ಮನಸ್ಸಿನಲ್ಲಿ ದಿನಾಗಲೂ ಪ್ರಶ್ನೆಗಳು ಉದ್ಭವಿಸುತ್ತಿರುತ್ತವೆ. ಅವೆಲ್ಲ ಇದೊಂದೇ ಪ್ರಶ್ನೆಯಲ್ಲಿ ಮಿಳಿತಗೊಳ್ಳುತ್ತವೆ. ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಾಮಾಣಿಕ ಪ್ರಯತ್ನ ಇಲ್ಲಿದೆ. ಆದರೂ ಕೆಲವೊಮ್ಮೆ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ!
ನಾನು ಈ ಪ್ರಶ್ನೆ ಕೇಳಲು ಕಾರಣ ಇಷ್ಟೆ. ಬೆಂಗಳೂರು ಮೊದಲು ಮಹಾನಗರವಾಗಿತ್ತು. ಈಗ ಅದು "ಬೃಹತ್"ಬೆಂಗಳೂರಾಗಿದೆ. ರಸ್ತೆ ಅಗಲೀಕರಣ, ಪೋಲ್ ಸ್ಥಾಪನೆ, ಇವೇ ಮುಂತಾದ ಪಾಲಿಕೆ "ಮಹತ್ಕಾರ್ಯ"ಗಳಿಗೆ ಸಾವಿರಾರು ಮರಗಳು ಅಸುನೀಗಿವೆ. ಅದಕ್ಕೆ ನನ್ನ ವಿಷಾದವಿದೆ. ಆದರೆ, ಬೇಕಿಲ್ಲದ ಕಟ್ಟಡದ ವಿಸ್ತರಣೆಗೆ ಮರ ಕಡಿಯುವುದು ಸಾಧುವೇ ?
ನಮ್ಮ ಮನೆಯ ಹಿಂದೆ ದೇವಸ್ಥಾನವೊಂದಿದೆ. ಆ ದೇವಸ್ಥಾನದ ಸಮಿತಿಯವರು ದೇವಸ್ಥಾನದ ಎದುರುಗಡೆ ಪ್ರವಚನ ಮಂದಿರವೊಂದನ್ನು ಕಟ್ಟಿಸಿದರು. ಪ್ರವಚನಕ್ಕಾಗಿ ಮಾತ್ರ ಕೊಡುತ್ತೇವೆ ಎಂದು ಡಂಗುರ ಹೊಡೆಸಿದ ಅವರು, ಮುಂದೆ ಪ್ರವಚನಗಳಿಗೆ ಕಡಿಮೆ ಒತ್ತು ಕೊಟ್ಟು ಮದುವೆ ಮುಂಜಿ ಇತ್ಯಾದಿ ಸಮಾರಂಭಗಳಿಗೆ ಇದನ್ನು ಕೊಡಲಾರಂಭಿಸಿದರು. ದೇವಸ್ಥಾನದ ಆದಾಯ ಹೆಚ್ಚಿತು, ಮಂದಿರದ ಬೇದಿಕೆಯೂ ಹೆಚ್ಚಿತು. ಅದಕ್ಕಾಗಿ, ಈಗಿರುವ ಮಂದಿರದ ಮೇಲೆ ಮತ್ತೊಂದು ಚತ್ರವನ್ನು ಕಟ್ಟಿಸುವ ನಿರ್ಧಾರವನ್ನು ಈ ಸಮಿತಿ ಕೈಗೊಂಡಿತು. ಕಾಂಪೌಂಡನ್ನೂ ಬಿಡದೆ ಕಟ್ಟಿದ್ದ ಪ್ರವಚನ ಮಂದಿರದ ಪಕ್ಕದಲ್ಲಿ ಮರವೊಂದು ಬೆಳೆದಿತ್ತು.ಆ ಮರಕ್ಕೂ ಈ ಮಂದಿರಕ್ಕೂ ನಡುವೆ ಸ್ವಲ್ಪ ಜಾಗವಿತ್ತು. ಇವರು ಕಾಂಪೌಂಡನ್ನೂ ಬಿಡದೆ ಈ ಮಂದಿರವನ್ನು ಕಾಂಪೌಂಡಿಗೇ ಅಂಟಿಸಿ ಕಟ್ಟಿದ್ದಾರೆ. ಆ ಮರ ಬಹಳ ಸೊಂಪಾಗಿ ಬೆಳೆದಿತ್ತು. ಗಿಳಿಗಳಿಗೆ, ಪಾರಿವಾಳಗಳಿಗೆ ಆಶ್ರಯ ತಾಣವಾಗಿತ್ತು.
ಪ್ರತಿ ಸಾಯಂಕಾಲ ಒಂದೇ ಮರದಲ್ಲಿ ಕೆಲವು ಕಾಂಡ ಕತ್ತಲಲ್ಲಿ, ಮತ್ತೊಂದಿಷ್ಟು ಕಾಂಡಗಳು ಸೂರ್ಯನ ಬೆಳಕಿನಲ್ಲಿ ಮಿನುಗುತ್ತಿರುವ ದೃಶ್ಯವನ್ನು ನಾನು ವರ್ಷಾನುಗಟ್ಟಲೆ ನೋಡಿ ಆನಂದಿಸಿದ್ದೇನೆ.
ಈ ಮರದೊಂದಿಗೆ ನನ್ನ ಎಷ್ಟೋ ನೆನಪುಗಳು ಸೇರಿಕೊಂಡಿವೆ.ಪ್ರತಿ ಬೆಳಿಗ್ಗೆಯ ಮೊದಲ "ಗುಡ್ ಮಾರ್ನಿಂಗ್ " ಅನ್ನು ಈ ಮರವೇ ಹೇಳುತ್ತಿದ್ದ ಹಾಗೆನಿಸುತ್ತಿತ್ತು. ಸಾಯಂಕಾಲ ನಾನು ಕಿಟಕಿಯಿಂದ ಕತ್ತು ಹೊರಹಾಕಿದರೆ ಈ ಮರ ನನ್ನನ್ನು ನೋಡಿ ನಕ್ಕು, "ಹೇಗಿದ್ದೀಯಾ ? ಹೇಗಿತ್ತು ಇವತ್ತಿನ ದಿನ ?" ಅಂತ ಕೇಳುತ್ತಿದ್ದ ಹಾಗಾಗುತ್ತಿತ್ತು. ನಮ್ಮ ಮಧ್ಯ ಮೌನದ ಮಾತುಕತೆಗಳು ಗಂಟಾನುಗಟ್ಟಲೆ ನಡೆಯುತ್ತಿತ್ತು. ಈ ಮರ ಒಂದು ರೀತಿಯಲ್ಲಿ ನನ್ನ ಗೆಳತಿಯಾಗಿತ್ತು. ನವೆಂಬರ್ ಹದಿನಾಲ್ಕನೇ ತಾರೀಖು ಶುಕ್ರವಾರ ನಾನು ಮೈಸೂರಿಗೆ ಹೋದವಳು ನೆನ್ನೆ ರಾತ್ರಿ ಬಂದೆ. ಪ್ರಯಾಣದ ಆಯಾಸ, ಮಲಗಿಬಿಟ್ಟೆ. ಬೆಳಿಗ್ಗೆ ಎದ್ದೊಡನೆ ನನ್ನ ತಂಗಿ, " ಹಿಂದಿದ್ದ ಮರ ಕಡಿದಿದ್ದಾರೆ " ಎಂದಾಗ ಬಲಗಡೆ ಏಳುವ ಬದಲು ಹಾಗೇ ನೇರ ಮಂಚದಿಂದ ಕಿಟಕಿಯ ಬಳಿ ಎಗರಿದೆ. ಹೊಟ್ಟೆಯಲ್ಲಿ ಸಂಕಟ, ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಅದು ಹೇಗೆ ತಡೆದೆನೋ ನನಗೆ ಈಗಲೂ ನೆನಪಾಗುತ್ತಿಲ್ಲ. ನನ್ನ ಕಣ್ಣಿಗೆ ಬಿದ್ದ ದೃಶ್ಯಗಳು ಇವು.
ಎಷ್ಟರ ಮಟ್ಟಿಗೆ ನಿರ್ದಯರಾಗಬಲ್ಲರು ಜನ ? ತಮ್ಮ ಸ್ವಾರ್ಥಕ್ಕೆ ಮರವನ್ನೇ ಕಡಿದುಬಿಟ್ಟರಲ್ಲಾ...
ಮರವಿದ್ದಷ್ಟು ಸ್ಥಳವನ್ನು " ಬಾಲ್ಕನಿ" ಥರ ಬಿಟ್ಟಿದ್ದಿದ್ದರೆ, ಚತ್ರಕ್ಕೆ ವೈವಿಧ್ಯತೆಯೂ ಇರುತ್ತಿತ್ತು, ಅಲ್ಲಿ ಊಟವೂ ಹಾಕಬಹುದಿತ್ತು. ಉಪಯೋಗವೂ ಇತ್ತು, ಮರವೂ ಉಳಿಯುತ್ತಿತ್ತು. ಅಲ್ಲವೇ ?
ಸಾಯಂಕಾಲ ಹಾರಿಬರುತ್ತಿದ್ದ ಗಿಣಿಗಳು ಪಾಪ ಎಲ್ಲಿ ಹೋದವೋ...ಕಾಗೆಗಳು ಅದೆಷ್ಟು ಕೂಗಾಡಿ ತಮ್ಮ ಬೇಜಾರು ತೋಡಿಕೊಂಡವೋ...
ನಮ್ಮ ಎ. ಸಿ ಡಬ್ಬದ ಹಿಂದಿರುವ ಪಾರಿವಾಳಗಳೂಯಾಕೋ ಬೇಜಾರುಯುಕ್ತ "ಗುಟರ್ಗೂ" ಕೂಗುತ್ತಿವೆ. ನಾನೂ ಮೌನವಾಗಿ ಮಮ್ಮಲಮರುಗುತ್ತಿದ್ದೇನೆ. ಮನುಷ್ಯರು ಸತ್ತಾಗ ಮಾತ್ರ ಅಳಬೇಕೆ ? ಮರಗಳಿಗೂ ಜೀವ ಇದೆಯಲ್ಲವೇ ? ಮರಗಳನ್ನು ಕಡಿದರೂ ಅದನ್ನು ಸಾಯಿಸಿದ ಹಾಗಾಗಲಿಲ್ಲವೇ ? ದಯಮಾಡಿ ಈ ಪ್ರಶ್ನೆಗೆ ಉತ್ತರಿಸಿ.
ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮ ನಾಡು ಆವಿರ್ಭವಿಸಿ ಇಂದಿಗೆ ಐವತ್ಮೂರು ಶರದೃತುಗಳು. ಶರತ್ಕಾಲದ ಹುಣ್ಣಿಮೆಯಂತೆಯೇ ನಮ್ಮ ಭಾಷೆಯೂ ಮನೋಹರ, ಆಹ್ಲಾದಕರ. ಚಂದ್ರನ ಬೆಳುದಿಂಗಳಿಗೆ ಮೋಡದ ಅಡಚಣೆ ಇಲ್ಲದಿರೆ ಎಷ್ಟು ಚೆನ್ನವೋ, ಹಾಗೆಯೇ, ಶಾಸ್ತ್ರೀಯ ಸ್ಥಾನಮಾನ ದೊರಕುವುದೋ ಇಲ್ಲವೋ ಎಂಬ ಅನುಮಾನದ ಮೋಡವನ್ನು ಕೇಂದ್ರ ಸರಕಾರ ಸರಿಸಿ ಕನ್ನಡ ಚಂದ್ರಮನ ಧವಳಕಾಂತಿಯನ್ನು ಜಗತ್ತೆಲ್ಲ ಆಸ್ವಾದಿಸುವಂತೆ ಮಾಡಿದೆ. ಕನ್ನಡಿಗರ ಒಕ್ಕೊರಲ ಕೂಗಿಗೆ, ಸತತ ಪರಿಶ್ರಮಕ್ಕೆ, ಎಡೆಬಿಡದ ಹೋರಾಟಕ್ಕೆ ಇಂದು ನ್ಯಾಯ ಸಂದಿದೆ. ಕನ್ನಡಿಗರಿಗೆ ಈ ರಾಜ್ಯೋತ್ಸವ ನಿಜಕ್ಕೂ ಮಹೋತ್ಸವವಾಗಿದೆ.
ಶಾಸ್ತ್ರೀಯ ಸ್ಥಾನಮಾನ ಮೃತಭಾಷೆಗಳಿಗೆ ದೊರಕುತ್ತದೆ ಎಂಬ ಪ್ರತೀತಿ ಇದೆಯಾದರೂ ಯಾವ ಭಾಷೆಯೂ ಮೃತವಾಗಿಲ್ಲ, ತನ್ನ ರೂಪ ಬದಲಿಸಿದೆ ಎಂಬುದನ್ನು ಗಮನಿಸಬೇಕು. ನಮ್ಮ ಭಾಷೆ ಮೃತವಾಗದೇ ಮತ್ತಷ್ಟು ಸೊಗಡಿನಿಂದ ಕೂಡಿ ಅಮೃತವಾಹಿನಿಯಾಗಬೇಕೆಂಬುದು ಕನ್ನಡಿಗರ ಅಭಿಲಾಷೆಯಾಗಬೇಕು, ಅದಕ್ಕೆ ಪ್ರಾಮಾಣಿಕತೆಯಿಂದ ಶ್ರಮಿಸಬೇಕು.
ಅಡೋಬ್ ಫೋಟೋಶಾಪ್ ನಲ್ಲಿ (for the first time ) ನಾನೆ ಮಾಡಿದ ಶುಭಾಶಯ ಪತ್ರ. ಇಲ್ಲಿವರ್ಗೂ ಅದನ್ನ ಓಪನ್ನು ಮಾಡಿರಲಿಲ್ಲ. ಕನ್ನಡ ಶುಭಾಶಯಪತ್ರಗಳನ್ನು ಹುಡುಕಿದೆ...ಅದನ್ನ ಹುಡುಕುವುದರ ಬದಲು ನಾನೇ ಮಾಡಿದರೆ ಆ ಖುಶಿ ಬೇರೆ ಅನ್ನಿಸಿತು. ಅದಕ್ಕೆ ಐದು ಘಂಟೆಗಳ ಕಾಲ ಕಷ್ಟ ಪಟ್ಟು, ಫೋಟೋಶಾಪ್ ಉಪಯೋಗಿಸುವುದನ್ನು ತಕ್ಕ ಮಟ್ಟಿಗೆ ಕಲಿತು ಇದನ್ನ ಮಾಡಿದ್ದೇನೆ. ನಿಮಗೆಲ್ಲರಿಗೂ ಈ ದೀಪದ ಹಬ್ಬ ಸುಖ ಸಂತೋಷ, ನೆಮ್ಮದಿ, ಆಯಸ್ಸು, ಆರೋಗ್ಯ ಹಾಗೂ ನೆಮ್ಮದಿಯನ್ನು ಕೊಟ್ಟು ಬಾಳಿನಲ್ಲಿ ಬೆಳಕು ಮೂಡಿಸಲಿ ಎಂದು ಹಾರೈಸುತ್ತೇನೆ.
ನೀವು ಈ ಪೋಸ್ಟನ್ನು ಓದಿದ ಮೇಲೆ " ಈ ಹುಡುಗಿ ಗೆ sense of humor ಸ್ವಲ್ಪ ಕಡಿಮೆ, She does not know how to take issues in good spirits " ಅಂತ ಅಂದುಕೊಂಡರೂ ಪರ್ವಾಗಿಲ್ಲ. ಆದರೆ ಇದು ನಿಜವಾಗಿಯೂ ಬೇಜಾರು ತರಿಸುವಂಥ ವಿಷಯ.
ಮೋಟೋರೋಲಾ ದ ಹೊಸ ಮೊಬೈಲ್ ಫೋನಿನ ಜಾಹೀರಾತನ್ನು ಈಗಾಗಲೇ ನೀವೆಲ್ಲರೂ ನೋಡಿರುತ್ತೀರಿ. ಕಾಲೇಜಿನ ವಿದ್ಯಾರ್ಥಿಯೊಬ್ಬ ತನ್ನ ಗುರುಗಳ ವ್ಯಂಗ್ಯಚಿತ್ರವನ್ನು ಫೋನಿನಲ್ಲಿ ಬಿಡಿಸಿ ಈಮೈಲ್ ಮಾಡುವ ಈ ಜಾಹೀರಾತು ಹುಡುಗರಿಗೆ ಈಗ ಅಧ್ಯಾಪಕರನ್ನು ಆಡಿಕೊಳ್ಳುವ ಹೊಸ ಆಯಾಮವನ್ನು ಪರಿಚಯ ಮಾಡಿಸುತ್ತಿದೆ. ನಾವೂ ಕಾಲೇಜಿನಲ್ಲಿ ಓದಿದವರೇ. ಲೆಕ್ಚರರ್ ಗಳನ್ನು ನಾವೂ ಆಡಿಕೊಳ್ಳುತ್ತಿದ್ದೆವು. ಇಲ್ಲವೆಂದು ನಾನು ಖಂಡಿತಾ ಹೇಳುವುದಿಲ್ಲ. ಆದರೆ ಅವರ ಮೇಲಿನ ಗೌರವ ನಮಗೆ ಬೆಟ್ಟದಷ್ಟಿದೆ. ಗುರುಗಳನ್ನು ನಾವೆಂದಿಗೂ ಈ ಪರಿಯ ಅವಮಾನ ಮಾಡಿರಲಿಲ್ಲ. ಬದುಕಿನ ಪಾಠ ಕಲಿಸುವ ಗುರುಗಳಿಗೆ ಈ ಪರಿಯ ಅವಮಾನವೇ ?ತಮಾಷೆಗೆ ಮಿತಿಯಿಲ್ಲವೇ ? ಸದಾ ಗೌರವಿಸಿ, ಅವರು ಹೇಳಿಕೊಟ್ಟ ಆದರ್ಶಗಳನ್ನು ಪಾಲಿಸಬೇಕಾದ ಗುರುಗಳನ್ನು ಈ ತರಹ ಅವಹೇಳನ ಮಾಡಿರುವುದು ಸರಿಯೇ ?
ನಿಜವಾಗಿಯೂ ಈ ಜಾಹಿರಾತಿನವರು ತಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಬೇಕಿದ್ದಿದ್ದರೆ ಬಹಳ ಸ್ಪೀಡಾಗಿ ನೋಟ್ಸನ್ನು ದಿಕ್ಟೇಟ್ ಮಾಡುತ್ತಿದ್ದ ಲೆಕ್ಚರರ್ ನ ನೋಟ್ಸನ್ನು ಫೋನಲ್ಲಿ ಗೀಚಿಕೊಂಡು, ನೋಟ್ಸ್ ನಲ್ಲಿ ನೀಟಾಗಿ ಕಾಪಿ ಮಾಡಿ ಮಾರನೆಯ ದಿನ ಸೈ ಅನ್ನಿಸಿಕೊಂಡು ರಹಸ್ಯವಾಗಿ ತನ್ನ ಮೊಬೈಲ್ ಫೋನಿನ ಸಮರ್ಥ ಉಪಯೋಗವನ್ನು ತೋರಿಸಬಹುದಿತ್ತು.ಇವ ಬರೆದ ವ್ಯಂಗ್ಯ ಚಿತ್ರಕ್ಕಿಂತ ಉಪಯುಕ್ತವಾದ ಕೆಲಸವಲ್ಲವೇ ಅದು? ನಾನು ನನ್ನ ಎಮ್.ಎಸ್ಸಿಯ ಅವಧಿಯಲ್ಲಿ ನಡೆದ ಎಲ್ಲ ಅತಿಥಿ ಭಾಷಣಗಳನ್ನು ರೆಕಾರ್ಡ್ ಮಾಡಿ ಎಕ್ಸಾಮಿಗೆ ಅದನ್ನು ಕೇಳಿಕೊಂಡು ನೋಟ್ಸ್ ಮಾಡಿ ಓದಿದ್ದೆ. ಯಾಕಂದರೆ ನಮಗೆ ಪವರ್ ಪಾಯಿಂಟ್ ನಲ್ಲಿ ಪಾಠಗಳು ಸಾಗುತ್ತಿದ್ದವು. ನಂತರ ಅವುಗಳನ್ನು ನಮಗೆ ಈಮೈಲ್ ಮಾಡಲಾಗುತ್ತಿತ್ತು. ಈಮೈಲ್ ನಲ್ಲಿ ಪಾಠ ಓದಿ, ಮೀಡಿಯಾ ಪ್ಲೇಯರ್ ನಲ್ಲಿ ಪಾಠ ಕೇಳುತ್ತಿದ್ದೆ.
ಮೊಬೈಲ್ ತರಬಾರದೆಂದು ಈಗೀಗ ಶಾಲಾಕಾಲೇಜುಗಳಲ್ಲಿ ಆಜ್ಞೆ ಇದೆಯಾದರೂ ಈಗಿನ ಮಕ್ಕಳು ಈ ಜಾಹಿರಾತನ್ನು ನೋಡಿದ್ದೇ ಇದೇ ಮೊಬೈಲನ್ನು ತೆಗೆಸಿಕೊಡಬೇಕೆಂದು ತಂದೆ ತಾಯಿರನ್ನು ಪೀಡಿಸಲು ಶುರುಮಾಡುತ್ತಾರೆ. ತಾಯ್ತಂದೆಯರೂ ಕೂಡಾ ಇವರ ಹಠದ ಮುಂದೆ ನಿಸ್ಸಹಾಯಕರಾಗುತ್ತಾರೆ. ಮೊಬೈಲ್ ತಂದು ಕೈಗಿಡಬೇಕಾಗುತ್ತದೆ. ಇವರು ಕದ್ದು ಮುಚ್ಚಿ ಅದನ್ನು ಶಾಲೆಗೆ ತಗೆದುಕೊಂಡು ಹೋಗಿ, ಸಿಕ್ಕಿಹಾಕಿಕೊಂಡು ಕಡೆಗೆ ಪರದಾಡುತ್ತಾರೆ. ಬೇಕೇ ಇವೆಲ್ಲಾ ?
ಈಗಾಗಲೇ ಚಲನಚಿತ್ರಗಳು ಮಕ್ಕಳಲ್ಲಿ ಗುರುಗಳ ಬಗ್ಗೆಗಿನ ಭಾವನೆಯನ್ನು ಬೇಕಾದಷ್ಟು ಬಿಗಡಾಯಿಸುವ ಮಹಾನ್ ಪುಣ್ಯಕಾರ್ಯ ಮಾಡಿದೆ. ಇದೊಂದು ಬಾಕಿಯಿತ್ತು ಅಂತ ಕಾಣತ್ತೆ.
ಎಲ್ಲರ ಜೀವನದಲ್ಲಿ ಗುರುಶಿಷ್ಯ ಸಂಬಂಧ ಚೆನ್ನಾಗಿಲ್ಲದಿರಬಹುದು. ನಾನಿದನ್ನು ವಿಸ್ತರಿಸಿ ಹೇಳುವ ಅವಶ್ಯಕತೆ ಇಲ್ಲವೆಂದುಕೊಳ್ಳುತ್ತೇನೆ. ಆದರೆ ಎಲ್ಲರ ಜೀವನದಲ್ಲೂ "favorite teacher" ಅನ್ನುವವರೊಬ್ಬರಾದರೂ ಇರುತ್ತಾರಲ್ಲವೇ ? ಈ ತರಹದ ಜಾಹಿರಾತನ್ನು ಮಾಡುವ ಮುನ್ನ Ad director ಗೆ ತನ್ನ Director ಗುರುಗಳು, ಪಾತ್ರಧಾರಿಗಳಿಗೆ ತಮ್ಮ ಗುರುಗಳ ನೆನಪಾಗದಿರುವುದು ವಿಪರ್ಯಾಸ.
ಈಗಿನ ಶಾಲಾ ವಿದ್ಯಾರ್ಥಿಗಳಿಗೆ ಅಧ್ಯಾಪಕರ ಮೇಲೆ ಗೌರವವೇ ಇಲ್ಲವೆಂದು ಶಾಲೆಯೊಂದರಲ್ಲಿ ಅಧ್ಯಾಪಕಿಯಾಗಿರುವ ನಮ್ಮ ಸೋದರತ್ತೆ ಮೊನ್ನೆ ಅಳಲು ತೋಡಿಕೊಳ್ಳುತ್ತಿದ್ದರು.ನನ್ನ ಗೆಳತಿಯರು ಈಗ ಕಾಲೇಜುಗಳಲ್ಲಿ ಅಧ್ಯಾಪಕಿಯರು. ಅವರ ಅಳಲೂ ಇದೇ.ಅಧ್ಯಾಪಕರು ಸ್ನೇಹಿತರಂತೆ ವರ್ತಿಸಬೇಕಾದದ್ದು ನಿಜವೇ ಆದರೂ, ಆ ಸ್ನೇಹಕ್ಕೆ ಒಂದು ಬಿಗಿ, ಹಿಡಿತ ಇರಬೇಕು. ಸಲುಗೆ ಕಡಿಮೆ, ಗೌರವ ಹೆಚ್ಚಿರಬೇಕು. ಆದರಯುಕ್ತ ಅಭಿಮಾನವಿರಬೇಕು. ಎಲ್ಲರನ್ನು ಸ್ನೇಹಿತರಾಗಿಯೇ ಕಾಣುವುದಾದರೆ ಅಪ್ಪ, ಅಮ್ಮ, ಗುರು ಅನ್ನುವ ನಿರ್ದಿಷ್ಟ ಸಂಬಂಧಗಳು ಇರುತ್ತಿದ್ದವೇ ?
ಇಂದು ಸಂಬಂಧಗಳೆಲ್ಲಾ ಹಗ್ಗಾಗುತ್ತಿವೆ, ಗೌರವವನ್ನು ಗಾಳಿಗೆ ತೂರಿಬಿಡಲಾಗಿದೆ. ಯಾಕೆ ಹೀಗೆ ?
ಈ ಪ್ರಶ್ನೆಯನ್ನು ಸಂಗೀತ ಕಲಿಯಲು ಬರುವ ಪುಟ್ಟ ಮಕ್ಕಳಿಗೆ ಹದಿನೈದು ದಿನಗಳ ಹಿಂದೆ ಕೇಳಿದರು ನಮ್ಮಮ್ಮ. ಅದಕ್ಕೆ ಆ ಮಕ್ಕಳು ಅಷ್ಟೇ ಮುದ್ದಾಗಿ, " what it is teacher ? " ಅಂತ ಕೇಳಿಬಿಟ್ಟರು !!
ಅಮ್ಮ ಸ್ವಲ್ಪ ಚಕಿತಗೊಂಡರಾದರೂ, ಸ್ವಲ್ಪ ಸಾವರಿಸಿಕೊಂಡು, " ನಿಮ್ಮ ಮನೆಯಲ್ಲಿ ಯಾವ ಯಾವ ಬೊಂಬೆಗಳಿವೆ ? " ಅಂತ ಕೇಳಿದರು. ಹೆಣ್ಣು ಮಕ್ಕಳು ಬಹಳ ನೀಟಾಗಿ ಬಾರ್ಬಿ ಡಾಲುಗಳ ಎಲ್ಲಾ ವರ್ಷನ್ನುಗಳನ್ನು ಒಪ್ಪಿಸಿದರು. ಗಂಡು ಮಕ್ಕಳು ಕಾರು, ಏರೋಪ್ಲೇನು, ಪೋಕೆಮಾನು, ಜಿ ಐ ಜೋ ಮುಂತಾದವುಗಳ ಪಟ್ಟಿ ಇಟ್ಟರು. ನಮ್ಮಮ್ಮ ಆಗ ಬೊಂಬೆಗಳ ಕಥೆ ಹೇಳಲು ಶುರುಮಾಡಿದರು.
ಭಾರತದಲ್ಲಿ ಬಹಳ ಹಿಂದೆ ಭೋಜರಾಜ ಎಂಬ ಅರಸು ಇದ್ದನು. ಅವನ ರಾಜ್ಯದ ರಾಜಧಾನಿ ಉಜ್ಜಯಿನಿ ನಗರ. ಅವನ ರಾಜ್ಯದಲ್ಲಿ ಬೊಂಬೆಗಳಿಗೆ ರಾತ್ರಿ ಹೊತ್ತು ಜೀವ ಬರುತ್ತಿತ್ತಂತೆ ! ಅವು ರಾಜನ ವ್ಯಕ್ತಿತ್ವ, ನೀತಿ, ನಿಯಮಗಳು, ರಾಜ್ಯದ ಒಳಿತು ಕೆಡಕುಗಳ ಬಗ್ಗೆ ಚರ್ಚಿಸುತ್ತಿದ್ದವಂತೆ. ಒಂದು ರಾತ್ರಿ ಇದನ್ನು ಸ್ವತಃ ಭೋಜರಾಜನೇ ನೋಡಿದ್ದನಂತೆ. ಆಗ ಬೊಂಬೆಗಳು ಅವನಿಗೆ ಕೆಲವು ರಾಜನೀತಿಗಳನ್ನು ಬೋಧಿಸಿದನೆಂದು ನಮ್ಮಮ್ಮ ಹೇಳಿದರು.
ಮತ್ತೊಂದು ಮಗು , " ನಮಗೆ ಟೀಚರ್ tin soldier ಎಂಬ ಕಾಲು ಮುರಿದ ಸೈನಿಕ ಬೊಂಬೆಯ ಕಥೆ ಹೇಳಿದ್ದಾರೆ. ಈ ಕಥೆ ನೂ ಅದೇ ಥರ ಇದೆ !! "ಅಂತು.
ತತ್ ಕ್ಷಣವೇ ಒಂದು ಮಗು, " ಟೀಚರ್, ನಿಮಗೆ ಈ ಕಥೆ ಯಾರು ಹೇಳಿದ್ದು ? " ಅಂತ ಕೇಳಿತು. ಅದಕ್ಕೆನ್ ನಮ್ಮಮ್ಮ, "ನಮ್ಮಮ್ಮ ಹೇಳಿದ್ದು ! " ಅಂದರು !!
ಅದಕ್ಕೆ ಅಮ್ಮ, " ನಿನ್ನ tin soldier ಕಥೆ ಬರುವ ಸಾವಿರಾರು ವರ್ಷಗಳ ಮುಂಚೆ ಈ ಕಥೆ ಬಂದಿದೆ ಪುಟಾಣಿ ! ಮತ್ತೊಂದು ಕಥೆ ಇದೆ. ರಾಜ ವಿಕ್ರಮಾದಿತ್ಯನ ಕಾಲದಲ್ಲೂ ಬೊಂಬೆಗಳಿಗೆ ಜೀವ ಬಂದು ಅವೂ ವಿಕ್ರಮಾದಿತ್ಯನ ಜೊತೆ ಮಾತಾಡುತ್ತಿದ್ದವು ಎಂದು ಕಥೆ ಇದೆ. "
ಮಕ್ಕಳು ಬಿಟ್ಟ ಕಣ್ಣು ಬಿಟ್ಟುಕೊಂಡು ಕಥೆ ಕೇಳುತ್ತಿದ್ದರು. ಅಮ್ಮ ಮುಂದುವರೆಸಿದರು - " ನಾವು ಚಿಕ್ಕ ಮಕ್ಕಳಾಗಿದ್ದಾಗ ನವರಾತ್ರಿಯಲ್ಲಿ ಸಾಯಂಕಾಲ ಐದು ಘಂಟೆಗೆ ರೆಡಿಯಾಗಿ, ಕ್ಯಾರಿಯರ್ ಒಂದನ್ನು ಹಿಡಿದುಕೊಂಡು, ನಮ್ಮ ಏರಿಯಾದ ಪ್ರತಿಯೊಂದು ಮನೆಗೂ ಹೋಗಿ "ಬೊಂಬೆ ಕೂರ್ಸಿದ್ದೀರಾ ? " ಅಂತ ಕೇಳ್ಕೊಂಡ್ ಹೋಗ್ತಿದ್ವಿ. ಎಲ್ಲರ ಮನೆಯಲ್ಲೂ ಹಾಡು ಹೇಳಿ, ಅವರು ಕೊಟ್ಟ ಬೊಂಬೆ ಬಾಗಿನಗಳನ್ನು ಕ್ಯಾರಿಯರ್ ನಲ್ಲಿ ಹಾಕಿಕೊಂಡು ಬಂದು, ಮನೆಯಲ್ಲಿ ನಾವು ಅಣ್ಣ ತಂಗಿ ಅಕ್ಕ ತಮ್ಮಂದಿರು ಹಂಚಿಕೊಂಡು ತಿನ್ನುತ್ತಿದ್ದೆವು " ಅಂದಾಗ, ಮಕ್ಕಳೆಲ್ಲ ಕಣ್ಣು ಅಗಲಿಸಿದವು !! ಅಮ್ಮ ನಮ್ಮ ಮನೆಯಲ್ಲಿದ್ದ ಬೊಂಬೆಗಳನ್ನು ತೋರಿಸಿ, ಕಥೆ ಹೇಳಿ, ಬೊಂಬೆ ಬಾಗಿನ ಕೊಟ್ಟು ಕಳಿಸಿದರು.
ನಾನು ಯಥಾಪ್ರಕಾರ ಸಾಯಂಕಾಲದ ಕಾಫಿಯನ್ನು ಸವಿಯುತ್ತಾ ಇವರ ಸಂಭಾಷಣೆಯನ್ನು ಮೌನವಾಗಿ ಆಲಿಸುತ್ತಿದ್ದೆ.
ಈಗ ಬೊಂಬೆ ಕೂರಿಸುವ ಸಂಪ್ರದಾಯವೆಲ್ಲ ತೀರ ಕಡಿಮೆಯಾಗಿ ಹೋಗಿದೆ. ಕೆಲವು ಮನೆಗಳಲ್ಲಿ ಬೊಂಬೆಗಳನ್ನು ಹಾಲು ಪೂರ್ತಿ ಕೂರಿಸಿರುತ್ತಾರೆ...ಟಿವಿಯಲ್ಲೂ ನೋಡಿರುತ್ತೀರಿ ಇದನ್ನೆಲ್ಲ ನೀವು. ಆದರೆ ನಮ್ಮ ಮನೆಯಲ್ಲಿ ಅಷ್ಟು ದೊಡ್ಡದಾಗಿ ಕೂರಿಸದಿದ್ದರೂ ಈ ಸಂಪ್ರದಾಯವನ್ನು ಇನ್ನೂ ಪರಿಪಾಲಿಸಲಾಗುತ್ತಿದೆ ಅಂತ ಹೇಳಿಕೊಳ್ಳೋಕೆ ನನಗೊಂಥರಾ ಸಂತೋಷ ಆಗತ್ತೆ. ಚಿಕ್ಕವಯಸ್ಸಿನಲ್ಲಿ ನನ್ನ ಇಬ್ಬರೂ ಅಜ್ಜಿಯರು ನನಗೆ ಒಂದೊಂದೇ ಗೊಂಬೆಯನ್ನು ತೋರಿಸಿ ಕಥೆ ಹೇಳುತ್ತಿದ್ದರು. ಪುರಾಣದ ಕಥೆಗಳೆಲ್ಲ ನನಗೆ ಗೊತ್ತಾಗುತ್ತಿದ್ದೇ ನವರಾತ್ರಿಯಲ್ಲಿ. ಪ್ರತಿ ದಿನ ಹೇಳುತ್ತಿದ್ದ ಕಥೆಗಳಿಗಿಂತಾ ನನಗೆ ಈ ಬೊಂಬೆ ತೋರಿಸಿ ಹೇಳುತ್ತಿದ್ದ ಕಥೆಗಳು ತುಂಬಾ ಕುತೂಹಲಕಾರಿ, ಆಕರ್ಷಕ ಅನ್ನಿಸುತ್ತಿದ್ದವು. ಅದೊಂದು ರೀತಿಯ ನೀತಿಪಾಠವಾಗಿತ್ತು ನನಗೆ. ಈಗ....
ನಮ್ಮ ಮನೆಗೆ ಬೊಂಬೆ ನೋಡಲು ಒಬ್ಬಾಕೆ ಬಂದಿದ್ದರು.ಏನೂ ಖಾಯಿಲೆ ಇರದವರು. ಅವರ ಮನೆಯಲ್ಲಿ ಕೈಗೊಬ್ಬರು ಕಾಲಿಗೊಬ್ಬರು ಆಳು, ಬಂಗಲೆಯಂಥಾ ಮನೆ. ಅವರಿಗೆ ಟಿವಿಯಲ್ಲಿನ ಸೀರಿಯಲ್ಲು ನೋಡಲು ಸಮಯ ಸಾಲದು ಅಂತ ಬಂದು ಅಳಲು ತೋಡಿಕೊಳ್ಳುತ್ತಿದ್ದರು. ನಾವು ನಾಲ್ಕು ದಿನದಿಂದ ಅಟ್ಟದ ಮೇಲಿಂದ ಬೊಂಬೆಗಳನ್ನು ಕೆಳಗಿಳಿಸಿಕೊಂಡು, ಅವುಗಳ ಪ್ಯಾಕ್ ಬಿಚ್ಚಿ, ಸ್ಟೆಪ್ಪುಗಳಿಗೆ ನಮ್ಮ ಸ್ಟಡಿ ಟೇಬಲ್ಲುಗಳನ್ನು ಎಳೆದು, ಪಂಚೆ ಹೊದಿಸಿ, ಎಲ್ಲಾ ಮಾಡಿದ್ದನ್ನು ನೋಡಿ ಕೇಳಿದರು... "ಏನಮ್ಮ, ನಿನಗೆಷ್ಟು ಟೈಮ್ ಇರತ್ತೆ ? ಟಿವಿಯಲ್ಲಿನ ಸೀರಿಯಲ್ಲು ನೋಡಲು ಸಮಯ ಸಾಲದು ನನಗೆ...ನೀವು ಮೂರು ಜನ ಇಷ್ಟೆಲ್ಲಾ ಮಾಡಿದ್ದೀರ... ನನಗೆ ನೋಡಿ, ಟೈಮ್ ಆಗೋದೇ ಇಲ್ಲ! "
ನಾನು ಹೇಳಬೇಕೆಂದಿದ್ದೆ " ಇದಕ್ಕೆ ವಯಸ್ಸು, ಟೈಮಿನ ನಿರ್ಬಂಧವಿಲ್ಲ. ಇಂಟೆರೆಸ್ಟಿದ್ದರೆ ಟೈಮ್ ತಂತಾನೇ ಆಗತ್ತೆ " ಅಂತ. ಆದರೆ, ನಾನು " ಕೊಲ್ಲುವ ಮೌನದ " ಬಗ್ಗೆ ರಿಸರ್ಚು ಮಾಡುತ್ತಿದ್ದೆಯಾದ್ದರಿಂದ, ಮಾತಾಡಲಿಲ್ಲ. ಸುಮ್ಮನೆ ನಕ್ಕೆ.
ಮತ್ತೊಂದು ಆಶ್ಚರ್ಯಕರ ವಿಷಯ ಎಂದರೆ, ಇದಕ್ಕೆ ಪದ್ಧತಿ ಇರಬೇಕಂತೆ ! ಅಲ್ಲ, ನಮ್ಮ ಸೃಜನಸ್ಜೀಲತೆ ಮತ್ತು ಕಲಾನೈಪುಣ್ಯತೆಗೂ, ಪದ್ಧತಿಗೂ ಎನು ಸಂಬಂಧ ? ಒಂಭತ್ತು ದಿನಗಳು ಹೊಸ ಹೊಸ ತಿಂಡಿ, ಹೊಸ ಜನ, ಹೊಸ ಉತ್ಸಾಹಕ್ಕೆ ಪದ್ಧತಿಯ ಬಂಧನವೇಕೆ ? ಪದ್ಧತಿ ಇಲ್ಲದವರು ಬೆಳೆಸಿಕೊಳ್ಳಲು ಅವಕಾಶ ಇಲ್ಲ ಯಾಕೆ ?
ಮಾಡಲಾಗದ ಪ್ರತಿಯೊಂದು ಕೆಲಸಕ್ಕೂ ನಾವು ಕಾರಣ ಕೋಟಿಗಟ್ಟಲೆ ಕೊಡಬಹುದು. ಆದರೆ ಅದು genuine ಆಗಿರಬೇಕಲ್ಲವೇ? ನಮ್ಮ ಬ್ಯುಸಿ ಜೀವನದಲ್ಲಿ ಇಂಥಾ ಹಬ್ಬಗಳು ಒಂದು change ಅಲ್ಲವೇ? We need a break, we are tensed, we need a change ಅಂತೆಲ್ಲಾ ಗೋಳಾಡಿಕೊಂಡು, ನಮ್ಮ ಕ್ರಿಯಾಶೀಲತೆ, ಆಸಕ್ತಿ ಮತ್ತು ಕೌಶಲ್ಯಗಳನ್ನು ಪ್ರದರ್ಶನ ಮಾಡುವ ಸಮಯ ಬಂದಾಗ "No time! " ಎಂದು ಸಿಕ್ಕ ಅವಕಾಶವನ್ನೂ ಕಳೆದುಕೊಳ್ಳುತ್ತೀವಲ್ಲಾ... ನಾವೇಕೆ ಹೀಗೆ ?
ಇಂದಿಗೆ ನಾವೇಕೆ ಹೀಗೆ ಬ್ಲಾಗ್ ಶುರುವಾಗಿ ಒಂದು ವರ್ಷವಾಯಿತು. ತಿಂಗಳಿಗೊಂದು ಪೋಸ್ಟ್ ಹಾಕುತ್ತಿದ್ದೆ, ನೀವೂ ಓದಿ, ಕಮೆಂಟಿಸಿ ನನ್ನನ್ನು ಪ್ರೋತ್ಸಾಹಿಸುತ್ತಿದ್ದೀರಿ. ನಿಮ್ಮ ಪ್ರೋತ್ಸಾಹಕ್ಕೆ ನಾನು ಚಿರಋಣಿ.
ನಮ್ಮ ಮನೆಯಲ್ಲಿ ಈ ಬಾರಿ ದಸರೆಯಲ್ಲಿ ಕೂರಿಸಿದ ಬೊಂಬೆಗಳ ವೀಡಿಯೋ ಇಲ್ಲಿ ಹಾಕುತ್ತಿದ್ದೇನೆ. ಸಾಮಾನ್ಯವಾಗಿ ನಾವು ಹಾಲು ಪೂರ್ತಿ ಕೂರಿಸುತ್ತಿದ್ದೆವು. ಆದರೆ, ನಮಗೆ ಈ ಬಾರಿ ಸ್ಟೆಪ್ಪುಗಳ ಅಭಾವವಾಯ್ತು ಸ್ವಲ್ಪ. ಎರಡು ಅಟ್ಟಗಳ ಮೇಲಿನ ಬೊಂಬೆಗಳನ್ನ ಕೆಳಗಿಳಿಸಲಿಲ್ಲ ಅದಕ್ಕೆ. ಈ ಬಾರಿ ಇಷ್ಟೇ ಕೂರಿಸಲು ಸಾಧ್ಯವಾಗಿದ್ದು. ರಾಗಿ ಪೈರು ಬೆಳೆಸಿ ಪಾರ್ಕ್ ಕೂಡಾ ಮಾಡಲಾಗಲಿಲ್ಲ ಎಂಬುದು ಮತ್ತೊಂದು ಬೇಜಾರು. ನೋಡಿ ನಮ್ಮ ಮನೆಯ ಬೊಂಬೆಗಳನ್ನ...ಹೇಗಿವೆ ಅಂತ ಹೇಳಿ.
ಆಮೇಲೆ, ಬೊಂಬೆ ಬಾಗಿನದ ಫೋಟೋ ಕೂಡಾ ಹಾಕುತ್ತಿದ್ದೇನೆ, ನೋಡಿ, ತಿಂದಿದ್ದೀನಿ ಅಂತ ಅಂದುಕೊಂಡು ಬಿಡಿ ! :-) ಹಾ...ಯಾರು ಮಾತಾಡಿರೋದು ವೀಡಿಯೋ ಲಿ ಅಂತ ನೀವು ಯೋಚನೆ ಮಾಡಬೇಕಿಲ್ಲ, ವಿಡಿಯೋ ತೆಗೆಯಲು ನನ್ನ ರಿಸರ್ಚಿಗೆ ಒಂದು ಬ್ರೇಕ್ ಕೊಟ್ಟಿದ್ದೆ :-)
ಮೊನ್ನೆ ನಾವೆಲ್ಲೋ ಹೋಗುತ್ತಿದ್ದಾಗ ನಮ್ಮ ತಂದೆ ಯಾವುದೋ ಒಂದು ದೇವಸ್ಥಾನವನ್ನು ತೋರಿಸುತ್ತಾ ಅದರ ಮುಂದಿರುವ ಕೆಲವು ಹಾಳಾಗಿ ಹೋದ ಪಟಗಳು, ಭಿನ್ನವಾದ ವಿಗ್ರಹಗಳನ್ನು ತೋರಿಸುತ್ತಾ...ಇವೆಲ್ಲ ಯಾಕಿಟ್ಟಿರಬಹುದೆಂದು ನಮ್ಮನ್ನು ಕೇಳಿದರು. ನಾವು, ಅವು ಒಡೆದು ಹೋಗಿವೆಯಲ್ಲ, ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲವಾದ್ದರಿಂದ, ದೇವಸ್ಥಾನದಲ್ಲಿಟ್ಟರೆ ದೋಷವಿರುವುದಿಲ್ಲವಾದ್ದರಿಂದ ಹಾಗಿಟ್ಟಿದ್ದಾರೆಂದು ಹೇಳಿದೆವು. ಸರಿ ನಮ್ಮ ತಂದೆ ಆ ದೇವಸ್ಥಾನದ ಮುಂದೆಯೇ ಗಾಡಿ ನಿಲ್ಲಿಸಿ, ಎಲ್ಲಾ ಪಟಗಳನ್ನೊಮ್ಮೆ ಸರಿಯಾಗಿ ನೋಡಿ ಬನ್ನಿ ಎನ್ನಲು, ನಾವು ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಪ್ರಾರಂಭಿಸಿದೆವು. ಆಗ, ಕೆಲವು ಪಟಗಳು ಒಂದು ಚೂರೂ ಹಾಳಾಗಿಲ್ಲವಾದರೂ, ಅದು ಅನಾಥವಾಗಿ ಅಶ್ವತ್ಥಕಟ್ಟೆಯ ಮುಂದೆ, ದೇವಸ್ಥಾನದ ಪ್ರಾಕಾರದಲ್ಲಿ ಇರುವುದು ಕಂಡುಬಂದಿತು. ನಾವು ಈ ತರಹದ ಪಟಗಳು ಏಕೆ ಅನಾಥವಾಗಿವೆ ಎಂದು ಕಾರಣ ಹುಡುಕುವುದು ಕಷ್ಟವಾಯ್ತು. ಆಗ ನಮ್ಮ ತಂದೆಯೇ ಅದಕ್ಕೆ ಕಾರಣ ನೀಡಿದರು - " ಈ ದೇವರುಗಳು ಅವರುಗಳಿಗೆ ಆಗಬಂದಿಲ್ಲ !!!!"
ನನಗೆ ಈ ಕಾರಣ ಕೇಳಿಯೇ ಆಶ್ಚರ್ಯವಾಯ್ತು. ನನ್ನ ಆಶ್ಚರ್ಯವನ್ನು ಗಮನಿಸಿದ ನಮ್ಮ ತಂದೆ ವಿಷಯವನ್ನು ವಿಸ್ತಾರವಾಗಿ ಹೇಳತೊಡಗಿದರು. " ಕೆಲವರು ತಮ್ಮ ಮನೆಯ ದೇವರುಮನೆಗಳಲ್ಲಿ ಹಾಕಿಕೊಳ್ಳಲು, ಕ್ಯಾಲೆಂಡರ್ಗಳಲ್ಲಿರುವ ದೇವರುಗಳ ಫೋಟೋಗಳನ್ನು ಪಟಗಳನ್ನಾಗಿ ಪರಿವರ್ತಿಸುತ್ತಾರೆ.ಮತ್ತೆ ಕೆಲವರು ಫೋಟೋಫ್ರೇಮ್ ಅಂಗಡಿಗಳಲ್ಲಿ ಖರೀದಿಸುತ್ತಾರೆ ಸಹ. ಕ್ಯಾಲೆಂಡರ್ ರೂಪದಲ್ಲಿ ಆಗಿಬಂದ ದೇವರುಗಳು ಪಟಗಳಾದ ತತ್ಕ್ಷಣ ಆಗಬಾರದ್ದಾಗುತ್ತವೆ.ಅದು ದೇವರುಮನೆಗೆ ಕಾಲಿಟ್ಟ ಮೇಲೆ ಇವರ ಜೀವನದಲ್ಲಿ ಏನೋ ಆಗಬಾರದ್ದಾಗಿ ಹೋದ ಹಾಗೆ ಇವರಿಗೆ ಅನ್ನಿಸಲು ಶುರುವಾಗುತ್ತದೆ. ಸಂಬಳ ಒಂದು ದಿನ ತಡವಾದರೆ ಅದಕ್ಕೆ ಈ ಪಟದ ದೇವರೇ ಕಾರಣನಾಗುತ್ತಾನೆ. ಮಕ್ಕಳು ಆಟವಾಡುತ್ತ ಹಿಂದೊಮ್ಮೆ ಸಾವಿರ ಸಲ ಬಿದ್ದರೂ ಇವರು ತಲೆಕೆಡಿಸಿಕೊಂಡಿರುವುದಿಲ್ಲ. ಆದರೆ ದೇವರ ಆಗಮನವಾದ ಮೇಲೆ ಮಗು ಬಿದ್ದರೆ ಅದಕ್ಕೆ ಈ ದೇವರೇ ಹೊಣೆ. ಇದೆಲ್ಲಾ ನೋಡಿದ ಮೇಲೆ ಇವರಿಗೆ ಈ ದೇವರು ದೇವರೇ ಅಲ್ಲವೆಂದು, ಈ ದೇವರು ನಮಗೆ "ಆಗ"ಬರುವುದಿಲ್ಲವೆಂದು ಅನ್ನಿಸಿ, ಪೂಜೆ ಮಾಡುತ್ತಿದ್ದ ದೇವರನ್ನು "ಸಾಗುಹಾಕಲು" ಪ್ರಯತ್ನಿಸುತ್ತಾರೆ. ಅವರಿಗೆ ತೋಚುವ ಸೂಕ್ತ ಸ್ಥಳವೇ ದೇವಸ್ಥಾನದ ಅಶ್ವತ್ಥಕಟ್ಟೆ ಮತ್ತು ಪ್ರಾಕಾರ. ದೇವಸ್ಥಾನದ ಆಡಳಿತ ಮಂಡಳಿಯವರನ್ನು ಹೇಳದೇ ಕೇಳದೇ,ಸುಮ್ಮನೆ ಬಂದು ಅಲ್ಲಿ ಅದನ್ನು ಇಟ್ಟು ಹೋಗಿಬಿಡುತ್ತಾರೆ."
ನಾನು ಕೇಳಿದೆ - " ಅಣ್ಣ, ಇದು ಅವರ ಭಾವನೆಗೆ ಸಂಬಂಧ ಪಟ್ಟ ಪ್ರಶ್ನೆ ಅಲ್ಲವೇ ? ದೇವರು ಅನ್ನುವುದು ಕೆಲವರಿಗೆ ಕಲ್ಪನೆ, ಕೆಲವರಿಗೆ ಭಯ, ಕೆಲವರಿಗೆ ಭಕ್ತಿ, ಕೆಲವರ ಶಕ್ತಿ. ದೇವರು ನಮಗೆ ಕಾಣಿಸನು. ಆದರೂ ಅವನಿದ್ದಾನೆಂದು ನಮ್ಮ ಮನಸ್ಸಿಗೆ ತಿಳಿಯುತ್ತದೆ. ಅವರಿಗೆ ಇದು ಸರಿಹೊಂದುವುದಿಲ್ಲವೆಂದ ಮೇಲೆ ಅದರ ಪೂಜೆ ಬಿಡುವುದರಲ್ಲಿ ತಪ್ಪೇನಿದೆ ?"
ಆಗ ನಮ್ಮ ತಂದೆ ಒಂದು ಪ್ರಶ್ನೆ ಕೇಳಿದರು - " ನಾವು ದೇವರು ಎಂಬುವುವನನ್ನು ನಂಬುವುದು ಯಾಕೆ ?"
ನಾನು ಏನೂ ಉತ್ತರಿಸಲಿಲ್ಲ.
ಆಗ ಅವರೇ ಮುಂದುವರೆಸುತ್ತಾ " ನೋಡು, ನಿನ್ನದೇ ಭಾಷೆಯಲ್ಲಿ ಹೇಳುವುದಾದರೆ, ದೇವರು ಎನ್ನುವ entity ಇರುವುದೇ ನಮ್ಮನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುವುದಕ್ಕೆ. ಅವನು ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಕೊಡುವವ. ನೀನು ಒಳ್ಳೆ ಪ್ರಯತ್ನ ಮಾಡಿದರೆ ನಿನಗೆ ಒಳ್ಳೆ ಫಲದೊರೆಯುತ್ತದೆ. ನೀನು ಏನೂ ಪ್ರಯತ್ನ ಮಾಡದಿದ್ದರೆ ಏನೂ ದೊರೆಯದು.
ದೇವರು ನಮಗೆ ಖಂಡಿತಾ ಕೆಟ್ಟದ್ದು ಮಾಡುವುದಿಲ್ಲ ಎಂಬುದೇ ಸಕಲ ವೇದಾಂತದ ಸ್ಥೂಲ ಸಾರಂಶ. ದೇವರು ನಮಗೆ ಆಗಬಂದಿಲ್ಲ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ. ಅವರು ಅದಕ್ಕೆ ಇಲ್ಲಸಲ್ಲದ್ದನ್ನು ಹೊಂದಿಸಿ ಹೇಳುತ್ತಿರುತಾರೆ ಹೊರತು ಸತ್ಯ ಅದಲ್ಲ.ಕೆಟ್ಟ ದೇವರು ಎಂದು ಎಲ್ಲಾದರೂ ಇದೆಯೇ ?ಹೇಳು ನೋಡೋಣ ? " ಎಂದರು.
ನಾನು ಹಾಗೇ ಯೋಚಿಸುತ್ತಿದ್ದೆ.ಆಗ ಅಮ್ಮ," ಭಿನ್ನವಾದ ವಿಗ್ರಹಗಳನ್ನೆಲ್ಲಾ ಪುಣ್ಯಕ್ಷೇತ್ರದ ನದಿಗಳಲ್ಲಿ ತೇಲಿಬಿಡುವುದನ್ನು ನೋಡಿದ್ದೇನೆ. ಕೆಲವರು ಹಳೆಯ ಫೋಟೋಗಳನ್ನು ಕೂಡಾ ತೇಲಿಬಿಡುವುದನ್ನು ನೋಡಿದ್ದೇನೆ." ಅಂದರು.
ಆಗ ನಮ್ಮ ತಂದೆ, "ಇದರಲ್ಲಿ ಅನುಕೂಲತೆಗಳಿಗಿಂತ ಅನಾನುಕೂಲತೆಯೇ ಹೆಚ್ಚು. ಕೆಲ ಬುದ್ಧಿವಂತರು ಹಳೆಯ ಫೋಟೋಗಳನ್ನು ಫ್ರೇಮ್ ಸಮೇತ,ಗಾಜಿನ ಸಮೇತ ನದಿಯಲ್ಲಿ ತೇಲಿಬಿಡುತ್ತಾರೆ.ಅದು ತೇಲುತ್ತಾ ನದಿಯಲ್ಲಿ ಬಂಡೆಗಳಿಗೆ ತಾಗಿ ಒಡೆದು ಚೂರಾಗಿಹೋಗುತ್ತದೆ. ಮೊಳೆಗಳು, ಫ್ರೇಮಿನ ಗಾಜು ನದಿಯ ಜೀವಿಗಳಿಗೆ ಹಾನಿ ಉಂಟು ಮಾಡದೆಯೆ ಇರುತ್ತವೆಯೇ ? ಇವರ ಈ ಮೌಢ್ಯದಿಂದ ಎಷ್ಟೋ ಮೀನುಗಳು ಪಾಪ ನೋವನ್ನು ಅನುಭವಿಸುತ್ತಿವೆ. ಅದರ ಬದಲು ಫ್ರೇಮನ್ನು ತೆಗೆದು, ಗಾಜನ್ನು ಫ್ರೇಮಿನವರಿಗೇ ಕೊಟ್ಟರೆ ಅದು ಉಪಯೋಗವಾಗುತ್ತದೆಯಲ್ಲವೇ ? ಬರೀ ಫೋಟೋವನ್ನು ನದಿಯಲ್ಲಿ ತೇಲಿಬಿಡುವ ಬದಲು ಅದನ್ನ ಹರಿದು ಮಣ್ಣಿಗೆ ಹಾಕಲಿ. ಗೊಬ್ಬರವಾಗುತ್ತದೆ. ನೀರಿಗೆ ಬಿಟ್ಟರೂ ಅದು ಹರಿದೇ ಹರಿಯುತ್ತದೆ ಅಲ್ಲವೇ ? ಅದು ಹೀಗೆ ಉಪಯೋಗವಾಗಲಿ ಬಿಡು. ಫ್ರೇಮೂ ಹಾಳಾಗಿ ಹೋಗಿದ್ದರೆ ಅದನ್ನು ಹೋಮಕ್ಕೆ ಕಟ್ಟಿಗೆಯಂತೆ ಉಪಯೋಗಿಸಿಕೊಳ್ಳಲಿ ಬೇಕಿದ್ದರೆ. ಸಮಿತ್ತನ್ನು ಯಜ್ಞೇಶ್ವರನಿಗೆ ಅರ್ಪಿಸುವ ಮೊದಲು ಈ ಕಟ್ಟಿಗೆಯಿಂದ ಯಜ್ಞೇಶ್ವರನನ್ನು ಆಹ್ವಾನಿಸಿದರೆ ತಪ್ಪೇನು ಇಲ್ಲ. ಅಲ್ಲವೇ ?
ಇನ್ನು ಭಿನ್ನವಾದ ವಿಗ್ರಹಗಳನ್ನು, ಮೂರ್ತಿಗಳನ್ನು,ಶಿಲ್ಪಕಾರರಿಗೆ,ಮೂರ್ತಿ ಮಾಡುವವರಿಗೇ ಮತ್ತೆ ಕೊಡಲಿ...ಅವರಾದರೂ ಉಪಯೋಗಿಸಿಕೊಳ್ಳುತಾರೆ. "
ನಾನು ಕೇಳಿದೆ " ಇದೆಲ್ಲಾ ಸರಿ ಅಣ್ಣಾ... ಆದರೆ ಇದು ತಪ್ಪು, ಹೀಗೆ ಮಾಡಬೇಡಿ, ಹೀಗೆ ಮಾಡಿ ಎಂದು ಇವರಿಗೆ ತಿಳಿಸಿಹೇಳುವವರು ಯಾರು ? "
ಅಣ್ಣ ಉತ್ತರಿಸಿದರು- " ಇದೆಲ್ಲಾ ಆಗಬೇಕಿರುವು ಧರ್ಮಗುರುಗಳಿಂದ . ಗುರುಪೀಠದ ಮೇಲೆ ಕುಳಿತು ಮಾತನಾಡುವ ಅವರ ಮಾತುಗಳಿಗೆ ಬೆಲೆಯಿದೆ. ಜನರಿಗೆ ಅವರುಗಳ ಮೇಲೆ ನಂಬಿಕೆಯಿದೆ. ಅವರುಗಳು ಇದರ ಬಗ್ಗೆ ಗಮನ ಹರಿಸಿ ಜನರಿಗೆ ತಿಳಿಹೇಳಿದರೆ ಉತ್ತಮ."
ಕಾರಿನಲ್ಲಿ ವಾಪಸ್ಸು ಹೋಗುತ್ತಾ ನಾನು ಯೋಚನೆ ಮಾಡುತ್ತಿದ್ದೆ- ಅಲ್ಲ...ದೇವರನ್ನು ನಾವು ಸೃಷ್ಟಿಸಿದೆವೋ, ಅಥವಾ ಅವನೇ ನಮ್ಮನ್ನು ಸೃಷ್ಟಿಸಿದನೋ ಆ ಪ್ರಶ್ನೆ ಆಮೇಲೆ. ಆದರೆ, ನಾವು ಪರಸ್ಪರ ವಿರುದ್ಧವಾದ ಸಂಗತಿಗಳನ್ನು ಕ್ಷಣಮಾತ್ರವೂ ಚಿಂತಿಸದೇ, ಅದನ್ನು ಹಾಗೆಯೇ ನಂಬಿ ಮೌಢ್ಯತೆಯಿಂದ ಮೆರೆಯುತ್ತಿದ್ದು, ನಾವು ಪ್ರಗತಿಪರರು ಎಂದು ಬಿಂಬಿಸಿಕೊಳ್ಳುತ್ತಿದ್ದೇವಲ್ಲ...ನಾವೇಕೆ ಹೀಗೆ ?
ಹೌದು ! ಇಂದು ನಮ್ಮಮನ ಷಷ್ಟಿಪೂರ್ತಿ ! ಮುನ್ನೂರು ವರ್ಷ ಪಾಪ ನಮ್ಮಮ್ಮನನ್ನ ಆಂಗ್ಲರು ಬಹಳ ನೋಯಿಸಿದ್ದಾರೆ !ಅವಳ ಬಳಿ ಇದ್ದ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದು ಅವಳಿಗೆ ನೋವನ್ನು ಮಾತ್ರ ಉಳಿಸಿ ಹೋಗಿದ್ದಾರೆ. ಅದಕ್ಕಿಂತ ಮುಂಚೆಯೂ ಆಕೆ ಪಾಪ ಯಾರ ಯಾರ ಕೈಲೋ ಸಿಕ್ಕಿ ನೋವುಂಡು ಹಲುಬಿ ಹಣ್ಣಾಗಿ ಹೋಗಿದ್ದಳು. ಕಡೆಗೆ ಇವಳ ಮೌನ ವೇದನೆಯನ್ನು ನೋಡಲಾಗದೇ, ಅವಳ ಮುತ್ತಿನಂಥಾ ಮಕ್ಕಳು ಎಲ್ಲರೂ ಸೇರಿ ಆಂಗ್ಲರನ್ನು ಒದ್ದೋಡಿಸಿದರು. ಅಂದು, ಆಗಸ್ಟ್ ೧೫, ೧೯೪೭ರಂದು ನಮ್ಮಮ್ಮ ಮತ್ತೆ ಹುಟ್ಟಿದಳು ! ಸ್ವತಂತ್ರಳಾಗಿ ! ಭಾರತಿಯಾಗಿ ! ಅಮ್ಮ....ಹುಟ್ಟು ಹಬ್ಬದ ಶುಭಾಶಯಗಳು !
ನಮ್ಮಮ್ಮ ಯಾರೆಂದು ಗೊತ್ತಾಯ್ತಲ್ಲ ?
ಹೌದು...ಇಂದು ಸ್ವತಂತ್ರ ಭಾರತದ ೬೦ನೆಯ ಸ್ವಾತಂತ್ರ್ಯೋತ್ಸವ. ಅವಳ ಮಕ್ಕಳಾದ ನಮ್ಮೆಲ್ಲರಿಗೂ ಇದು ಸಂತೋಷದ ದಿನ. ಯಾರಿಗೆ ಇದರ ಸಂಭ್ರಮ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ, ನನಗಂತೂ ಸಂಭ್ರಮದ ದಿನವೇ !
ನಿಜ ಹೇಳುತ್ತಿದ್ದೇನೆ, ಇಷ್ಟು ವರ್ಷ ಸ್ವಾತಂತ್ರೋತ್ಸವದ ಬಗ್ಗೆ ನನಗೇನೂ ವಿಶೇಷ ಆಸಕ್ತಿ, ಆಸ್ಥೆ ಇರಲಿಲ್ಲ. ದಿನಾ ಬೆಳಿಗ್ಗೆ ದಿನ ಪತ್ರಿಕೆಯಲ್ಲಿ ದೇಶದ ವ್ಯವಸ್ಥೆ ಹದಗೆಡುತ್ತಿರುವುದನ್ನು ಓದಿದಾಗಲೆಲ್ಲ " ನಮ್ಮ ದೇಶ ಉದ್ಧಾರವಾಗೋದೇ ಇಲ್ಲ " ಎಂದೇ ಗೊಣಗುತ್ತಿದ್ದೆ. ಮೊನ್ನೆಯವರೆಗೂ ! ಆದರೆ ನನ್ನ ಕಣ್ಣು ತೆರೆಸಿದ್ದು ಒಂದು ಪುಸ್ತಕ !
ಅಮೇರಿಕಾದಲ್ಲಿ ಗೊರೂರು ಎಂಬ ಪುಸ್ತಕವನ್ನು ಹೋದ ಶುಕ್ರವಾರದಷ್ಟೇ ಕೊಂಡು ತಂದೆ. ಗೊರೂರರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ಅಮೇರಿಕೆಗೆ ಹೋಗಿದ್ದು ಅವರ ಎಂಭತ್ತನೆಯ ವಯಸ್ಸಿನಲ್ಲಂತೆ! ಅಲ್ಲಿನ ಸುಖಗಳನ್ನ ಹೊಗಳಿದರೂ ಅವರು ನಮ್ಮ ದೇಶದ ಅಭಿಮಾನವನ್ನು ಬಿಡಲಿಲ್ಲ. ಛೆ ! ನಮ್ಮ ದೇಶದಲ್ಲಿ ಇವೆಲ್ಲ ಏನೂ ಇಲ್ಲ ! ನಮ್ಮ ದೇಶದ ವ್ಯವಸ್ಥೆ ಸರಿಯಿಲ್ಲ...ಅಂತೆಲ್ಲ ಅವರು ಗೊಣಗಲಿಲ್ಲ ! ಮಹಾತ್ಮರು ಅವರು !
ಈ ಪುಸ್ತಕವನ್ನು ಓದುತ್ತಾ ಹೋದಂತೆ ನನಗನ್ನಿಸಿತು...ನನಗೆ ಈ ದೇಶದ ಬಗ್ಗೆ ಗೊಣಗಲು ನಿಜವಾಗಲೂ ಹಕ್ಕಿದೆಯೇ ? ನಾನು ನನ್ನ ದೇಶಕ್ಕೆ ಏನು ಸಹಾಯ ಮಾಡಿದ್ದೇನೆ ? ಗೊಣಗುವುದು, ಬೈಯ್ಯುವುದು ಬಿಟ್ಟರೆ ನಾನೇನೂ ಮಾಡಿಲ್ಲ. ಸಮಾಜ ಸೇವೆ ? ಉಹು ! ಏನೂ ಮಾಡದೇ ನಾನು ಅನ್ನುವುದು ಸರಿಯೇ ?
ಹೀಗೆ ಯೋಚಿಸುತ್ತಿರುವಾಗಲೇ ನನಗೊಂದು ಈಮೈಲ್ ಬಂದಿತು...ಅದರಲ್ಲಿ ಒಂದು quote ನನ್ನ ಕಣ್ತೆರೆಸಿತು. ಮಾಜಿ ರಾಷ್ಟ್ರಪತಿ ಡಾ|| ಏ.ಪಿ.ಜೆ .ಅಬ್ದುಲ್ ಕಲಾಮ್ ಅವರು ಹೈದ್ರಾಬಾದಿನಲ್ಲಿ ಮಾತನಾಡುತ್ತಾ , ನಾವು ಯಾಕೆ ನಕಾರಾತ್ಮಕ ಮನೋಭಾವಗಳಾನ್ನು ಹೊಂದಿದ್ದೇವೆ ಎಂದು ಪ್ರಶ್ನಿಸುತ್ತಾ, ಅಮೇರಿಕೆಯ ಅಧ್ಯಕ್ಷ ಜಾನ್ ಎಫ್ ಕೆನ್ನೆಡಿಯ ಮಾತೊಂದನ್ನು ಉಲ್ಲೇಖಿಸುತ್ತಾರೆ- "ask not what your country can do for you -- ask what can you do for your country."
ಇದನ್ನು ಓದಿದ ಮೇಲೆ ನನಗೆ ನಾನು ಮಾಡುತ್ತಿದ್ದ ತಪ್ಪಿನ ಅರಿವಾಯ್ತು. ಈ ಸ್ವಾತಂತ್ರೋತ್ಸವದ ದಿನ ನಾನು ನಮ್ಮಮ್ಮನಿಗೆ ಶುಭಾಶಯ ಕೋರುತ್ತಾ ಅವಳಿಗೆ ಈತರಹದ ಉಡುಗೊರೆ ಕೊಡಲಿಚ್ಛಿಸುತ್ತೇನೆ -
"ಅಮ್ಮ, ಇನ್ನು ಮುಂದೆಯಿಂದ ನಾನು ವ್ಯವಸ್ಥೆಯನ್ನು ಬೈಯ್ಯುವುದಿಲ್ಲ. ಅವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾದಷ್ಟು ಪ್ರಯತ್ನ ಪಡುತ್ತೇನೆ, ನಿಜವಾಗಿಯೂ. ನನ್ನೊಬ್ಬಳಿಂದ ಅದು ಆಗದಿದ್ದರೆ ನನಗೆ ಗೊತ್ತಿಲ್ಲ. ನನ್ನ ಕೈಯಲ್ಲಿ ಕೊಡಲ್ಲು ಸಾಧ್ಯವಾಗುವುದು ಇಷ್ಟೆ ಕಣಮ್ಮ- ಪ್ರಯತ್ನ "