Tuesday, December 9, 2008

ಚೇತನ ವಿಕಲವೇ ?

ಇದರ ಬಗ್ಗೆ ಬರೆಯಬೇಕೆಂದು ನನಗೆ ಬಹಳ ದಿನಗಳಿಂದ ಅನಿಸಿತ್ತು. ಸಮಯದ ಅಭಾವದಿಂದ ಬರೆಯಲು ಆಗಿರಲಿಲ್ಲ. ಇನ್ನೊಂದು ವಾರದಲ್ಲಿ ನನಗೆ ಒಂದು ಬಹುಮುಖ್ಯ ಪರೀಕ್ಷೆಯಿದ್ದರೂ ಇವತ್ತು ಇದರ ಬಗ್ಗೆ ಬರೆಯಬೇಕೆಂದು ನಿಶ್ಚಯಿಸಿಯೇ ಕುಳಿತಿದ್ದೇನೆ.

ನನಗೆ ವಿಕಲಚೇತನರು ಎಂಬ ಶಬ್ದದ ಬಗ್ಗೆ ತೀವ್ರ ಅಸಮಾಧಾನವಿದೆ. ಚೈತನ್ಯಕ್ಕೆ ವಿಕಲತೆ ಕಾಡುವುದುಂಟೇ? ಈ ಪದಪ್ರಯೋಗವೇ ನಮ್ಮ ಚೈತನ್ಯಕ್ಕೆ ವಿಕಲತೆಯುಂಟಾಗಿಸುತ್ತದೆ ಎಂದು ನಾನು ಭಾವಿಸುತ್ತೇನೆ.

ಬಸ್ಸಿನಲ್ಲಿ ಹೋಗುವಾಗ " ಅಂಗ ವಿಕಲರಿಗೆ" ಎಂಬ ತಲೆಬರಹದಲ್ಲಿ ಗಟ್ಟಿಮುಟ್ಟಾದವರು ಕುಳಿತಿರುವುದು ಕಂಡಾಗ, ಲೋಫ್ಲೋರ್ ಬಸ್ಸಿನ ಹೈ ಬಜೆಟ್ ದರಗಳನ್ನು ಭರಿಸಲಾಗದೇ ಮಾಮೂಲಿ ಬಸ್ಸು ಹತ್ತಲು ಪರದಾಡುವ ಅಂಗವಿಕಲರನ್ನ, ಅವರು ಬಸ್ಸನ್ನು ಹತ್ತಲು ಸಹಕರಿಸುವ ಬದಲು ಸುಮ್ಮನೆ ತೆಪ್ಪಗಿದ್ದುಬಿಡುವ, ಕೆಲವರು ಸಹಕರಿಸಿದರೂ " ಅಯ್ಯೋ ಪಾಪ"ದ ನೋಟ ಬೀರಿ ಅವರನ್ನು ಕಣ್ಣಲ್ಲಿಯೇ ಇರಿಯುವ ಜನರ ವರ್ತನೆಗಳನ್ನು ನೋಡಿದಾಗಲೆಲ್ಲಾ ನನಗೆ ಮನಸ್ಸಿಗೆ ಬೇಜಾರಿಗಿದ್ದಿದೆ. ಅವರಿಗೆ ಅನುಕಂಪದ ಅವಶ್ಯಕತೆ ಇಲ್ಲ, ಉತ್ತೇಜನದ ಅವಶ್ಯಕತೆ ಇದೆ ಎಂದು ಇವರಿಗೇಕೆ ಅನ್ನಿಸುವುದಿಲ್ಲ ಎಂದು ನನಗೆ ಅನ್ನಿಸುತ್ತದೆ.

ಬ್ಲಾಗ್ ಪ್ರಪಂಚಕ್ಕೆ ನಾನು ಕಾಲಿಟ್ಟು ಇನ್ನು ಒಂದು ವರ್ಷ ಸಂದಿದೆ ಅಷ್ಟೆ. ಈ ಪ್ರಪಂಚ ನನಗೆ ಅಪಾರ ಸಂಖ್ಯೆಯ ಹೊಸ ಸ್ನೇಹಿತರನ್ನು ಪರಿಚಯಿಸಿದೆ. ಕೆಲವರಂತೂ ನನ್ನ ಪರಮಾಪ್ತ ಬಳಗಕ್ಕೆ ಬಹಳ ಬೇಗ ಸೇರಿಕೊಂಡುಬಿಟ್ಟಿದ್ದಾರೆ. ಅಂತಹವರಲ್ಲಿ ಒಬ್ಬರು ತೇಜಸ್ವಿನಿ. ಅವರು ಅನಾರೋಗ್ಯವಾಗಿದ್ದ ಪರಿಸ್ಥಿಯಲ್ಲಿ ಪಟ್ಟ ಅವಸ್ಥೆ ನಮ್ಮ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ನನ್ನ ಭಾವನೆಯನ್ನು ಅರ್ಥೈಸಿಕೊಂಡು ನನಗೆ ಧೈರ್ಯ ಹೇಳಿದ ಅವರ ಇಚ್ಛಾಶಕ್ತಿಯನ್ನು ಹೊಗಳಲು ನನ್ನ ಬಳಿ ಶಬ್ದಗಳಿಲ್ಲ.

ಕೆಲವರು ಹೀಗೆ ಹೇಳುತ್ತಾರೆ, " ಅನುಭವಿಸಿದವರಿಗೆ ಮಾತ್ರ ಕಷ್ಟದ ಅರಿವಿರುತ್ತದೆ " ಎಂದು. ನಿಜ, ಅಂಗವಿಕಲಳಾಗಿಯೋ ಬುದ್ಧಿಮಾಂದ್ಯಳಾಗಿಯೋ ಹುಟ್ಟಬೇಕಿದ್ದ ನಾನು ಕೂದಲೆಳೆಯಲ್ಲಿ ಪಾರಾದ ಅನುಭವ, ಅಪಘಾತದಲ್ಲಿ ಅನ್ಯಾಯವಾಗಿ ಒಂದು ಕಣ್ಣನ್ನು ಕಳೆದುಕೊಂಡ ನಮ್ಮ ತಂದೆ ಅನುಭವಿಸಿದ, ಅನುಭವಿಸುತ್ತಿರುವ ಯಾತನೆ ಮತ್ತು ಸಮಾಜ ಅವರಿಗೆ ಅಂದ ಮತ್ತು ಅನ್ನುತ್ತಿರುವ ಮಾತುಗಳು ನಮಗೆ ಜನ್ಮಜನ್ಮಾಂತರಕ್ಕೆ ಶೇಖರಿಸಿಟ್ಟುಕೊಳ್ಳುವಷ್ಟು ಅನುಭವಗಳನ್ನು ನೀಡಿದೆ. ನನಗೆ ಮತ್ತು ನನ್ನ ತಂದೆಗೆ ಆಗಿರುವ ಅನ್ಯಾಯಕ್ಕೆ ನಾವು ಮುಸುಕು ಹಾಕಿಕೊಂಡು ಕೂರಬೇಕಿತ್ತು. ಸಮಾಜದ ಪ್ರಕಾರ ನಮ್ಮ ತಂದೆಯಂತೂ ಹೊರಗೆ ಬರಲೇಬಾರದು ಅವರಿರುವ ಸ್ಥಿತಿಗೆ . ಆದರೆ ಇಂದು ನಾನು ನಿಮ್ಮ ಮುಂದೆ ನನ್ನ ಬರಹಗಳನ್ನು ಪ್ರಸ್ತುತಪಡಿಸುತ್ತಾ ಕುಳಿತಿದ್ದೇನೆ, ಮತ್ತು ನನ್ನ ತಂದೆ ನಮ್ಮೆಲ್ಲರನ್ನು ಸಾಕಿ ಸಲಹಿ ಬೆಳೆಸಿದ್ದಾರೆ, ಮತ್ತು ಅವರು ಹುಟ್ಟುಹಾಕಿದ ಸಂಸ್ಥೆಯ ಊರುಗೋಲಾಗಿ, ಅದು ಚದುರಿ ಹೋಗದಂತೆ ಕಾಪಾಡಿಕೊಂಡು ಬಂದಿದ್ದಾರೆ. ನನಗೆ ಅತ್ಯಂತ ಬೇಜಾರು ತರಿಸುವ ವಿಷಯವೇನೆಂದರೆ, ನಾವು ಹೀಗಾಗಿದ್ದು ಹಣೆಬರಹ, ಆದರೆ ನಾವು ಬೆಳೆದು ಬಂದದ್ದು "ಪವಾಡ". ಇದು ಸಮಾಜ ಅಂಗವಿಕಲರ ಜೀವನಕ್ಕೆ ನೀಡುವ ಒಂದೆಳೆಯ ವಿಶ್ಲೇಷಣೆ. ಪವಾಡ ಯಾರೋ ಮಾಡಿದ್ದಲ್ಲ, ಅದು ನಾವು ಪಟ್ಟ ಪರಿಶ್ರಮ . ಈ ಸಮಾಜಕ್ಕೆ sympathize ಮಾಡಲು ಬರುತ್ತದೆಯೇ ಹೊರತು empathize ಮಾಡಲು ಅದೇಕೋ ಬರುವುದೇ ಇಲ್ಲ. ಅವರ ಅನುಕಂಪದ ನೋಟ ನಮಗೆ ಅಗ್ನಿಜ್ವಾಲೆಯ ಸಮಾನ. ಅವರ ಒಂದೊಂದು ಪ್ರಶ್ನೆ ನಮಗೆ ವಿಷದ ಮುಳ್ಳಿನ ಇರಿತ. ನಮ್ಮ ಸಾಧನೆಗಳೆಲ್ಲ ನಮ್ಮ ದೌರ್ಬಲ್ಯದ ಮುಂದೆ ಗೌಣ ! ಎಲ್ಲರು ಮೊದಲು ನಮ್ಮ ವೈಕಲ್ಯ ಮತ್ತು ದೌರ್ಬಲ್ಯದ ಕಡೆಗೇ ಮೊದಲು ಗಮನ ಹರಿಸುತ್ತಾರೆ ಹೊರತು ನಮ್ಮ ಸಾಧನೆ ಮತ್ತು ಸಕಾರಾತ್ಮಕತೆಯ ಕಡೆಗಲ್ಲ. ಸಮಾಜದ ದೃಷ್ಟಿಯೇ ನಕಾರಾತ್ಮಕವೇ ?

ಎಲ್ಲಿಯವರೆಗೂ ಒಣ ಅನುಕಂಪ ಇಲ್ಲದ ನಿಜ ಸಹಾನುಭೂತಿ, ನಕಾರತ್ಮಕತೆಯ ಪೊರೆಯಿಲ್ಲದ ದೃಷ್ಟಿ ಮತ್ತು ಒಳ್ಳೆಯದನ್ನೇ ನೋಡುವ, ಮಾಡುವ ಪ್ರಜ್ಞೆ ಸಮಾಜದಲ್ಲಿ ಜಾಗೃತವಾಗುವುದಿಲ್ಲವೋ, ಅಲ್ಲಿಯವರೆಗೂ ನಮ್ಮೆಲ್ಲರ ಪಾಡು ಇಷ್ಟೆ ಅನ್ನಿಸುತ್ತದೆ. ಅಂಗ ವಿಕಲವಾಗಿದ್ದರೂ ಅದಮ್ಯ ಚೇತನದಿಂದ ಮುಂಬರಲಿಚ್ಛಿಸುವವರನ್ನು " ವಿಕಲಚೇತನರು " ಎಂದು ಪ್ರತ್ಯೇಕಿಸಿ ಚೇತನವನ್ನೇ ವಿಕಲಗೊಳಿಸುತ್ತಿದ್ದೇವಲ್ಲಾ...ನಾವೇಕೆ ಹೀಗೆ ?

17 comments:

ಅಂತರ್ವಾಣಿ said...

ಅಂಗಗಳಿಗೆ ವಿಕಲತೆ ಇರಬಹುದು. ಚೇತನಕ್ಕಲ್ಲ. ನಿಜ.
ಸಾಮಾನ್ಯರಂತೆ ಅವರೂ ಸಹ ಅನೇಕ ಸಾಧನೆಗಳನ್ನು ಮಾಡುತ್ತಿದ್ದಾರೆ, ಮಾಡುತ್ತಾರೆ. ಕೆಲವೊಮ್ಮೆ ಏನೂ ವಿಕಲತೆಯಿಲ್ಲದವರು ಮಾಡಲಾಗದ ಕೆಲಸಗಳನ್ನು ಅಂತವರು ಮಾಡಿರೋ ಉದಾಹರಣೆ ಅನೇಕ ಇವೆ.

ಈ ವಿಕಲಚೇತನ ಪದವು ರೂಢಿಯಲ್ಲಿ ಬಂದು ಬಿಟ್ಟಿದೆ. ಅದನ್ನು ನಾವೆಲ್ಲರೂ ಉಪಯೋಗಿಸದೇ ಇದ್ದಲ್ಲಿ ಆಯ್ತು.

Ittigecement said...

ಅಂಗವಿಕಲರಿಗೆ ಅನುಕಂಪ , ಸಹಾನು ಭೂತಿ ಬೇಕಿಲ್ಲ. ಅವರಿಗೆ ಪ್ರೋತ್ಸಾಹ ಬೇಕು. ಎಲ್ಲವೂ ಸರಿ ಇದ್ದು "ಅವರನ್ನು" ಸರಿಯಾಗಿ ನೋಡದ ಜನರಿಗೆ "ಅಂಗವಿಕಲರು" ಅನ್ನಬೇಕು.
ನಿಮ್ಮ ತಂದೆಯವರು, ತೇಜಸ್ವಿನಯವರು ಎಂಥವರಿಗೂ ಸ್ಪೂರ್ತಿಯಾಗಬಲ್ಲವರು.
ನಿಮ್ಮ ಧ್ಯೇಯ ಇಷ್ಟವಾಯಿತು...

Harisha - ಹರೀಶ said...

ನನಗೂ ದಟ್ಸ್‌ಕನ್ನಡದಲ್ಲಿ ತೇಜಸ್ವಿನಿಯವರ ಲೇಖನಕ್ಕೆ "ವಿಕಲಚೇತನ ತೇಜಸ್ವಿನಿಯವರ ಆತ್ಮನಿವೇದನೆ" ಅಂತ ಟೈಟಲ್ ಕೊಟ್ಟಿರೋದನ್ನ ನೋಡಿ ಬೇಜಾರಾಯ್ತು.. :-(

ಒಂದು ಅಂಗ ಊನವಾಗಿದ್ದರೆ ಅದರ ಬದಲು ಇನ್ನೊಂದು ಅಂಗ ಉಳಿದವರಿಗಿಂತ ಚೆನ್ನಾಗಿ ಕೆಲಸ ಮಾಡುವುದು ತಿಳಿಯದ ವಿಷಯವೇನಲ್ಲ.. ಆದರೂ ಏಕೆ ವಿಕಲ ಚೇತನ ಎಂದು ಕರೆಯುತ್ತಾರೆಂದು ನನಗೂ ಅರ್ಥವಾಗಿಲ್ಲ; ಹೆಸರಿನಲ್ಲೇನಿದೆ ಎಂದು ಸುಮ್ಮನೆ ಕೂರಬೇಕು ಅಷ್ಟೆ..

ತೇಜಸ್ವಿನಿ ಹೆಗಡೆ said...

ಪ್ರಿಯ ಲಕ್ಷ್ಮಿ,

ನನ್ನ ದನಿಗೆ ನಿನ್ನ ದನಿಯ ಜೊತೆ ಸೇರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ಈ ವಿಕಲಚೇತನ ಎಂಬ ಪದವನ್ನು ಮೊದಲು ಹುಟ್ಟುಹಾಕಿದವರು ವಿಜಯಕರ್ನಾಟಕದವರೆಂದು ಕೇಳಿರುವೆ. ಈ ಪದದ ಪ್ರಯೋಗದ ಬಗ್ಗೆ ನನ್ನ ತೀವ್ರ ಅಸಮಾಧಾನವನ್ನು ದಟ್ಸ್‌ಕನ್ನಡದ ಎಡಿಟರ್‍ ಅವರಿಗೂ ಹೇಳಿರುವೆ. ಅವರೂ ತಪ್ಪೊಪ್ಪಿಕೊಂಡು ಇನ್ನು ಹೀಗಾಗದಿರುವಂತೆ ನೋಡಿಕೊಳ್ಳುವ ಭರವಸೆಯನ್ನಿತ್ತಿದ್ದಾರೆ.

ಸಮಾಜ ನೋಡುವ ದೃಷ್ಟಿಕೋನ ಅವರು ಬಳಸುವ ಪದದಲ್ಲಿರುತ್ತದೆ ಎಂಬುದು ನನ್ನ ಅನಿಸಿಕೆ. ಹಾಗಾಗಿ ಹೆಸರಲ್ಲೇನಿದೆ ಎಂದು ಸುಮ್ಮನಿರುವುದೇ ತಪ್ಪು. ನಮ್ಮಂತವರ ಚೇತನವೇ ವಿಕಲ ಎಂದು ಸಶಕ್ತರಾಗಿರುವವರ ತೀರ್ಮಾನಕ್ಕೆ ನನ್ನ ತೀವ್ರ ಖಂಡನೆಯಿದೆ. ಯಾರ ಚೇತನವೂ ವಿಕಲವಾಗಿರದು. ಮಾನಸಿಕ ಅಸ್ವಸ್ಥರೊಳಗೂ ಚೈತನ್ಯ ಅಪಾರವಿರುತ್ತದೆ. ಚೇತನ ವಿಕಲವಾಗಿರುವುದು ಕೆಲವು ವಿಕೃತ ಮನಸಿನ ಜನರದ್ದು ಮಾತ್ರ. ಅಂತಹವರಿಗೆ ನಿಜವಾಗಿಯೂ ವಿಕಲಚೇತನರೆನ್ನಬೇಕು. ಉದಾ: ಭಯೋತ್ಪಾದಕರು, ಕೆಲವು ಬುದ್ಧಿಜೀವಿಗಳು, ಸಮಾಜ ಘಾತುಕರು, ಅತ್ಯಾಚಾರಿಗಳು..(ಪಟ್ಟಿ ಬೆಳೆಯುತ್ತದೆ).

ಹೆಚ್ಚೇನು ಹೇಳೊಲ್ಲ. ಅನುಭವ ಎಲ್ಲರಿಗೂ ಒಂದೇ ಪಾಠ ನೀಡುವುದು. ಆದರೆ ಅದ್ರ ತೀವ್ರತೆಯನ್ನು ಮಾತ್ರ ಓರ್ವ ಅನುಭವಿಯೇ ಪಡೆಯಬಲ್ಲ.

ನಾವೇಕೆ ಹೀಗೆ? ಎಂದು ಅದೆಷ್ಟೋ ಸಲ ನಾನೇ ಕೇಳಿದ್ದಿದೆ. ಆಗ ಸಿಕ್ಕ ಉತ್ತರ ಮಾತ್ರ ಒಂದೇ. ನಾವಿರುವುದೇ ಹೀಗೇ ಅದಕ್ಕೇ ನಾವು ಹೀಗೇ!

ನನ್ನ ಹೋರಾಟದಲ್ಲಿ ಸಹಭಾಗಿಯಾಗಿರುವುದಕ್ಕೆ ಮತ್ತೊಮ್ಮೆ ತುಂಬಾ ಧ್ಯನವಾದಗಳು.

Parisarapremi said...

ಚೇತನವಿಕಲರು ಎಂದು ಕರೆಯುವವರನ್ನು ದಡ್ಡರೆನ್ನದೆ ಬೇರೆ ದಾರಿಯೇ ಇಲ್ಲ. ಇದೇ ರೀತಿ ಅನೇಕ ತಪ್ಪು ಪದಪ್ರಯೋಗಗಳನ್ನು ನಾವು ಬಳಸುತ್ತೇವೆ.

"ಆತ್ಮಹತ್ಯೆ, ಜಲಪಾತ" ಇವುಗಳನ್ನು ಈ ಪಟ್ಟಿಗೆ ಸೇರಿಸಿಕೊಳ್ಳಬಹುದು.

@ಅಂತರ್ವಾಣಿ - ಸಾಮಾನ್ಯರಂತೆ ಸಾಧಿಸುವುದಿರಲಿ, ನಾನು ಪ್ರತ್ಯಕ್ಷ ಕಂಡಿದ್ದೇನೆ, ಸಾಮಾನ್ಯರಿಗೆ, ಅಂದರೆ ಎಲ್ಲ ಅಂಗಗಳೂ ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇರುವವರಿಗೆ, ಸಾಧ್ಯವಾಗದ್ದನ್ನು ಈ ಸೋ ಕಾಲ್ಡ್
ಅಂಗವಿಕಲರು ಅಥವಾ ಚೇತನವಿಕಲರು ಸಾಧಿಸಿದ್ದಾರೆ.

ಎವೆರೆಸ್ಟ್ ಸಮಿಟ್ ಮಾಡಿರುವ ಕುರುಡರು, ವಿಖ್ಯಾತ ಸಂಗೀತ ನಿರ್ದೇಶಕರಾಗಿರುವ ಕಿವುಡರು, ಸ್ಪ್ಯಾಸ್ಟಿಸಿಟಿ ಇರುವ ವಿಜ್ಞಾನಿಗಳು - ಎಲ್ಲರೂ ನಮ್ಮ ಕಣ್ಣ ಮುಂದೆಯೇ ಇರುವ ಉದಾಹರಣೆಗಳು.

ನೈಸ್ ಟಾಪಿಕ್ ಲಕುಮಿ.

ವಿ.ರಾ.ಹೆ. said...

ಈ ಪದ ಮೊದಲು ಅಷ್ಟು ಬಳಕೆಯಲ್ಲಿ ಇರಲಿಲ್ಲ. ಈಗ ಕೆಲವು ವರ್ಷಗಳಿಂದ ಕೆಲವು ಪತ್ರಿಕೆಗಳು ಅದ್ಯಾರೋ ನುಡಿಪಂಡಿತರಿಂದ ಪ್ರಭಾವಿತರಾಗಿ ಈ ವಿಚಿತ್ರ ಪದವನ್ನು ಬಳಸಿ ಅದಕ್ಕೆ ಸಮರ್ಥನೆಯನ್ನೂ ಕೊಟ್ಟು ಜನರು ಅದನ್ನೇ ಬಳಸುವಂತೆ ಮಾಡಿದ್ದಾರೆ. ನಿಲ್ಲಬೇಕು ಇದು.

Anonymous said...

ಈ ವಿಷಯದ ಕುರಿತು ನಾನು ವಿಜಯ ಕರ್ನಾಟಕ ಸಂಪಾದಕರಿಗೆ ಮೆಸೇಜ್ ಮಾಡಿ, ಅದು ತಪ್ಪಲ್ಲವ ಅಂತ ಕೇಳಿದ್ದೆ.. ಆವ್ರು ಉತ್ತರವನ್ನೇ ಕೊಟ್ಟಿರಲಿಲ್ಲ...

ಆದರೆ ಅವರು ಈ ಕೆಳಗಿನ ಅರ್ಥದಲ್ಲಿ ಆ ಶಬ್ದ ಬಳಸೀರಬೇಕೆಂದುನನ್ನ ಅಭಿಪ್ರಾಯ
"ದೇಹದ ವಿಕಲತೆ ಹೊಂದಿದ್ದರೂ ಮಾನಸಿನ ಚೈತನ್ಯ ಕುಗ್ಗಲು ಬಿಡದವರು"

ಸಂದೀಪ್ ಕಾಮತ್ said...

ವಿಜಯ್ ನೀವು ಅಂಥವರಿಂದ ಉತ್ತರ ನಿರೀಕ್ಷಿಸೋದೇ ತಪ್ಪು.ಅವರು ಯಾವಾಗ್ಲೂ ಬ್ಯುಸಿ ಅಲ್ವ??
ನಮ್ಮ CEO ಗೆ ಮೈಲ್ ಕಳಿಸಿದ್ರೂ ಉತ್ತರ ಬಂದೇ ಬರುತ್ತೆ ಆದ್ರೆ ಕನ್ನಡ ಸಾಹಿತಿಗಳಿಗೆ,writerಗಳಿಗೆ ಮೈಲ್ ಕಳಿಸಿದ್ರೆ ನೋ ರಿಪ್ಲೈ!!!
ತೆಗಳೋದು ಬಿಡಿ ’ನಿಮ್ಮ ಲೇಖನ ಚೆನ್ನಾಗಿತ್ತು ’ ಅಂತ ಒಂದು ಹೊಗಳಿಕೆಯ ಮೈಲ್ ಹಾಕಿದ್ರೆ ’ನೀನೇನಯ್ಯ ಹೇಳೋದು ಚೆನ್ನಾಗಿದೆ ಅಂತ ನಾನು ಬರೆಯೋದೆಲ್ಲ ಯಾವಾಗ್ಲೂ \ಚೆನ್ನಾಗೇ ಇರುತ್ತೆ ಅನ್ನೋ’ ಧಾಟಿಯಲ್ಲಿ ಸುಮ್ಮನಿದ್ದು ಬಿಡ್ತಾರೆ:(
ಸಾರಿ ವಿಶ್ಯ ಎಲ್ಲಿಗೋ ಹೋಯ್ತು ಅಂತ ಕಾಣ್ಸುತ್ತೆ!

ಭಾರ್ಗವಿ said...

ಲಕ್ಷ್ಮಿ ,
ನಿಮ್ಮ ಹಾಗೆ ನಾನು ಎಷ್ಟೋ ಸಲ ನಮ್ಮ ಸಮಾಜದ ದೃಷ್ಟಿಯೇ ನಕಾರಾತ್ಮಕವೇ? ಅಂತ ಯೋಚಿಸಿದ್ದಿದೆ. ನಿಮ್ಮ ತಂದೆಯವರ ಬಗ್ಗೆ ಓದಿ ಅವರ ಬಗ್ಗೆ ಹೆಮ್ಮೆ ಅನಿಸುತ್ತಿದೆ. ತೇಜಸ್ವಿನಿಯವರ ಬಗ್ಗೇನೂ ಹಾಗೆ ಅನಿಸಿತು. ಇನ್ನು ವಿಕಲಚೇತನ ಪದದ ಬಗ್ಗೆ ಅಂತರ್ವಾಣಿಯವರು ಹೇಳಿದಂತೆ ನಾವೆಲ್ಲ ಉಪಯೋಗಿಸದಿದ್ದರೆ ಆಯ್ತು .ನಮ್ಮ ಸಮಾಜದ ದೃಷ್ಟಿ ಬದಲಾಯಿಸಲಾಗುತ್ತಾ ? ನಮ್ಮ ದೃಷ್ಟಿ ಬದಲಾಯಿಸುವಲ್ಲಿ ಪ್ರಯತ್ನಿಸಬಹುದಷ್ಟೇ. ಎಲ್ಲಾ ಕ್ಷೇತ್ರಗಳಲ್ಲೂ ಅಂಗವಿಕಲರು ಸಾಧನೆ ಮಾಡಿದ್ದಾರೆ. ಅದ್ಹೇಗೆ ವಿಕಲಚೇತನರಾಗುತ್ತಾರೆ. ನೀವು ಬರೆಯುವ ನಾವೇಕೆ ಹೀಗೆ ? ನಿಜಕ್ಕೂ ನಮ್ಮನ್ನೊಮ್ಮೆ ಪ್ರಶ್ನಿಸಿಕೊಳ್ಳಬೇಕು ಹಾಗಿರುತ್ತೆ.

Ramesh BV (ಉನ್ಮುಖಿ) said...

ಯಾವುದೋ ಒಂದು ಅಂಗ ದುರ್ಬಲವಾಗಿದ್ದರೆ ಜೀವ ಚೇತನವನ್ನೇ ವಿಕಲ ಅನ್ನೋದೇ.. ಅಡ್ಡ ಬೀಳಬೇಕು ಪದ ಸೃಷ್ಟಿಸಿದ ಪಂಡಿತರಿಗೆ ..

dosti said...

ನಿಮ್ಮ ಅನಿಸಿಕೆಯಲ್ಲಿ ಎರಡು ಮಾತಿಲ್ಲ. ನಾನು ತಿಳಿದ ಮಟ್ಟಿಗೆ ಅದನ್ನು ಯಾವುದೇ ಪತ್ರಕರ್ತರು ಅದನ್ನು ಬಳಕೆಗೆ ತಂದದ್ದಲ್ಲ. ಪಂಡಿತರೇ ಈ ಪದವನ್ನು ಅಂಗವಿಕಲ ಪದಕ್ಕೆ ಪರ್ಯಾಯವಾಗಿ ಬಳಸಬಹುದು ಎಂದು ಸೂಚಿಸಿದ್ದರು ಎಂಬುದು ನನಗೆ ಗೊತ್ತಿರುವ ಸತ್ಯ. ಆದರೆ, ವ್ಯಯಕ್ತಿಕವಾಗಿ ನನಗೆ ಆ ಪದ ಬಳಕೆ ಬಗ್ಗೆ ವಿರೋಧವಿದೆ.
ಏನೇ ಆಗಲಿ ನಿಮಗೆ ಅಂಗವಿಕಲರ ಬಗೆಗಿರುವ ಕಾಳಜಿ ಕುಶಿ ಆಯ್ತು.
- ಬೆಟ್ಟದಜೀವ ಬ್ಲಾಗ್

shivu.k said...

ಲಕ್ಷಿ ಮೇಡಮ್,
ಅಂಗವಿಕಲತೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಅವರನ್ನು ಅಂಗವಿಕಲರು ಎನ್ನಬಾರದು. ಅವರಿಗೆ ಸ್ಪೂರ್ತಿ, ಪ್ರೋತ್ಸಾಹ ನೀಡಬೇಕು. ನಿಮ್ಮ ತಂದೆಯವರ ಧ್ಯೇಯ ಇಷ್ಟವಾಗಿದೆ.

Naveen ಹಳ್ಳಿ ಹುಡುಗ said...

Dear Lakshmi,
its true.. They are not disabled.. They are specially abled...
Keep writing....

chetana said...

ಲಕ್ಷ್ಮೀ,
ನನಗಂತೂ ಈ ‘ವಿಕಲ ಚೇತನ’ ಪದ ಪ್ರಯೋಗ ತೀವ್ರ ಅಸಮಧಾನ ಮೂಡಿಸುತ್ತೆ. ನಾನೂ ಕೂಡ ಬಹಳ ಹಿಂದೆಯೇ ಈ ಪದವನ್ನು ಪ್ರಚುರಗೊಳಿಸಿದ ವಿ.ಕ ಕ್ಕೆ ಅಕ್ಶ್ಃಏಪಸ್ೂಚಿಸಿ ಬರೆದಿದ್ದೆ. ಅದಕ್ಕೆ ಉತ್ತರವೂ ಬರಲಿಲ್ಲ, ಸಮಜಾಯಿಶಿಯೂ ಸಿಗಲಿಲ್ಲ :(
ಅಂಗ ವಿಕಲರು ಯಾವತ್ತೂ ಚೇತನ ವಿಕಲರಲ್ಲ. ಎಲ್ಲವೂ ನೆಟ್ಟಗಿರುವ ಮನುಷ್ಯರ ಚೇತನ ಕೆಲವೊಮ್ಮೆ ವಿಕಲವಾಗುವುದುಂಟು. ಆದರೆ, ಅಂಥವರು ಅನುಕಂಪಕ್ಕೆ ಅ ರ್ಹರಲ್ಲ... ಅಲ್ಲವೆ?
ಒಳ್ಳೆಯ ಲೇಖನ.

- ಚೇತನಾ

Lakshmi Shashidhar Chaitanya said...

ಅಂತರ್ವಾಣಿ:
ಹಾಂ...ಹಾಗೇ ಮಾಡಬೇಕು.

ಪ್ರಕಾಶ್ ಅಂಕಲ್,

ನಿಜ. ಅಂಥವರಿಗೇ ಅಂಗವಿಕಲರು ಅನ್ನಬೇಕು.

ಹರೀಶ್,

ಈ ಹೆಸರಲ್ಲಿ ಏನಿದೆ ಅಂದರೆ, ನಿರ್ಲಕ್ಷ್ಯ ಮತ್ತು ನಿರ್ಭಾವುಕತೆ.ಸುಮ್ಮನೆ ಕೂತರೆ ಪ್ರಯೋಜನ ಇಲ್ಲ.ಈ ಕಡೆ ಜನ ಭಾವನೆಯಿಂದ ಲಕ್ಷ್ಯಹರಿಸುವ ಹಾಗೆ ಮಾಡಬೇಕು ನಾವು.

ತೇಜಸ್ವಿನಿ,

ನೀವು ಧನ್ಯವಾದ ಹೇಳಬೇಡಿ. ನಿಮ್ಮ ಮಾತನ್ನು ನಾನೂ ಒಪ್ಪುತ್ತೇನೆ.

ಪರಿಸರಪ್ರೇಮಿ,

ಥ್ಯಾಂಕ್ಸ್ ಗುರುಗಳೇ.

ವಿಕಾಸ್ ಹೆಗಡೆ,

ಹೌದು.

ವಿಜಯರಾಜ್ ಕನ್ನಂತ,

ಹಾಗಾ ? ಅನ್ಯಾಯ.

ಆದರೂ...ಆ ವ್ಯಾಖ್ಯಾನಕ್ಕೆ ಈ ಪದ ಸರಿ ಹೊಂದುತ್ತಿಲ್ಲ ಅಂತ ನನ್ನ ಅನಿಸಿಕೆ.

ಸಂದೀಪ್ ಕಾಮತ್,
:-)

ಭಾರ್ಗವಿ,

ನೀವಾದ್ರು ಯೋಚನೆ ಮಾಡಿ ದೃಷ್ಟಿ ಬದಲಾಯಿಸಿಕೊಂಡರೆ ನನಗಷ್ಟೇ ಸಾಕು. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
:-)

ಉನ್ಮುಖಿ,

ಅಲ್ವಾ ? ಅಡ್ಡ ಬಿದ್ದು, ಕಾಲ್ಕೊಟ್ಟು ಅವರನ್ನೂ ಬೀಳಿಸಿ, "ವಿಕಲಚೇತನರು" ಅಂತ ಕರಿಬೇಕು.

ದೋಸ್ತಿ,

ನಿಮ್ಮ ಅಭಿಪ್ರಾಯ ಮತ್ತು ಮೆಚ್ಚುಗೆಗೆ ಧನ್ಯವಾದ.

ಶಿವು ಸರ್,

ಥ್ಯಾಂಕ್ಸ್.

ನವೀನ್,

True.

ಚೇತನಾ,

ನಿಜ ಚೇತನಾ...ಅವರು ಅನುಕಂಪಕ್ಕೆ ಅರ್ಹರಲ್ಲ.

ವಿನುತ said...

ಲಕ್ಷ್ಮಿಯವರೆ,

ಈ ನಿಮ್ಮ ಅಂಕಣ ಓದಿ, ಬರೆಯಬಾರದೆಂದು (ಕವಿತೆಗಳನ್ನು ಹೊರತು ಪಡಿಸಿ) ನಿರ್ಧರಿಸಿದ್ದ ನಾನು ಪುನ: ಬರೆಯುವಂತಾಯಿತು. ಅದಕ್ಕಾಗಿ ನಿಮಗೆ ಧನ್ಯವಾದ ಹೇಳಬೇಕೋ ಅಥವಾ ನಿಮ್ಮ ಮೇಲೆ ಕೋಪ ಮಾಡ್ಕೋಬೇಕೊ ಗೊತ್ತಿಲ್ಲ! ನಿಮ್ಮ ಈ ಬರಹ ಓದಿ ನನ್ನಲ್ಲಿ ಮೂಡಿದ ನೆನಪುಗಳಿಗೆ, ಆಲೋಚನೆಗಳಿಗೆ ನಿಮ್ಮ ಈ 'Comments' section ಚಿಕ್ಕದು ಎನಿಸಿತು :) ನಿಮ್ಮ ಒಪ್ಪಿಗೆಯಿಲ್ಲದೆ ನಿಮ್ಮ ಈ ಬರಹದ ಕೊಂಡಿಯನ್ನು, ನನ್ನ ಬರಹದಲ್ಲಿ ಉಪಯೋಗಿಸಿದ್ದೇನೆ. ಕ್ಷಮೆಯಿರಲಿ.

PRAWiN Always wins said...

its common in everyones life...
aaa timenalli namage decission togo capacity iddre survive.. but the one who thinks - "whatever happens is for good" can emerge whererever he goes.. am the live example, as i attended BAMS selection interview but ended up with M.tech in computer science.. ha ha... any way nice article, remided our old "karmakanda" times.. :-)