ, ಶ್ರದ್ಧೆಗಳು ಇಲ್ಲ. ಅದಿಲ್ಲದೆ ಹಾಗೆ ಮಾಡಿದರೆ ಬರಿ ಮೊಂಡುವಾದವಾಗುತ್ತದೆ.
ಪ್ರತಿ ಆಚರಣೆಯ ಹಿಂದಿರುವ ಭಾವವನ್ನು ಗ್ರಹಿಸಿ ಅದನ್ನು ಸರಿಯಾಗಿ ಆಚರಿಸಬೇಕಾಗುತ್ತದೆ. ಇದು ಸ್ವಲ್ಪ ಕಷ್ಟ. ಆಧುನಿಕ ಅಥವಾ ಪಾಶ್ಚಾತ್ಯ ಹಬ್ಬಗಳಿಗೆ ಈ ತೊಂದರೆ ಇಲ್ಲ.
ಇದೆ ರೀತಿ ದೀಪಾವಳಿ ಹಬ್ಬದ ಆಚರಣೆಯ ಔಚಿತ್ಯವು ಪ್ರಶ್ನಾರ್ಹವೆ ಆಗಿದೆ. ಹಾಗೆಯೆ ಅಕ್ಷಯ ತೃತೀಯದಂತಹ ಹಬ್ಬಗಳು ಎಂದೂ ಇಲ್ಲದ ಮಹತ್ವ ಪಡೆಯುತ್ತಿವೆ.

PaLa said...

ಮುಂದಿನ್ ವರ್ಷ ನನ್ನನ್ ಕರೀರಿ, ನನಗೆ ಬಾಗಿನ ತಗೊಳ್ಳೋದು ಅಂದ್ರೆ ಸಕ್ಕತ್ ಇಷ್ಟ..

Lakshmi S said...

@ಪಾಲ:

ನಿಮಗೆ ಬಾಗಿನ ಕೊಡಲು ಆಗೊಲ್ಲ, ಭೀಮನ ಅಮಾವಾಸ್ಯೆಯ ಭಂಡಾರ ಒಡೆಸಬಹುದು ನೋಡಿ !

@ ಕಲ್ಯಾಣ್:
ಶಾಸ್ತ್ರಗಳು ಬದಲಾಗುವ ಅವಶ್ಯಕತೆಯಿದೆ ನಿಜ, ಆದರೆ ಶಾಸ್ತ್ರಗಳನ್ನು ಆಚರಣೆಯೇ ಮಾಡದಿದ್ದರೆ ಬದಲಾಯಿಸುವುದೆಲ್ಲೆಂದ ಬಂತು ? ಆಧುನಿಕ ಹಬ್ಬ ಮತ್ತು ಪಾಶ್ಚಾತ್ಯ ಹಬ್ಬಗಳಲ್ಲಿ ಆ ತೊಂದರೆ ಇಲ್ಲ ಅಂದಿರಲ್ಲ, ನೀವು ಪಾಶ್ಚಾತ್ಯರು ಕ್ರಿಸ್ಮಸ್ ಆಚರಣೆಯಲ್ಲಿ ತೋರಿಸುವ ಶ್ರದ್ಧೆ ಮತ್ತು ಅವರು ಆಚರಿಸುವ ಪರಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಅವರು ನಮಗಿಂತಲೂ ಶ್ರದ್ಧೆಯಿಂದ ಹಬ್ಬ ಆಚರಿಸುತ್ತಾರೆ. ನಾನು ಹೇಳಹೊರಟಿರುವುದು ಅದನ್ನೇ. ನಮ್ಮಲ್ಲಿ ಆಸಕ್ತಿಯಂತು ಇಲ್ಲ, ಶ್ರದ್ಧೆಯಂತೂ ಇಲ್ಲವೇ ಇಲ್ಲ. ನಾನು ವಿಷಾದಿಸಿರುವುದು ಇದರ ಬಗ್ಗೆಯೇ.

ದೀಪಾವಳಿ ಮತ್ತು ಅಕ್ಷಯ ತೃತೀಯಗಳ ಔಚಿತ್ಯ ಕೇಳಿ ಮತ್ತೊಂದು ಬ್ಲಾಗ್ ಪೋಸ್ಟ್ ಗೆ ವಸ್ತು ಒದಗಿಸಿಕೊಟ್ಟದ್ದಕ್ಕಾಗಿ ಧನ್ಯವಾದಗಳು.

@ತೇಜಸ್ವಿನಿ,

ನಿಜ ! :)

@ಶಾಂತಲಾ, ಪ್ರಕಾಶ್ ಹೆಗಡೆ, ಶಿವು- ಧನ್ಯವಾದಗಳು
@ ರಾಜೀವ್,
:) ಮರೆತಿರ್ಲಿಲ್ಲ. ಬಾಗಿನ ನಾನು ಕೊಟ್ಟು ಕೊಟ್ಟು, ಜನರಿಗೆ ಹೇಳಿ ಹೇಳಿ- ಅವರೆಲ್ಲಾ ಇದನ್ನ" nonsense" ಅಂದುಕೊಂಡಿರೋದ್ರಿಂದಲೇ ನಾನು ಬಾಗಿನ ಕೊಡೋದನ್ನ ನಿಲ್ಲಿಸಿದ್ದೇನೆ.

@ನಿರಂಜನ್ ಪಾಟಿಲ್- ನಿಜ.

neelihoovu said...

ನೀವಂದಿದ್ದು ದಿಟ. ಕೊನೆಯ ವಾಕ್ಯ ಎಲ್ಲರಿಗಾಗುವಂತೆ ನನ್ನನ್ನೂ ಚುಚ್ಚುವಂತಿತ್ತು

-ರಂಜಿತ್

Sughosh said...

ಲಕ್ಷ್ಮಿ,
ನಿಮ್ಮ ಎಲ್ಲ ಬ್ಲಾಗ್ ಗಳನ್ನು ನೋಡಿದೆ. ತುಂಬ ಇನ್ಫರ್ಮೇಟಿವ್ ಆಗಿವೆ. ನಿಮ್ಮ ಅದಮ್ಯ ಉತ್ಸಾಹ ಅಚ್ಚರಿ, ಖುಷಿ ತಂದಿದೆ.
-ಸುಘೋಷ್ ಎಸ್. ನಿಗಳೆ

Harish - ಹರೀಶ said...

ನಾವೇಕೆ ಹೀಗೆ ಅಂತ ಕೇಳಿ ಕೇಳಿ ನಮಗೆ ಬೇಜಾರ್ ಮಾಡ್ತೀರಪ್ಪ!!.. ನೋಡಿ ಸ್ವಾಮಿ ನಾವಿರೋದೇ ಹೀಗೆ ಅಂತ ಗೊತ್ತಿಲ್ವಾ?

lakshmi said...

gowri baagina "moradalle" koDabeeku anta saha ide, yaakandre bidiru vamshabhivruddiya dyotaka hegendare bidiru neeru illade iddaru bahaLa dinagaLavaregoo.. saayalla hechchu dina badukutte haage baaginada uddesha saha aagirali anta ...... heege anta naanu tiLidukonDiddene :-)

Parisarapremi said...

ಯಾಕೊ ನೀವು ದೀಪಾವಳಿಯ ಬಗ್ಗೆ ಬರೆದಿಲ್ಲವಲ್ಲಾ.. ಏನಿದರ ಗುಟ್ಟು?

ವಿ.ರಾ.ಹೆ. said...

@arun,

paTaki saddinalli deepavaLi bagge Enu hELidarU, nAvEke heege aMta koogidrU yArigU kELolla. adkE irbEku ! :)

ಪಾಂಡುರಂಗ ಆಚಾರ್ಯ said...

ಬಹಳ ಉತ್ತಮ ಲೇಖನ