Thursday, September 3, 2009

ಗೌರಿ ಬಾಗಿನ- ನಾ ನ ನ ನಾ ನಾ? ?

ಈ ಸರ್ತಿ ಗೌರಿ ಮತ್ತು ಗಣೇಶ ಸಿಕ್ಕಾಪಟ್ಟೆ ಬ್ಯುಸಿ ಇದ್ದ ಹಾಗೆ ಕಂಡರು. ಇಬ್ಬರೂ ಒಂದೇ ದಿನ ಧರೆಗೆ ಬಂದಿದ್ದರು ! ಅಲ್ಲದೇ ಭಾನುವಾರವೇ ಬಂದಿದ್ದರು, ಎಲ್ಲರಿಗೂ ಅನುಕೂಲವಾಗಲಿ ಅಂತ ! ಇರಲಿ, ಜೈ ಗೌರಿ ಗಣೇಶ !

ಗೌರಿ ಗಣಪತಿ ಹಬ್ಬ ಹಿಂದೆ ಸಾಂಪ್ರದಾಯಿಕವಾಗಿತ್ತು, ಆಮೇಲೆ ಸಾಮಾಜಿಕವಾಯ್ತು. ಈಗ ಅಪ್ಪಟ ವ್ಯಾವಾಹಾರಿಕವಾಗಿದೆ . ಗೌರಿ ಹಬ್ಬದಲ್ಲಿ ಒಬ್ಬಟ್ಟಿಗೆ ಮೊದಲು ಪ್ರಾಮುಖ್ಯತೆ ಇದ್ದರೆ ಎರಡನೆಯದು ಗೌರಿ ಬಾಗಿನಕ್ಕೆ. ಎಲ್ಲ ಧಾನ್ಯಗಳು, ತೆಂಗಿನಕಾಯಿ, ಹಣ್ಣುಗಳು, ಮತ್ತು ಉಡುಗೊರೆಗಳನ್ನು ಬಿದಿರಿನ ಮೊರಗಳಲ್ಲಿ ನೀಡುವ ಸಂಪ್ರದಾಯವಿದೆ. ಇದರ ಉದ್ದೇಶ ಇಷ್ಟೇ. ಸಕಲ ಧಾನ್ಯಗಳನ್ನು ಕೊಡುವ ಉದ್ದೇಶ ಸ್ವಯಂಪಾಕ. ದೇವಿಗೆ ನಾವು ಸಮರ್ಪಿಸುವ ಮಹಾನೈವೇದ್ಯದ ಜೊತೆಗೆ ಇದನ್ನೂ ಕೊಡುವ ಉದ್ದೇಶ ಅವಳಿಗೆ ಇನ್ನೇನು ಏನು ಸ್ವೀಕರಿಸಲು ಇಚ್ಛೆ ಇದ್ದರೆ ಅದೂ ಸಹ ಧಾನ್ಯಗಳ ಮೂಲರೂಪದಲ್ಲಿ ನೆರವೇರಲಿ ಅಂತ. ಅವಳು ಸಂತೃಪ್ತಳಾಗಿ ನಮ್ಮನ್ನು ಹರಸಲಿ ಅಂತ.

ಈಗ ಬಾಗಿನದ ಸಾಮಾಜಿಕ ಔಚಿತ್ಯದ ವಿಷಯಕ್ಕೆ ಬರೋಣ. ಹಿಂದಿನ ಕಾಲದಲ್ಲಿ ಧಾನ್ಯಗಳ ಕಟಾವು, ಸುಗ್ಗಿ, ಎಲ್ಲ ವೈಭವೋಪೇತವಾಗಿ ಆಚರಿಸಲ್ಪಡುತ್ತಿದ್ದವು. ತಮ್ಮ ಗದ್ದೆಯಲ್ಲಿ ಬೆಳೆದ ಧಾನ್ಯಗಳ ಗುಣಮಟ್ಟ ಹೇಗಿದೆ ಅನ್ನುವುದನ್ನ ಬೇರೆಯವರು ಸವಿದು ಹೇಳುವುದು ಉಚಿತವೆಂದು ಭಾವಿಸಿ, ಹಬ್ಬದ ನೆಪ ಮಾಡಿ, ಧಾನ್ಯದ ವಿನಿಮಯ ಮಾಡಲಾಗುತ್ತದೆ. ಆಗ ಸೇರುಗಳಲ್ಲಿ ನೀಡಲಾಗುತ್ತಿತ್ತು, ಈಗ ಅದು ಚಟಾಕಿಗಿಂತ ಕಡಿಮೆಗೆ ಇಳಿದಿದೆ, ಕಾಲಾಯ ತಸ್ಮೈ ನಮಃ. ಅಕ್ಕ ತಂಗಿಯರಿಗೆ, ಮಿತ್ರವರ್ಗಕ್ಕೆ ಬಾಗಿನದ ಜೊತೆ ಉಡುಗೊರೆಗಳನ್ನು ಕೊಡಲಾಗುತ್ತಿತ್ತಾದ್ದರಿಂದ ಬಾಂಧವ್ಯ ಇನ್ನೂ ಹೆಚ್ಚುತ್ತಿತ್ತು, ಮತ್ತಷ್ಟು ಬೆಳೆಯುತ್ತಿತ್ತು.

ಈಗ ಬಾಗಿನದ ವ್ಯಾವಾಹಾರಿಕತೆಗೆ ಬರೋಣ. ಬಾಗಿನ ಕೊಡುವುದು ಈಗ ಕೇವಲ ಕಾಟಾಚಾರ ಆಗಿಹೋಗಿದೆ. ಕೆಲವರಿಗೆ ಅದು "ಹೊರೆ" ಅನ್ನಿಸಿಬಿಟ್ಟಿದೆ. ಹತ್ತು ಸಾವಿರಕ್ಕಿಂತ ಒಂದು ರುಪಾಯಿಯೂ ಕಡಿಮೆ ಇರದ ಸೀರೆ ಕೊಳ್ಳಲು ಮುಖ ಮುಲಾಜು ನೋಡದ ಅವರು, ಐದು ಜನರಿಗೆ ಬಾಗಿನ ನೀಡಲು ಬೇಕಾಗುವ ಅರ್ಧ ಕೇಜಿ ಅಕ್ಕಿ ಕೊಳ್ಳಲು ಸಾವಿರ ಸರ್ತಿ ಯೋಚನೆ ಮಾಡುತ್ತಾರೆ. ಬಾಗಿನದ ಮೊರಗಳನ್ನು ಮಾರುವವರ ಬಳಿ ಗಂಟಾನುಗಟ್ಟಲೆ ಜಗಳಕ್ಕೆ ನಿಲ್ಲಲು ತಯಾರಿರುತ್ತಾರೆ. ಮಾತಾಡಿದ್ದೂ ಆಡಿದ್ದೇ - " ಎಲ್ಲರಲ್ಲೂ ದೇವರಿರುತ್ತಾರೆ, ಅವರಿಗೆ ನಮಸ್ಕಾರ ಮಾಡಬೇಕು, ಬೇರೆಯವರಿಗೆ ದಾನ ಕೊಡುವಾಗ ಖರ್ಚಿನ ಮುಖ ನೋಡಬಾರದು" ಹಾಗೆ ಹೀಗೆ. ಆದರೆ ಬಾಗಿನ ಕೊಡುವ ಇಂತಹ ಹಬ್ಬ ಬಂದಾಗ " ನಮ್ಮನೆಯಲ್ಲಿ ಬಾಗಿನ ಕೊಡುವ ಸಂಪ್ರದಾಯ ಇಲ್ಲ, ಬರಿ ಬಾಗಿನ ತೆಗೆದುಕೊಳ್ಳುವ ಸಂಪ್ರದಾಯ ಇದೆ ! " ಮತ್ತು " ಹಬ್ಬದ ಖರ್ಚು ಹೆಚ್ಚಲ್ಲವೇ ? (?) ಬಾಗಿನ ಎಲ್ಲ ಯಾರು ಕೊಡುತ್ತಾರೆ ? ಸದ್ಯ ಪೂಜೆ ಮಾಡಿ ಊಟವಾದರೆ ಸಾಕಾಗಿದೆ ! " ಇವೇ ಮುಂತಾದ ಆಣಿ ಮುತ್ತುಗಳು ಸಾರಾಸಗಟಾಗಿ ಕೇಳಸಿಗುತ್ತವೆ. ಮತ್ತೆ ಕೆಲವರು ಬಾಗಿನ ಕೊಡುತ್ತಾರೆ- ಹುಳು ಬಂದ ಅಕ್ಕಿ, ತೂತಾದ ಬೇಳೆ ಕಾಳು ! ಈ ಪುರುಷಾರ್ಥಕ್ಕೆ ಬಾಗಿನ ಕೊಡಬೇಕ್ಯಾಕೆ ? "ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮೊಳಹಾಕಿದರು" ಅಂತ ಬೈದುಕೊಳ್ಳಬೇಡಿ ನೀವೆಲ್ಲರೂ, ಆದರೆ ವಿಷಯದ ಸೂಕ್ಷ್ಮವನ್ನು ಗಮನಿಸಿ. ಬಾಗಿನ ಕೊಡುವುದು ಏಕೆ ? ಬಾಗಿನ ತೆಗೆದುಕೊಂಡವರು ನಮ್ಮನ್ನು ಆಶೀರ್ವದಿಸಿ ಹರಸಲಿ ಅಂತಲ್ಲವೇ ? ನಮ್ಮ ಆಶೀರ್ವಾದ ಫಲಿಸುವುದು ಎಷ್ಟು ನಿಜವೋ, ಹುಳು ತುಂಬಿದ ಅಕ್ಕಿ ಬೇಳೆ ನೋಡಿದ ತಕ್ಷಣ ಬರುವ ನಿಟ್ಟುಸಿರು ಫಲಿಸುವುದೂ ಅಷ್ಟೇ ನಿಜವಲ್ಲವೇ ? ನಾವು ಒಳ್ಳೆ ವಸ್ತುಗಳನ್ನು ಕೊಟ್ಟರೆ ನಮಗೆ ಒಳ್ಳೆಯದಾಗುತ್ತದೆ, ಕೆಟ್ಟದ್ದು ಕೊಟ್ಟರೆ ಕೆಟ್ಟದಾಗುತ್ತದೆ ಅನ್ನೋದು ಭೌತಶಾಸ್ತ್ರದ ಸಹಜ ನಿಯಮ ಅಲ್ಲವೇ ? ಭೌತಶಾಸ್ತ್ರದ ವಿಷಯ ಬದಿಗಿರಲಿ, ಅದು ಸಾಮಾನ್ಯ ಪ್ರಜ್ಞೆ ಅಲ್ಲವೇ ? ನಾವು ಕೆಟ್ಟ ವಸ್ತುಗಳನ್ನು ಕೊಡಬಹುದು, ಆದರೆ ನಮಗೆ ಮಾತ್ರ ಸದಾ ಒಳ್ಳೆಯ ವಸ್ತುಗಳೇ ಸಿಗಬೇಕು, ಒಳ್ಳೆಯದೇ ಆಗುತ್ತಿರಬೇಕು ಅಂತ ಬಯಸುವುದು ಮೂರ್ಖತನದ ಪರಮಾವಧಿಯಲ್ಲವೇ ?

ಇನ್ನು ಈಗಿನ ಕಾಲದ ನನ್ನ ಪುಟ್ಟ ತಂಗಿಯರು- ಅವರಿಗೆ ಬಾಗಿನ ಕೊಡೋದು ಬೋರ್ ಅಂತೆ, ಕ್ರಿಸ್ಮಸ್ ಸಮಯದಲ್ಲಿ ಸೀಕ್ರೆಟ್ ಏಂಜೆಲ್ ಗಳಾಗಿ ಅವರ ಮಿತ್ರರಿಗೆ ಮತ್ತು ಅಕ್ಕ ತಂಗಿಯರಿಗೆ ಗಿಫ್ಟ್ ಕೊಡುವುದು ಥ್ರಿಲ್ಲ್ ಅಂತೆ ! ನಾನು ಕೇಳಿದೆ- "ಬಾಗಿನಕ್ಕೆ ಎರಡು ಮೊರಗಳಿರುತ್ತವೆ- ಬಾಗಿನವನ್ನು ಮುಚ್ಚಿ ಕೊಡಲಾಗುತ್ತೆ. ಅದನ್ನ ತೆಗೆದು ನೋಡಿದರೆ ಅದರಲ್ಲಿರುವ ಉಡುಗೊರೆ ನೋಡಿ ಥ್ರಿಲ್ ಆಗುತ್ತದೆ. ಮತ್ತು ಯಾರು ಬಾಗಿನ ಕೊಡಲು ಬರುತ್ತಾರೋ ಅವರು ಏಂಜಲ್ ಗಳಲ್ಲವೇ ? " ಇದಕ್ಕೆ ಉತ್ತರ- "Oh really ? " ಎಂಬ ಮತ್ತೊಂದು ಪ್ರಶ್ನೆ ! ನನ್ನ ತಂಗಿ ಮತ್ತು ನಾನು ನಮ್ಮ ಸ್ನೇಹಿತೆಯರು ಯಾರಿಗೂ ಬಾಗಿನ ಕೊಡದ ಕಾರಣ ಅವರಿಗೆ ಇಂತಹಾ "ಬಾಗಿನ ordeal (?!) " ಗಳಲ್ಲಿ ನಂಬಿಕೆ ಇಲ್ಲದಿರುವುದು. ನಾನು ನನ್ನ ತಂಗಿಗೆ, ಅವಳು ನನಗೆ ಬಾಗಿನ ಕೊಟ್ಟುಕೊಂಡು ಸುಮ್ಮನಾದೆವು.

ನಮ್ಮ ಆಚರಣೆಗಳ ಅರ್ಥ ತಾತ್ಪರ್ಯಗಳನ್ನು ಸರಿಯಾಗಿ ತಿಳಿದುಕೊಳ್ಳದೇ, ಅವುಗಳನ್ನು ನೆಟ್ಟಗೆ ಆಚರಿಸದೇ, ಇನ್ಯಾವುದೋ ಪದ್ಧತಿಯನ್ನೂ ಸಹ ಸರಿಯಾಗಿ ಅರ್ಥೈಸದೇ ಸುಮ್ಮನೆ ತೋರ್ಪಡಿಕೆಗಾಗಿ ಹಬ್ಬಗಳನ್ನು ಆಚರಿಸುತ್ತೀವಲ್ಲಾ...ನಾವೇಕೆ ಹೀಗೆ ?