Sunday, May 10, 2009

ಫೋನ್ ಮಾಡಿ ಬನ್ನಿ...

ಈಗೀಗ ಎಲ್ಲರೂ ಬ್ಯುಸಿ ಇರುತ್ತೇವೆ. ಕೆಲವರು ಮನೆಯ ಹೊರಗೆ, ಕೆಲವರು ಮನೆಯ ಒಳಗೆ. ಆತ್ಮೀಯರ ಆಗಮನ ಮೊದಲೇ ತಿಳಿದರೆ ನಾವು ನಮ್ಮ ಸಮಯವನ್ನು ಮರುವಿಂಗಡಿಸಿಕೊಳ್ಳಬಹುದು. ಇಲ್ಲದಿದ್ದರೆ ಅವರ ಪ್ರತಿ ಇರುವ ನಮ್ಮ ಗೌರವ ಮತ್ತು ಆತ್ಮೀಯತೆಯನ್ನು ಸರಿಯಾಗಿ ವ್ಯಕ್ತಪಡಿಸಲಾಗದೇ ಒದ್ದಾಡುವುದೇ ಹೆಚ್ಚು.

ಹೋದ ವಾರ ನಮ್ಮ ಮನೆಗೆ ದಂಪತಿಗಳು ಬಂದರು,ಅವರ ಮಗನ ಮದುವೆಗೆ ನಮ್ಮನ್ನು ಆಹ್ವಾನಿಸಲು. ಹೊಸ್ತಿಲು ದಾಟುತ್ತಿದ್ದಂತೆಯೇ, " ನಾವು ನಿಮ್ಮನ್ನು ಕರೆಯಲು ಬರುತ್ತಿರುವುದು ಇದು ಮೂರನೆಯ ಬಾರಿ. ಎರಡೂ ಸರ್ತಿ ಬಂದಾಗ ಮನೆ ಬೀಗ ಹಾಕಿತ್ತು. " ಅಂದರು. ನಮ್ಮಮ್ಮ, " ಓಹ್ ಹೌದೇ ? ಎಷ್ಟೊತ್ತಿಗೆ ಬಂದಿದ್ದಿರಿ ? " ಎಂದು ಕೇಳಲು, "ಮೊದಲನೆಯ ಸರ್ತಿ ಬೆಳಿಗ್ಗೆ ಹನ್ನೊಂದಕ್ಕೆ, ಎರಡನೆಯ ಸರ್ತಿ ಸಾಯಂಕಾಲ ಏಳಕ್ಕೆ "ಎಂದು ಉತ್ತರ ನೀಡಿದ್ದಲ್ಲದೇ, " ನೀವು ತುಂಬಾ ಬ್ಯುಸಿ ಬಿಡಿ..ಮಕ್ಕಳಿರೋಲ್ವೆ ಮನೆಯಲ್ಲಿ ?" ಅಂದು ನನ್ನ ಮತ್ತು ನನ್ನ ತಂಗಿಯ ಮುಖ ನೋಡಿದರು. ನಮ್ಮಮ್ಮ " ನಾನು ಸಾಯಂಕಾಲ ವಾಕಿಂಗ್ ಹೋಗಿರುತ್ತೇನೆ. ದೊಡ್ಡವಳು ಬೆಳಿಗ್ಗೆ ಹೊರಗೆ ಹೋದರೆ ಪಾಠ ಪ್ರವಚನ, ಆಫೀಸು, ಲೈಬ್ರರಿ ಅಂತ ವಾಪಸ್ಸು ಬರುವುದು ರಾತ್ರಿ ಎಂಟಕ್ಕೇ. ಚಿಕ್ಕವಳಿಗೆ ದ್ವಿತೀಯ ಪಿಯುಸಿ ಪಾಠ. ಬೆಳಿಗ್ಗೆ ನಾವು ದೇವಸ್ಥಾನ, ಮದುವೆ ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಹೋಗುವುದಿರತ್ತೆ ನೋಡಿ.." ಅಂದರು. ಅದಕ್ಕೆ ಅವರು, "ನಾವು ಫೋನ್ ಮಾಡಿ ಬರೋಣಾ ಅಂತ ಇದ್ದೆವು. ಆದರೆ ಆತ್ಮೀಯರಿಗೆಂಥಾ ಫೋನು..ಯಾವಾಗ್ಲು ಮನೆಯಲ್ಲಿರುತ್ತಾರೆ ಅಂತ ಹಾಗೇ ಬಂದೆವು" ಅಂದರು.

ನಾವು ಆತ್ಮೀಯರು ಸರ್ವಾಂತರ್ಯಾಮಿಗಳೇ ಅಥವಾ ದೂರದೃಷ್ಟಿಯುಳ್ಳವರೇ ? ಎರಡು ಸರ್ತಿ ನಾವು ಮನೆಯಲ್ಲಿಲ್ಲದಿದ್ದಾಗಲು ಅವರು ಫೋನ್ ಮಾಡಿರಲಿಲ್ಲ. ಮೂರನೆಯ ಬಾರಿ ಕೂಡಾ ಮಾಡಿರಲಿಲ್ಲ. ಅಮ್ಮನಿಗೆ ಇದೆಲ್ಲ ಅಭ್ಯಾಸವಿರಬಹುದು, ಆದರೆ ನಾವು ಮೂವರು ಅವತ್ತು ಒಂದು ಬಹು ಮುಖ್ಯ ಕಾರ್ಯಕ್ರಮ ಒಂದಕ್ಕೆ ಹೊರಡಬೇಕಿತ್ತು. ನನಗೆ ಮತ್ತು ನನ್ನ ತಂಗಿಗೆ ಏನೂ ಮಾತಾಡಲು ತೋಚುತ್ತಿಲ್ಲ. ಅಮ್ಮ ಹಾಡಬೇಕಿತ್ತು. ಇವರ ಆಗಮನದಿಂದ ಮುಕ್ಕಾಲು ಘಂಟೆ ನಮಗೆ ಹೋಗಲು ತಡವಾಗಿ, ಅಲ್ಲಿನವರಿಗೆ ಫೋನಿಸಿ, ನಾವು ತಡವಾಗಿ ಆಗಮಿಸಬೇಕಾಗಿದ್ದಕ್ಕೆ ಕ್ಷಮೆ ಇರಲಿ ಎಂದು ಬೇಡಿಕೊಂಡಿದ್ದಾಯ್ತು. ಅವರು ನಮಗೆ ಎಷ್ಟು ಆತ್ಮೀಯರೆಂದರೆ ನಾವು ಅವರಿಗೆ ನಮ್ಮ ಪರಿಸ್ಥಿತಿ ಹೇಳಲೂ ಆಗುತ್ತಿಲ್ಲ, ಅವರ ಮೇಲಿರುವ ನಮ್ಮ ಪ್ರೀತಿ ವಿಶ್ವಾಸಗಳನ್ನು ಸರಿಯಾಗಿ ವ್ಯಕ್ತಪಡಿಸಲೂ ಆಗುತ್ತಿಲ್ಲ. ಈ ದ್ವಂದ್ವಕ್ಕೆ ನಾವು ನಿರುತ್ತರರು.ನಿಮಗೊಂದು ವಿಷಯ ಹೇಳಬೇಕು- ಬಂದಿದ್ದರಲ್ಲ ದಂಪತಿಗಳು, ಹೊರಟಾಗ ನುಡಿಮುತ್ತೊಂದನ್ನು ಆಡಿ ಹೋದರು- "You are most welcome to our house any time, But do give us a phone call before you come !"



ಆತ್ಮೀಯರ ಹಠಾತ್ ಆಗಮನದಿಂದ ಆನಂದದೊಂದಿಗೆ ಆಗುವ ಮುಜುಗರದ ಕೆಲವು ಉದಾಹರಣೆಗಳು :

1. ಅಮ್ಮ ಒಮ್ಮೆ ಮೆಣಸಿನಪುಡಿ ಮಾಡುತ್ತಿದ್ದರು...ಬಂದ ಅತಿಥಿಗಳು " ಏನಿದು ಸಿಕ್ಕಾಪಟ್ಟೆ ಘಾಟು ನಿಮ್ಮನೆ ? ಯಾವಾಗ್ಲು ಹೀಗೇನಾ ?" ಅಂದರಂತೆ !

2. ನಾನು ಒಮ್ಮೆ ಏಣಿ ಹತ್ತಿ ಅಟ್ಟ ಕ್ಲೀನ್ ಮಾಡುತ್ತಿದ್ದೆ, ಬಂದವರು ಯಾರೋ ಎಂದು ನೋಡುವ ರಭಸದಲ್ಲಿ ಬೇಗ ಅಟ್ಟ ಇಳಿಯಲು ಹೋಗಿ ಕಾಲು ಉಳುಕಿತು. ಬಂದವರು ನನ್ನ ಕುಂಟು ಕಾಲನ್ನು ಪ್ರಶ್ನಾರ್ಥಕವಾಗಿ ನೋಡಲು, ಅವರಿಗೆ ವಿವರಣೆ ನೀಡುವಷ್ಟರಲ್ಲಿ ನನಗೆ ಸಾಕುಬೇಕಾಗಿ ಹೋಯ್ತು !

3. ಒಬ್ಬರು ರಾತ್ರಿ ಹನ್ನೊಂದಕ್ಕೆ ಸಂಕ್ರಾಂತಿಯ ಎಳ್ಳು ಬೀರಲು ಬಂದರು ( ಹಬ್ಬವಾದ ಮೂರ್ನಾಲ್ಕು ದಿನಗಳಾದ ಮೇಲೆ) ಅವರು ಬಾಗಿಲು ಬಡಿದ ರಭಸಕ್ಕೆ ನಾವು ಮಲಗಿದ್ದವರು ಹೆದರಿ ಬಾಗಿಲು ತೆಗೆದೆವು..ಅವರು ಕೇಳಿದ ಪ್ರಶ್ನೆ- "ಮಲಗಿದ್ರಾ ? ಎಬ್ಬಿಸಿದೆವಾ ?"


ಹಿಂದಿನ ಕಾಲದಲ್ಲಾದರೆ ಗೋದಾಮಿನ ತುಂಬಾ ಧಾನ್ಯಗಳು, ಮನೆಯಲ್ಲಿ ಕಾಮಧೇನು ಕಲ್ಪವೃಕ್ಷಗಳಿರುತ್ತಿದ್ದವು. ಈಗ ಹಳ್ಳಿಗಳಲ್ಲಿ ಆ ಸ್ಥಿತಿ ಇರಬಹುದು, ನಾವು ನತದೃಷ್ಟ ನಗರವಾಸಿಗಳು. ಎಲ್ಲವನ್ನು ತಂದಿಟ್ಟುಕೊಂಡಿರಬೇಕಾಗತ್ತೆ. ನಮ್ಮ ಬ್ಯುಸಿ ಜೀವನದಲ್ಲಿ ಹಾಲು ಆಗೋಗಿದೆ ಅಂತ ಗೊತ್ತಾಗೋದು ಕಾಫಿಯ ನೆನಪಾದಾಗಲೇ ! ಇನ್ನು ಧಾನ್ಯ ತರಕಾರಿಗಳ ಬಗ್ಗೆ ಮಾತೇ ಇಲ್ಲ. ಅತಿಥಿಗಳು ಬಂದಾಗ ಸಾಮಾನು ತರಲು ಮುಜುಗರ, ಪಕ್ಕದ ಮನೆಯಲ್ಲಿ ಸಾಲ ಕೇಳಿದರೆ ಅವಮಾನ, ಬಂದವರ ಸತ್ಕಾರ ಮಾಡದಿದ್ದರೆ ನಿಷ್ಠುರರೆಂಬ ಪಟ್ಟ ಬೇರೆ !ಆಡುವಂತಿಲ್ಲ ಅನುಭವಿಸುವಂತಿಲ್ಲ. ಈ ಸಮಸ್ಯೆಗಳನ್ನೆಲ್ಲಾ ಒಂದು ಫೋನ್ ಕಾಲ್ ನಿವಾರಿಸುತ್ತದಲ್ಲವೇ?

ಇನ್ನು ಬಂದು ಹೋಗಲು ತಗಲುವ ಪೆಟ್ರೋಲ್ ಖರ್ಚು, ಬಸ್ ಚಾರ್ಜು ಏನು ಕಡಿಮೆಯೇ ? ಹೇಳದೆಯೇ ಬಂದು ಸರ್ಪ್ರೈಸ್ ಮಾಡಲು ಹೋಗಿ ಬೀಗ ನೋಡಿದಾಗ ಆಗುವ ಶಾಕನ್ನು ತಡೆದುಕೊಳ್ಳಲು ಸಾಧ್ಯವೇ ?

ಎಷ್ಟೋ ಬಾರಿ ನಾವೂ ಇಂತಹ ಪರಿಸ್ಥಿತಿ ಎದುರಿಸಿರುತ್ತೇವೆ, ಅದಕ್ಕಿಂತ ಹೆಚ್ಚಾಗಿ ನಾವು ಹಲವು ಜನರನ್ನು ಇಂಥದ್ದೇ ಪರಿಸ್ಥಿತಿಗೆ ಒಡ್ಡಿರುತ್ತೇವೆ. ಅಲ್ವಾ ? ನಾವು ತಿಳಿದೂ ತಿಳಿದೂ ತಪ್ಪು ಮಾಡುತ್ತೀವಾ ಅಥವಾ ಬೇರೆಯವರ ವಿಷಯದಲ್ಲಿ ನಿರಾಸಕ್ತಿ ತೋರಿಸಿ ನಮ್ಮ ಬುಡಕ್ಕೆ ಬಂದಾಗ ಮಾತ್ರ ಹೌಹಾರುತ್ತೀವಾ ?


ಸಕಲ service providers ಗಳೂ ಇದಕ್ಕಿಂತ ಹೆಚ್ಚಾಗಿ ಕಾಲ್ ದರಗಳನ್ನು ಕೆಳಗಿಳಿಸಲಾರರು. ಆದರೂ ಮಿಸ್ಡ್ ಕಾಲ್ ಮನೋಭಾವ ಜನರಿಂದ ಮಾಯವಾಗಿಲ್ಲ. ಏನೂ ಮಾಡೋಕಾಗಲ್ಲ. ಹೋಗಲಿ...ಮಿಸ್ಡ್ ಕಾಲ್ ಕೊಡಲಿ, ನಾವೇ ಫೋನಿಸೋಣಂತೆ.. ಫೋನ್ ಕರೆ ಮಾಡಿ ಆಮೇಲೆ ಮನೆಗೆ ಬರಬಾರದೆ ?

ನಾವೇಕೆ ಹೀಗೆ ?

16 comments:

PARAANJAPE K.N. said...

Good Article.

Unknown said...

ಇದರ ಬಗ್ಗೆ ನಿಮ್ಮೊಂದಿಗೆ ಚರ್ಚೆ ಮಾಡುವುದಿದೆ. ಈಗಲ್ಲ.. ನನ್ನ ಪರೀಕ್ಷೆಗಳು ಮುಗಿದಮೇಲೆ :)

PaLa said...

ಅದ್ಕೆ ನಾನು ಎಲ್ಲರ ಹತ್ರಾನೂ ಫೋನ್ ನಂ. ಕೇಳ್ತೀನಿ. ಕೆಲವ್ರು ಕೊಡೋದೆ ಇಲ್ಲ ಅಂತಾರೆ :)

ನನ್ನಂತವ್ರಿಗೆ ಫೋನ್ ಯಾವಾಗ ಮಾಡಬಹುದು ಅಂತ್ಲೂ ಮೊದಲೇ ಫೋನ್ ಮಾಡಿ ತಿಳ್ಕೊಬೇಕು. ಯಾಕೆ ಫೋನ್ ಎತ್ಕೊಳ್ಳಲ್ಲ ಅಂತ ಬೈತಾ ಇರ್ತಾರೆ. ನಾನೆಲ್ಲೋ ನನ್ ಫೋನೆಲ್ಲೋ ಅಂತ ಅವ್ರಿಗೇನು ಗೊತ್ತು.

Srikanth - ಶ್ರೀಕಾಂತ said...

ಯಾಕೋ... ಒಟ್ನಲ್ಲಿ ಹೀಗೇ!

Roopa said...

ಲಕ್ಷ್ಮಿಯವರೆ

ನೀವು ಹೇಳಿದ್ದು ನೂರಕ್ಕೆ ನೂರು ನಿಜ.ಈಗೇನೂ ಒಬ್ಬೊಬ್ಬರಿಗೂ ತಲೆಗೀರೆಡರಂತೆ ಮೊಬೈಲ್ ಇರುತ್ತದೆ. ಆದರೂಕೆಲವರಿಗೆ ಫೋನಾಯಿಸದೆ ಬರುವುದು ಚಾಳಿಯಾಗಿರುತ್ತದೆ.
ಕೆಲವೊಮ್ಮೆ ನಾನೆಲ್ಲಾದರೂ ಹೊರಡುವ ಸಮಯಕ್ಕೆ ನೆಂಟರು ಅಥವ ನಮ್ಮವರ ಸ್ನೇಹಿತರು ಹಾಜಾರಾಗುವುದುಂಟು. ಹೋಗಬೇಕಾದಕಡೆಗೂ ಹೋಗಲಾರದೆ. ಇಲ್ಲಿಯೂ ಮನಸಿಡಲಾರದೆ ಆಗುವ ಪಜೀತಿ ತುಂಬಾ ಬೇಜಾರು.

ಕೆಲವೊಂದು ಸಲ ನಾನೆ ತಲೆ ಕೆಟ್ಟ್ಟು ಫೋನ್ ಮಾಡಿ ಬರಬಾರದಿತ್ತಾ ಎಂದು ಅಮ್ಮನ ಕೆಂಗಣ್ಣಿಗೆ ಬಂದವರ ದ್ವೇಷಕ್ಕೆ ಈಡಾಗುತ್ತೇನೆ :)

ಮನೆಗೆ ಫೋನ್ ಮಾಡದೆ ಬರುವುದು ಕೆಲವೊಮ್ಮೆ ಸಹಜವಿರಬಹುದು. ಆದ್ರೆ ಆಫೀಸಿಗೂ ಫೋನಾಯಿಸದೆ ಯಾವಾಗಲೋ ನಾನಿಲ್ಲದ ಸಮಯದಲ್ಲಿ ಬಂದು ಹೋಗಿ ನಂತರ
ಮೇಡಮ್ ನಾವು ತುಂಬಾ ಸಲ ಬಂದಿದ್ದೆವು ನೀವು ಆಗೆಲ್ಲಾ ಸಿಗಲೇ ಇಲ್ಲ ಎಂದು ಆರೋಪಿಸಿವುದಿದೆಯಲ್ಲಾ ಇದಕ್ಕೇನನ್ನುವುದು.

Parisarapremi said...

ಸಧ್ಯ! ನೆಂಟರು ಬರ್ತಾರೆ ಅಂದ್ರೇನೇ ದಿಗಿಲಾಗುತ್ತೆ ನಂಗೆ. ಯಾಕಾದ್ರೂ ವಕ್ಕರಿಸುತ್ತಾರೋ ಅಂತ. ಇನ್ನು ಫೋನು ಬೇರೆ ಮಾಡಿ ಬರ್ಬೇಕಾ? ದುಡ್ ಕೊಟ್ಟು ದೆವ್ವ ಹಿಡಿಸ್ಕೊಂಡ್ರು ಅನ್ನೋ ಥರ. ;-)

ಒಂದು ರೀತಿ ಒಳ್ಳೇದೇ ಫೋನ್ ಮಾಡಿದರೆ. ಪ್ರತಿ ಸಲ ಫೋನ್ ಮಾಡಿದಾಗ್ಲೂ "ನಾನು ಇರಲ್ಲ" ಎಂದೋ, "ನಾನು ಬ್ಯುಸಿ" ಎಂದೋ ತಪ್ಪಿಸಿಕೊಳ್ಳಬಹುದು. ;-)

ಮಾಹಿತಿಗಾಗಿ: ಕುಷ್ವಂತ್ ಸಿಂಗ್ ಅವರ ಮನೆ ಬಾಗಿಲಿಗೆ ಒಂದು ಫಲಕ ನೇತು ಹಾಕಿಕೊಂಡಿದ್ದಾರಂತೆ. "If you are not expected, DO NOT knock the door" ಎಂದು.

ಅಂತರ್ವಾಣಿ said...

:)
naanu barovaga call maaDe barteeni

ರಾಜೇಶ್ ನಾಯ್ಕ said...

ಫೋನ್ ಮಾಡದೇ ಹೋಗಿ ಮನೆಗೆ ಲಾಕ್ ಹಾಕಿರುವುದು ಮತ್ತು ನಮ್ಮನ್ನು ಸರಿಯಾಗಿ ಬರಮಾಡಿಕೊಳ್ಳಲಾಗದೇ ಒದ್ದಾಡುವುದು ಮತ್ತು ಚಾ ಪುಡಿ ಇತ್ಯಾದಿ ತರಲು ಹಿಂಬಾಗಿಲಿನಿಂದ ಮಕ್ಕಳನ್ನು ಅಂಗಡಿಗೆ ಓಡಿಸುವುದು ಇತ್ಯಾದಿ ಸನ್ನಿವೇಶಗಳನ್ನು ನಾನೂ ಹುಟ್ಟುಹಾಕಿದ್ದೇನೆ. ಈ ಲೇಖನ ಓದಿ ಅದೆಲ್ಲಾ ನೆನಪಾಯಿತು. ಇವೆಲ್ಲಾ ಆದ ನಂತರ ಫೋನ್ ಮಾಡಿ ಹೋಗುವುದೇ ಸೂಕ್ತ ಎಂದೂ ಕಂಡುಕೊಂಡಿದ್ದೇನೆ.

Guruprasad said...

ಒಳ್ಳೆ article .... ಹೌದು...ಈ ಬೆಂಗಳೂರಿನಂಥ ಫಾಸ್ಟ್ ನಗರದಲ್ಲಿ.....ಫೋನ್ ಮಾಡಿ ಬಂದರೆ ಉತ್ತಮ......ಯಾರಿಗೆ ಯಾವಾಗ ಏನು ಕೆಲಸ ಇರುತ್ತೋ ...ಅವರವರ ಕೆಲಸ ಎಲ್ಲರಿಗೂ improtant... ಮೊದಲೇ ತಿಳಿಸಿ ಪ್ಲಾನ್ ಮಾಡಿ ಬಂದರೆ ಎಲ್ಲರಿಗೂ ಅನುಕೂಲ ಆಗುತ್ತೆ..... ಎಲ್ಲರೂ ಅರ್ಥ ಮಾಡಿಕೊಂಡರೆ ಚೆನ್ನಾಗಿ ಇರುತ್ತೆ....ಅರ್ಥ ಮದ್ಕೊಬೇಕಲ್ವ......?
ಗುರು

ಚಂದ್ರಕಾಂತ ಎಸ್ said...

ಲಕ್ಷ್ಮಿ

ಒಳ್ಳೆಯ ಲೇಖನ ಬರೆದಿರುವೆ. ಇದನ್ನು ಓದಿದ ತಕ್ಷಣ ನೆನಪಾದದ್ದು ’ ಅಮೆರಿಕಾ ಅಮೆರಿಕಾ ’ ಚಿತ್ರದ ಸನ್ನಿವೇಶ. ಹತ್ತು ವರ್ಷಗಳ ಹಿಂದೆ ಫೋನ್ ಮಾಡಿ ಬನ್ನಿ ಅಂತ ಯಾರಾದರೂ ಹೇಳಿದರೆ ಬಯ್ದುಕೊಳ್ಳುತ್ತಿದ್ದರು.

ಬ್ಲಾಗಿಗರೊಬ್ಬರು ಬರೆದಿರುವಂತೆ ಫೋನ್ ಮಾಡಿದರೆ ಕೆಲವು ಆಸಾಮಿಗಳು ಯಾವಾಗಲೂ ಮನೆಯಲ್ಲಿಲ್ಲ ಎಂದೇ ಹೇಳುವುದುಂಟು.

ಒಟ್ಟಾರೆಯಾಗಿ ಫೋನ್ ಮಾಡಿ ಹೋಗಬೇಕೆಂದರೆ ಅನುಕೂಲವೂ ಉಂಟು, ಅನಾನುಕೂಲವೂ ಉಂಟು!

( ನೀ ಹೇಳಿದಂತೆ settings ಎಲ್ಲಾ ಸರಿ ಮಾಡಿದೆ, ಆದರೂ ಬೇರೆಯ ಬ್ಲಾಗ್ ಗಳಲ್ಲಿ ನನ್ನ ಬ್ಲಾಗ್ ವಿಷಯ update ಆಗಿಲ್ಲ)

Lakshmi Shashidhar Chaitanya said...
This comment has been removed by the author.
Lakshmi Shashidhar Chaitanya said...

@ಪರಾಂಜಪೆ:

Thanks so much sir.

@ವಿಜಯ್ ಶಂಕರ್:

ಸರಿ.

ಪಾಲ:

:) ನಂಬರ್ ಇದ್ದವರ ಬಗ್ಗೆ ನಾನು ಮಾತಾಡಿದ್ದು..:))
ಇರ್ಲಿ, ನಿಮ್ಮ ಫೋನೂ ನೀವು ಸದಾ ಕಾಲ ಒಂದೇ ಕಡೆ ಇರುವ ಹಾಗಾಗಲಿ ಅಂತ ಆಶಿಸುತ್ತೇನೆ. :))

ಶ್ರೀಕಾಂತ್:

:(

ರೂಪಾ:

ನಮಸ್ಕಾರ, ಬ್ಲಾಗಿಗೆ ಸ್ವಾಗತ. ನಿಜ. ನಮ್ಮ ತಂದೆ ಕೂಡಾ ಆಫೀಸಿನಲ್ಲಿ ಇಂಥದ್ದೇ ಪರಿಸ್ಥಿತಿಯನ್ನ ಅನುಭವಿಸಿದ್ದಾರೆ. ಅಮ್ಮನ ಕೋಪ ಮತ್ತು ಬಂಧಿಗಳ ದ್ವೇಷಕ್ಕೆ ನಾನೂ ಹಲವಾರು ಬಾರಿ ಈಡಾಗಿದ್ದೇನೆ ನಿಮ್ಮಂತೆಯೆ !

ಪರಿಸರಪ್ರೇಮಿ:

ದುಡ್ಡು ಕೊಟ್ಟು ದೆವ್ವ ಹಿಡಿಸಿಕೊಳ್ಳೋದು...:))
ನಾನು ಕೂಡಾ ಬೋರ್ಡಿಗೆ ಆರ್ಡರ್ ಕೊಡಬೇಕೆಂದು ಯೋಚನೆ ಮಾಡುತ್ತಿದ್ದೇನೆ. ಹೈ ಕಮಾಂಡ್ ಗೆ ಆಗ್ರಹ ಪಡಿಸೋದೇ ! :)

ಅಂತರ್ವಾಣಿ:

:) ಗುಡ್ !

ರಾಜೇಶ್ ನಾಯ್ಕ:

ನಮಸ್ಕಾರ ಸರ್, ಬ್ಲಾಗಿಗೆ ಸ್ವಾಗತ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಗುರು:

ನಿಜ...ಜನ ಅರ್ಥ ಮಾಡ್ಕೋಬೇಕಲ್ಲಾ !

ಚಂದ್ರಕಾಂತ ಮೇಡಮ್:

ಲೇಖನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.ಫೋನ್ ಮಾಡಿದರೆ ಅನಾನುಕೂಲವಾಗದಿರಲಿ, ಸದ್ಯ !

ನಿಮ್ಮ ಬ್ಲಾಗಿನ ಸೆಟ್ಟಿಂಗ್ ಯಾಕೆ ಕೈ ಕೊಡುತ್ತಿದೆ ಅಂತ ನನಗೆ ಅರ್ಥವಾಗುತ್ತಿದೆ. ಇರಲಿ, ನಿಮ್ಮ ಕಾಲೇಜಿನಲ್ಲಿ ಸೆಮೆಸ್ಟರ್ ಮುಗಿದು ರಜೆ ಬಂದ ತಕ್ಷಣ ಸಮಸ್ಯೆಗೆ ಪರಿಹಾರ ಹುಡುಕೋಣ.

Naveen ಹಳ್ಳಿ ಹುಡುಗ said...

ಲಕ್ಷ್ಮಿ,
ಲೇಖನ ಬಹಳ ಅರ್ಥಪೂರ್ಣವಾಗಿದೆ...
ಬರೆಯುತಿರಿ...

ಬಾಲು said...

e lekhana oduttidda haage nange nammuru nenapu ayithu, alli bengalurinashtu busy jeevana innu aagilla vaddarinda kareyade nugguvudu abhyasa. amele haaligo, athava innenakko hittila baagilinda oduvudu nadede iruttade.

ellaru phone madi baralaaguvudilla, haagagi bandavaru a maneya parishti artha madi kondu nadedare chennagiruttade.

olle lekhana.

ದೀಪಸ್ಮಿತಾ said...

ಲಕ್ಷ್ಮಿ, ನೀವು ಬರೆದಿದ್ದು ನಿಜ. ಅನೇಕರಿಗೆ ಇನ್ನೂ ಅರ್ಥವೇ ಆಗಿಲ್ಲ ಫೋನ್ ಮಾಡಿ ಬನ್ನಿ ಅಂದರೆ. 'ಇವರೇನು ದೊಡ್ಡ ಆಫೀಸರಾ, ಫೋನ್ ಮಾಡಿ ಬರಲು' ಎಂಬ ಪ್ರಶ್ನೆ ಮಾಡುತ್ತಾರೆಯೇ ಹೊರತು, ಹಾಗೆ ಹೇಳಿದ್ದರ ಉದ್ದೇಶ ಏನು ಎಂದು ಅರ್ಥ ಮಾಡಿಕೊಳ್ಳುವುದಿಲ್ಲ

bhadra said...

neevu baredirOdu shatah pratishatah satyada maatugaLu - naanu 15 dinagaLa raje haaki bengaLoorige bandiddaroo, ibbaru snEhitarannu maatra bhETi aagidde. shanivaara bhaanuvaara biTTare, mikkella dinagaLoo avarava kelasadalli avaru magnaraagiddare, naanu summane maneyalli malagiruttidde :(

mundina baari bengaLoorige baruva munna snEhitarugaLige phonaayisi baruve :)