Sunday, February 21, 2010

ಸಧ್ಯ ಕರೆಂಟು ಹೋಯ್ತು !

ಟೈಟಲ್ ನೋಡಿದ ತಕ್ಷಣ ನನಗೇನಾಗಿದೆ ಅಂತ ನೀವು ಯೋಚಿಸೋದು ಸಹಜ. ಪರೀಕ್ಷೆಯ ಈ ಸಮಯದಲ್ಲಿ ಕರೆಂಟಿಲ್ಲದೇ, ಮಕ್ಕಳೆಲ್ಲ ಓದಲಾಗದೇ ಪರದಾಡುತ್ತಿರುವಾಗ, ಸಧ್ಯ ಕರೆಂಟು ಹೋಯ್ತು ಅಂತ ಉದ್ಗರಿಸುತ್ತಿದ್ದಾಳಲ್ಲಾ, ಇವಳೇಕೆ ಹೀಗೆ ಅಂತ ನೀವು ಪ್ರಶ್ನೆ ಕೇಳುವುದರಲ್ಲಿಯೂ ಖಂಡಿತಾ ಆಶ್ಚರ್ಯ ಇಲ್ಲ. ಆದರೆ ಹೀಗೆ ಉದ್ಗರಿಸಿದ್ದು ನಾನಲ್ಲ.

ನಾನಲ್ಲದಿದ್ದರೆ ಇನ್ಯಾರು ಹೀಗೆ ಉದ್ಗರಿಸಿದ್ದು ? ಯಾರದು ? ಅಂತ ಪ್ರಶ್ನೆ ಕೇಳಿ ನಿಮ್ಮ ಕುತೂಹಲ ಕೆರಳಿಸಲು ನಾನು ಬೆಳೆಗೆರೆಯ ಹಾಗೆ ಕ್ರೈಂ ಡೈರಿ ನಡೆಸಿಕೊಡುತ್ತಿಲ್ಲ. ಇದು ಒಂದು ಕಥೆಯೇ, ಕ್ರೈಂ ಇಲ್ಲದ ಕಥೆ. ತಾಳಿ ತಾಳಿ, ಇದು ಲವ್ ಸ್ಟೋರಿ ಅಂತ ಹೇಳ್ಬೇಡಿ. ಲವ್ ಸ್ಟೋರಿಯೂ ಅಲ್ಲ, ಟ್ರಾಜಿಡಿಯೂ ಅಲ್ಲ. ವಿಡಂಬನೆ, ವಿಪರ್ಯಾಸ.

ಈ ಕಥೆಯ ಕಥೆಗಾರ್ತಿ ನಾನಲ್ಲ. ಈ ವಿಷಯವನ್ನ ಹೇಳಿದ್ದು ನನ್ನ ಹಿರಿಯ ಸೋದರಿ. ಇದು ಅವರ ಅನುಭವಕ್ಕೆ ಬಂದ ವಿಷಯ. ಅವರು ನನ್ನ ಹತ್ತಿರ ಎಲ್ಲವನ್ನೂ ಸವಿಸ್ತಾರವಾಗಿ ಹೇಳಿ, "ನೀನು ಇದನ್ನ ಬ್ಲಾಗಿಗೆ ಹಾಕು. ನಿನ್ನ ಮೂಲಕ ಇದು ಹೆಚ್ಚು ಜನಕ್ಕೆ ತಲುಪಲಿ" ಅಂದರು. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಮಿಕ್ಕಿದ್ದು ನಿಮಗೆ ಬಿಟ್ಟಿದ್ದು.

ನಮ್ಮಕ್ಕ ಮತ್ತು ಅವರ ಕುಟುಂಬ ಅವರ ಗೆಳೆಯರೊಬ್ಬರ ಮನೆಗೆ ಯಾವುದೋ get together ಗಾಗಿ ಭೇಟಿ ನೀಡಿದ್ದ ಸಂದರ್ಭ. ಮನೆಯ ಕಲಶವೇ ಮೂರ್ಖರ ಪೆಟ್ಟಿಗೆಯಲ್ಲವೇ ? ಯಾತಕ್ಕೆ ಸೇರಿದ್ದೇವೆ ಎಂಬುದನ್ನೇ ಮರೆತ ಮಹಾಶಯರೆಲ್ಲರೂ ಮೂರ್ಖರ ಪೆಟ್ಟಿಗೆ ಮುಂದೆ ಸ್ಥಾಪಿತರಾದರು. ಎಂಥದ್ದೋ "ಚೆನ್ನಾಗಿರೋ" ಕಾರ್ಯಕ್ರಮ ಬರುತ್ತಿದ್ದಿರಬೇಕು, ಎಲ್ಲರೂ ತದೇಕಚಿತ್ತದಿಂದ ನೋಡುತ್ತಾ, ತಟ್ಟೆಯಲ್ಲಿದ್ದ ತಿಂಡಿಯನ್ನು ತಿನ್ನುತ್ತಿದ್ದರು. ಮಧ್ಯದಲ್ಲಿ ಕರೆಂಟು ಹೋಯ್ತು. ಎಲ್ಲರೂ " ಛೆ ! ಕರೆಂಟು ಹೋಯ್ತು !" ಎಂದು ಉದ್ಗರಿಸಿದರೆ ಒಂದು ಕ್ಷೀಣ ದನಿ "ಸಧ್ಯ ಕರೆಂಟು ಹೋಯ್ತು !" ಎಂದು ಉದ್ಗರಿಸಿತು. ಆಶ್ಚರ್ಯದಿಂದ ತಿರುಗಿ ನೋಡಿದರೆ ಧ್ವನಿ ಬಂದಿದ್ದು ಒಬ್ಬ ಪುಟ್ಟ ಬಾಲಕನಿಂದ. ಆತ, ಆ ಮನೆಯ ಮಗ. Mentally challenged (ಮನೋ ವಿಕಲ ಎಂಬ ಪದ ಬಳಸಲು ಮನಸ್ಸೊಪ್ಪುತ್ತಿಲ್ಲ. ಆಂಗ್ಲದಲ್ಲಿ ಬರೆದಿರುವುದು ಲೋಕ ಅವನಿಗೆ ಕೊಟ್ಟ ಬಿರುದು) ಹುಡುಗನಂತೆ ಆತ. "ಸಧ್ಯ ಕರೆಂಟು ಹೋಯ್ತು ! ಈಗ ಎಲ್ಲರೂ ನನ್ನ ಮಾತಾಡಿಸುತ್ತಾರೆ !" ಎಂದಾಗ ಅಲ್ಲಿ ಒಂದು ಕ್ಷಣ ಮೌನ.

ಬುದ್ಧಿಯಿಲ್ಲದವನೊಂದಿಗೆ ಮಾತೇಕೆ ಎಂದು ಅವನನ್ನೊಬ್ಬನನ್ನೇ ಬಿಟ್ಟು ಮಿಕ್ಕವರೊಟ್ಟಿಗೆ ಮಾತಾಡುತ್ತಾ (?) ಅಥವಾ ಟಿವಿ ನೋಡುತ್ತಿದ್ದ ಅವರೆಲ್ಲಾ ಬುದ್ಧಿವಂತರೇ ? ಬುದ್ಧಿಯೊಂದು ಸ್ವಲ್ಪ ಕಡಿಮೆ ಚುರುಕು ಎಂದ ಮಾತ್ರಕ್ಕೆ ಮನುಷ್ಯನೊಬ್ಬನನ್ನ ಅಸಹನೀಯ ಏಕಾಂತಕ್ಕೆ, ಅಮಾನುಷ ಬಹಿಷ್ಕಾರಕ್ಕೆ ನೂಕುವುದು "ಸ್ಥಿತಪ್ರಜ್ಞ(?)" ಮನುಷ್ಯರ ಲಕ್ಷಣವೇ ? ಅಥವಾ ಅವರೊಡನೆ ಬರೀ ಅನುಕಂಪದ ಮಾತಾಡಿ ಅವರಿಗೆ ಮತ್ತು ಮನೆಯವರಿಗೆ ಮತ್ತಷ್ಟು ಜಿಗುಪ್ಸೆ ತರಿಸುವುದು ಮನುಷ್ಯತ್ವವೇ ? ಅವರಿಗೆ ಅನುಕಂಪಕ್ಕಿಂತ ಹೆಚ್ಚು ಪ್ರೋತ್ಸಾಹದ ಅವಶ್ಯಕತೆ ಇರತ್ತೆ. ಅವರು ಮಾತಾಡುವುದನ್ನು ನಾವು ಕೇಳಿಸಿಕೊಂಡರೇನೇ ಅವರಿಗೆ ಎಷ್ಟೋ ಖುಷಿಯಾಗತ್ತೆ, ಕಣ್ಣಲ್ಲಿ ಸಾವಿರ ಸೂರ್ಯರ ಬೆಳಕು ಕಾಣುತ್ತದೆ. ಅವರ ಮುಖದ ಮಂದಹಾಸ ಅವರನ್ನೂ ನಮ್ಮನ್ನೂ ಸಂತೋಷ ಪಡಿಸುತ್ತದೆ. ಅಲ್ಲವೇ ?

ಮಹಾನಗರದಲ್ಲಿ ಇಂದು ನಾವು ಯಾರದರೊಬ್ಬರ ಮನೆಗೆ ಭೇಟಿ ಕೊಡಬೇಕಾದರೆ ಶನಿವಾರ ಭಾನುವಾರಗಳು ಬರುವ ವರೆಗೂ ಕಾಯಬೇಕು. ಒಂದು-ನಮಗೆ ಆಗ ಹೆಚ್ಚು ಬಿಡುವು. ಎರಡು-ವಾರದ ದಿನಗಳಲ್ಲಿ ನಮಗೆ ಬಿಡುವುದ್ದರೂ ನಾವು ಹೋಗುವ ಮನೆಯವರಿಗೆ ಬಿಡುವಿರೊಲ್ಲ; ಕಾರಣ- ಮೆಗಾ ಸೀರಿಯಲ್ಲುಗಳು !! ಸೊಸೆ ಅತ್ತೆಯನ್ನು ಸಾಯಿಸಿದಳೇ ? ಇವಳು ಹದಿನಾಲ್ಕನೇ ಬಾರಿ ಮದುವೆಯಾದಳೇ ? ನಾವು ಕಳೆದ ಜನ್ಮದಲ್ಲೂ ಮನುಷ್ಯರಾಗಿದ್ದೆವೆ ? ನಮ್ಮ ನಕ್ಷತ್ರಕ್ಕೆ ಶನಿ ಕಾಟವಿದೆಯೇ ? ಇವೆಲ್ಲಾ ಯೋಚನೆಗಳ ಮಧ್ಯೆ ಅತಿಥಿ ಸತ್ಕಾರಕ್ಕೆ ಬಿಡುವೆಲ್ಲಿ ? ನಮ್ಮನ್ನು ಕಣ್ಣಲ್ಲಿ ಒಳಗೆ ಕರೆದು ಕೈಸನ್ನೆ ಮಾಡಿ ಕೂರಿಸಿ, ಸೀರಿಯಲ್ ನಲ್ಲಿ ಬ್ರೇಕ್ ಬಂದಾಗ ಮಾತಾಡಿಸುವವರನ್ನು ಏನನ್ನೋಣ ? ಮೂರ್ಖರ ಪೆಟ್ಟಿಗೆ ನಮ್ಮನ್ನು ಎಷ್ಟು ಮೂರ್ಖರನ್ನಾಗಿಸಿದೆ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ?

ಭಾವನೆಗಳ ಅತಿರೇಕಗಳಿರುವ ಮಾಯಾಪರದೆಯ ಮುಂದೆ ಅನಗತ್ಯವಾಗಿ ಭಾವನೆಗಳ ಮಹಾಪೂರವನ್ನು ಹರಿಸುವ ನಾವು, ನಿಜವಾಗಲೂ ಭಾವನೆಗಳನ್ನು ವ್ಯಕ್ತಪಡಿಸುವ ಅವಶ್ಯಕತೆಯಿರುವಾಗ ನಿರ್ಭಾವುಕವಾಗಿ, ವ್ಯಾವಾಹಾರಿಕವಾಗಿ , ಬಹಳಷ್ಟು ಬಾರಿ ಅಮಾನುಷವಾಗಿ ವರ್ತಿಸುತ್ತೇವಲ್ಲಾ...ನಾವೇಕೆ ಹೀಗೆ ?

18 comments:

ಸುಮ said...

ನೀವೆನ್ನುವುದು ಸತ್ಯ ಲಕ್ಷಿ .ಈ ದುರ್ದರ್ಶನದಿಂದ ಆಗುತ್ತಿರುವ ಕೇಡುಗಳು ನಿಜಕ್ಕೂ ಒಮ್ಮೊಮ್ಮೆ ಭಯ ಹುಟ್ಟಿಸುತ್ತದೆ.

Parisarapremi said...

ಈ ಶನಿವಾರ ಅಥವಾ ಭಾನುವಾರ ಸಿಗು, ನಾವೇಕೆ ಹೀಗೆ ಎಂದು ವಿವರಿಸುತ್ತೇನೆ. ಈ ವಾರ ಆಗದೇ ಇದ್ದರೆ ಮುಂದಿನ ವಾರ ಸಿಗು! ;-)

ಈಗ ನಾನು "ಮನೆಯೊಂದು ಮೂರು ಬಾಗಿಲು" ನೋಡಬೇಕು. ಬೈ.

ತೇಜಸ್ವಿನಿ ಹೆಗಡೆ said...

ಲಕ್ಷ್ಮಿ,

ಕೊನೆಯ ಸಾಲಿನಲ್ಲಿ ನೀವು ವ್ಯಕ್ತಪಡಿಸಿರುವ ನಿಮ್ಮ ಅನಿಸಿಕೆ ತುಂಬಾ ಸತ್ಯ. ನಮ್ಮಲ್ಲಿ ಇಂತಹ ವ್ಯಕ್ತಿಗಳ ಪ್ರತಿ ಅಪಾರ ಅನವಶ್ಯಕ ಅನುಕಂಪ ಮಾತ್ರವೇ ತುಂಬಿರುತ್ತದೆ. ಕೆಲವೊಮ್ಮೆ ಕೊಂದು ಹಾಕುವಂತಹ ಕೆಟ್ಟ ಕುತೂಹಲ! ಟಿ.ವಿ.ಯಲ್ಲಿ ಬರುವ ಆ ದರಿದ್ರ ಧಾರಾವಾಹಿಯಲ್ಲಿ ಅತ್ತೆ ಸೊಸೆಗೋ, ಇಲ್ಲ ಸೊಸೆ ಅತ್ತೆಗೋ ಹಿಂಸೆ ನೀಡಿದರೆ ಕುಳಿತು ನೋಡುತ್ತಿರುವ ಅತ್ತೆ ಸೊಸೆಯರ ನಡುವೆ ಜಗಳವಾಗುತ್ತದೆ! (ಇದನ್ನು ನಾನು ಹಲವರಿಂದ ಕೇಳಿದ್ದೇನೆ..!) ಇಂತಹ ಮೂರ್ಖರಿಂದ ನೀವು ಸಹಕಾರ, ಧನಾತ್ಮಕ ಸಹಾನುಭೂತಿಯನ್ನು ನಿರೀಕ್ಷಿಸುವುದೂ ತಪ್ಪು.

Guruprasad said...

ಒಳ್ಳೆಯ ಬರಹ,,, ಹೌದು ಇವಗಿನ ಕಾಲದಲ್ಲಿ ಯಾವುದಕ್ಕೂ ಮೌಲ್ಯ ಇಲ್ಲ... ದೂರದರ್ಶನ ತುಂಬ ಅಪಾಯಕಾರಿಯಾಗಿ ಮಾರ್ಪಡ ಆಗ್ತಾ ಇದೆ.. ಲೈವ್ ಶೋ.. breaking ನ್ಯೂಸ್... ಮನಸಿನ ನೆಮ್ಮದಿ ಕೆಡಿಸುವ ಧಾರಾವಾಹಿಗಳು....ಒಂದ ಎರಡ

ವಿ.ರಾ.ಹೆ. said...

ನಾನೂ ಕೂಡ ಮನೆಯಲ್ಲಿ ಕರೆಂಟು ಹೋದಾಗ ಖುಷಿ ಪಡ್ತೇನೆ. ಕೆಲಸಗಳು, ಕೆಟ್ ಧಾರಾವಾಹಿ, ಹಾಡಿನ ಪ್ರೋಗ್ರಾಮು, ರಿಯಾಲಿಟಿ, ಪುನರ್ಜನ್ಮಗಳ ಮಧ್ಯೆ ಕಳೆದು ಹೋದ ಜನರು ಒಟ್ಟು ಸೇರಿ ಮಾತಾಡೋಕೆ ಅದು ಒಳ್ಳೇ ಟೈಮು.

Pramod said...

ಕರೆ೦ಟ್ ಇಲ್ಲದಿದ್ದರೇನೆ ಒಳ್ಳೇದು ಅನಿಸುತ್ತೆ. ಮನಸ್ಸು ನಮ್ಮ ಹತ್ರ ಇರುತ್ತದೆ, ಇಲ್ಲದಿದ್ದರೆ ರಿಮೋಟ್ ನಮ್ಮನ್ನೇ ಕ೦ಟ್ರೋಲ್ ಮಾಡುತ್ತೆ. ಟೀವಿನಲ್ಲ..!!

ಪುಷ್ಪಲತ ದೀಕ್ಷಿತ್ said...

Nangu kushi Aagathe vidyuth kadithavuntAdaga inadve:D ketta serials mathu ketta reality shows inda...


ಮಾತು ಬರುವುದು ಎಂದು ಮಾತಾಡುವುದು ಬೇಡ;
ಒಂದು ಮಾತಿಗೆ ಎರಡು ಅರ್ಥವುಂಟು.
ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ;
ಬರಿದೆ ಆಡುವ ಮಾತಿಗರ್ಥವಿಲ್ಲ....
Ee meLina sAlugalu ee ShIrshikege thumbAne sukthavaguthe ansthide..

Chaithrika said...

ಚೆನ್ನಾಗಿದೆ ಬರಹ.

Anonymous said...

ನಿಜ. ತುಂಬಾ ಚೆನ್ನಾಗಿ ಬರೆದಿದ್ದೀರಾ. ಕೆಲುವೊಮ್ಮೆ ಕರೆಂಟ್ ಹೋದ್ರು ಬಿಡುಗಡೆ ಇಲ್ಲಾ. ತುಂಬಾ ಭಾವನಾತ್ಮಕವಾಗಿ ಮನೆಯ ಕಷ್ಟಗಳ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಯಾರ ಮನೆಯ ಬಗ್ಗೆ ಅಂದ್ರೆ... :)

ದೇವಿಸುತೆ said...

ನಿಮ್ಮ ಮಾತು ೧೦೦% ಸತ್ಯ, ಮಕ್ಕಳಾದರೆ ಹೇಳಬಹುದು, ಹಿರಿಯರಿಗೆ (ಅದರಲ್ಲೂ ಗಂಡನ ಮನೆಯವರಿಗೆ )ಹೇಗೆ ಹೇಳಲಾದೀತು! ಒಳಗೆ ಬರುವಾಗಲೇ ಮನೆಯಲ್ಲಿರುವ ಮಗುವನ್ನು ಪ್ರೀತಿಯಿಂದ ಮಾತನಾಡಿಸಿ, ಆಡಿಸಿ ಸಂಭ್ರಮಿಸುವ ಬದಲಿಗೆ " ಜೀ ಹಾಕು, ಈ ಟಿ.ವಿ.ಹಾಕು ಸೀರಿಯಲ್ ಬರುತ್ತೆ " ಅಂತಾರೆ(ಆದೇಶ ಬೇರೆ), ಆ ಮಗು ತನಗಿಷ್ಟವದ ಪ್ರೋಗ್ರಾಮ್ ನೋಡುತ್ತಿದ್ದರೂ ಇವರು ಅದರ ಬಗ್ಗೆ ಚಿಂತಿಸುವುದಿಲ್ಲ, ಜೊತೆಗೆ ತಂದೆ ತಾಯಿಯರಿಗೂ ಮುಜುಗರ, ತಮ್ಮ ಮಗುವಿನ ಸಂತೋಷ,ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದನ್ನೂ ಸಹಿಸಿಕೊಳ್ಳಬೇಕಾದ ಇಕ್ಕಟ್ಟಿನ ಪರಿಸ್ಥಿತಿ! ಅದಕ್ಕೇ ಕರೆಂಟ್ ಹೋಗಲಿ ಅನ್ನಿಸುತ್ತೆ

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

Sundar M N said...

Neevu vistarisidda ghatane nijavagiyu manassina yavudo muuleyannu chucchi naavu madodu sariye enisuvantittu.... Nimma halavaaru TV sambandita prashnegalige uttara bahushaha nimage tilidurabahudu alva??!!!!

Karthik CS said...

ಖಂಡಿತ ನಿಜವಾದ ಮಾತು. ಬಹಳ ಬೇಜಾರಾಗತ್ತೆ ನಾವು ಮನುಷ್ಯತ್ವ ಮರ್ತೋಗಿದೀವಲ್ಲ ಅನ್ಸತ್ತೆ. Mentally challenged ಇರ್ಲಿ, ಮನೆಯವರ ಹತ್ರಾನೆ ಸರ್ಯಾಗಿ ನಾವು ಮಾತಾಡೋದಿಲ್ಲ. ಚಿಕ್ ವಯಸ್ನಲ್ಲಿ ಕರೆಂಟ್ ಹೋದ್ರೆ ನಮಗೆ ಖುಷಿಯೋ ಖುಷಿ.. ಹೊರಗಡೆ ಹೋಗಿ ಗೆಳೆಯರ ಜೊತೆ ಆಡಬಹುದು ಅಂತ. ಈಗ ಸುಮ್ನೆ ಬೈಕೋತೀವಿ ಬೆಸ್ಕಾಂ ನ. :)

ಚಂದ್ರು said...

ಲಕ್ಷ್ಮಿಯವರೇ

ಚೆನ್ನಾಗಿದೆ ನಿಮ್ಮ ಲೇಖನ. ನಿಜ ಮೂರ್ಖ ಪೆಟ್ಟಿಗೆ ಬ೦ದು ನಾವೆಲ್ಲಾ ಮೂರ್ಖರಗಿದ್ದೆವೇನೋ? :)


- ಚಂದ್ರು

SATISH N GOWDA said...

ನಿಮ್ಮ ಕವನಗಳು ಓದಲು ಬಲು ಮುದ್ದಾಗಿವೆ . ಅದರ ಅರ್ಥ , ಅರ್ಥ ಪೂರ್ಣವಾಗಿದೆ . ನಾನು ನಿಮ್ಮ ಬ್ಲಾಗ್ ನ್ನು ಇದು ಮೊದಲಬಾರಿಗೆ ಓದಿದ್ದು . ಕವನಗಳು ಮೊಡಿಬಂದ ರೀತಿ ತುಂಬಾ ಚನ್ನಾಗಿದೆ . ಸಮಯ ಸಿಕ್ಕಾಗ ನನ್ನವಳಲೋಕಕ್ಕೆ ಒಮ್ಮೆ ಬನ್ನಿ (www.nannavalaloka.blogspot.com) ನಿಮ್ಮನ್ನು ಸ್ವಾಗತಿಸುತ್ತೇನೆ

ಸತೀಶ್ ನ ಗೌಡ

www.nannavalaloka.blogspot.com

anjanaa hegde said...

ನಿಜವಾಗಿಯೂ ನೀವು ಹೇಳಿದ ಮಾತುಗಳು ಸತ್ಯ ತುಂಬಾ ಚೆನ್ನಾಗಿ ಬರೆದ್ದಿದ್ದಿರಾ

Prateeksha said...

ಇಲ್ಲಿ ಆ ಹುಡುಗನೇ ಬುದ್ದಿವಂತನಾಗಿ ಕಾಣುತ್ತಾನೆ. ಅವನ ಅರಿವಿಗೆ ಬಂದಷ್ಟು ಇವರಿಗೆ ಬರಲಿಲ್ಲವಲ್ಲಾ. ಇದನ್ನು ನಮಗೆಲ್ಲಾ ಮುಟ್ಟಿಸಿದ್ದಕ್ಕೆ ನಿಮಗೆ ಹಾಗೂ ನಿಮ್ಮ ಅಕ್ಕನಿಗೆ ಧನ್ಯವಾದಗಳು.

prabhamani nagaraja said...

`ಭಾವನೆಗಳ ಅತಿರೇಕಗಳಿರುವ ಮಾಯಾಪರದೆಯ ಮುಂದೆ ಅನಗತ್ಯವಾಗಿ ಭಾವನೆಗಳ ಮಹಾಪೂರವನ್ನು ಹರಿಸುವ ನಾವು, ನಿಜವಾಗಲೂ ಭಾವನೆಗಳನ್ನು ವ್ಯಕ್ತಪಡಿಸುವ ಅವಶ್ಯಕತೆಯಿರುವಾಗ ನಿರ್ಭಾವುಕವಾಗಿ, ವ್ಯಾವಾಹಾರಿಕವಾಗಿ , ಬಹಳಷ್ಟು ಬಾರಿ ಅಮಾನುಷವಾಗಿ ವರ್ತಿಸುತ್ತೇವಲ್ಲಾ...ನಾವೇಕೆ ಹೀಗೆ ?' ಉತ್ತಮ ಅ೦ಶವನ್ನು ತಿಳಿಸಿದ್ದೀರಿ ಮೇಡಂ, ಚಿ೦ತನಯೊಗ್ಯವಾಗಿದೆ. ನನ್ನ ಬ್ಲಾಗ್ ಗೆ ಭೇಟಿ ಕೊಡಿ.