Friday, July 11, 2008

ಸಂಡೇ..ಮಂಡೇ....

ನಮ್ಮಮ್ಮ ಸಂಗೀತ ಪ್ರಾಧ್ಯಾಪಕಿ. ಮನೆಯಲ್ಲಿ ಪುಟ್ಟ ಪುಟ್ಟ ಮಕ್ಕಳು ದಿನಾ ಬರುತ್ತಾರೆ ಪಾಠ ಹೇಳಿಸಿಕೊಳ್ಳೋಕೆ. ಭಜನೆ, ಶ್ಲೋಕ, ಇತ್ಯಾದಿಗಳ ಪಾಠಗಳೂ ನಡೆಯುತ್ತವೆ. ನಾನವಾಗ ಸುಮ್ಮನೇ ರೂಮಲ್ಲಿದ್ದು, ಅವೆಲ್ಲವನ್ನ ಕೇಳಿಸಿಕೊಳ್ಳುತ್ತಾ ಅವರ ಮುದ್ದು ಮುದ್ದು ಮಾತುಗಳ ಮಜಾ ತೆಗೆದುಕೊಳ್ಳುತ್ತಾ ಸಾಯಂಕಾಲದ ಕಾಫಿ ಸವಿಯುತ್ತಿರುತ್ತೇನೆ.

ಮೊನ್ನೆ ಒಂದು ಘಟನೆ ನಡೆಯಿತು. ಅದು ಮೇಲ್ನೋಟಕ್ಕೆ ಹಾಸ್ಯಾಸ್ಪದ ಅನ್ನಿಸಿದರೂ ಸ್ವಲ್ಪ ಗಮನ ಹರಿಸಿದರೆ ಅದು ನಮ್ಮ ಭಾಷೆಯ ಅವನತಿಯನ್ನು ಎತ್ತಿ ತೋರಿಸುತ್ತದೆ.

ನಮ್ಮಮ್ಮ ಪಾಠ ಮುಗಿಸಿದಮೇಲೆ, ಮಗುವೊಂದಕ್ಕೆ " ನಿನ್ನ ಮುಂದಿನ ಪಾಠ ಗುರುವಾರ ಇದೆ " ಅಂದರು. ಮಗು ಹೊರಗೆ ಹೋಗುತ್ತಾ ಅದರ ಸ್ನೇಹಿತೆಯನ್ನ ಕೇಳಿತು..."hey, which day is ಗುರುವಾರ ? " ಅದಕ್ಕೆ ಆ ಇನ್ನೊಂದು ಮಗು " well.I think its Wednesday. I am not sure, lets ask our moms ! "

ನನ್ನ ಕಿವಿಗೆ ಇದು ಬಿತ್ತು. ಆಗ ನಗು ಬಂತು. ಆದರೆ ಮರುಕ್ಷಣವೇ ಅನ್ನಿಸಿತು...."ಅರೆ ! ವಾರಗಳನ್ನು ಆಂಗ್ಲದಲ್ಲೇ ಹೇಳಬೇಕಾಗಿರುವಷ್ಟು ಅನಿವಾರ್ಯವಾಗಿಹೋಯ್ತಾ ಆಂಗ್ಲ ? " ಅಮ್ಮಂದಿರೂ ಅದನ್ನ ಆಂಗ್ಲದಲ್ಲೇ ಹೇಳಿಕೊಟ್ಟು ಕನ್ನಡವನ್ನು ಕಡೆಗಾಣಿಸಿದ್ದಾರೆಯೇ ? ದ್ವಿಭಾಷಾ ದಿನಸೂಚಿಗಳು ಮೂಲೆಗುಂಪಾಗಿ ಹೋಗಿವೆಯೇ ?

ಅಕ್ಕರೆಯ "ತಿಂಡಿ ತಿನ್ನು ಕಂದಾ " ಈಗ " have your breakfast ! quick !" ಆಗಿದೆ. " ಭಾನುವಾರ ಹೊರಗಡೆ ಹೋಗೋಣ" ಎಂಬ ಭರವಸೆ ಈಗ " lets see if we can go out this weekend" ...ಅಬ್ಬಾ !!

ರೂಮು, ಹಾಲು, ಪೆನ್ನು, ಪೆನ್ಸಿಲ್ಲು, ಬಸ್ಸು, ರೈಲು, ಬಸ್ ಸ್ಟಾಪು, ಕುಕ್ಕರ್ರು, ಗೇಟು , ಇವೆಲ್ಲ ಕನ್ನಡದಲ್ಲಿ ಈಗ ಮಿಳಿತವಾಗಿ ಹೋಗಿದೆ ಬಿಡಿ. ಆದರೆ ಭಾನುವಾರ ಸೋಮವಾರಗಳು ಸಂಡೆ ಮಂಡೆಯಾಗಿ ಹೋಗಿದ್ದು ತೀರ ಹೊಸತು ನನಗೆ.

ಇದೊಂದು ಸಣ್ಣ ಉದಾಹರಣೆ ಅಷ್ಟೇ. ಕನ್ನಡ ಎಂಥಾ ಪರಿಸ್ಥಿತಿಯಲ್ಲಿದೆ ಈಗ ಅನ್ನೋದನ್ನ ನಾನು ಹೆಚ್ಚು ವಿವರಿಸುವ ಅವಶ್ಯಕತೆ
ಇಲ್ಲ. ದಿನಪತ್ರಿಕೆಗಳು ಆ ಕೆಲಸವನ್ನು ಮಾಡುತ್ತಲೇ ಬಂದಿವೆ.

ಶಾಲೆಗಳು ಮಕ್ಕಳಿಗೆ ಭಾನುವಾರ ಸೋಮವಾರ ವನ್ನೂ ಕಲಿಸದಷ್ಟು ಆಂಗ್ಲೀಕರಣ ಗೊಂಡಿದೆವೆಯೇ ? ಮೊದಲು ಏ ಬೀ ಸೀ ಡಿ ಯನ್ನೇ ಹೇಳಿಕೊಡಲಿ....ಏನಾದರೂ ಮಾಡಿಕೊಳ್ಳಲಿ. ಆದರೆ ಕನ್ನಡವನ್ನ ಹೇಳಿಕೊಡದಿದ್ದರೆ, ಅದು ತೀರ ತಪ್ಪು. ವಿಪರ್ಯಾಸ ಅಂದರೆ, ಐದನೇ ತರಗತಿಯ ಮಕ್ಕಳಿಗೂ ಅ ಆ ಇ ಈ ಬರೋದಿಲ್ಲ. ಸ ರಿ ಗ ಮ ಪ ದ ನಿ ಸ ಗಳನ್ನ ಆಂಗ್ಲದಲ್ಲಿ ಬರೆದುಕೊಂಡು ಹೋಗುತ್ತವೆ ಮಕ್ಕಳು ನಮ್ಮ ಮನೆಯಲ್ಲಿ ! ಏನನ್ನೋಣ ಇದಕ್ಕೆ ?

ನಾನು ಓದಿದ್ದೂ ಆಂಗ್ಲ ಮಾಧ್ಯಮದ ಕಾನ್ವೆಂಟ್ ಒಂದರಲ್ಲಿಯೇ. ಆದರೆ ನಮ್ಮ ಶಾಲೆಯಲ್ಲಿ ಕನ್ನಡವನ್ನು ಖಂಡಿತಾ ಕಡೆಗಾಣಿಸಿರಲಿಲ್ಲ. ಕನ್ನಡದಲ್ಲಿ ಅಂಕ ಕಡಿಮೆಯಾದರೆ ಗಣಿತದಲ್ಲಿ ಅಂಕ ಕಡಿಮೆಯಾಗಿದ್ದಕ್ಕಿಂತ ಹೆಚ್ಚು ಬೈಗುಳ ದೊರೆಯುತ್ತಿದ್ದವು ಹೆಡ್ ಮೇಡಮ್ ಇಂದ ! ಹೆಡ್ ಮೇಡಮ್ ಕನ್ನಡ ಪ್ರಾಧ್ಯಾಪಕಿ ಇರಬಹುದೆಂದು ನೀವು ಊಹಿಸಿದ್ದರೆ ಅದು ತಪ್ಪು ! :-)

ಈಗ ಕನ್ನಡವನ್ನ ಶಿಕ್ಷಣದಲ್ಲಿ ಪ್ರಾಥಮಿಕ ಭಾಷೆಯನ್ನಾಗಿ ಮಾಡಬೇಕೋ ಬೇಡವೋ ಅನ್ನೋದೇ ಪಾಪ ನಮ್ಮ ರಾಜಕೀಯ ಧುರೀಣರಿಗೆ ತಲೆನೋವು ತರಿಸಿದೆ. ನಾನು ಹೇಳುವುದು ಇಷ್ಟೆ- ಕನ್ನಡವನ್ನ ಪ್ರಥಮ ಭಾಷೆ ಮಾಡಲಿ. ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಆಂಗ್ಲವನ್ನು ಕಲಿಸಲಿ. ಆಂಗ್ಲ ಬೇಡವೇ ಬೇಡವೆಂದು ಭಾಷೆಯೊಂದರ ಕಲಿಕೆ ರದ್ದು ಮಾಡುವುದು ಮೂರ್ಖತನ. ಆದರೆ ಕನ್ನಡವನ್ನು ದ್ವಿತೀಯ / ತೃತೀಯ ಭಾಷೆಯಾಗಿ ತೆಗ್ಗೆದುಕೊಳ್ಳಬಿಡಕೂಡದು.

ನನಗೆ ಬೇಜಾರು ತಂದ ಸಂಗತಿ ಅಂದರೆ ಇದೊಂದೆ. ನಮ್ಮ ಕರ್ನಾಟಕದ ಜನತೆಗೆ ಅವಶ್ಯಕತೆಯಾವುದು, ಅನಿವಾರ್ಯ ಯಾವುದು ಅನ್ನೋದನ್ನು ಗುರುತಿಸಲು ಬರುವುದಿಲ್ಲವೇ ? ಅವೆರಡರ ಮಧ್ಯ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಕಂಡುಕೊಳ್ಳಲಾಗುವುದೇ ಇಲ್ಲವೇ ? ಕನ್ನಡ ಅನಿವಾರ್ಯ. ಆಂಗ್ಲ ಅವಶ್ಯಕ ಅಷ್ಟೆ. ಅಲ್ಲವೇ ?

ಸದ್ಯಕ್ಕೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡಿ ಪ್ರಯೋಜನ ಇಲ್ಲ. ಅದು ದೊಡ್ದ ಪ್ರಮಾಣದಲ್ಲಿ ಆಗಬೇಕಾದ ಕ್ರಾಂತಿ. ಈಗ ನಾವು ಏನು ಮಾಡಬಹುದು ಅನ್ನೋದನ್ನ ಮೊದಲು ಯೋಚನೆ ಮಾಡೋಣ.

ಮಕ್ಕಳಿಗೆ ನಾವು ಕನ್ನಡ ನ ಪಾಠದ ತರಹ ಮಾಡಿದರೆ ಅವು ಅದನ್ನ "ಪಾಠ" ಅಂತ ನೇ ತೆಗೆದುಕೊಂಡು ಅದನ್ನು ಕಡೆಗಾಣಿಸುವ ಪ್ರಸಂಗಗಳೇ ಹೆಚ್ಚು. ಆದ್ದರಿಂದ ಅವರಿಗೆ ಅದನ್ನು ಆಟದ ತರಹ ಹೇಳಿಕೊಡಬೇಕಾಗತ್ತೆ. ನಮ್ಮಮ್ಮ ಮಾಡಿದ್ದೂ ಅದನ್ನೇ.

ಬಾಲವಾಡಿ ಗೀತೆಗಳ ಮೂಲಕ ಈಗ ಅಮ್ಮ ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುತ್ತಿದ್ದಾರೆ. ಮನೆಯಲ್ಲಿ ಕನ್ನಡ ಮಿಶ್ರಿತ ಆಂಗ್ಲ ಮಾತಾಡುವ ಇಂಥವರಿಗೆ ಅಚ್ಚಕನ್ನಡವನ್ನು ಹೇಳಿಕೊಡಬೇಕಾಗಿದೆ. "ಮೊದಲನೆ ದಿನವೇ ಆದಿತ್ಯವಾರ, ಎಲ್ಲ ದೇವರಿಗೆ ನಮಸ್ಕಾರ" ಅಂತ ಒಂದು ಬಾಲವಾಡಿ ಗೀತೆಯಿದೆ. ಅದನ್ನ ದಿನಾಗಲೂ ಹೇಳಿಸಿ ಹೇಳಿಸಿ ಈಗ ಅಮ್ಮ ಸಂಡೇ ಮಂಡೆಯನ್ನ ಕಡಿಮೆ ಮಾಡುವುದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ಐದನೇ ತರಗತಿಯ ಮಕ್ಕಳು ಈಗ ಅ ಆ ಇ ಈ ಕಲಿಯಲು ಆರಂಭಿಸಿದ್ದಾರೆ. ಅಮ್ಮ ಆಂಗ್ಲದಲ್ಲಿ ಪಿಳ್ಳಾರಿ ಗೀತೆಗಳನ್ನು ಬರೆದುಕೊಡುವುದಿಲ್ಲ ಎಂದು ಸಾರಸಗಟಾಗಿ ನಿರಾಕರಿಸಿದ್ದಾರೆಯಾದ್ದರಿಂದ. ಕನ್ನಡೇತರರು ತಮ್ಮ ತಮ್ಮ ಭಾಷೆಯಲ್ಲಿ ಬರೆದುಕೊಂಡು ಹೋಗುತ್ತಾರಾದರೂ, ಅವರೂ ಈಗ ಕನ್ನಡ ಕಲಿಯುವ ಇಚ್ಛೆ ತೋರಿಸುತ್ತಿದ್ದಾರೆ.

ಹೊರನಾಡ ಜನರಿಗೆ ಕನ್ನಡ ಕಲಿಸುವ ಮಾಹಾನ್ ಪುಣ್ಯಕಾರ್ಯ ಅನಂತರದಲ್ಲಿರಲಿ...ಮೊದಲು ಇಲ್ಲಿನ ಕನ್ನಡಿಗರೇ ಕನ್ನಡ ಕಲಿಯಬೇಕಿದೆ.

ಕನ್ನಡವನ್ನು ಕಲಿಯದೇ ಹಾಗೆಯೇ ಇರುವಷ್ಟರ ಮಟ್ಟಿಗೆ ನಾವು ಕನ್ನಡವನ್ನು ಕಡೆಗಾಣಿಸಿದ್ದೇವಲ್ಲಾ ...ನಾವೇಕೆ ಹೀಗೆ ?

9 comments:

Unknown said...

Another good writeup lakshmi, 100% correct but english nalli mathodoke barallila andre janaru nammana kadeganisuthare, thappu english mathodokintha correctagi kannada mathadabahudalwa!

ಅಂತರ್ವಾಣಿ said...

ಮತ್ತೊಂದು ಅದ್ಭುತ ಲೇಖನ! :)
ನಾವು ಕನ್ನಡವನ್ನು ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ಕಲಿಸ ಬೇಕು. ಪೋಷಕರು ಆಂಗ್ಲ ಮಾತಾಡಿದರೆ.. ಮಕ್ಕಳು ಅವರನ್ನೇ ಪಾಲಿಸುತ್ತಾರೆ. ಅದು ಮೊದಲಿಗೆ ನಿಲ್ಲಬೇಕು.

ದೇಓಮಾ.

Sridhar Raju said...

ಕನ್ನಡ ಅನಿವಾರ್ಯ. ಆಂಗ್ಲ ಅವಶ್ಯಕ ಅಷ್ಟೆ. ಅಲ್ಲವೇ ?
cent percent correct....

sadhyada paristhithi hegide andre..
"aangla anivaarya..kannada ashtakkashTe.."

ondu samasye na yetti torsi adakke oLLe parihaara needuva lekhana....goodh ;-)
first mane inda shuru aagbeku....hmm..
"kannadave nammamma avaLige kaimugiyamma...." :-)

Jai karnataka...

ವಿ.ರಾ.ಹೆ. said...
This comment has been removed by the author.
Jagali bhaagavata said...

ಕನ್ನಡದ ಕುರಿತಾದ ಕಾಳಜಿ ಮೆಚ್ಚತಕ್ಕದ್ದು. ಕನ್ನಡ ಅನಿವಾರ್ಯವಾಗಿಲ್ಲದ ಸ್ಥಿತಿ ತಲುಪಿರುವುದರಿಂದಲೇ ಬಹುಶಃ ನಾವು ಈ ಸ್ಥಿತಿಯನ್ನು ತಲುಪಿದ್ದೇವೆ. ಕನ್ನಡ ಕೇವಲ ಅಭಿಮಾನದ ಸಂಕೇತವಾಗಿ ಉಳಿದರೆ ಅದರ ಬಳಕೆಯೂ ಕಡಿಮೆಯಾಗುತ್ತದೆ. ಕನ್ನಡ ಅನ್ನಕ್ಕೆ ಮೂಲವಾಗಬೇಕು, ಬದುಕು ಕಟ್ಟಿಕೊಡಬಲ್ಲ ಸಶಕ್ತ ಭಾಷಾ ಮಾಧ್ಯಮವಾಗಬೇಕು. ಎಲ್ಲ ಸ್ತರಗಳಲ್ಲೂ - ಆಡಳಿತ, ವಿಜ್ಞಾನ, ಕಲಿಕೆ, ಕ್ರೀಡೆ, ಮನರಂಜನೆ - ಹೀಗೆ ಎಲ್ಲದರಲ್ಲೂ ಕನ್ನಡ ಬೆಳೆಯುತ್ತ ಹೋಗಬೇಕು/ಬೆಳೆಸಬೇಕು. ಅದು ಆಗಬೇಕಿರುವುದು ನಮ್ಮಿಂದ. ಸದ್ಯದ ಪರಿಸ್ಥಿತಿಯಲ್ಲಿ ಕನ್ನಡ ಕೇವಲ ಸಾಂಸ್ಕೃತಿಕ/ಸಾಹಿತ್ಯಿಕ ವಲಯದಲ್ಲಷ್ಟೇ ಹೆಚ್ಚಾಗಿ ಬಳಕೆಯಾಗುತ್ತಿರುವುದು.

"----ಆಂಗ್ಲ ಬೇಡವೇ ಬೇಡವೆಂದು ಭಾಷೆಯೊಂದರ ಕಲಿಕೆ ರದ್ದು ಮಾಡುವುದು ಮೂರ್ಖತನ.-----"

ವಿಕಾಸ್ ಮೇಲೆ ಹೇಳಿದ್ದು ಸರಿಯಾಗಿದೆ. ಬಹುಶಃ ಇದು ಈ ಕಿರುಲೇಖನದ ಪರಿಧಿಯನ್ನು ಮೀರಿದ, ತನ್ನದೇ ವೇದಿಕೆಯನ್ನು ಬೇಡುವ ಚರ್ಚಾ ವಿಚಾರ. ಈಗ ಶಿಕ್ಷಣ ಭಾಷಾನೀತಿಯ ಕುರಿತು ಒಂದೆರಡು ಗೊಂದಲಗಳಿವೆ.
೧) ಪ್ರಾಥಮಿಕ ಶಿಕ್ಷಣದ ಮಾಧ್ಯಮ ಯಾವ ಭಾಷೆಯಲ್ಲಿರಬೇಕು?
೨) ಪ್ರಾಥಮಿಕ ಶಿಕ್ಷಣ ಮಾಧ್ಯಮ ಕನ್ನಡದಲ್ಲಾದರೆ, ಇಂಗ್ಲೀಷನ್ನು ಯಾವ ತರಗತಿಯಿಂದ ಬೋಧಿಸಬೇಕು. ಕೆಲವರು (ಬರಗೂರು ರಾಮಚಂದ್ರಪ್ಪ ಸಮಿತಿ?) ಇದನ್ನು ಒಂದನೇ ತರಗತಿಯಿಂದ ಬೋಧಿಸಬೇಕೆಂದರೆ, ಇನ್ನೊಂದಿಷ್ಟು ಜನ ೫ನೇ ತರಗತಿಯಿಂದ ಬೋಧಿಸಬೇಕೆನ್ನುತ್ತಾರೆ.

ವಿ.ರಾ.ಹೆ. said...

----ಆಂಗ್ಲ ಬೇಡವೇ ಬೇಡವೆಂದು ಭಾಷೆಯೊಂದರ ಕಲಿಕೆ ರದ್ದು ಮಾಡುವುದು ಮೂರ್ಖತನ.-----

ನಿಮ್ಮ ಮಾಹಿತಿಗಾಗಿ.. ಇಂಗ್ಲೀಷ್ ಕಲಿಯುವುದನ್ನು ರದ್ದು ಮಾಡುವ ಯಾವ ಯೋಜನೆಯೂ ಇಲ್ಲ. ೧ - ೫ ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಯಲಿ ಎಂದು ಇರುವುದು. ಇಂಗ್ಲೀಷ್ ಕಲಿಕೆ ಒಂದು ಭಾಷೆಯಾಗಿ ಇದ್ದೇ ಇರುತ್ತದೆ.


ಕನ್ನಡ ಅನಿವಾರ್ಯ, ಇಂಗ್ಲೀಷ್ ಅವಶ್ಯಕ ಎಂಬ ಸ್ಥಿತಿಯನ್ನು ನಾವು ತಂದಿಡುವಲ್ಲಿ ಸೋತಿದ್ದೇವೆ. ಇಂಗ್ಲಿಷೊಂದು ಗೊತ್ತಿದ್ದರೆ ಸಾಕು ಎನ್ನುವ ವಿಚಿತ್ರ ಮನಸ್ಥಿತಿ ! ಮಕ್ಕಳು ಹಾಗಾಗುವುದಕ್ಕೆ ಮುಖ್ಯ ಕಾರಣವೇ ಅವರ ಅಪ್ಪ ಅಮ್ಮಂದಿರು. ಒಮ್ಮೆ ಬನ್ನೇರುಘಟ್ಟದಲ್ಲಿ ಸಫಾರಿ ಹೋದಾಗ ನನ್ನ ಪಕ್ಕದಲ್ಲಿ ಕೂತ ಕನ್ನಡತಿ ಅಮ್ಮ ಒಬ್ಬಳು ತನ್ನ ಮಗುವಿಗೆ ಜಿಂಕೆ ತೋರಿಸುತ್ತಾ " ಅಲ್ನೋಡು ಪುಟ್ಟ, deerಗೆ horns ಎಷ್ಟು branches branches ಆಗಿರತ್ತೆ" ಅನ್ನುತ್ತಿದ್ದಳು. !!

Lakshmi Shashidhar Chaitanya said...

@ವಿಕಾಸ್ ಹೆಗಡೆ :

ನಿಮ್ಮ ಕಮೆಂಟಿಗೆ ಸ್ಪಷ್ಟೀಕರಣ ಕೊಡಲು ಬಂದೆ...ಕಮೆಂಟೇ ಮಾಯ ! ಕಮೆಂಟನ್ನು ಡಿಲೀಟ್ ಮಾಡಿದಿರೇಕೆ ? ಸದ್ಯ ಮತ್ತೆ ಹಾಕಿದ್ದೀರಲ್ಲ...

ಮಾಹಿತಿ ನೀಡಿದ್ದಕ್ಕೆ ಧನ್ಯವಾದ. ನಾನು ಈ ವಾಕ್ಯವನ್ನು ತಪ್ಪು ನಿರ್ಧಾರಗಳ ಪರಾಕಾಷ್ಟತೆಯನ್ನು ಬಿಂಬಿಸಲು ಬಳಸಿದ್ದೇನೆ ಅಷ್ಟೆ. ಪರಿಸ್ಥಿತಿ ಹೀಗಿಲ್ಲವೆಂಬುದು ನನಗೂ ತಿಳಿದಿದೆ. ಕನ್ನಡವನ್ನು ಕಡ್ದಾಯ ಗೊಳಿಸಿ ಕಟ್ಟು ನಿಟ್ಟಿನ ಕಾನೂನನ್ನು ಮಾಡುವ ತರಾತುರಿಯಲ್ಲಿ ಕೆಲವೊಮ್ಮೆ ಈ ತರಹದ ನಿರ್ಣಯಗಳು ಬಂದರೆ ಕಷ್ಟ ಎಂದು ಅಭಿಪ್ರಾಯ ಪಟ್ಟಿದ್ದೇನೆ. ಕನ್ನಡ ಕಡ್ದಾಯಗೊಳಿಸಲು ತರಾತುರಿ, ಆಸಕ್ತಿ ಇರಲಿ ಎಂದು ಸರ್ಕಾರದ ಗಾದಿ ಏರಿರುವವರಲ್ಲಿ ಪ್ರಾರ್ಥನೆ ಅಷ್ಟೆ !

ಇನ್ನು ಬನ್ನೇರುಘಟ್ಟದ ಕಥೆಗೆ ನಾನು ಹೇಳುವುದಿಷ್ಟೆ : ಹೀಗೂ ಉಂಟೇ ?

@ ಜಗಲಿ ಭಾಗವತರು :

ಅಬ್ಬಾ....ಅಂತೂ ಕಷ್ಟಪಟ್ಟು ನಿದ್ದೆಗೆಟ್ಟು , ಅನ್ನ ನೀರು ಬಿಟ್ಟು ನಾವೇಕೆ ಹೀಗೆಯಲ್ಲಿ ಕಮೆಂಟಿಸಿದ್ದೀರಿ ?? ಜೈ ಕನ್ನಡಾಂಬೆ ! ಸಾರ್ಥಕವಾಗೋಯ್ತು !! :))

ಮೊದಲನೆಯ ಪ್ಯಾರ ಗೆ ನನ್ನ ಸಂಪೂರ್ಣ ಸಹಮತವಿದೆ.

ಎರಡನೆಯ ಪ್ಯಾರಗೆ ವಿಕಾಸ್ ಹೆಗಡೆಗೆ ಬರೆದ ಉತ್ತರವನ್ನೇ ಮತ್ತೊಮ್ಮೆ ಓದಿಕೊಂಡುಬಿಡಿ.ವ್ಯತ್ಯಾಸ ಇಷ್ಟೇ..ಕಮೆಂಟು ಮೇಲಿಲ್ಲ, ಈಗ ಕೆಳಗಡೆ ಬಂದಿದೆ :)

ಇನ್ನು ನಿಮ್ಮ ಪ್ರಶ್ನೆಗಳು :

ಅದನ್ನ ಸರ್ಕಾರದವರು,ಬರಗೂರು ರಾಮಚಂದ್ರಪ್ಪನವರನ್ನು, ಅನಂತಮೂರ್ತಿಯವರನ್ನು ಯೋಚನೆ ಮಾಡಲು ಬಿಟ್ಟು ನಾವು ಸುಮ್ಮನೆ ಕೂರಬಹುದು, ಅಥವಾ ಸಾಮೂಹಿಕವಾಗಿ (ಎಲ್ಲ/ಬಹುಪಾಲು ಬ್ಲಾಗಿಗರು)ಗಹನವಾಗಿ ಚರ್ಚಿಸಿ,ಸದ್ಯದ ಕನ್ನಡದ ಪರಿಸ್ಥಿತಿಯ ಹಲವು ಮಜಲುಗಳನ್ನು ಗುರುತಿಸಿ, ಸೂಕ್ತ ಪರಿಹಾರ ತೋಚಿದರೆ ಅದರ ಅನುಕೂಲ ಪ್ರತಿಕೂಲಗಳನ್ನು ಅವಲೋಕಿಸಿ, ಬ್ಲಾಗಿಗರ ಒಕ್ಕೂಟದಿಂದ ಸರ್ಕಾರಕ್ಕೆ ಒತ್ತಡ ತರಬಹುದು. ಈ ವೇದಿಕೆಯಲ್ಲಿ ಚರ್ಚೆಗೆ ಖಂಡಿತಾ ಅವಕಾಶವಿದೆ, ಸ್ವಾಗತವೂ ಇದೆ.

Lakshmi Shashidhar Chaitanya said...

@ಶ್ರೀಧರ್ :

ಧನ್ಯವಾದ ಕರ್ಮಕಾಂಡ ಪ್ರಭುಗಳೇ...ನಿಮ್ಮ ಅನಿಸಿಕೆ ಸರಿ. ಸಿರಿಗನ್ನಡವನ್ನ "ಗಲ್ಲಿ"ಗೆ ಏರಿಸದಿದ್ದರೆ ಸಾಕಲ್ಲವೇ ?

@ಜಯಶಂಕರ್ :

ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಅಭಿಪ್ರಾಯಕ್ಕೆ ನನ್ನ ಪೂರ್ಣ ಸಹಮತವಿದೆ.

@ಪದ್ಮ :

ನಿಜ...ತಪ್ಪು ತಪ್ಪಾಗಿ ಎಲ್ಲ ಭಾಷೆಗಳನ್ನು ಮಾತಾಡುವುದಕ್ಕಿಂತ ಸರಿಯಾಗಿ ಮಾತೃಭಾಷೆಯನ್ನು ಮಾತಾಡುವುದು ಖಂಡಿತಾ ಸೂಕ್ತ.

sunaath said...

ಬಸ್ಸಿನಲ್ಲಿ ಹೋಗುತ್ತಿದ್ದಾಗ ಒಬ್ಬ ಪುಟ್ಟ ಹುಡುಗಿ ತನ್ನ ಅಮ್ಮನಿಗೆ ಕೇಳುತ್ತಿದ್ದ ಪ್ರಶ್ನೆಯೊಂದು ಈ ರೀತಿಯಾಗಿತ್ತು:
"ಮಮ್ಮಿ, ವಾಟರ್ ಅನ್ನಲಿಕ್ಕೆ ಇಂಗ್ಲಿಶ್‌ದಾಗ ಏನಂತಾರ?"