Monday, June 23, 2008

guess ?

ನಿಮ್ಮನ್ನು ಏನನ್ನು guess ಮಾಡಲು ಕೇಳುತ್ತಿಲ್ಲ, ಇದೊಂದು ಪದದಿಂದ ಆದ ಅವಾಂತರದ ಬಗ್ಗೆ ತಿಳಿಯಪಡಿಸಲು ಇಚ್ಛಿಸುತ್ತೇನೆ.

ಆರೇಳು ವರ್ಷದ ಹಿಂದಿನ ಮಾತು. ನಮ್ಮ ತಂದೆ ತಾಯಿ ಇಬ್ಬರೂ ಊರಿಗೆ ಹೊರಟಿದ್ದರು. ನಮ್ಮ ತಂದೆಯ ಆಫೀಸಿನಲ್ಲಿ ಈಶ್ವರಯ್ಯ ಎನ್ನುವವರೊಬ್ಬರು ಕೆಲಸ ಮಾಡುತ್ತಿದ್ದರು. ಅವರಿಗೆ ಒಂದು ಮುಖ್ಯವಾದ ಸಂದೇಶವನ್ನು ತಲುಪಿಸಬೇಕಿತ್ತು. ಅವರು ಫೋನಿಸಿದರೆ ವಿಷಯವನ್ನು ಹೇಳಿಬಿಡು ಎಂದು ನಮ್ಮ ತಂದೆ ಹೇಳಿ ಹೋದರು. ಅವರು ಹೊರಟ ಹತ್ತು ನಿಮಿಷದಲ್ಲೇ ಫೋನ್ ಬಂದಿತು.

ನಾನು : ಹಲೋ...ಯಾರು ಮಾತಾಡುತ್ತಿರುವುದು ?

ಆತ: guess ?

ನಾನು : sorry, ಗೊತ್ತಾಗುತ್ತಿಲ್ಲ.

ಆತ : ನಾನು ಈಶ್ವರಯ್ಯ .

ನಾನು : ಅಂಕಲ್ ....ಅಪ್ಪ ನಿಮಗೆ ಈ ವಿಷಯ ಹೇಳು ಅಂತ ಹೇಳಿದರು.....ಆಫೀಸಿನಲ್ಲಿ ಇವತ್ತು.....

ಆತ : ಹ ಹಹಹಹಹಹ!!!!

ನಾನು : ಯಾಕೀ ನಗು ?

ಆತ : ನನ್ನ voice ಕಂಡುಹಿಡಿಯಲು ಆಗ್ಲಿಲ್ವಾ ?guess ಮಾಡಕ್ಕೆ ಬರಲ್ವಾ ? ನಾನು ಈಶ್ವರಯ್ಯ ಅಲ್ಲ....ಶ್ರೀರಾಮ.

ಸದ್ಯ ನಾನು ಪೂರ್ತಿ ವಿಷಯ ಹೇಳುವುದರ ಮುಂಚೆಯೇ ಹೀಗೆ ಹೇಳಿದರು ಪುಣ್ಯಾತ್ಮರು !!!

ನಮ್ಮನ್ನು voice identifiers ಎಂದುಕೊಳ್ಳುವ ಜನರ ಬುದ್ಧಿಗೆ ಏನೆಂದುಕೊಳ್ಳಬೇಕು ?

ಬೆಳಗ್ಗೆ ಹೊತ್ತು ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ವಿಪರೀತ ಬ್ಯುಸಿಯಾಗಿರುತ್ತಾರೆ....ಆಗ ಕೆಲವರು (ಆವತ್ತು ಅವರು ಆಫೀಸಿಗೆ ರಜೆ ಹಾಕಿ ಲೋಕಕ್ಕೇ ರಜೆ ಇದೆ ಎಂದು ಭಾವಿಸಿ) ಫೋನಿಸಿ, "ನಾವು ಯಾರೆಂದು guess ಮಾಡಿ ? "ಎಂದು ಗೋಳುಹೊಯ್ಯ್ದುಕೊಳ್ಳುವುದರಲ್ಲಿ ಅದೆಂತಹ thrill ಸಿಗತ್ತೆ ?

ಇನ್ನೊಮ್ಮೆ ಹೀಗಾಯ್ತು ...

ನಾನು : ಹಲೋ....

ಆತ : ನೀನು ಲಕ್ಷ್ಮಿ ಎಂದು ನಾನು ಗುರುತಿಸಿದ್ದೇನೆ. ಈಗ ನಾನು ಯಾರೆಂದು ನನ್ನ ಧ್ವನಿ ಗುರುತಿಸು.

ನಾನು : ಸರ್ವಾಂತರ್ಯಾಮಿಗಳಿಗೆ ನಮೋ ನಮಃ. ನಾನು ಅಜ್ಞೆ. ದಯಮಾಡಿ ನಿಮ್ಮ ಹೆಸರನ್ನು ಹೇಳಿ.

ಆತ : ಏನು ಇಷ್ಟು ಬೇಗ patience ಕಳೆದುಕೊಂಡರೆ...ನೀನಿನ್ನು ಓದುವ ಹುಡುಗಿ...ನೆನಪಿನ ಶಕ್ತಿ ಚೆನ್ನಾಗಿದೆಯಾ ಇಲ್ವ ಅಂತ ಪರೀಕ್ಷೆ ಮಾಡುತ್ತಿದ್ದೇನೆ. ಹೇಳು ನಾನು ಯಾರು !

ನಾನು : ಅಂಕಲ್, ಈಗ ಸಮಯ ಬೆಳಗ್ಗೆ ಎಂಟು ಮುಕ್ಕಾಲು. ನಾನು ಕಾಲೇಜಿಗೆ ಹೊರಟಿದ್ದೇನೆ. ನೀವು ಪರಿಚಿತರು ಹೌದು . ಆದರೆ ಗುರುತಿಸಲಾಗುತ್ತಿಲ್ಲ. ನನ್ನ ನೆನಪಿನ ಶಕ್ತಿ, ಗ್ರಹಣ ಶಕ್ತಿ, ಇವೆಲ್ಲವನ್ನು ನೀವು ನಂತರ ಪರೀಕ್ಷಿಸಿ...ಯಾರು ಮಾತಾಡುತ್ತಿರುವುದು ?

ಆತ : ಹೇಳೊಲ್ಲ.

ನಾನು ಫೋನ್ ಕಟ್ ಮಾಡಿದೆ. ನಾನು ಹಾಗೆ ಮಾಡಿದ್ದಕ್ಕೆ ನಂತರ ಅವರು ಫೋನ್ ಮಾಡಿ ನಮ್ಮ ತಾಯಿ ತಂದೆಯರಿಗೆ "ಏನ್ರಿ ನಿಮ್ಮ ಮಗಳಿಗೆ patience " ಏ ಇಲ್ಲ ? ಅಂದರಂತೆ !!

ನಾನು ಅವರಿಗೆ ಒಮ್ಮೆ ಹೀಗೆ "guess " ಮಾಡಿ ಎಂದು ಕೇಳಲು ಹವಣಿಸುತ್ತಿದ್ದೇನೆ. thrill ಗಾಗಿ ಅಲ್ಲ....ಅವರಿಗೆ ತಕ್ಕ ಪಾಠ ಕಲಿಸಲು ! ಅವರು ನನ್ನನ್ನು ಬೈದರು ಎಂದಲ್ಲ...ಆದರೆ ಪರಿಸ್ಥಿತಿಯ ಕಲ್ಪನೆ ಇಲ್ಲದಿದ್ದರೂ ಸಾಮಾನ್ಯ ಪ್ರಜ್ಞೆ ಇರಬೇಕಲ್ಲವೇ ?

ಇನ್ನು caller ID ಫೋನ್ ಗಳು ಬಂದವು. ಹತ್ತಿಪ್ಪತ್ತು ನಂಬರ್ ಗಳು ಮಾತ್ರ store ಮಾಡಬಹುದಿತ್ತು. ಮಿಕ್ಕೆಲ್ಲವೂ ಬರೀ ನಂಬರ್ ಗಳೇ. ಈ ಸರ್ತಿ ನಮ್ಮ ತಂದೆಯ ಸರದಿ. ಅವರದೆ ಯಾರೋ ಒಬ್ಬ ಸ್ನೇಹಿತರು ಬೇರೆ ಊರಿನಿಂದ ಬಂದಿದ್ದರಂತೆ...ನಮ್ಮ ತಂದೆಯೊಡನೆ ಮಾತಾಡಲಿಚ್ಛಿಸಿ ರಾತ್ರಿ ಹನ್ನೊಂದಕ್ಕೆ ಫೋನಿಸಿದರು ಮಹಾನುಭಾವರು.

ಆತ : ಏನೋ...ನಾನು ಯಾರೆಂದು ಗೊತ್ತಾಯ್ತ ?

ನನ್ನ ತಂದೆ: ಇಲ್ವಲ್ಲಾ .....

ಆತ : caller ID ಲಿ ನಂಬರ್ ನೋಡೊ ! ನೆನ್ಪಾಗ್ಲಿಲ್ವಾ ?

ನನ್ನ ತಂದೆ: ಇಲ್ಲ.

ಆತ : ನನಗೆ ನಿನ್ನ ನಂಬರ್ ನೆನ್ಪಿದೆ...ಏನ್ ಮಹರಾಯಾ...ನಿನಗೆ ಈ ಪರಂಧಾಮನ ಭಾವನ ತಮ್ಮನ ಮನೆಯ ನಂಬರ್ ನೆನಪಿಲ್ವ ?

ನಮ್ಮ ತಂದೆ: ಯಾವ ಪರಂಧಾಮ ? painter ? electrician? chief electrical inspectorate?

ಆತ : ಏನೋ....ಹೀಗೆ ಕೇಳ್ತಿಯಾ ?

ನಮ್ಮ ತಂದೆ : ಮಹಾನುಭಾವ...ನಿನಗೆ ನನ್ನ ಹೆಸರಿನವರು ಒಬ್ಬನೇ ಪರಿಚಯ ಇರಬಹುದು, ಆದರೆ ನನಗೆ ನಿನ್ನ ಹೆಸರಿನವನು ಒಬ್ಬನೇ ಪರಿಚಯ ಇದ್ದೀನೆಂದು ನೀನು ಹೇಗೆ ಅಂದುಕೊಂಡೆ ? ಸರ್ವೋತ್ತಿನಲ್ಲಿ ಫೋನ್ ಮಾಡಿದರೆ ನನಗೆ ಮೊದಲು ನನ್ನ ಕೆಲಸದಲ್ಲಿರುವವರು ನೆನಪಾಗುವರೇ ಹೊರತು ನೀನು ಹೇಗೆ ನೆನಪಾಗುತ್ತೀಯ ? ಎಲ್ಲಿ ಏನು ಆಯ್ತೋ ಎಂದೇ ಮನಸ್ಸು ಯೋಚಿಸುತ್ತದೆ. ನೀನು ನಂಬರ್ ಗಳನ್ನು ನೆನಪಿಟ್ಟುಕೊಂಡಿದ್ದೀಯ...ಭೇಷ್ ! ಮೆಚ್ಚಿದೆ ನಿನ್ನ ಬುದ್ಧಿಶಕ್ತಿಯನ್ನ...ನಾನು ವ್ಯಾಪಾರಸ್ಥ. ನೆನಪಿಟ್ಟುಕೊಳ್ಳುವ ನಂಬರ್ ಗಳು ಸಾವಿರಾರಿವೆ. prioritize ಮಾಡಲೇಬೇಕಾಗತ್ತೆ. ನೀನು ನೆನಪಿದ್ದೀ...ಆದರೆ ನಿನ್ನ ಭಾವ...ಅವರ ಪರಿಚಯ ಇಲ್ಲ, ಅವನ ತಮ್ಮ...ಗೊತ್ತೇ ಇಲ್ಲ...ಅವರ ನಂಬರ್ ನನಗೆ ಹೇಗೆ ಗೊತ್ತಾಗಬೇಕು ? ನೀನು ನಂಬರ್ ಗಳನ್ನು ಕರತಲಾಮಲಕ ಮಾಡಿಕೊಂಡ ಸರ್ವಜ್ಞನೇ... doubt ಇಲ್ಲ....ಆದರೆ ಎಲ್ಲರೂ ನಿನ್ನಂತೆ ಎಂದು ಭಾವಿಸಬೇಡಪ್ಪ...

ಆತನಿಗೆ ಬೇಜಾರಯಾತಂತೆ...ಆದರೆ ತಪ್ಪು ತಿದ್ದಿಕೊಂಡರು ಸಧ್ಯ...ಮುಂದಿನ ಸರ್ತಿ ಫೋನ್ ಮಾಡಿದಾಗ "ನಾನು ಮೈಸೂರಿನ ಪರಂಧಾಮ" ಎಂದರು !! ಸದ್ಯ !

ಇನ್ನು ಮೊಬೈಲ್ ಬಂದ ಮೇಲೆ ಎಲ್ಲರೂ ನಂಬರ್ ಗಳನ್ನು ಮರೆತೇಹೋಗಿದ್ದಾರೆ. ನಮ್ಮ ನಮ್ಮ ನಂಬರ್ ಗಳನ್ನೇ ಸ್ತೋರ್ ಮಾಡಿಟ್ಟುಕೊಳ್ಳುವಂತಾಗಿದೆ. ಬಸ್ಸಿನಲ್ಲಿ ಯಾರೋ ಒಬ್ಬರಿಗೆ ಪಾಪ ಇನ್ಯಾರೋ ಫೋನಿಸಿ ಹೀಗೆ "guess ??" ಎಂದು ಸತಾಯಿಸುತ್ತಿದ್ದರು.ಕಡೆಗೆ ಅದು ಅವರ ಸೋದರ ಮಾವ ಎಂದು ೨೦ ನಿಮಿಷ ಆದ ಮೇಲೆ ಹೇಳಿದರು ಆತ !ಹೊಸ ನಂಬರ್ ನನ್ನದು ಎಂದು ಹೇಳುವ ಹೊಸ ರೀತಿ ಇದು ಎಂದು ನಂತರ ಗೊತ್ತಾಯಿತು ! ನಾನು ಪಕ್ಕದಲ್ಲೇ ಕೂತಿದ್ದೆ. ನನಗೂ ಈ ಘಟನೆಗಳು ನೆನಪಾದವು.

ತಮಗೆ ಕೆಲಸವಿಲ್ಲದಿದ್ದರೆ, ಬಿಡುವಿದ್ದರೆ, ಲೋಕಕ್ಕೆಲ್ಲಾ ಬಿಡುವಿದೆ,ಎಂದು ತಿಳಿದು ಹೀಗೆ ಅತೀ ಕ್ಷುಲ್ಲಕವಾಗಿ ಆಡುತ್ತೀವಲ್ಲ ...ನಾವೇಕೆ ಹೀಗೆ ?

Monday, June 9, 2008

ಸಹಾಯ ಹಸ್ತ ನೀಡಬಾರದೇಕೆ ?

ಇವತ್ತು ಬೆಳಿಗ್ಗೆ ನನಗೆ ಸ್ನಾತಕೋತ್ತರ ಪದವಿಯ ಕಡೆಯ ಸೆಮೆಸ್ಟೆರ್ ನ ಒಂದು ಪರೀಕ್ಷೆ ಇತ್ತು. ವಿಷಯ ಬೇರೆ ಸಲ್ಪ ಕಷ್ಟಕರವಾಗೇ ಇತ್ತು.ಕಡೆ ನಿಮಿಷದ ತಯಾರಿಗಳು ಭರದಿಂದಲೇ ಸಾಗಿದ್ದವು. ಅದೇನೆ ಆದರೂ ಬೆಳಿಗ್ಗೆ ದಿನ ಪತ್ರಿಕೆಯ ಕಡೆ ಕಣ್ಣು ಹಾಯಿಸದೇ ನಾನು ಸಾಮಾನ್ಯವಾಗಿ ಹೊರಗೆ ಕಾಲಿಡೋದೇ ಇಲ್ಲ. ಎಂದಿನಂತೆ ಇಂದೂ ಸಹ ಮುಖ್ಯಾಂಶಗಳನ್ನು ಓದಿದೆ. ಅದರಲ್ಲಿ ನನ್ನ ಗಮನವನ್ನು ಸೆಳೆದ ವಾರ್ತೆ ಇದು.

ನಾನು ಒಂದು ಎರಡು ನಿಮಿಷ ಹಾಗೆಯೇ ನಿರ್ವಿಣ್ಣಳಾದೆ ! ಅಲ್ಲ....ಅಪಘಾತಕ್ಕೀಡಾದ ಜೀವವೊಂದು ಸಾವು ಬದುಕಿನ ಮಧ್ಯೆ ಹೋರಾಡುತ್ತಿರಬೇಕಾದರೆ ಹಾಗೆಯೇ ಸುಮ್ಮನೇ ನೋಡುತ್ತಿರುವುದರ ಅರ್ಥವೇನು ??? ಎಲ್ಲದಕ್ಕಿಂತ ಜಿಗುಪ್ಸೆ ತರಿಸುವ ವಿಷಯ ಏನಂದರೆ, ಜೀವ ಉಳಿಸಲು ನಾವೇಕೆ ಹಿಂಜರಿಯುತ್ತೇವೆಂದು ಜನರು ನೀಡಿರುವ ಸಮಜಾಯಿಷಿಗಳು ! ಪೋಲೀಸು, ಕಂಪ್ಲೈಂಟು, ಕೋರ್ಟು ಕಚೇರಿಯ ಜಂಜಾಟವಂತೆ..ಕಾರಿನ ಸೀಟು ರಕ್ತಸಿಕ್ತವಾಗುತ್ತವಂತೆ ! ಅಬ್ಬಬ್ಬಾ !!

ಇತ್ತೀಚೆಗೆ ನನಗೊಂದು ಈಮೈಲ್ ಬಂತು. ಇದು ಎಷ್ಟರ ಮಟ್ಟಿಗೆ ನಿಜವೆಂದು ಗೊತ್ತಿಲ್ಲ. ದಯಮಾಡಿ ಯಾರದರೂ ಪರೀಕ್ಷಿಸಿ ಇದರ ಸತ್ಯಾಸತ್ಯತೆಗಳ ಬಗ್ಗೆ ನನಗೆ ಮಾಹಿತಿ ಕೊಡಿ. ಹಾಗೆಯೇ ಇಂತಹ ಈಮೈಲ್ ಗಳ validation ಬಗ್ಗೆ ಸ್ವಲ್ಪ ಮಾಹಿತಿ ನೀಡಿ. ಆ ಫೈಲಿನ ಲಿಂಕ್ ಇಲ್ಲಿದೆ.

ಸಿನೆಮಾದ ಹೀರೋಗಳು ಹಾಕುವ ಬಟ್ಟೆ, ತೊಡುವ ವಾಚು, ನೇತುಹಾಕಿಕೊಳ್ಳುವ ಬ್ಯಾಗುಗಳನ್ನು ಅನುಕರಿಸದೇ, ಅಪಘಾತಕ್ಕೀಡಾದವರನ್ನು ಬದುಕಿಸಲು ಹವಣಿಸುವ ಆ ಬುದ್ಧಿಯನ್ನು ಕಲಿಯುವುದು ಒಳಿತಲ್ಲವೇ ? ಸಿನೆಮಾದಂತೆಯೇ ವೈಭವೀಕೃತವಾಗಿ, ಪವಾಡಸದೃಶ ರೀತಿಯಲ್ಲಿ ಸಹಾಯ ಮಾಡದಿದ್ದರೂ, ಮನುಷ್ಯತ್ವಕ್ಕೆ ತಿಲಾಂಜಲಿ ಬಿಡದೇ ಜೀವ ಉಳಿಸಲು ಪ್ರಯತ್ನ ಪಡಬೇಕಲ್ಲವೇ ?

ಪ್ರಯತ್ನ- ಮೂರಕ್ಷರದ ಪದ. ಇದಕ್ಕೆ ತ್ರಿಮೂರ್ತಿಗಳನ್ನು ಅಲ್ಲಾಡಿಸುವ ದೈತ್ಯ ಶಕ್ತಿಯಿದೆ !

ಸಾಯುತ್ತಿರುವ ಜೀವ ಯಾರದೋ ತಂದೆ, ಇನ್ಯಾರದೋ ತಾಯಿ, ಒಬ್ಬರ ಪತ್ನಿ, ಮಗದೊಬ್ಬರ ಪ್ರೇಯಸಿ, ಒಬ್ಬರ ಅಣ್ಣನೋ, ತಮ್ಮನೋ, ತಂಗಿಯೋ, ತಾತನೋ, ಏನಾದರೂ ಆಗಲಿ ! ಅದು ಆಮೇಲೆ. "ನಮ್ಮಂತೆಯೇ ಅವರು " ಅನ್ನುವ ಪ್ರಜ್ಞೆ ಮೊದಲು ನಮಗೆ ಜಾಗೃತವಾಗಬೇಕು. ನಮ್ಮ ದೌರ್ಭಾಗ್ಯದಿಂದ ನಾವೇ ಇಂತಹ ಪರಿಸ್ಥಿತಿಯಲ್ಲಿ ಸಿಲುಕಿದಾಗ ನಮಗೆ ಸಹಾಯ ಮಾಡಲು ಬಾರದೇ ಇದ್ದಾಗ ಪ್ರಾಯಶಃ ನಮಗೆ ಸತ್ಯದ ಅರಿವಾಗಬಹುದೇನೋ ! ಅವರೂ ನಮ್ಮ ಬಂಧುಗಳೇ ಎಂದು ನಮಗೆ ಅರಿವಾಗುವುದು ಯಾವಾಗ ?

ನಾವು ಇನ್ನೊಬ್ಬರಿಗೆ " ಸಾಯಿ...ಇದು ನಿನ್ನ ವಿಧಿ ! " ಎನ್ನಲಾದೀತೆ ? ನಮಗೆ ಬದುಕಲು ಇರುವ ತವಕ ಅವರಿಗೂ ಇಲ್ಲವೇ ? why don't we imagine ourselves in another person's shoes and thinkabout the situation for a nanosecond at least ?

ನಾವೂ ಸಹಾಯ ಹಸ್ತ ಚಾಚಬಾರದೇಕೆ ?

ನಾವೇಕೆ ಹೀಗೆ ?