ಈ ಘಟನ ನಡೆದು ಸರಿಯಾಗಿ ಆರು ವರ್ಷ ಕಳೆದಿದೆ.[ ಸಾಕು...ನಿನ್ನ..ಈ ಹಳೆಯ ಫ್ಲಾಷ್ ಬ್ಯಾಕು ಅಂತ ಹಾಡದೇ ಇದೊಂದು ಫ್ಲಾಷ್ ಬ್ಯಾಕ್ ನ ಸಹಿಸಿಕೊಳ್ಳಿ ದಯವಿಟ್ಟು :) ]
ನಮ್ಮ ಮನೆಯ ಪೇಯಿಂಟಿಂಗ್ ಕೆಲಸ ನಡಿಯುತ್ತಿತ್ತು. ಮನೆಗಳ ಸಾಮಾನೆಲ್ಲ ಅಲ್ಲೋಲ ಕಲ್ಲೋಲ. ಅದೇ ಸ್ಥಿತಿ ನನ್ನ ಮನಸ್ಸಿನದ್ದೂ ! ರಿಸಲ್ಟು ಬಂದು ಒಂದು ವಾರವಾಗಿತ್ತಷ್ಟೇ. ತೊಂಭತ್ತು ಪ್ರತಿಶತ ನಿರೀಕ್ಷಿಸಿದ್ದ ನಾನು ಎಂಭತ್ತೆರಡಕ್ಕೇ ತೃಪ್ತಿ ಪಡಬೇಕಾಯ್ತು. ಭೌತಶಾಸ್ತ್ರದಲ್ಲಿ ನೂರಕ್ಕೆ ನೂರು ಗ್ಯಾರಂಟೀ ಎಂದುಕೊಂಡಿದ್ದ ನಾನು ತೊಂಭತ್ಮೂರು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದೆ. ರಿವಾಲ್ಯುಯೇಷನ್ ಹಾಕಲು ಪಟ್ಟು ಹಿಡಿದಿದ್ದೆ, ಅಣ್ಣ(ಅಪ್ಪನನ್ನು ಅಣ್ಣ ಎನ್ನುತ್ತೇವೆ ನಾವು) ಪ್ರಯೋಜನ ಇಲ್ಲ ಸುಮ್ಮನಿರು ಅಂತ ಸಮಾಧಾನ ಪಡಿಸಿ ಸುಸ್ತಾಗಿದ್ದರು. ಸಿ.ಇ.ಟಿ ಪರೀಕ್ಷೆಯ ರಿಸಲ್ಟು ನನಗೆ ಮುಖ್ಯವಾಗಿರಲಿಲ್ಲ. ನಾನು ಸುಮ್ಮನೇ ಪರೀಕ್ಷೆ ಬರೆದಿದ್ದೆ.
ಅಂದಿನ ರಾತ್ರಿ ನಮ್ಮ ತಂದೆ ಬಂದು " ಲಕ್ಷ್ಮೀ, ಇವತ್ತು ನನ್ನ ಗೆಳೆಯರೊಬ್ಬರು ದಾರಿಯಲ್ಲಿ ಸಿಕ್ಕು ನಿನ್ನ ಸಿ.ಇ.ಟಿ ಪರೀಕ್ಷೆಯ ಫಲಿತಾಂಶ ಕೇಳಿದರು. ನಾನು ಹೇಳಿದೆ. ಅದಕ್ಕೆ ಅವರು ಹೀಗಂದರು - " ಸಾರ್, ಈಗ ಸ್ಕೋಪ್ ಇರೋದು ಎಂಜಿನೀರಿಂಗ್ ನಲ್ಲೇ...ಮಾಡಿಸಿ ನಿಮ್ಮ ಮಗಳನ್ನೂ ಎಂಜಿನಿಯರ್...ಇನ್ನು ನಾಲ್ಕು ವರ್ಷ ಆದ ಮೇಲೆ ಲಕ್ಷಗಟ್ಟಲೆ ಸಂಬಳ ಎಣಿಸುತ್ತಾಳೆ ನಿಮ್ಮ ಮಗಳು." ನಿನಗೇನನ್ನಿಸತ್ತೆ ?"ಅಂತ ಕೇಳಿದರು.
ನಾನು ಬಾಯಿ ಬಿಡುವಷ್ಟರಲ್ಲಿ ಫೋನು ರಿಂಗಾಯ್ತು. ಫೋನು ನಮ್ಮ ಸಂಬಂಧಿಕರದ್ದಾಗಿತ್ತು. ಅಣ್ಣನಿಗಿಂತಾ ಹಿರಿಯರು. ನನ್ನ ಭವಿಷ್ಯದ ನಿರ್ಧಾರವನ್ನು ಅವರು ತೆಗೆದುಕೊಳ್ಳುವ ಪುಣ್ಯಕಾರ್ಯ (?) ಮಾಡುತ್ತಿದ್ದರು . ಅಣ್ಣ speakerphone ಆನ್ ಮಾಡಿದರು. " ನಮ್ಮ ವಂಶದಲ್ಲಿ ಯಾರೂ ವೈದ್ಯರಿಲ್ಲ. ಸಾಲವೋ ಸೋಲವೋ, ಡಾಕ್ಟರ್ ಮಾಡು ಅವಳನ್ನ. ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗತ್ತೆ. ಆಮೇಲೆ ಅವಳೇ ದುಡ್ಡು ತೀರಿಸುತ್ತಾಳೆ ಅಷ್ಟೇ. ಇದರಲ್ಲಿ ಯೋಚಿಸುವ ಪ್ರಶ್ನೆಯಾಗಲಿ, ಅವಳ ಇಷ್ಟ ಕಷ್ಟಗಳನ್ನು ಕೇಳುವ ಪ್ರಮೇಯವಾಗಲಿ ಬರುವುದೇ ಇಲ್ಲ. ನಾವು ದೊಡ್ಡವರು ಹೇಳಿದ ಮಾತನ್ನು ಚಾ ಚೂ ತಪ್ಪದೇ ಕೇಳಬೇಕಾಗಿರುವುದು ಅವರ ಕರ್ತವ್ಯ. ದುಡ್ಡು ಹೇಗೆ ಹೊಂದಿಸಬೇಕೆಂದು ನಾನು ಹೇಳಬೇಕಿಲ್ಲ ಅಲ್ವಾ ?" ಅಂತ ಒಂದಿಷ್ಟು ಮಾತಾಡಿ ಫೋನಿಟ್ಟರು.
ಮನೆಯ ಹಿರಿಮಗಳಾದ ನಾನು ಇದನ್ನ ಕೇಳಿ ಗಹಗಹಿಸಿ ನಕ್ಕೆ. ಅಣ್ಣ ನನ್ನ ಮುಖ ನೋಡಿದರು. " ಯಾಕೆ ನಗ್ತಿಯಾ ?" ಅಂತ ಕೇಳಿದರು. ಆಗ ನಾನಂದೆ,
"ವಂಶದ ಗೌರವ ಕಾಪಾಡಕ್ಕೆ ನಾನು ಡಾಕ್ಟರ್ ಆಗ್ಬೇಕಾ ? ನನಗೆ ವೈದ್ಯ ವೃತ್ತಿಯಲ್ಲಿ ಮೊದಲಿಂದಲೂ ಆಸಕ್ತಿಯಿಲ್ಲ ಅಣ್ಣ.."
ಅಣ್ಣ : "ಆ ವಿಷಯ ಬಿಡು..ತಲೆಗೊಂದು ಮಾತಾಡುವುದು ಜನರ characteristic. ನಿನಗೆ ಇಷ್ಟ ಇಲ್ಲ ಅಂದ್ರೆ ನನ್ನ ಬಲವಂತ ಏನೂ ಇಲ್ಲ. ಎಂಜಿನೀರ್ ಆಗ್ತ್ಯಾ ?"
"ಉಹೂಂ. ಇಲ್ಲ"
"ಮತ್ತೆ ?"
" ನನಗೆ ಚಿಕ್ಕಂದಿನಿಂದಲೂ ಸಂಶೋಧನೆಯ ಕಡೆ ಹೆಚ್ಚು ಒಲವು. ನಾನು basic sciences ತಗೊಳ್ಳಲಾ ?"
ಅಣ್ಣ: " ನಿನ್ನ ಇಷ್ಟಕ್ಕೆ ನಮ್ಮ ಅಭ್ಯಂತರ ಏನಿಲ್ಲ. ಆದರೆ mediocre B.Sc ಮತ್ತು average M.Sc ಆದ್ರೆ ಸಾಲದು. you should make a mark and prove to people that you are not wrong in the choice of your career"
ನಾನು ಒಪ್ಪಿ ಅಂದು ಒಂದು ದೃಢ ಪ್ರತಿಜ್ಞೆ ಮಾಡಿ ಮಲಗಿದೆ, ಅಲ್ಲೋಲ ಕಲ್ಲೋಲದ ಮನೆಯ ಒಂದು ಮೂಲೆಯಲ್ಲಿ.
ಬೆಳಿಗ್ಗೆ ನನ್ನ ಎಬ್ಬಿಸಿದ್ದು ಅಮ್ಮ ಅಲ್ಲ, ನಮ್ಮ ತಂದೆಯ ಸ್ನೇಹಿತರು, ಅದೂ ಮುಂಜಾನೆ ಆರುವರೆಗೆ !
ನಾನು ಕಣ್ಣೂ ಬಿಟ್ಟಿರಲಿಲ್ಲ, ಅವರು ಮಾತು ಆರಂಭಿಸಿದ್ದರು. " ತಲೆ ಕೆಟ್ಟಿದ್ಯಾ ನಿನಗೆ? ಬಿ.ಎಸ್ಸಿ ಮಾಡ್ತೀಯಂತೆ ! ಬಿ.ಎಸ್ಸಿ ಆದ್ಮೇಲೆ ಕೆಲಸ ಎಲ್ಲಿ ಸಿಕ್ಕತ್ತೆ ? ಕೆಲಸ ಸಿಗೋದು ಬಿ.ಇ. ಓದಿದರೇನೇ ! ನೀನು ನಿನ್ನ ಕಾಲ ಮೇಲೆ ನಿಂತುಕೊಳ್ಳುತ್ತೀಯೋ ಅಥವಾ ನಿಮ್ಮ ತಂದೆ ತಾಯಿಗೆ ಭಾರವಾಗಿರುತ್ತೀಯೋ ? " ಆಮೇಲೆ ನಮ್ಮ ತಂದೆಯ ಕಡೆ ತಿರುಗಿ " ಸಾರ್, ಹುಡುಗು ಬುದ್ಧಿ, ಏನೇನೋ ಹೇಳತ್ವೆ...ನನ್ನ ಮಗಳು ಚಿತ್ರಕಲಾ ಪರಿಷತ್ ಸೇರ್ತಿನಿ ಅಂತ ಕೂತಿದ್ಲು, ಬೈದು ಎಂಜಿನೀರಿಂಗ್ ಕೌನ್ಸೆಲ್ಲಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದೀನಿ ನಾಳೆ. ನಿಮ್ಮ ಮಗಳದ್ದು ಆಚೆ ನಾಡಿದ್ದಂತೆ...ಕರ್ಕೊಂಡು ಹೋಗಿ ಮೆಡೀಸನ್ನೋ ಎಂಜಿನೀರಿಂಗೋ ಕೊಡಿಸಿ, ಹೀಗೆ ಬಿಡಬೇಡಿ" ಅಂತು ಉಸಿರು ತೆಗೆದುಕೊಳ್ಳಲು ಮಾತು ನಿಲ್ಲಿಸಿದರು.
ಆಗ ಬಾಯ್ಬಿಟ್ಟೆ ನಾನು- " ಅಂಕಲ್, ನಾನು ಬಿ.ಎಸ್ಸಿ ನೇ ಮಾಡೋದು"
ಅವರು: " ಈ ಪುರುಷಾರ್ಥಕ್ಕೆ CET ಯಾಕೆ ಬರೆದೆ ?ಸಾಲದ್ದಕ್ಕೆ AIEEE. ಎಲ್ಲದರಲ್ಲೂ ಒಳ್ಳೆ ranking ಬಂದಿದೆ ? "
ನಾನು : " ಪರೀಕ್ಷೆಗಳನ್ನು ಬರೆದು ನನ್ನ ಬುದ್ಧಿವಂತಿಕೆಯನ್ನು ಓರೆಗೆ ಹಚ್ಚಿ ನೋಡಿಕೊಳ್ಳುವುದು ನನ್ನ ಹವ್ಯಾಸ, ನನ್ನ ಚಿಕ್ಕಂದಿನ ಅಭ್ಯಾಸ. ಇದನ್ನೂ ಹಾಗೇ ಮಾಡಿದೆ. ನನ್ನ ಭವಿಷ್ಯದ ನಿರ್ಧಾರ ನಾನು ಆಗಲೇ ಮಾಡಿದ್ದೆ."
ಅವರು: "ನಿನ್ನ ತಲೆ ! ಈಗ ನೀನು ತೆಗೆದುಕೊಂಡಿರುವ ನಿರ್ಧಾರದಿಂದ ನೀನು ಮುಂದೆ ಪಶ್ಚಾತ್ತಾಪ ಪಡ್ತಿಯಾ ನೋಡಿಕೋ"
ನಾನೇನೂ ಹೇಳದೆ ಸುಮ್ಮನೆ ನಕ್ಕಿದ್ದೆ.
ಇದು ಫ್ಲಾಷ್ ಬ್ಯಾಕು.
ಈಗ ಮೊನ್ನೆ ಮೊನ್ನೆ ಅವರ ಮಗಳು ಸಿಕ್ಕಿದ್ದಳು. ಕೆಲಸದಲ್ಲಿ ದುಡ್ಡಿದ್ದರೂ ನೆಮ್ಮದಿಯಿಲ್ಲವೆಂದಳು. "ನೀನು ನೋಡು, ನಿನ್ನ ಇಷ್ಟದಂತೆಯೇ ನಿನ್ನ ಹಾದಿ ಹಿಡಿದೆ...ಈಗ ಪ್ರತಿಷ್ಟಿತ ಸ್ಥಳವೊಂದರಲ್ಲಿ research assistant ಆಗಿದ್ಯಾ...ನಿನ್ನ ಮುಖದಲ್ಲಿ ಒಂದು ತೃಪ್ತಿ ಕಾಣತ್ತೆ, ನನಗೆ ಅದೇ ಇಲ್ಲ. Art, craft , painting ಅಂದರೆ ಪ್ರಾಣ ನನಗೆ.ಮಾಡಲಾಗಲಿಲ್ಲ.ಛೇ ! ನಾನು ಗಲಾಟೆ ಮಾಡಿ ಅಪ್ಪ ಹೇಳಿದಂತೆ ಇದನ್ನು ಮಾಡುವ ಬದಲು ನಾನಂದುಕೊಂಡಿದ್ದನ್ನೇ ಮಾಡಬೇಕಿತ್ತು ."
"ಅಂಕಲ್ ಗೆ ಸಂತೋಷ ತಾನೆ ?" ಅಂತ ನಾನು ಕೇಳಿದ್ದಕ್ಕೆ ಅವಳು ಒಂದು ವಿಕಟ ನಗೆ ನಕ್ಕಳು.
ಹೀಗೆಯೇ ಬಹಳಷ್ಟು ಜನ ನನ್ನ ಬಳಿ ತಂತಮ್ಮ ದುಃಖ ತೊಡಿಕೊಂಡಿದ್ದಾರೆ. ಕೆಲವರು parental and peer pressure ಸಹಿಸಲಾಗದೇ ತಮ್ಮ ವೃತ್ತಿ ಹಿಡಿದಿದ್ದರೆ, ಕೆಲವರಿಗೆ ತಮ್ಮ ಕುಟುಂಬವನ್ನ ಸಂಭಾಳಿಸಬೇಕಾದ ಅನಿವಾರ್ಯತೆ ಇದೆ. ನನ್ನ ಪ್ರಶ್ನೆ ಇಷ್ಟೇ - ನಾವು ಇಷ್ಟ ಪಟ್ಟ ದಾರಿಯಲ್ಲಿಯೇ ನಡೆದು ಕುಟುಂಬವನ್ನು ಸಂಭಾಳಿಸಲು ಸಾಧ್ಯವೇ ಇಲ್ಲವೇ ?
ಇನ್ನು ಕೆಲವರು ಇಷ್ಟ ಪಟ್ಟೇ ಕೋರ್ಸಿಗೆ ಸೇರಿ, ಮಾಡಿ, ನಂತರ core area ಬಿಟ್ಟು ಬೇರೆ ಕಡೆ ಸ್ಥಾಪಿತರಾಗಿ, "I made a wrong choice in finding out my core area of interest" ಎಂದು ಅನುಭವಾಮೃತಸಾರವನ್ನು ನುಡಿದಿದ್ದಾರೆ.
ಇನ್ನು ಕೆಲವರು ಏನೋ ಓದಿ, ಇನ್ನೇನೋ ಆಗಿ, ಎರಡೂ ಫಲಕಾರಿ ಆಗದೇ," ಏನೋ ಮಾಡಲು ಹೋಗಿ...ಏನು ಮಾಡಿದೆ ನಾನು ?" ಅಂತ ತಮ್ಮನ್ನೇ ಪ್ರಶ್ನಸಿಕೊಳ್ಳುತ್ತಾ ಹಾಡುತ್ತಿದ್ದಾರೆ.
ಮತ್ತೊಂದಿಷ್ಟು ಜನ "I consider this choice as a step to something else. I wanted to learn something in this field, I learnt it. Now I use this career option to go to another field." ಅಂತ ಅಂದು ಸಂಬಂಧವೇ ಎರಡು ವೃತ್ತಿಯಲ್ಲಿ ಸೇತುವೆ ಹುಡುಕುತ್ತಿರುತ್ತಾರೆ. ನಾನೂ ಇವರ ಮಾತನ್ನು ಒಪ್ಪುತ್ತೇನೆ. ಆದರೆ ಇದು ಯಾಕೋ "jack of all trades, master of none"ಅಂತೆ ಆಗಲಿಲ್ಲವೇ ?
ಇನ್ನು ಕೆಲವರು ಸ್ಕೋಪ್ ಇದೆಯೆಂದು ಓದಿರುತ್ತಾರೆ.They would have seen many people climbing the ladder of success under that scope. ಆದರೆ ಅವರಿಗೆ ಕೆಲಸ ಸಿಗುವ ಹೊತ್ತಿಗೆ ಆ ಸ್ಕೋಪು ಸೋಪಿನಲ್ಲಿ ತೊಳೆದಂತಾಗಿ ಕೊಚ್ಚಿಕೊಂಡು ಹೊರಟುಹೋಗಿರುತ್ತದೆ. ಹೆನ್ರಿ ಫೋರ್ಡ್ ಗೆ ಯಾರೋ ಒಬ್ಬರು ಹೇಳಿದರಂತೆ- " I am climbing the ladder of success" ಅಂತ. ಅದಕ್ಕೆ ಅವರು ಉತ್ತರಿಸಿದರಂತೆ - "Make sure the ladder is leaning on the right wall!" ಅಂತ !
ಸ್ಕೋಪು ಸ್ಕೋಪೆಂದು ಕುಣಿದಿದ್ದಕ್ಕೆ rat race ಆರಂಭವಾಯ್ತು. ಕಾಂಚಾಣ ಎಲ್ಲರನ್ನೂ ಕುರುಡು ಮಾಡಿತು. ಪೊರೆ ಸರಿಯುವ ಹೊತ್ತಿಗೆ ತಡವಾಗಿ ಹೋಯ್ತು. Years have passed...and it is an irreversible damage.
ಜನ ಕೆಲವ ವಿಷಯಗಳನ್ನು ಯೋಚನೆ ಮಾಡಲೇ ಇಲ್ಲ.
ರೈತನೊಬ್ಬ ತಾನು ಬೆಳೆವ ಧಾನ್ಯಕ್ಕೆ ಸ್ಕೋಪೆಲ್ಲಿದೆ ಅಂತ ಹಿಂದೆ ಯೋಚಿಸಿದ್ದಿದ್ದರೆ ನಮ್ಮ ಪೂರ್ವೀಕರಿಗೆ ಧಾನ್ಯ ಸಿಗುತ್ತಿರಲಿಲ್ಲ. ಈಗ ಯೋಚನೆ ಮಾಡತೊಡಗಿದ್ದಾನೆ, ಬೆಲೆಗಳು ಗಗನಕ್ಕೆ ಏರತೊಡಗಿದೆ.
ಬಾಟ ಕಂಪನಿಯವರು " ಚಪ್ಪಲಿಗೆ ಸ್ಕೋಪೆಲ್ಲಿದೆ ?" ಎಂದಿದ್ದರೆ ಇಂದು ಪ್ರಪಂಚದಾದ್ಯಂತ ಷೋ ರೂಂ ಗಳು ಇರುತ್ತಿರಲಿಲ್ಲ.
ನಮ್ಮ ಅಧ್ಯಾಪಕರು - " ಟೀಚಿಂಗ್ ಗೆ ಎಲ್ಲಿದೆ ಸ್ಕೋಪು ?" ಅಂತ ಕೇಳಿದ್ದಿದ್ದರೆ ನಮಗೆ ಪಾಠಗಳು ಕೇಳಸಿಗುತ್ತಿರಲಿಲ್ಲ. ಈಗ ಕೇಳ ತೊಡಗಿದ್ದಾರೆ, ಅದಕ್ಕೆ ಟ್ಯೂಷನ್ನಿನ ರೇಟು ಜಾಸ್ತಿಯಾಗಿದೆ.
ಯಾರೋ ಮಾಡಿದ ವರ್ಣ ಚಿತ್ರವನ್ನು ಲಕ್ಷಗಟ್ಟಲೆ ಕೊಟ್ಟು ಕೊಂಡುಕೊಳ್ಳುತ್ತಾರೆ, ಆದರೆ ತಮ್ಮ ಮಕ್ಕಳು ಬಿಡಿಸಿದ ಚಿತ್ರವನ್ನು ತಿಪ್ಪೆಗೆಸೆಯುತ್ತಾರೆ.
ಸಂಗೀತ ಧ್ವನಿ ಸುರುಳಿಗಳನ್ನೆಲ್ಲಾ ಕಲೆಕ್ಟ್ ಮಾಡಿ, ಐಪಾಡ್ ತುಂಬೆಲ್ಲಾ ಸಂಗೀತ ಫೈಲುಗಳನ್ನು ತುಂಬಿಸಿಕೊಂಡವರು ಅವರ ಮಕ್ಕಳು ಹಾಡುತ್ತೇವೆಂದಾಗ ಕಿವಿ ಮುಚ್ಚಿಕೊಂಡು " ಕೆಲಸಕ್ಕೆ ಬಾರದ ವಿದ್ಯೆ" ಎಂದು ಮೂಗುಮುರಿಯುತ್ತಾರೆ.
ತಾಜ್ ವೆಸ್ಟೆಂಡು, ಲೀ ಮೆರಿಡಿಯನ್ ನಲ್ಲಿ ಊಟವನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ತಮ್ಮ ಮಗ chef ಆಗ್ತಿನಿ ಅಂದರೆ butlers' knife ನಲ್ಲಿ ಚುಚ್ಚಿಕೊಂಡು ಪ್ರಾಣ ಬಿಡ್ತಿವಿ ಅಂತ ಹೆದರಿಸುತ್ತಾರೆ !
ರಾಜ್ ಕುಮಾರ್ ನನ್ನು ಹೊಗಳುವ ಇವರು ತಮ್ಮ ಮಗ ನಾಟಕ ಮಾಡುತ್ತಾನೆ ಅಥವಾ ಮಗಳು ನಾಟ್ಯ ಮುಂದುವರೆಸುತ್ತೇನೆ ಅಂದರೆ ಕಾಲು ಮುರಿಯುತ್ತೇನೆ ಅನ್ನುತ್ತಾರೆ.
ಮಕ್ಕಳ ಇಷ್ಟಕ್ಕೆ ಸಹಮತ ಕೊಟ್ಟು ಅವರನ್ನು ಹುರಿದುಂಬಿಸಿ, ಧೈರ್ಯ, ಛಲ ತುಂಬಬೇಕಿರುವುದು ಪಾಲಕರ ಕರ್ತವ್ಯ. ಅದನ್ನ ಬಿಟ್ಟು " ನನ್ನಿಷ್ಟದಂತೆಯೇ ಆಗಬೇಕು." ಅನ್ನುವುದು ದುರಂತ !ಶಾಶ್ವತ ನೆಮ್ಮದಿ ಮುಖ್ಯಾನೋ, ಅಥವಾ ಹಲುಬುತ್ತಾ ದುಡಿದು ದುಡ್ಡು ತಂದು ಹಾಕುವುದು ಮುಖ್ಯವೋ ಆ ಆಯ್ಕೆ ಮಕ್ಕಳಿಗೆ ಬಿಟ್ಟಿದ್ದು.
ಈಗ ದ್ವಿತೀಯ ಪಿಯೂಸಿ ಪರೀಕ್ಷೆ ನಡೆಯುತ್ತಿದೆ. "Engineering ಗೆ ಸ್ಕೋಪಿಲ್ಲ" ಅಂತ ಈಗ ಜನ ಪಿಸುಗುಡುತ್ತಿದ್ದಾರೆ. ಈ ಸ್ಕೋಪಿನ ಆಚೆಗೂ ಜೀವನವಿದೆ ಎಂದು ಪಾಲಕರಿಗೆ ಮೊದಲು ದರ್ಶನವಾಗಬೇಕಿದೆ. ಅದನ್ನು ಅವರು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಮತ್ತು ಅನಿವಾರ್ಯತೆ ಎರಡೂ ಇದೆ.
ಸಮಾಜದಲ್ಲಿ ಅಸಮತೋಲನ ಉಂಟಾಗಿರುವ ಈಗಿನ ಸಮಯದಲ್ಲಿ ನಾವೆಲ್ಲರೂ ನಾವು ಆರಿಸಿಕೊಂಡಿರುವ ವೃತ್ತಿಯ ಬಗ್ಗೆ ಯೋಚನೆ ಮಾಡಬೇಕಿರುವುದು ಉಚಿತ ಅಂತ ಅನಿಸುವುದಿಲ್ಲವೇ ? ಅದು ಬಿಟ್ಟು, " ಸ್ಕೋಪ್" ಹಿಂದೆ ಹೊರಟರೆ ಪ್ರಯೋಜನ ಇದೆಯೇ ?
ನಾವೇಕೆ ಹೀಗೆ ?
19 comments:
"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಅಂತ ಅಡಿಗರು ಹೇಳಿದ ಹಾಗೆ ಬಹುತೇಕ ಜನರಿಗೆ ತಾವು ಏನಾಗಿದ್ದೇವೋ ಅದು ಬಿಟ್ಟು ಬೇರೆ ಏನೋ ಆಗಿದ್ದರೆ ಚೆನ್ನಾಗಿರ್ತಾ ಇತ್ತು ಅಂತ ಅನ್ನಿಸೋದುಂಟು.ಅದಕ್ಕೆ ವ್ಯತಿರಿಕ್ತವಾಗಿ ಕೆಲವರಿಗೆ ತಾವು ಬಯಸಿದ್ದೇ ಆಗುವ ಸೌಭಗ್ಯವೂ ದೊರಕೋದಂಟು....
ಎಲ್ಲ ಪಡೆದು ಬಂದಿರ್ಬೇಕು....
ನೋಡಮ್ಮ,
ಯಾವುದೇ ಕೋರ್ಸ್ ಸೇರುವವರು ಅದರ ಸ್ಕೋಪ್ ನೋಡೇ ನೋಡುತ್ತಾರೆ. ನಾನು ಎಂಜಿನೀರಿಂಗ್ ಸೇರುವಾಗ ಈಗಿನ ಪರಿಸ್ಥಿತಿಯೇ ಇತ್ತು.
ಕಾಲಚಕ್ರ!
>>ಎಂಭತ್ತೆರಡಕ್ಕೇ ತೃಪ್ತಿ ಪಡಬೇಕಾಯ್ತು.
ಸೂಪರ್ ನಂಗೆ ೬೮ ಬಂದಿತ್ತು, ಫುಲ್ ಖುಷ್ಯಾಗಿ ಬಿಟ್ಟಿದ್ದೆ ನಾನು
ನನಗೆ ಮಾತ್ರ ಪಿ.ಯು.ಸಿ. ಇರ್ಬೇಕಾದ್ರೆ ನನ್ನ ಟೇಸ್ಟೇ ಏನು ಅಂತ ಗೊತ್ತಿರ್ಲಿಲ್ಲ. ಒಳ್ಳೇ ಲೇಖನ, ನಂತರದವ್ರಿಗೆ ಹಿರಿಯರ ಮಾರ್ಗದರ್ಶನಾನೂ ಮುಖ್ಯ ಆಗುತ್ತೆ (ಸ್ಕೋಪಲ್ಲ, ನನ್ನ ಅಭಿರುಚಿ ತಿಳಿದು ಆ ಕಡೆ ಗಮನ ಹರಿಸೋಕೆ ಸಹಾಯ ಮಾಡೋದು).
ಆಲ್ ದಿ ಬೆಸ್ಟ್ ನಿಮಗೆ :)
ಲಕ್ಷ್ಮೀಯವರೆ...
ಸಮಯೋಚಿತ ಲೇಖನ...
ನೀವು ಮಾಡಿದ ಹಾಗೆ..ತಮಗೆ ಇಷ್ಟ ಬಂದಿದ್ದನ್ನೇ ಓದಬೇಕು..
ಮಕ್ಕಳೂ ಪ್ರಬುದ್ಧರು,. ಅವರೂ ತಮ್ಮ ಬಗೆಗೆ ವಿಚಾರ ಮಾಡಿ ನಿರ್ಣಯ ತೆಗೆದು ಕೊಳ್ಳ ಬಲ್ಲರು.
ಕೆಲವು ಮಕ್ಕಳು ತೀರಾ ಎಡವಟ್ಟಾಗಿ "ಸಿನೇಮಾ " ರಂಗಕ್ಕೆ ಹೋಗುತ್ತೇನೆ ಅಂದರೆ...?
ನನಗೆ ತಿಳಿದವರೊಬ್ಬರ ಮನೆಯಲ್ಲಿ ಈ ರಂಪಾಟ ನಡೇಯುತ್ತಿದೆ...
ನೋಡಲಿಕ್ಕೆ ಸ್ವಲ್ಪವೂ ಚಂದವಿರದ ಹುಡುಗಿ ಅವಳು.....
ಒಂದು ಡಿಗ್ರಿಯನ್ನಾದರೂ ಮಾಡಿಕೊಂಡು ಹೋದರೆ ಒಳ್ಳೆಯದಲ್ಲವೆ..
ಒಳ್ಳೆಯ ಲೇಖನ..
ಅಭಿನಂದನೆಗಳು..
ಪ್ರಕಾಶ್ ಅಂಕಲ್
ಲಕ್ಷ್ಮಿಯವರೇ,
ನಿಮ್ಮ ಬ್ಲಾಗಿಗೆ ಮೊದಲ ಬಾರಿಗೆ ಬರುತ್ತಿದ್ದೇನೆ. ಚೆನ್ನಾಗಿದೆ ಲೇಖನ. ಮಕ್ಕಳನ್ನು ಅವರ ಇಷ್ಟ, ಅಭಿರುಚಿ ಮತ್ತು ಆಸಕ್ತಿಯ ಹಾದಿಯಲ್ಲಿ ಓದಿಸೋದು ಸರಿಯಾದ ನಿರ್ಧಾರ ಅ೦ತ ಸೂಚ್ಯವಾಗಿ ಹೇಳಿದ್ದಿರಿ.
Paranjape
www.nirpars.blogspot.com
ನಿಜ. ಆದ್ರೆ ಎಷ್ಟೋ ಜನ ಮಕ್ಕಳಿಗೆ ತಮ್ಮ ಇಷ್ಟ ಕಷ್ಟಗಳೇನು ಅಂತಲೇ ಗೊತ್ತಿರೋಲ್ಲ.. ಅಪ್ಪ ಅಮ್ಮ ಫ್ರೆಂಡ್ಸು ಎಲ್ಲಾ ಎಂಜಿನಿಯಂಗ್ ಅಂತಾರೆ, ಇವರು ಜೈ ಅಂತಾರೆ.
ಏನೇ ಆದ್ರೂ ದುಡ್ಡು ಎಲ್ಲವನ್ನೂ ಮಾಡಿಸುತ್ತೆ ನೋಡಿ. ರಿಸರ್ಚು, ಬೇಸಿಕ್ ಸೈನ್ಸು, ಕಲೆ, ಸಾಹಿತ್ಯಕ್ಕಿಂತ ಎಲ್ರಿಗೂ ದುಡ್ಡು, settle ಆಗೋದು ಮುಖ್ಯವಾಗತ್ತೆ. ಇದಕ್ಕೆ ಎಲ್ಲಿ ಅವಕಾಶಗಳು ಜಾಸ್ತಿ ಇದೆಯೋ ಅಲ್ಲಿಗೆ ನುಗ್ಗುತ್ತಾರೆ, ನುಗ್ಗಿಸುತ್ತಾರೆ.
ಇದು ಯಾರೊಬ್ಬರ ತಪ್ಪಲ್ಲ. ದೇಶದ ವಾತಾವರಣವೇ ಹೀಗಿದೆ! ಅನಿವಾರ್ಯ :(
ಅದ್ನೇ ನೀವು ಕೇಳಿದ್ದಲ್ವಾ, ’ನಾವೇಕೆ ಹೀಗೆ?!’
-ವಿಕಾಸ್
its common in everyones life...
aaa timenalli namage decission togo capacity iddre survive..
but the one who thinks - "whatever happens is for good" can emerge whererever he goes.. am the live example !, as i attended BAMS selection interview first but ended up with M.tech in computer science.. ha ha... any way nice article, remided our old "karmakanda" times.. :-)
Nice post.. :) On the same breath, why don't u featuer people who are indeed happy about the choice they made ? be it because of peer pressure ? Appa-Amma force madidru, adarinda naanu ee course togonde., ivaga santoshavaagidini anta helodru nanag gottu. Ondu naanyakke yeradu mukhagalu iro haage, this also has 2 sides to it. Namma kaala ( andre 6 varshada hinde.. :) iddidda exposure ivaga iro exposuer ginta kammi.. sumaar janakke taavy yen madbeku anta gottirodilla.. eegina kaalada maklige, aa swaatantrya + tamma appa-aamma avara aarthika situation improve agide. Innu mundina generation will make a right choice annodu nanna bhaavane.. :)
ಲಕ್ಷ್ಮಿ ಮೇಡಮ್,
ತುಂಬಾ ಉಪಯುಕ್ತವಾದ ಲೇಖನ...
ಇಂದಿನ ಕಾಲದಲ್ಲಿ ಎಲ್ಲರೂ ದುಡ್ಡಿನ ಹಿಂದೆ ಬೀಳುವವರೇ ಆಗಿ ನನ್ನ ಅನೇಕ ಗೆಳೆಯರು ನೆಮ್ಮದಿ ಇಲ್ಲದಂತಾಗಿದ್ದಾರೆ...ಅದರಲ್ಲೂ ಸಾಫ್ಟ್ವೇರ್ ಗೆಳೆಯರಂತೂ ನಿನ್ನಂಗೆ ಫೋಟೋಗ್ರಫಿ, ಬ್ಲಾಗಿಂಗ್, ದಿನಕ್ಕೆ ಮೂರೇ ಗಂಟೆ ಕೆಲಸ. ಮತ್ತು ಜೀವನಕ್ಕೆ ತೊಂದರೆಯಿಲ್ಲದ ಆದಾಯ, ನೆಮ್ಮದಿಯಾಗಿ ಉಳಿದ ಸಮಯದಲ್ಲಿ ಕ್ಯಾಮೆರಾ ಹಿಡಿದುಕೊಂಡು ಮಜಾ ಮಾಡ್ತೀಯ ಅಂತ ಅಲುಬುತ್ತಾರೆ....ಇದೇ ಗೆಳೆಯರು ಮತ್ತು ಕೆಲವು ಹಿರಿಯರು ಸುಮಾರು ಹತ್ತು ವರ್ಷಗಳ ನನಗೆ ಬಿ.ಕಾಂ ಮುಗಿಯಿತು...C.A ಮಾಡು ಅಂತ ಗಂಟು ಬಿದ್ದಿದ್ದರು...ಅದರೂ ನನಗಿಷ್ಟವಾದ ಕೆಲಸವನ್ನೂ ಆಯ್ದುಕೊಂಡು ಸಂತೋಷವಾಗಿದ್ದೇನೆ...ಇದಕ್ಕೆ ಕಾರಣ ನನ್ನ ಮನೆಯಲ್ಲಿ ಯಾವುದೇ ಒತ್ತಡವಿರಲಿಲ್ಲ. ಯಾರಿಗ್ ಹೇಗೆ ಬೇಕೋ ಹಾಗೆ ಬದುಕುವುದಕ್ಕೆ ಬಿಟ್ಟರೆ ಅವರು ತುಂಬಾ ಚೆನ್ನಾಗಿರುತ್ತಾರೆ....ನಿಮ್ಮ ಈ ಲೇಖನ ನಿಜಕ್ಕೂ ಒಂದು ಆತ್ಮಾವಲೋಕನ.
ಲಕ್ಷ್ಮಿ,
ಸಕಾಲಿಕವಾಗಿದೆ ಲೇಖನ. ನಾವೇಕೆ ಹೀಗೆ? ಎಂದು ಕೇಳಿಕೊಂಡರೂ ಉತ್ತರ ಮಾತ್ರ ನಾವು ಹೀಗೇ!!? ಎಂಬಲ್ಲಿಯೇ ನಿಲ್ಲುತ್ತದೆ.
yes. that's true.
parents should guide us to take a decision.
but, they should not force us ....
Amchikelo,
ನಮಸ್ಕಾರ, ಬ್ಲಾಗಿಗೆ ಸ್ವಾಗತ. ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೆ ಜೀವನ ಎಂದು ಹೇಳಿದ ಅಡಿಗರು ಒಂದು ಪೂರ್ಣವಿರಾಮ ಇಟ್ಟಿದ್ದಾರೆ. ನಾನು ಅದನ್ನು ಪ್ರಶ್ನಾರ್ಥಕ ಚಿಹ್ನೆಯಾಗಿ ಪರಿವರ್ತಿಸಲು ಬಯಸುತ್ತೇನೆ. ಜೀವನ ಬರೀ ತುಡಿತ ಅಲ್ಲ, ಆ ತುಡಿತಕ್ಕೆ ಎದೆ ಬಡಿತ ಮಿಳಿತವಾಗಿ ಮಿಡಿತಕ್ಕೆ ಸಾರ್ಥಕ್ಯ ಕೊಡಬೇಕು...ಇಲ್ಲದಿದ್ದರೆ ಜೀವನ ಕಡಿತಗೊಂಡೀತು ! ಎಲ್ಲದಕ್ಕೂ ಪಡೆದು ಬಂದಿರಬೇಕೆಂಬ ವಾದವು ನಿಜವಾಗಿದ್ದರೂ, ಪಡೆಯಲು ಇಚ್ಛೆ ಇರಬೇಕು ಅಲ್ಲವೇ ?
ಅಂತರ್ವಾಣಿ:
ಒಪ್ಪಿದೆ. ಸ್ಕೋಪ್ ನೋಡಬೇಕು. ಆದರಿ ಬರೀ ಸ್ಕೋಪನ್ನೇ ನೋಡಬಾರದು ಅನ್ನೋದು ಲೇಖನದ ಉದ್ದೇಶ ಅಷ್ಟೇ.
ಫಾಲಚಂದ್ರ:
ಸಂತೋಷ. ಧನ್ಯವಾದ.ನಿಮಗೆ ನೀವೇನಾಗಬೇಕಿದ್ದಿರಿ ಎಂದು ಯಾಕೆ ಗೊತ್ತಿರಲಿಲ್ಲ ಅಂದ್ರೆ ನೀವು ಅದರ ಬಗ್ಗೆ ಯೋಚನೆ ಮಾಡಲು ಆಗಿರಲಿಲ್ಲ. ಮಾಡೆಂದು ಯಾರೂ ಹೇಳೂ ಇರಲಿಲ್ಲ ಕಾಣತ್ತೆ. Its ok...as long as you are "really" happy.
ಪ್ರಕಾಶ್ ಅಂಕಲ್,
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದ. ಇನ್ನು ನಿಮ್ಮ ಸ್ನೇಹಿತರ ಮಗಳ ವಿಷಯಕ್ಕೆ ಬಂದರೆ, ಅವಳಿಗೆ ಸಿನೇಮಾಗೆ ಹೋಗಲು ಕೇವಲ "interest"ಇದ್ಯೋ ಅಥವಾ "aptitude" ಇದೆಯೋ ಮೊದಲು ಅದನ್ನು ಒಬ್ಬ ನುರಿತ Education counsellor ಬಳಿ ಕರೆದಕೊಂಡು ಹೋಗಿ ತಿಳಿದುಕೊಳ್ಳಿ. interest ಇದ್ದರೆ ಅದನ್ನು ಅವಳು ಹವ್ಯಾಸವಾಗಿ ತೆಗೆದುಕೊಳ್ಳಲಿ ಎಂದು ಹೇಳಿ. Aptitude ಇದ್ದರೆ ಸಿನೇಮಾ ರಂಗದಲ್ಲಿ ಅವಳಿಗೆ ಯಾವ ವಿಭಾಗದಲ್ಲಿ ಆಸಕ್ತಿಯಿದೆ ಅಂತ ತಿಳಿದುಕೊಳ್ಳಿ. ತೆರೆಯ ಮುಂದಿಗಿಂತ ತೆರೆಯ ಹಿಂದೆ ಕೆಲಸ ಹೆಚ್ಚು.ಸಿನೆಮಾ ಬಗ್ಗೆಯೂ ಡಿಗ್ರೀಗಳಿವೆ. ಮೊದಲು ಅವಳಿಗೆ ಬೈಯ್ಯುವುದನ್ನು ನಿಲ್ಲಿಸಿ counseller ಬಳಿ ಕರೆದುಕೊಂಡು ಹೋಗಿ.
ಪರಾಂಜಪೆ ಸರ್,
ಧನ್ಯವಾದ. ಹೀಗೆ ಬರುತ್ತಿರಿ.
ವಿಕಾಸ್,
ನಾನು ನಿಮ್ಮ ಮಾತನ್ನ ಪೂರ್ತಿ ಒಪ್ಪಲಾರೆ. ನಮಗೆ ನಮ್ಮ interest and aptitudes ನ ಗುರುತಿಸಲು ಅವಕಾಶ ಸಿಗ್ತಾಯಿಲ್ಲ ಮತ್ತು ಆ ವಾತಾವರಣವನ್ನ ನಮ್ಮ ಶಿಕ್ಷಣ ಮತ್ತು ಮನೆ ಎರಡೂ ಕಲ್ಪಿಸಿಕೊಡುತ್ತಿಲ್ಲ ಅನ್ನೋದು ದುರಂತ ಇಲ್ಲಿ. ಪೋಷಕರು ಅದನ್ನ ಗುರುತಿಸಿದ್ದರೆ ಅವರಿಗೆ hats off, but the tragedy is,they fit their dreams into our interests and aptitudes. ಒಂದು ಹಂತದಲ್ಲಿ settle ಆಗೋದು, ದುಡ್ಡು, ಎಲ್ಲ ಮುಖ್ಯ. ಇದನ್ನು ನಾನು ಒಪ್ಪುತ್ತೀನಿ, ಆದರೆ ನನ್ನ ಪ್ರಶ್ನೆ ಇಷ್ಟೇ...ಕಷ್ಟ ಪಟ್ಟು ಇಷ್ಟಪಡುವುದಕ್ಕಿಂತ, ಇಷ್ಟದ ವಿಷಯದಲ್ಲಿ ಕಷ್ಟಪಟ್ಟು ದುಡಿದರೇ ಅದಕ್ಕೆ ಫಲವಿಲ್ಲವೇ ?
ಅದಕ್ಕೇ ನಾನು ಕೇಳಿದ್ದು, ನಾವೇಕೆ ಹೀಗೆ ?
ಪ್ರವೀಣ್:
:) Whatte philosophy !
ಪೃಥ್ವಿ:
ಧನ್ಯವಾದ. ನೋಡಪ್ಪ..peer pressure ಇಂದ ಕೋರ್ಸ್ ತಗೊಂಡು ಸಂತೋಷವಾಗಿರೋರ count ತಗೊಳ್ಳೋಣವಾ ? ಪ್ರಶ್ನೆ ಅವರು ಸಂತೋಷವಾಗಿದ್ದಾರೆ, ನಾವೂ ಸಂತೋಷವಾಗಿದ್ದೀವಿ, ಇರ್ತೀವಿ ಅನ್ನೋದಲ್ಲ, ಅವರ ಸಂತೋಷದ Definition ಏನು ಅನ್ನೋದು. ಸಂತೋಷವಾಗಿರೋರ ವಿಷಯಕ್ಕಿಂತ ಇಲ್ಲಿ ದುಃಖಕ್ಕೆ ಕಾರಣ ಮುಖ್ಯ ಅನ್ನಿಸಿತು. ಅದಕ್ಕೆ ಅದನ್ನೆ ಮುಖ್ಯವಾಗಿ ಹೇಳಿದ್ದೇನೆ.
ಆರು ವರ್ಷದ ಹಿಂದೆ ನಮಗೆ exposure ಇರ್ಲಿಲ್ಲ ನಿಜ...ಆದರೆ ಈಗ exposure ಇದ್ದರೂ ಅದನ್ನು ಸ್ಕೋಪೊಳಗೆ ತಳ್ಳುವ ಹಾಗಾಗಿದ್ಯಲ್ಲ ಅನ್ನೋದು ವಿಪರ್ಯಾಸ ಅಷ್ಟೇ. ಮುಂದಿನ ಜೆನೆರೇಷನ್ ಗೆ ನಾನು ನೀನು "oldies" ಆಗಿರ್ತಿವೋ...ಆಗ ಅವರೇನು ಹೇಳುತ್ತಾರೋ ನೋಡೋಣ!
Anyways, keep coming :)
ಶಿವು, ತೇಜಸ್ವಿನಿ ಮತ್ತು ಶಿವಪ್ರಕಾಶ್,
:) ಧನ್ಯವಾದ.
World in my eyes,
ನಮಸ್ಕಾರ,ಬ್ಲಾಗಿಗೆ ಸ್ವಾಗತ. ಸಲಹೆಗಳಿಗೆ ಮತ್ತು ಅಭಿಪ್ರಾಯಗಳಿಗೆ ಧನ್ಯವಾದ. ಆಮೇಲೆ, "ಯಾವ ಮೋಹನ ಮುರಲಿ ಕರೆಯಿತು.." ಬರೆದಿದ್ದು ಅಡಿಗರು, ಬೇಂದ್ರೆಯವರು ಅಲ್ಲ.
yella pratikreyegalannu odidda nanage ondondarallu kuda adaradde aada ondu kaalaji kandubaruttide.
we are called Human Beings and very logically ! we are being this, we are being that. We take up so many different roles in a single life. when we were evolving, if we had not thought about expanding our life laterally then probably we would not even be thinking about scope. on the same note if we had not thought about scope then may be a lot of departments would have got closed down. So, I feel its important to have a balance. The sarcasm here is that even finding a Balance is subjective in nature......
>>ಫಾಲಚಂದ್ರ:
ನನ್ನ ಹೆಸರು ಪಾಲಚಂದ್ರ ಅಂತ
>>ಸಂತೋಷ. ಧನ್ಯವಾದ.ನಿಮಗೆ ನೀವೇನಾಗಬೇಕಿದ್ದಿರಿ ಎಂದು ಯಾಕೆ ಗೊತ್ತಿರಲಿಲ್ಲ ಅಂದ್ರೆ ನೀವು ಅದರ ಬಗ್ಗೆ ಯೋಚನೆ ಮಾಡಲು ಆಗಿರಲಿಲ್ಲ. ಮಾಡೆಂದು ಯಾರೂ ಹೇಳೂ ಇರಲಿಲ್ಲ ಕಾಣತ್ತೆ.
ನಾನು ಕಾಮೆಂಟಲ್ಲಿ ಹಾಕಿದ್ದೆ ನಿಮ್ಮ ವಾಕ್ಯದಲ್ಲಿ ಮತ್ತೆ ಹೇಳಿದ್ರಿ :)
>>Its ok...as long as you are "really" happy.
real, fake happy ಅಂತೆಲ್ಲಾ ಇರುತ್ತಾ
ಲಕ್ಷ್ಮಿ
ಬಹಳ ದಿನಗಳ ನಂತರ ನಿನ್ನ ಬ್ಲಾಗ್ ಗೆ ಬರುತ್ತಿದ್ದೇನೆ. ನಿನ್ನ ಲೇಖನ ಹಾಗೂ ಸುದೀರ್ಘವಾದ ,ಉಪಯುಕ್ತವಾದ ಪ್ರತಿಕ್ರಿಯೆಗಳನ್ನೂ ನೋಡಿದೆ.ಯಾವುದೇ ವಿಷಯವನ್ನು generalise ಮಾಡಲಾಗದು
ನನ್ನ ಗೆಳತಿಯೊಬ್ಬರು ತಮ್ಮ ಮಗಳಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟು ( ಯಾವುದೇ ಬಲವಂತ ಮಾಡದೆ ) ನಿನಗೆಷ್ಟು ಬೇಕೋ ಅಷ್ಟೇ ಓದು, ನಿನಗೇನಾಗಬೇಕೋ ಅದೇ ಆಗು ಎಂದು ಹೇಳಿದರು. ಅವರ ಮಗಳು ಒಂದು ಪದವಿಯನ್ನು ಪಡೆದು ಈಗ ಬ್ಯಾಂಕ್ ನಲ್ಲಿ ಕೆಲಸದಲ್ಲಿದ್ದಾಳೆ. ಅವಳು ತನ್ನ ಮಗಳನ್ನು ಹಗಲು ಇರುಳು ಒತ್ತಡಹಾಕಿ ಓದಿಸುತ್ತಾಳೆ. ಹಾಗೂ ಅವಳ ತಾಯಿಯನ್ನು " ನನಗೆ ಒಂದೆರಡು ಏಟು ಹಾಕಿಯಾದರೂ ಚೆನ್ನಾಗಿ ಓದಿಕೋ ಎಂದು ಯಾಕೆ ಹೇಳಲಿಲ್ಲ " ಎಂದು ಗದರುತ್ತಾಳೆ!
ಒಟ್ಟಿನಲ್ಲಿ ಓದು ಎನ್ನುವುದು ಆಸಕ್ತಿಯುತವಾಗಿರುವ ಹಾಗೆ ನೋಡಿಕೊಳ್ಳಬೇಕು. ಹಾಗೂ ಅವರಿಗೆ ಹತ್ತನೆ ತರಗತಿಯ ಸಂದರ್ಭದಲ್ಲಿ ಮತ್ತು ದ್ವಿತೀಯ ಪಿಯು ಓದುವಾಗ ಕಲೆ, ವಿಜ್ಞಾನ ಮತ್ತು ವಾಣಿಜ್ಯ -ಎಲ್ಲ ವಿಭಾಗದಲ್ಲಿ ಓದುವವರಿಗೆ ಸರಿಯಾದ ರೀತಿಯ ಕೌನ್ಸೆಲ್ಲಿಂಗ್ ಕೊಡಿಸಬೇಕು.ಪ್ರಖ್ಯಾತ ಕವಿ ಖಲೀಲ್ ಗಿಬ್ರಾನ್ ಒಂದೆಡೆ ಹೀಗೆ ಹೇಳುತ್ತಾನೆ.
" ನಮ್ಮ ಮಕ್ಕಳು ನಮ್ಮ ಮಕ್ಕಳಲ್ಲ, ಅವರು ಪ್ರಕೃತಿಯ ಮಕ್ಕಳು.
ನಿನ್ನ ಪ್ರೀತಿಯನ್ನು ಅವರಿಗೆ ಕೊಡಬಹುದೇ ಹೊರತು ನಿನ್ನ ಆಲೋಚನೆಗಳನ್ನಲ್ಲ.
ಅವರು ನಿನ್ನ ಮೂಲಕ ಈ ಪ್ರಪಂಚಕ್ಕೆ ಬಂದಿರುವರೇ ಹೊರತು ಅವರು ನಿನ್ನವರಲ್ಲ.
ನೀನು ಅವರಂತಾಗಲು ಇಚ್ಚಿಸಬಹುದೇ ಹೊರತು ಅವರು ನಿನ್ನಂತಲ್ಲ.
ಏಕೆಂದರೆ ಅವರು ಭವಿಷ್ಯದ ಮಕ್ಕಳು
ಬದುಕು ಯಾವಾಗಲೂ ಮುಮ್ಮುಖವಾಗಿ ಹರಿಯಬೇಕೇ ಹೊರತು ಹಿಮ್ಮುಖವಾಗಿಯಲ್ಲ"
ಇದನ್ನು ಪ್ರತಿಯೊಬ್ಬ ತಂದೆ ತಾಯಿ ಓದಬೇಕೆಂಬುದು ನನ್ನಾಸೆ.
Nice write up Lakshmi!!!!
Made me remember my college day's or time of joining college day's, I still wonder how people were soo smart to know what is there line of interest :)
I personally never had any idea what to take or what was in scope at the time (yes, normally Medicine & Engg.) was on top of things.
Things have worked out well for me I guess. May be I will remember this write up when the time comes for my Daughter/Son decision taking time.
Cheers,
Subbu
"ಭೌತಶಾಸ್ತ್ರದಲ್ಲಿ ನೂರಕ್ಕೆ ನೂರು ಗ್ಯಾರಂಟೀ ಎಂದುಕೊಂಡಿದ್ದ ನಾನು ತೊಂಭತ್ಮೂರು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದೆ"- Gawd!, I never scored so much in my entire career, although, since 10 years I have been doing world-class research all over the globe [India, Netherlands, Germany, Canada, and currently in UK] in experimental physics [Ultrafast laser spectroscopy].
I agree with your views that one should be given freedom to make their choice. Good one. Dr.D.M.Sagar
ಉತ್ತಮ ಚಿಂತನೆ!, ಆದರೆ ಹೇಳುವಷ್ಟು ಸರಳವಲ್ಲವೆಂಬುದು ನನ್ನ ಅಭಿಮತ. ಮನೆಯ/ಕುಟುಂಬದ ಹಿನ್ನಲೆ, ವಾತಾವರಣನದ ಮೇಲೆ ಅವಲಂಬಿತ ವಾಗಿರುತ್ತದೆ. ಉದಾಹರಣೆಗೆ ಮನೆಯಲ್ಲಿ ಒಬ್ಬನದೇ ಆದಾಯವಿದ್ದು, ನಾಲ್ಕೈದು ಜನರನ್ನು ಸಾಕಬೇಕು ಮತ್ತು ಬೇರೆ ಯಾವುದೇ ಆರ್ಥಿಕ ಸಹಾಯ ಇಲ್ಲ ಎಂದಾಗ, ದುಡ್ಡಿನ ಮಹತ್ವ ಹೆಚ್ಚಾಗುತ್ತದೆ. ಇನ್ನು ಮನೆಯಲ್ಲಿ ಯಾರಾದಾದರೂ ವೃದ್ಧರ ಆರೋಗ್ಯ ಬಿಗಡಾಯಿಸಿದ್ದರೆ.. ಈ ರೀತಿ.. ಆಗ ದುಡ್ಡಿನ ಹಿಂದೆ ಬಿದ್ದು, ಇಷ್ಟವಿಲ್ಲದೆ ಇರುವ ಕಾಯಕವನ್ನು ಮಾಡಬೇಕಾಗುತ್ತದೆ. ಅಥವಾ ಮಾಡುವ ಕೆಲಸವನ್ನು ಇಷ್ಟ ಪಡಬೇಕಾಗುತ್ತದೆ.
ಡಿ ವಿ ಜಿ ಯವರು ಹೇಳುವಂತೆ,
ಕೊಟ್ಟ ಕೆಲಸವ ಮಾಡು ಹಿರಿದು ಕಿರಿದೆನದೆ... ಎಂಬುದನ್ನು ಜೀವನದಲ್ಲಿ ಕರಗತ ಮಾಡಿಕೊಳ್ಳಬೇಕಾಗಬಹುದು.
ಮತ್ತೊಂದೆಡೆ ಹೀಗೆಂದಿರಿ,
"ಮತ್ತೊಂದಿಷ್ಟು ಜನ "I consider this choice as a step to something else. I wanted to learn something in this field, I learnt it. Now I use this career option to go to another field." ಅಂತ ಅಂದು ಸಂಬಂಧವೇ ಎರಡು ವೃತ್ತಿಯಲ್ಲಿ ಸೇತುವೆ ಹುಡುಕುತ್ತಿರುತ್ತಾರೆ. ನಾನೂ ಇವರ ಮಾತನ್ನು ಒಪ್ಪುತ್ತೇನೆ. ಆದರೆ ಇದು ಯಾಕೋ "jack of all trades, master of none"ಅಂತೆ ಆಗಲಿಲ್ಲವೇ ?"
ಆದರೆ, ನಿಮ್ಮ ಚಿಂತನೆ ಜೀವನದಲ್ಲಿ ತನಗೆ ಸಂತೋಷ ತರುವಂತಹ ಕೆಲಸ ಮಾಡಬೇಕು ಎಂಬ ತತ್ವದ ಸುತ್ತ ಕೇಂದ್ರೀಕೃತವಾಗಿರುವುದರಿಂದ, "jack of all trades, master of none" ಆಗುವುದೇ ಒಬ್ಬನಿಗೆ ಸಂತೋಷ ತರುವುದಾದರೆ, ಅದೇ ಸರಿಯಲ್ಲವೇ?
Post a Comment