Saturday, January 5, 2008

ಶ್ರಾದ್ಧ

ಮೊನ್ನೆ ನಮಗೆ ಬಹಳ ಬೇಕಾದವರ ಮನೆಯಲ್ಲಿ ಒಂದು ಶ್ರಾದ್ಧವಿತ್ತು. ನನಗೆ ಜನವರಿಯಲ್ಲಿ ರಜೆಗಳೇ ಇರುತ್ತಿರಲಿಲ್ಲ ಇಷ್ಟು ವರ್ಷ.exam,testಗಳಿಂದ ಅವರು ನನ್ನ ಬಹು ನೆಚ್ಚಿನ , ಪ್ರೀತಿಯ ಅಜ್ಜಿಯಾಗಿದ್ದರೂ ಅವರ ಶ್ರಾದ್ಧಕ್ಕೆ ನನಗೆ ಹೋಗಲು ಆಗುತ್ತಲೇ ಇರಲಿಲ್ಲ.ಆದರೆ ಈ ಬಾರಿ ಅವರು ನನ್ನನ್ನು ಕರೆಸಿಕೊಳ್ಳಲು ಮನಸ್ಸು ಮಾಡಿದ್ದರು ಎಂದು ಅನ್ನಿಸುತ್ತದೆ. ಮೊನ್ನೆ ನಮ್ಮ ಅಮ್ಮನನ್ನೂ ಕರೆದುಕೊಂಡು ಬಸ್ಸಿನಲ್ಲಿ ಅವರ ಮನೆಗೆ ಹೊರಟೆ. ಹನ್ನೆರಡು ಮುಕ್ಕಾಲಿಗೆ ಮನೆ ಬಿಟ್ಟ ನಾವು ಅವರ ಮನೆ ತಲುಪಿದ್ದು ಎರಡು ಗಂಟೆಗೆ.ಹೋದ ತಕ್ಷಣ ನಮ್ಮನ್ನು ಬಹು ಆದರಿಂದ ಬರಮಾಡಿಕೊಂದ ಮನೆಯವರು ಕಾಫಿ ಮುಂತಾದ ಉಪಚಾರಗಳನ್ನು ಬಹಳ ಆತ್ಮೀಯತೆಯಿಂದ ಮಾಡಿದರು.ಅಲ್ಲೇ ಇದ್ದ ಅಜ್ಜಿಯ ಫೋಟೋಗೆ ನಮಸ್ಕರಿಸಿ ಸೋಫಾ ಮೇಲೆ ಕುಳಿತೆ. ಕೈಗೆ ಸಿಕ್ಕ ಡಿಸೆಂಬರ್ ಮೂವತ್ತೊಂದರ ದಿನಪತ್ರಿಕೆಯ ಪದಬಂಧದಲ್ಲಿ ಮುಳುಗಿದೆ.೧೦ ನಿಮಿಷಗಳಲ್ಲಿ ಕಾಫಿಯೂ ಆಯಿತು,ಪದಬಂಧವೂ ಮುಗಿಯಿತು. ಆಮೇಲೆ ಅಜ್ಜಿ ಬದುಕಿದ್ದಾಗ ಅವರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ಮೆಲುಕು ಹಾಕುತ್ತಾ ಕುಳಿತೆ.

ಆಗ ಪ್ರತ್ಯಕ್ಷವಾಯಿತು ನೋಡಿ ಅವರ ನಿಕಟವರ್ತಿಗಳ ಮತ್ತು ರಕ್ತಸಂಬಂಧಿಗಳ ಹಿಂಡು.ಬಂದದ್ದೇ, "ಏನು ಬಿಸಿಲು ! ಪಾನಕ ಬೇಕು !" ಎನ್ನೋದೆ ? ನಂತರ ಅವರ ಮಿಕ್ಕ ಬಾಂಧವರೊಡನೆ ಮಾತಾಡಲು ಶುರು ಹಚ್ಚಿಕೊಂಡರು. ಅವರು ಹೊಸದಾಗಿ ಖರೀದಿಸಿದ ಸೈಟು, ಮಗನಿಗೆ ಸಿಕ್ಕ ಕೆಲಸದ ಬಡ್ತಿ, ಅವರಿಗೆ ಇತರ ಸಮಾರಂಭಗಳಲ್ಲಿ ದೊರೆತ ಸೀರೆ-ಒಡವೆಗಳ ಬಗ್ಗೆ ಮಾತಾಡಲು ಆರಂಭಿಸಿ, ತಾವೇ ಭುವನದ ಅತ್ಯಂತ ಸುಖಿಗಳು ಅನ್ನುವ ಮಾತನ್ನು ಪ್ರತಿಪಾದಿಸಲು ಪ್ರಯತ್ನಿಸುತಿದ್ದರು.ಅವರು ಬಂದ ಉದ್ದೇಶವನ್ನೇ ಮರೆತ ಅವರು, "ಊಟ ಯಾವಾಗ ?" ಎಂದಷ್ಟೇ ಕೇಳಿದರೇ ಹೊರತು, "ನಮಸ್ಕಾರ ಯಾವಾಗ ? " ಎಂದು ಕೇಳಲಿಲ್ಲ ! ಬಂದವರು ಫೋಟೋ ಗೆ ನಮಸ್ಕರಿವುದಿರಲಿ, ಆ ಕಡೆ ತಿರುಗಿಯೂ ನೋಡಲಿಲ್ಲ !!
ಕಣ್ಣೀರು ಹಾಕಿ ಗೋಳಾಡುವುದು ಬೇಡ. ಸುಮ್ಮನಾದರೂ ಇರಬಾರದೇ ? ಪಿಂಡ ರೂಪದಲ್ಲಿ ಆಹ್ವಾನಿಸಲ್ಪಟ್ಟ ಹಿರಿಯರೊಂದಿಗೆ ಮೌನ ಸಂಭಾಷಣೆ ನಡೆಸಕೂಡದೆ ? ಅವರನ್ನು ನಾವು ಇಂದಿಗೂ ಮರೆತಿಲ್ಲ,ಅವರು ಹಾಕಿಕೊಟ್ಟ ನಿಯಮಗಳನ್ನ ಮರೆತಿಲ್ಲ, ಅವರ ಸ್ಥಾನ ನಮ್ಮ ಹೃದಯದಲ್ಲಿ ಸ್ಥಿರವೆಂದು ಅವರಿಗೆ ಗೌರವ ತೋರಿಸಬೇಕಲ್ಲವೇ ? ರಕ್ತ ಸಂಬಂಧಿಗಳಾದ ಇವರಿಗೇ ಇದು ತೋಚದಿರುವುದನ್ನು ಕಂಡು ನಾನು ಚಕಿತಳಾದೆ,ಬೇಜಾರು ಪಟ್ಟುಕೊಂಡೆ.

ಒಂದನ್ನು ನೋಡಿ ಸಲ್ಪ ನೆಮ್ಮದಿಯಾಯಿತು. ನಮ್ಮೊಂದಿಗೆ, ಸತ್ತವರ ಮಕ್ಕಳು, ಮೊಮ್ಮಕ್ಕಳು ಮಾತ್ರ ಮೌನವಾಗಿದ್ದರು.

ಇದು ಒಂದು ಉದಾಹರಣೆ ಅಷ್ಟೇ !! ಇದಕ್ಕಿಂತ ಘೋರ ಪರಿಸ್ಥಿತಿಗಳನ್ನೂ ನೋಡಿದ್ದೇನೆ. ಆಗ ಬರೆಯಲು ಸಮಯವಿರಲಿಲ್ಲ. ಈಗ ಸಿಕ್ಕಿದೆ, ಬರೆಯುತ್ತಿದ್ದೇನೆ. ಒಂದು ಕೋಣೆಯಲ್ಲಿ ಕಾರ್ಯ ನಡೆಯುತ್ತಿದ್ದರೆ ಮತ್ತೊಂದು ಕೋಣೆಯಲ್ಲಿ ಇಸ್ಪೀಟು ಆಟ ನಡೆಯುತ್ತಿರುತ್ತದೆ. ಇಂತಹ ಕಾರ್ಯಗಳಿಗೆ ಬಟ್ಟೆ ಸಾಮಾನ್ಯ ಕಪ್ಪು ಬಣ್ಣದ್ದು, ಹತ್ತಿಯದ್ದೂ ಆಗಿರಬೇಕೆಂದು ನಿಯಮ. ಕಪ್ಪು ಶೋಕದ ಸಂಕೇತವಲ್ಲವೇ? ಅದಕ್ಕೆ. ಅದು ಬಿಟ್ಟು ರಂಗಿನ ರೇಷ್ಮೆ ಸೀರೆಗಳು, ಇತರರಿಗೆ ತೋರಿಸಲೆಂದೇ ಒಡವೆಗಳು ಹೇರಿಕೊಂಡರೆ, ಶುಭಕ್ಕೂ ಅಶುಭಕ್ಕೂ ಎನಾದರೂ ವ್ಯತ್ಯಾಸವಿರುತ್ತದೆಯೇ ? ಇನ್ನು ಜಾಗತೀಕರಣದ, ಅಂಧಾನುಕರಣೆಯ ಭೂತಾರಾಧನೆ ಮಾಡುವವರು ಜೀನ್ಸ್ ನಲ್ಲಿ ಬರುತ್ತಾರೆ !ಗಂಡಸರು ಮಾತ್ರವಲ್ಲ, ಹೆಂಗಸರೂ ಸಹ !!!

ಶ್ರದ್ಧೆ ಇಂದ ಮಾಡುವ ಕಾರ್ಯವನ್ನು ಶ್ರಾದ್ಧವೆನ್ನುತ್ತಾರೆ. ನಮ್ಮ ತಂದೆ ತಾಯಿಗಳು, ಆಪ್ತರು, ಅವರು ಬದುಕಿದ್ದ ಕಾಲದಲ್ಲಿ ನಮಗೆ ಮಾಡಿದ ಉಪಚಾರ, ಉಪಕಾರಗಳಿಗೆ ನಾವು ಮಾಡುವ ಗೌರವಾರ್ಪಣೆ, ಪ್ರತ್ಯುಪಕಾರವೇ ಶ್ರಾದ್ಧ. ಧರ್ಮದ ನಂಬುಗೆ ಇಲ್ಲದವರಿಗೆ ತಿಳಿಸಿ ಹೇಳಬೇಕೆಂದರೆ, ಇದ್ದಾಗ ಇದ್ದ "energy" ಹೋದ ಮೇಲೆ ತನ್ನ ರೂಪ, ಆಕಾರಗಳನ್ನು ಬದಲಿಸುತ್ತದೆ ಹೊರತು ತನ್ನ ಗುಣವನ್ನಲ್ಲ. ನಾವು ಶ್ರಾದ್ಧದಲ್ಲಿ ಅದರ ಗುಣಕ್ಕೆ ಗೌರವ ಸಲ್ಲಿಸುತ್ತೇವೆ.energy is always conserverd in this universe ಎಂಬುದು ಸರ್ವ ವಿದಿತ, ಸರ್ವಥಾ ಪ್ರಯೋಗ ಸಿದ್ಧ ನಿಯಮ. ನಾವು ಈ ನಿಯಮವನ್ನು ಈ ರೀತಿ ಪಾಲಿಸುತ್ತಿದ್ದೇವೆ ಅಷ್ಟೆ.

ಧರ್ಮದ ಗಂಧವಿರದೇ,ಆಚರಣೆಯ ಅರಿವಿಲ್ಲದೇ ಇರುವವರು, " ನನಗೆ ಪಿಂಡವನ್ನು ನೋಡಿದರೆ ಹೆದರಿಕೆಯಾಗುತ್ತಪ್ಪ !!!ನಮ್ಮ ತಂದೆ ತಾಯಿಯನ್ನು ಹೀಗೆ ಹೇಗೆ ನೋಡುವುದು" ಎನ್ನುವವರು ಇದ್ದಾರೆ ! ಇದ್ದಾಗ ಎಷ್ಟರ ಮಟ್ಟಿಗೆ ಅವರ ರೂಪನ್ನು, ಆಕಾರವನ್ನು, ಸ್ವಭಾವನ್ನು ಅರ್ಥ ಮಾಡಿಕೊಂಡಿದ್ದರು ಎಂಬುದು ನಾನರಿಯೆ ! ಇದರಿಂದ ಶ್ರಾದ್ಧದ ಬಗ್ಗೆ ಗೌರವಕ್ಕಿಂತ ಜನರಲ್ಲಿ ಭಯವೇ ಹೆಚ್ಚು ವ್ಯಾಪಿಸಿದಂತಿದೆ. ಇದಕ್ಕೆಲ್ಲ ಕಾರಣ ನಮ್ಮ ignorance ಹೊರತು ಆಚರಣೆಯಲ್ಲ, ಧರ್ಮವಂತು ಅಲ್ಲವೇ ಅಲ್ಲ. ಧರ್ಮವನ್ನು, ಶಾಸ್ತ್ರವನ್ನು ಕ್ಲಿಷ್ಟ ಎನ್ನುವವರು ನನ್ನ ಪ್ರಕಾರ ಮೂರ್ಖರೇ.

ಶ್ರದ್ಧೆಯು ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಮಾತ್ರ ಇದ್ದರೆ ಸಾಲದು. ಆಪ್ತರಿಗೂ ಇರಬೇಕು. ಆಗಲೇ ಶ್ರಾಧ್ಧದ ಉದ್ದೇಶ ಸಾರ್ಥಕವಾಗುವುದು. ಇಲ್ಲದಿದ್ದರೆ ಅದು ಪಾಪಕ್ಕೇ ಸಮನಾದದ್ದು ಎಂದು ನನ್ನ ಅಭಿಮತ.

ನಿಜವಾಗಲೂ....ನಾವೇಕೆ ಹೀಗೆ ?

6 comments:

Srinivasa Rajan (Aniruddha Bhattaraka) said...

ನೀವು ಕೇವಲ ಶ್ರಾದ್ಧದ ಕಥೆ ಹೀಗೆ ಹೇಳಿದ್ರಿ.. ನಾನು ಒಂದು ಪ್ರಸಂಗ ನನ್ನ ಕಣ್ಣಾರೆ ನೋಡ್ದೆ.. ಹೇಳೋಕ್ಕೆ ಬೇಜಾರಾಗುತ್ತೆ.. ನಮ್ಮಜ್ಜಿ ದೈವಾಧೀನರಾಗಿದ್ದ ದಿನವೇ! ಮೃತರ ಶರೀರಕ್ಕೆ ಅಂತಿಮ ನಮಸ್ಕಾರ ಮಾಡೋಕ್ಕೆ ಅಂತ ಬಂದೋರೇ ಎಷ್ಟೋ ಜನ ಕಾಡುಹರಟೆ ಆಡ್ಕೊಂಡ್ ನಿಂತಿದ್ರು.. ಮಾತುಕತೆ ಹಾಗಿದ್ದುಕೊಳ್ಲಿ ಅಂದ್ರೆ ಅಷ್ಟೇ ಸಾಲದ್ದಕ್ಕೆ ಜೋರಾಗಿ ನಗಾಡ್ತಿದ್ರು.. ನಗೋ ಸಂದರ್ಭವೇ ಅದು? ನಮ್ಮ ತಂದೆಗೂ-ದೊಡ್ಡಪ್ಪನಿಗೂ ಹೇಗಾಗಿರ್ಬೇಕು!!! ನೆನೆಸಿಕೊಂಡ್ರೇನೇ ಬೇಸರವಾಗುತ್ತೆ!

Parisarapremi said...

ಇಡೀ ಶ್ರಾದ್ಧ ಅಂಕಣದಲ್ಲಿ ನನ್ನ favourite 'ವಡೆ' ಬಗ್ಗೆ ಒಂದೂ ಪ್ರಸ್ತಾಪ ಇಲ್ಲದೇ ಇರುವುದನ್ನು ನಾನು ವಡಾಪೂರ್ವಕವಾಗಿ ಖಂಡಿಸುತ್ತೇನೆ.. ;-)

ಸೊಗಸಾಗಿದೆ ಕಣ್ರೀ... ಪ್ರಶ್ನೆ! ಆ ಕ್ಷಣದಲ್ಲೇ ಆ ವ್ಯಕ್ತಿಗಳನ್ನೇ ನೇರ ಪ್ರಶ್ನೆ ಮಾಡ್ಬಿಡ್ಬೇಕು - ಯಾಕೆ ಹೀಗೆ? ಅಂತ!

ಅಂತರ್ವಾಣಿ said...

ನಾವೇಕೆ ಹೀಗೆ?? ಖಂಡಿತವಾಗಿಯು ಇಂಥಾ ಜನರು ಇರುತ್ತಾರೆ. ಚೆನ್ನಾಗಿ ಬರೆದಿದ್ದೀರ.

Jagali bhaagavata said...

Lakshmi,

I concur with you regarding your observations.

ಸಂತೋಷಕುಮಾರ said...

ಚಿಂತನಯೋಗ್ಯ ಬರಹ

Unknown said...

This is so profound for a young 20 y.o. to be thinking. No wonder her elders seem to have made a tremendous impact on her soul and spirit. Her parents also have given her deep roots in life values.

The humor is encouraging; I am reminded of what I've been telling others about "why no Tithi for you" = by saying that " My life itself is a daily Tithi, so God has exempted me from shraddha !!!!!!!!!!!!!!

Good job Lakshmi....I can't wait to read your other blogs.


Ravi Shankar
Berkeley, CA