Sunday, November 16, 2008

ಮನುಷ್ಯರು ಸತ್ತಾಗ ಮಾತ್ರ ಅಳಬೇಕೆ?

ನಾನು ಈ ಪ್ರಶ್ನೆ ಕೇಳಲು ಕಾರಣ ಇಷ್ಟೆ. ಬೆಂಗಳೂರು ಮೊದಲು ಮಹಾನಗರವಾಗಿತ್ತು. ಈಗ ಅದು "ಬೃಹತ್"ಬೆಂಗಳೂರಾಗಿದೆ. ರಸ್ತೆ ಅಗಲೀಕರಣ, ಪೋಲ್ ಸ್ಥಾಪನೆ, ಇವೇ ಮುಂತಾದ ಪಾಲಿಕೆ "ಮಹತ್ಕಾರ್ಯ"ಗಳಿಗೆ ಸಾವಿರಾರು ಮರಗಳು ಅಸುನೀಗಿವೆ. ಅದಕ್ಕೆ ನನ್ನ ವಿಷಾದವಿದೆ. ಆದರೆ, ಬೇಕಿಲ್ಲದ ಕಟ್ಟಡದ ವಿಸ್ತರಣೆಗೆ ಮರ ಕಡಿಯುವುದು ಸಾಧುವೇ ?

ನಮ್ಮ ಮನೆಯ ಹಿಂದೆ ದೇವಸ್ಥಾನವೊಂದಿದೆ. ಆ ದೇವಸ್ಥಾನದ ಸಮಿತಿಯವರು ದೇವಸ್ಥಾನದ ಎದುರುಗಡೆ ಪ್ರವಚನ ಮಂದಿರವೊಂದನ್ನು ಕಟ್ಟಿಸಿದರು. ಪ್ರವಚನಕ್ಕಾಗಿ ಮಾತ್ರ ಕೊಡುತ್ತೇವೆ ಎಂದು ಡಂಗುರ ಹೊಡೆಸಿದ ಅವರು, ಮುಂದೆ ಪ್ರವಚನಗಳಿಗೆ ಕಡಿಮೆ ಒತ್ತು ಕೊಟ್ಟು ಮದುವೆ ಮುಂಜಿ ಇತ್ಯಾದಿ ಸಮಾರಂಭಗಳಿಗೆ ಇದನ್ನು ಕೊಡಲಾರಂಭಿಸಿದರು. ದೇವಸ್ಥಾನದ ಆದಾಯ ಹೆಚ್ಚಿತು, ಮಂದಿರದ ಬೇದಿಕೆಯೂ ಹೆಚ್ಚಿತು. ಅದಕ್ಕಾಗಿ, ಈಗಿರುವ ಮಂದಿರದ ಮೇಲೆ ಮತ್ತೊಂದು ಚತ್ರವನ್ನು ಕಟ್ಟಿಸುವ ನಿರ್ಧಾರವನ್ನು ಈ ಸಮಿತಿ ಕೈಗೊಂಡಿತು. ಕಾಂಪೌಂಡನ್ನೂ ಬಿಡದೆ ಕಟ್ಟಿದ್ದ ಪ್ರವಚನ ಮಂದಿರದ ಪಕ್ಕದಲ್ಲಿ ಮರವೊಂದು ಬೆಳೆದಿತ್ತು.ಆ ಮರಕ್ಕೂ ಈ ಮಂದಿರಕ್ಕೂ ನಡುವೆ ಸ್ವಲ್ಪ ಜಾಗವಿತ್ತು. ಇವರು ಕಾಂಪೌಂಡನ್ನೂ ಬಿಡದೆ ಈ ಮಂದಿರವನ್ನು ಕಾಂಪೌಂಡಿಗೇ ಅಂಟಿಸಿ ಕಟ್ಟಿದ್ದಾರೆ. ಆ ಮರ ಬಹಳ ಸೊಂಪಾಗಿ ಬೆಳೆದಿತ್ತು. ಗಿಳಿಗಳಿಗೆ, ಪಾರಿವಾಳಗಳಿಗೆ ಆಶ್ರಯ ತಾಣವಾಗಿತ್ತು.



ಪ್ರತಿ ಸಾಯಂಕಾಲ ಒಂದೇ ಮರದಲ್ಲಿ ಕೆಲವು ಕಾಂಡ ಕತ್ತಲಲ್ಲಿ, ಮತ್ತೊಂದಿಷ್ಟು ಕಾಂಡಗಳು ಸೂರ್ಯನ ಬೆಳಕಿನಲ್ಲಿ ಮಿನುಗುತ್ತಿರುವ ದೃಶ್ಯವನ್ನು ನಾನು ವರ್ಷಾನುಗಟ್ಟಲೆ ನೋಡಿ ಆನಂದಿಸಿದ್ದೇನೆ.


ಈ ಮರದೊಂದಿಗೆ ನನ್ನ ಎಷ್ಟೋ ನೆನಪುಗಳು ಸೇರಿಕೊಂಡಿವೆ.ಪ್ರತಿ ಬೆಳಿಗ್ಗೆಯ ಮೊದಲ "ಗುಡ್ ಮಾರ್ನಿಂಗ್ " ಅನ್ನು ಈ ಮರವೇ ಹೇಳುತ್ತಿದ್ದ ಹಾಗೆನಿಸುತ್ತಿತ್ತು. ಸಾಯಂಕಾಲ ನಾನು ಕಿಟಕಿಯಿಂದ ಕತ್ತು ಹೊರಹಾಕಿದರೆ ಈ ಮರ ನನ್ನನ್ನು ನೋಡಿ ನಕ್ಕು, "ಹೇಗಿದ್ದೀಯಾ ? ಹೇಗಿತ್ತು ಇವತ್ತಿನ ದಿನ ?" ಅಂತ ಕೇಳುತ್ತಿದ್ದ ಹಾಗಾಗುತ್ತಿತ್ತು. ನಮ್ಮ ಮಧ್ಯ ಮೌನದ ಮಾತುಕತೆಗಳು ಗಂಟಾನುಗಟ್ಟಲೆ ನಡೆಯುತ್ತಿತ್ತು. ಈ ಮರ ಒಂದು ರೀತಿಯಲ್ಲಿ ನನ್ನ ಗೆಳತಿಯಾಗಿತ್ತು. ನವೆಂಬರ್ ಹದಿನಾಲ್ಕನೇ ತಾರೀಖು ಶುಕ್ರವಾರ ನಾನು ಮೈಸೂರಿಗೆ ಹೋದವಳು ನೆನ್ನೆ ರಾತ್ರಿ ಬಂದೆ. ಪ್ರಯಾಣದ ಆಯಾಸ, ಮಲಗಿಬಿಟ್ಟೆ. ಬೆಳಿಗ್ಗೆ ಎದ್ದೊಡನೆ ನನ್ನ ತಂಗಿ, " ಹಿಂದಿದ್ದ ಮರ ಕಡಿದಿದ್ದಾರೆ " ಎಂದಾಗ ಬಲಗಡೆ ಏಳುವ ಬದಲು ಹಾಗೇ ನೇರ ಮಂಚದಿಂದ ಕಿಟಕಿಯ ಬಳಿ ಎಗರಿದೆ. ಹೊಟ್ಟೆಯಲ್ಲಿ ಸಂಕಟ, ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಅದು ಹೇಗೆ ತಡೆದೆನೋ ನನಗೆ ಈಗಲೂ ನೆನಪಾಗುತ್ತಿಲ್ಲ. ನನ್ನ ಕಣ್ಣಿಗೆ ಬಿದ್ದ ದೃಶ್ಯಗಳು ಇವು.







ಎಷ್ಟರ ಮಟ್ಟಿಗೆ ನಿರ್ದಯರಾಗಬಲ್ಲರು ಜನ ? ತಮ್ಮ ಸ್ವಾರ್ಥಕ್ಕೆ ಮರವನ್ನೇ ಕಡಿದುಬಿಟ್ಟರಲ್ಲಾ...

ಮರವಿದ್ದಷ್ಟು ಸ್ಥಳವನ್ನು " ಬಾಲ್ಕನಿ" ಥರ ಬಿಟ್ಟಿದ್ದಿದ್ದರೆ, ಚತ್ರಕ್ಕೆ ವೈವಿಧ್ಯತೆಯೂ ಇರುತ್ತಿತ್ತು, ಅಲ್ಲಿ ಊಟವೂ ಹಾಕಬಹುದಿತ್ತು. ಉಪಯೋಗವೂ ಇತ್ತು, ಮರವೂ ಉಳಿಯುತ್ತಿತ್ತು. ಅಲ್ಲವೇ ?

ಸಾಯಂಕಾಲ ಹಾರಿಬರುತ್ತಿದ್ದ ಗಿಣಿಗಳು ಪಾಪ ಎಲ್ಲಿ ಹೋದವೋ...ಕಾಗೆಗಳು ಅದೆಷ್ಟು ಕೂಗಾಡಿ ತಮ್ಮ ಬೇಜಾರು ತೋಡಿಕೊಂಡವೋ...

ನಮ್ಮ ಎ. ಸಿ ಡಬ್ಬದ ಹಿಂದಿರುವ ಪಾರಿವಾಳಗಳೂ ಯಾಕೋ ಬೇಜಾರುಯುಕ್ತ "ಗುಟರ್ಗೂ" ಕೂಗುತ್ತಿವೆ. ನಾನೂ ಮೌನವಾಗಿ ಮಮ್ಮಲಮರುಗುತ್ತಿದ್ದೇನೆ. ಮನುಷ್ಯರು ಸತ್ತಾಗ ಮಾತ್ರ ಅಳಬೇಕೆ ? ಮರಗಳಿಗೂ ಜೀವ ಇದೆಯಲ್ಲವೇ ? ಮರಗಳನ್ನು ಕಡಿದರೂ ಅದನ್ನು ಸಾಯಿಸಿದ ಹಾಗಾಗಲಿಲ್ಲವೇ ? ದಯಮಾಡಿ ಈ ಪ್ರಶ್ನೆಗೆ ಉತ್ತರಿಸಿ.

22 comments:

Harisha - ಹರೀಶ said...

ಈಗೀಗ ಮನುಷ್ಯರು ಸತ್ತರೂ ಅಳುವವರು ಕಡಿಮೆ. ಎಲ್ಲರೂ ಜ್ಞಾನಿಗಳಾಗಿಬಿಟ್ಟಿದ್ದಾರೆ.

ಕಡಿದ ಮರದ ಬುಡದ ಚಿತ್ರ ನೋಡಿ ಅಯ್ಯೋ ಎನಿಸುತ್ತಿದೆ.

Anonymous said...

Hmmm.. :x :x :x

Harisha - ಹರೀಶ said...

ರಾಧಾ, ಸ್ವಲ್ಪ ಇಲ್ಲಿ ನೋಡ್ತೀರಾ? :D

Ittigecement said...

ತುಂಬಾ ಬೇಜಾರಾಗುತ್ತದೆ... ವಿನಾಶ ಕಾಲೆ..ವಿಪರೀತ ಬುದ್ಧಿ...
ಲೇಖನ ಚೆನ್ನಾಗಿದೆ..ಧನ್ಯವಾದಗಳು..

Anonymous said...

ಹರೀಶ್ , ನೀವು ಸ್ವಲ್ಪ http://www.orkut.co.in/FormattingTips.aspx ನೋಡ್ತೀರಾ??
Yahoo use ಮಾಡೋವ್ರು please confuse ಆಗ್ಬೇಡಿ.. :)

ಅಂತರ್ವಾಣಿ said...

:(
ಬೇಜಾರಾಗ್ತಾಯಿದೆ ಮಾ.

Harisha - ಹರೀಶ said...

ರಾಧಾ, ಆರ್ಕುಟ್ಟಿನಲ್ಲಿ ಬಳಸುವ [] - ಬಿಟ್ಟು ಹೋಗಿತ್ತಲ್ಲಾ?!

ಇರಲಿ, ಮರ ಕಡಿಯಲು ಕಾರಣರಾದವರನ್ನು ನೆನೆಸಿಕೊಂಡರೆ ನನಗೂ [:x] ಅನಿಸುತ್ತದೆ

ಚಂದ್ರಕಾಂತ ಎಸ್ said...

ಲಕ್ಷ್ಮಿ ನಿಮ್ಮ ದುಃಖ ಅರ್ಥವಾಗುತ್ತೆ. ಈ ಪ್ರಸಂಗದಲ್ಲಿ ಚತ್ರ ಕಟ್ಟಿದವರನ್ನು ಬಯ್ದು ಸುಮ್ಮನಾಗಬಹುದು. ಆದರೆ ನಾನು ಕೆಲಸ ಮಾಡುತ್ತಿರುವ ಕಾಲೇಜಿನಲ್ಲಿ ಮೊದಲಿದ್ದ ಶಾಲೆಯನ್ನು ಕೊಂಡ ಈಗಿನ ಆಡಳಿತ ಮಂಡಲಿಯವರು ಒಂದು ಕಡೆಯಿಂದ ಎಲ್ಲ ಮರಗಳನ್ನುಉ ಕತ್ತರಿಸಿದರು ಅದರಲ್ಲಿ ಒಂದು ಸೊಗಸಾದ ನಾಗಲಿಂಗ ಹೂವಿನ ಮರವೂ ಇತ್ತು. ಈಗ ಇಡೀ ಜಾಗ ಉಸಿರಾಡಲೂ ಸ್ಥಳವಿಲ್ಲದಂತೆ ಬರಿ ಕಟ್ಟಡದಿಂದ ಕೂಡಿದೆ.ಇಂತಹ ಜನರನ್ನು ನೋಡಿ ಏನನ್ನುವುದು.?ಯಾರನ್ನು ಬೈಯ್ಯುವುದು?

Srikanth - ಶ್ರೀಕಾಂತ said...

ನಿಮ್ಮ ಮನೆ ಹಿಂದೆ ಇದ್ದ ಮರವೊಂದರ ಕಥೆ ಹೇಳಿದ್ದೀರ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ನೆಲಮಂಗಲದಿಂದ ರಸ್ತೆ ಅಗಲಿಸುವ ನೆಪದಿಂದ ಸಹಸ್ರಾರು ಮರಗಳನ್ನು ಕಡೆಯುತ್ತಿದ್ದ ದೃಶ್ಯ ಆ ರಸ್ತೆಯಲ್ಲಿ ಆಗಾಗ ಪ್ರಯಾಣಿಸುತ್ತಿದ್ದ ನನಗೆ ನೋಡಲು ಹೇಗಿದ್ದಿರಬೇಕು ಹೇಳಿ.

ಆದರೆ, ಮನುಷ್ಯನಾದರೂ ಅಷ್ಟೇ, ಮರವಾದರೂ ಅಷ್ಟೇ - ಅತ್ತು ಪ್ರಯೋಜನವಿಲ್ಲ. ಹೋದ ಜೀವ, ರೂಪ ಮತ್ತು ನಮ್ಮ ಬಳಿಯಿರುವ ಸಮಯ ಹಿಂದಿರುಗಿ ಬರುವುದಿಲ್ಲ. ನಮ್ಮನ್ನೂ ಸೇರಿಸಿ ಎಲ್ಲ ಪ್ರಾಣಿಗಳ ಬದುಕು ಮರಗಳನ್ನು ಅವಲಂಬಿಸಿದೆ. ಹಾಗಾಗಿ, ಅವುಗಳನ್ನು ಕಡೆಯುವುದನ್ನು ತಪ್ಪಿಸುವ ಪರಿಯೇನು ಎಂದು ಯೋಚಿಸೋಣ, ಕೈಲಾದ್ದನ್ನು ಮಾಡೋಣ. ಅಳುವ ಸಮಯವನ್ನು ಈ ಕೆಲಸಕ್ಕೆ ವ್ಯಯಿಸಿದರೆ ಎಷ್ಟೋ ಒಳ್ಳೆಯದಾದೀತು.

Lakshmi Shashidhar Chaitanya said...

ಹರೀಶ್:

ಹಾಗಾ ? ಜ್ಞಾನಿಗಳಾದವರಿಗೆ ಸ್ವಾರ್ಥಕ್ಕಾಗಿ ಮರ ಕಡಿಯಬಾರದೆಂಬ "ಜ್ಞಾನ"ವೂ ಇರಬೇಕಲ್ಲವೇ ?

ರಾಧ:
ನನಗೂ X( X( X( X( ಅನ್ನಿಸಿತು.

ಇಟ್ಟಿಗೆ ಸಿಮೆಂಟ್:

ನಮಸ್ಕಾರ ಪ್ರಕಾಶ್ ಹೆಗಡೆ, ಬ್ಲಾಗ್ ಗೆ ಸ್ವಾಗತ. ನಿಜ...ವಿನಾಶಕಾಲೇ ವಿಪರೀತ ಬುದ್ಧಿ!

ಅಂತರ್ವಾಣಿ:

ನನಗೂ ಸಿಕ್ಕಾಪಟ್ಟೆ ಬೇಜಾರು ಆಗ್ತಿದೆ.

ಚಂದ್ರಕಾಂತ ಎಸ್:

ಮೇಡಮ್, ನಿಜ. ಶಾಲೆಯಲ್ಲಿ ಈಗೀಗ ಫೀಲ್ಡ್ ಗಳೇ ಇಲ್ಲ! ಬರೀ ಓದು.....ಕನ್ನಡಕ ಹಾಕ್ಕೋ,ಮೂಟೆ ಹೊರು ಬಾಗಿದ ಬೆನ್ನು ಪಡಿ ಅಷ್ಟೇ! ಆದರೂ, ಅವರು ಮರ ಕಡಿಯುವಾಗ ಯೋಚನೆ ಮಾಡದೇ ಇದ್ದರೂ, ಯಾರೂ ಅವರೊಂದಿಗೆ ಮಕ್ಕಳಿಗೆ ಬೇಕಾಗಿರುವ ಗಾಳಿ ಬೆಳ್ಕಿನ ಬಗ್ಗೆ ತಿಳಿಸದೇ, ಅವರನ್ನು ಯೋಚನೆಗೆ ಹತ್ತಿಸದಿರುವುದು ವಿಪರ್ಯಾಸ.

ಮೇಡಮ್, ನೀವು ಅಧ್ಯಾಪಕಿ ಎಂದು ಹೇಳಿದ್ದೀರಿ. ಯಾವ ಶಾಲೆ/ಕಾಲೇಜಿನಲ್ಲಿ ಎಂದು ಕೇಳಬಹುದೇ ? ಹಾಗೆ, ದಯಮಾಡಿ ನಿಮ್ಮ ಈಮೈಲ್ ವಿಳಾಸವನ್ನು ನೀಡಿ. ನನ್ನ ಈಮೈಲ್ ವಿಳಾಸ ನನ್ನ ಪ್ರೊಫೈಲ್ ನಲ್ಲಿ ಇದೆ.

ಶ್ರೀಕಾಂತ್:

ನನಗೆ ನೆಲಮಂಗಲದ ಮರಗಳನ್ನು ಕಡಿದ ಪ್ರಸಂಗ ನೆನಪಿದೆ. ಪರಿಸರ ದಿನಾಚರಣೆಯಂದೇ ಈ ಅಮಾನುಷ ಕ್ರಿಯೆ ನಡೆದಿದ್ದನ್ನು ತಾವು ಎಸ್.ಎಮ್.ಎಸ್ ಮಾಡಿದ್ದಿರಿ. ಇದರ ಬಗ್ಗೆ ನನಗೆ ತೀವ್ರ ಖೇದವಿದೆ.

ನಿಮ್ಮ ಮಾತನ್ನು ಒಪ್ಪುತ್ತೇನೆ. ನನ್ನ ಅನುಪಸ್ಥಿತಿಯಲ್ಲಿ ಈ ಪ್ರಸಂಗ ನಡೆದಿದ್ದು. ನಾನಿದ್ದಿದ್ದರೆ ಖಂಡಿತಾ ದೇವಸ್ಥಾನದ ಸಮಿತಿಯೊಂದಿಗೆ ಮರ ಕಡಿಯದಿರುವುದರ ಬಗ್ಗೆ ಮಾತಾಡುತ್ತಿದ್ದೆ. ನನ್ನ ಕೈಲಾದನ್ನು ಮಾಡುವಾ ಎಂದರೆ ಈಗ ಪರಿಸ್ಥಿತಿ ಕೈಮೀರಿ ಹೋಗಿದೆ! :( :(

Parisarapremi said...

ಮರವನ್ನು ಕಡಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲವಲ್ಲಾ ಎಂಬ ಅಸಹಾಯಕತೆಯ ಕಣ್ಣೀರೋ, ಮರವು ಸತ್ತು ಹೋಯಿತಲ್ಲಾ ಎಂಬ ದುಃಖದ ಕಣ್ಣೀರೋ??

Lakshmi Shashidhar Chaitanya said...

ಪರಿಸರಪ್ರೇಮಿ:

ಮರ ಸತ್ತು ಹೋಗಿದ್ದಕ್ಕೆ ಕಣ್ಣೀರು ಗುರುಗಳೇ..

ಚಂದ್ರಕಾಂತ ಎಸ್ said...

ಪ್ರೀತಿಯ ಲಕ್ಷ್ಮಿ
ಈಗಾಗಲೇ ನನಗೊಬ್ಬ ಒಳ್ಳೆ ಶಿಷ್ಯೆ ಸಿಕ್ಕಿದ್ದರೆ( ಬ್ಲಾಗ್ ಪ್ರಪಂಚದಲ್ಲಿ) ನೀವೂ ನನ್ನ ಶಿಷ್ಯೆಯಾಗುತ್ತೀನೆಂದರೆ ಇನ್ನೂ ಖುಷಿ.

ಈಗಿನ ತಾಯ್ತಂದೆಯರನ್ನು ನೋಡಿದರೆ ಬೇಜಾರಾಗುತ್ತೆ. ಮಕ್ಕಳಿಗೆ ಆಟ ಬೇಕೆಂದು ಅವರಿಗೆ ಅನ್ನಿಸುವುದೇ ಇಲ್ಲ.

ಈಗ ರಸ್ತೆಗಳಲ್ಲಿ ರಾಜಾರೋಷವಾಗಿ ಮರ ಕಡಿಯುತ್ತಾರೆ.ಮನೆಗಳವರೂ ಚಕಾರ ಎತ್ತುವುದಿಲ್ಲ. ಕೇಳೀದರೆ ಅಯ್ಯೋ ಕಸ ಕಡಿಮೆ ಆಯಿತು ಎನ್ನುತ್ತಾರೆ. ಣಮ್ಮ ಮನೆಯ ಮುಂದಿರುವ ಹೊಂಗೆಮರದ ಬಗ್ಗೆ ಸುತ್ತಮುತ್ತಲಿನವರಿಗೆ ಅಸಮಾಧಾನವಿದೆ. ಎಲೆ ಅವರ ಮನೆ ಮುಂದೆ ಬೀಳುತ್ತದೆಂದು ! ಇಂತಹವರನ್ನು ಹೇಗೆ educate ಮಾಡುವುದು ?
ನಿಮ್ಮ email ಗೆ mail ಮಾಡುವೆ

ವಿ.ರಾ.ಹೆ. said...

:( :(

Lakshmi Shashidhar Chaitanya said...

@ಚಂದ್ರಕಾಂತ ಮೇಡಮ್,

ಅವರು ಕಸ ಕಡಿಮೆಯಾಯ್ತು ಅಂತ ಹೇಳಿದರು.. ಕಾಲ ಕ್ರಮೇಣ ಬಿಸಿ ಗಾಳಿ ಜಾಸ್ತಿಯಾಯ್ತು, ನೆರಳು ಕಡೀಮೆಯಾಯ್ತು ಅಂತ ಹೇಳಿರಲ್ಲ, ಯಾಕಂದ್ರೆ ಅವರಿಗೆ ಅಳುಕಿರತ್ತೆ...ಆಗ ಅವರಿಗೆ ಆದ ನಷ್ಟದ ಅನುಭವ ಆಗುತ್ತದೆ. ಅನುಭವಕ್ಕಿಂತ ದೊಡ್ಡ ಗುರು ಬೇಕೆ ?

ತೇಜಸ್ವಿನಿ ಹೆಗಡೆ said...

ಲಕ್ಷ್ಮೀ ಅವರೆ,

ಅದಕ್ಕೇ ತಾನೆ ದಾಸರು ಹೇಳಿರುವುದು "ನೀನಾರಿಗಾದೆಯೋ ಎಲೆ ಮಾನವ?" ಎಂದು.... ಮನುಷ್ಯ ಮನುಷ್ಯನಿಗೆ ಆಗದವ.. ಇನ್ನು ಮರ,ಗಿಡ ಪ್ರಾಣಿ ಪಕ್ಷಿಗಳ ಕುರಿತು ಯೋಚಿಸಿ ಅವನಿಗೇನು ಆಗಬೇಕಿದೆ?! :( ನಿಜವಾಗಿಯೂ ತುಂಬಾ ನೋವಾಗುತ್ತದೆ ಇಂತಹ ವಿಷಯಗಳನ್ನು ನೋಡಿದಾಗ. ನಾನೂ ಈ ಕುರಿತು ಲೇಖನವನ್ನು ಬರೆದಿದ್ದೆ. ಕೆಳಗೆ ಲಿಂಕ್ ಇದೆ ನೋಡಿ. ಇಲ್ಲಿ ನೀವು ನೂರಾರು ಮರಗಳ ಮೌನ ರೋದನ, ವ್ಯಥೆಗಳನ್ನು ಕಾಣಬಹುದು. ಅಸಹಾಯಕತೆಯ ಭಾವದೊಂದಿಗೆ ಸಿಟ್ಟೂ ಬರುವುದು ಅಲ್ಲವೇ?

ಇಂತಹ ಲೇಖನಗಳು ಮತ್ತಷ್ಟು ಬರಲಿ.

http://manasa-hegde.blogspot.com/search/label/%E0%B2%B2%E0%B3%87%E0%B2%96%E0%B2%A8

ಭಾರ್ಗವಿ said...

ಎಲ್ಲಾಕಡೆ ಮರಗಳನ್ನು ಕಡೀತಿರೋದು ಕೇಳಿದ್ರೆ ಬೇಜಾರಾಗುತ್ತೆ. ನಿಮ್ಮ ಮನೆ ಹತ್ರ ಇದ್ದ ಮರದ ಫೋಟೋ ನೋಡಿದ್ರೆ,,, ಛೆ ಎಷ್ಟು ದೊಡ್ಡದು.ಬೇಜಾರಾಗುತ್ತೆ ಅಂತ ಹೇಳಿ ಹೇಳಿ ನಿಮಗೆ ಇನ್ನೂ ಹೆಚ್ಚು ಬೇಜಾರು ಮಾಡ್ತೀವಿ ಅನಿಸುತ್ತೆ.

Anonymous said...

thanx for supporting

Anonymous said...

:( ಹೀಗೆ ಲಂಗು-ಲಗಾಮಿಲ್ಲದೆ ಮರ ಕಡಿಯೋದು... ಆಮೇಲೆ ಅದ್ರ ಫಲ ಅನುಭವಿಸೋದೂ ನಾವೇ. ನಮ್ಮ ವಾತಾವರಣದ ವೈಪರೀತ್ಯಗಳ ಕಾರಣ ನಮ್ಮ ಮರೆಯಾಗುತ್ತಿರುವ ಪರಿಸರ ಪ್ರೇಮ... ಹಳ್ಳಿಗಳಲ್ಲಿ ನಾಗನ ಬನದಲ್ಲಿ ಮರ ಕಡೀಬರ್ದು ಅಂತಾ ಇರೋ ನಂಬಿಕೆ, ಅಶ್ವತ್ಥ ವೃಕ್ಷಕ್ಕೆ ಪವಿತ್ರ ಸ್ಥಾನ ಕೊಟ್ಟಿದ್ದ ಹಿಂದಿನವರ ಪರಿಸರ ಪ್ರೇಮ ಈಗ ಅಭಿವೃದ್ಧಿಯ ಹೆಸರಲ್ಲಿ ಎಲ್ಲೋ ಓಡಿಹೋಗಿಬಿಟ್ಟಿದೆ

Anonymous said...

ಕುಂದಾಪುರದಲ್ಲೂ ಇಂಥ ಘಟನೆಯೊಂದು ನಡೆದಿತ್ತು. ಶಾಸ್ತ್ರಿ ಪಾರ್ಕ್ ಬಸ್ ಸ್ಟಾಂಡ್ ನಲ್ಲಿ ಇದ್ದ ಹಳೆಯ ಮರ. ನಾನು ಹುಟ್ಟುವ ಮೊದಲು ಎಷ್ಟು ವರ್ಷದಿಂದಿತ್ತೋ ಗೊತ್ತಿಲ್ಲ. ರಸ್ತೆ ಅಗಲೀಕರಣದ ರಾಕ್ಷಸ ಅದನ್ನು ಬಲಿ ತೆಗೆದುಕೊಂಡಿತ್ತು.

ಈಗಲೂ ಅತ್ತ ಸುಳಿದಾಡಿದರೆ ಅಪ್ಪನೊಡನೆ ಅದರ ನೆರಳಲ್ಲಿ ಬಸ್ ಕಾಯುತ್ತಿದ್ದ ನೆನಪಾಗುತ್ತದೆ...:(:(

Anonymous said...

Manushyaru sathaaga aLoru A sandarbadalli mAthra...

Adre mara sathhaga aLu barodu parisara premigaLige mathu parisarada bagge kALaji irorge maathra.

Adre nannna aLu,Besara prathisari A mara saThuhOda jaaga nOdidaga mathu A maravanna kadidu saysidorbagge bAri kEdhavide.

PaLa said...

ಎಲ್ಲವೂ ನಮಗಾಗಿ! ಮಾನವ ಜನ್ಮ ದೊಡ್ಡದು, ಆತ್ಮ ರಹಿತ ಇನ್ನಿತರ ಕ್ಷುದ್ರ ಜೀವಿಗಳ ಕೊನೆಗಾಣಿಸುದು ನಮ್ಮ ಕರ್ತವ್ಯ. ಬಿಡುವುಮಾಡಿಕೊಂಡು ನನ್ನ ತಾಣಕ್ಕೆ ಬಂದು ಈ ಬರಹ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ
http://palachandra.blogspot.com/2008/12/blog-post_12.html

--
ಪಾಲ