Saturday, January 19, 2008

ಮದುವೆ

ಸಂಸ್ಕೃತದಲ್ಲಿ ಹೀಗೊಂದು ಶ್ಲೋಕವಿದೆ:

ಕನ್ಯಾ ವರಯತೇ ರೂಪಮ್,ಮಾತಾ ವಿತ್ತಮ್ ಪಿತಾ ಶ್ರುತಮ್ |
ಬಾಂಧವಾಃ ಕುಲಮಿಚ್ಛಂತಿ ಮೃಷ್ಟಾನ್ನಮ್ ಇತರೇ ಜನಾಃ ||

ಅರ್ಥ: ಕನ್ಯೆಯು ವರನ ರೂಪವನ್ನು ನೋಡಿದರೆ,ತಾಯಿಯು ಅವನ ಸಂಬಳ,ಅವನ ಆಸ್ತಿ-ಪಾಸ್ತಿಗಳ ಬಗ್ಗೆ ವಿಚಾರಿಸುತ್ತಾಳೆ. ತಂದೆಯು ಅವನ ಓದು,ಸಂಸ್ಕಾರದ ಬಗ್ಗೆ ಕೂಲಂಕಷವಾಗಿ ನೋಡುತ್ತಾನೆ.ಬಾಂಧವರು ಕುಲದ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದರೆ ಮಿಕ್ಕವರೆಲ್ಲರೂ ಭೋಜನಕ್ಕೇ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

ಮದುವೆ ಅನ್ನುವುದು ಹೆಣ್ಣು ಗಂಡುಗಳ ಮತ್ತು ಅವರ ಪರಿವಾರಗಳ ಮೇಲೆ ಇರುವ ಒಂದು ಗುರುತರವಾದ ಜವಾಬ್ದಾರಿ.ಆದ್ದರಿಂದ ಈ ಶ್ಲೋಕವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದರೆ ಅದ್ದೂರಿಯಾಗಿ ಮಾಡುವ ಮದುವೆಗಳಲ್ಲಿ ನಡೆಯುವ ಅವಗಢಗಳ ಬಗ್ಗೆ ನನಗೆ ಖೇದವಿದೆ.

ಮದುವೆಯಲ್ಲಿ ಸಾಮನ್ಯವಾಗಿ ಕಾಣುವ ದೃಶ್ಯವಿದು.ಮುಹೂರ್ತಕ್ಕೆ ನಾವು ಹೋದರೆ ಛತ್ರ ಖಾಲಿ!!!! ತಲೆಗಳನ್ನು ಎಣಿಸಿದರೆ ಹತ್ತೋ ಹನ್ನೆರಡೋ ಅಷ್ಟೇ !!ಹನ್ನೆರಡು ಗಂಟೆಗೆ ಸರಿಯಾಗಿ ಛತ್ರದ ತುಂಬೆಲ್ಲ ಜನ ಕಿಕ್ಕಿರಿದು ಊಟಕ್ಕಾಗಿ ಕಾಯುತ್ತಿದ್ದರು ! ಹನ್ನೆರಡು ಜನ ಮಾತ್ರ ತಾಳಿ ಕಟ್ಟಿದನ್ನು ವೀಕ್ಷಿಸಿದ್ದು !!!

ಇನ್ನೊಂದು ಮದುವೆಯಲ್ಲಿ ನಡೆದ ಪ್ರಸಂಗವಿದು.ಜೀರಿಗೆ ಬೆಲ್ಲದ ಸಮಯ ಬಂತು. ವೀಡಿಯೋನವರು,"ವೀಡಿಯೋನಲ್ಲಿ ಚೆನ್ನಾಗಿ ಬೀಳತ್ತೆ, ಬಣ್ಣದ ಸಣ್ಣ ಸಣ್ಣ Thermocole ಗುಂಡುಗಳನ್ನು ಹಾಕಿಸಿ" ಎಂದರು. ಪುರೋಹಿತರು ಇದಕ್ಕೆ ಆಕ್ಷೇಪಿಸಿದರಾದರೂ ಎರಡೂ ಕಡೆಯ ಮನೆಯವರು ಅವರ ಮಾತು ಕೇಳದಿದ್ದದ್ದು ನಮಗೆ ಆಶ್ಚರ್ಯ ತಂದಿತು !! ಬದಲಾಗಿ ಪುರೋಹಿತರನ್ನು ಅವರು "ವೀಡಿಯೋದಲ್ಲಿ ಬಣ್ಣ ಮುಖ್ಯ.ಅವರು ಹೇಳಿದ ಹಾಗೇ ಮಾಡೋಣ.ಅಕ್ಕಿಯನ್ನು ಹಾಕಿಸಿದ ಮೇಲೇ ಬಣ್ಣದ ಗುಂಡುಗಳನ್ನು ಹಾಕಿಸಿದರೆ ಸಂಪ್ರದಾಯಕ್ಕೇನು ಧಕ್ಕೆ ಬರುವುದಿಲ್ಲವಲ್ಲ ? ಮತ್ತೆ ಇಷ್ಟೋಂದು ಸಂಪ್ರದಾಯ ಯಾಕೆ ? ಎಲ್ಲವನ್ನು ಮೊಟಕುಗೋಳಿಸಿ ತಾಳಿ ಕಟ್ಟಿಸಿಬಿಡಿ ! " ಎಂದು ಅವರ ಬಾಯಿ ಮುಚ್ಚಿಸಿದರು !!! ಬರೀ ಆಡಂಬರದ ಮದುವೆ ಬೇಕಿದ್ದರೆ,ಪುರೋಹಿತರನ್ನು ಕರೆದು ಈ ರೀತಿ ಅಂದು ಶಾಸ್ತ್ರಕ್ಕೆ ಅವಮಾನ ಮಾಡುವುದು ಯಾಕೆ ? ಶಾಸ್ತ್ರವನ್ನು ಆಚರಣೆ ಮಾಡುವುದು ಶೋಕಿಗಾಗಿ ಅಲ್ಲ.ಅದಕ್ಕೆಒಂದು ಕಾರಣವಿದೆ,ಕಲ್ಪವಿದೆ,ವಿಧಿ ಇದೆ ಅಲ್ಲವೇ ? ಮದುವೆ fast food ಅಲ್ಲ, ಎಲ್ಲವನ್ನು ಮೊಟಕುಗೊಳಿಸೋಕೆ !!!


ಹಿಂದೆ ನಡೆದ ನನ್ನ ಮತ್ತೊಬ್ಬ ಸ್ನೇಹಿತೆಯ ಮದುವೆಯಲ್ಲಿ ನಡೆದ ಪ್ರಸಂಗ ಇದು.ಮುಹೂರ್ತ ಸಮೀಪಿಸುತ್ತಿದ್ದಂತೆ ಪುರೋಹಿತರು "ಸುಲಗ್ನ ಸಾವಧಾನ,ಸುಮುಹೂರ್ತಃ ಸಾವಧಾನ" ಅಂದರು.ಹುಡುಗಿಯ ತಾಯಿ ತಂದೆ ಆದಿಯಾಗಿ ಅಲ್ಲಿ ಉಪಸ್ಥಿತರಿದ್ದವರೆಲ್ಲರೂ ಮಾತಲ್ಲಿ ತಲ್ಲೀನರಾಗಿದ್ದರು.ಹುಡುಗನಿಗೆ ಭಾರದ ಪೇಟದ ಚಿಂತೆಯಾದರೆ ಹುಡುಗಿಗೆ make up ದು !!! ಸಾವಧಾನ ಪದಕ್ಕೆ ಅಲ್ಲಿ ಅರ್ಥವೇ ಇರಲಿಲ್ಲ !!! ಪುರೋಹಿತರು ಅವರೆಲ್ಲರನ್ನು ಕೂಗಿ,ಸಲ್ಪ ಏಕಾಗ್ರತೆ ವಹಿಸಲು ಬೇಡಿಕೊಂಡರು ಪಾಪ !!!! ನಂತರ ತಾಳಿಗೆ ಪೂಜೆ ಮಾಡಿ ಎಲ್ಲರ ಆಶೀರ್ವಾದ ತೆಗೆದುಕೊಂಡು ಬರಲು ಹೇಳಿದರು. ಎಲ್ಲರ ಬಳಿಗೂ ತಾಳಿಯನ್ನು ತಂದಾಗ ಅವರವರ ಮಾತುಕತೆ, ಚರ್ಚೆಯ ಕೆಲವು ತುಣುಕುಗಳು ಇಲ್ಲಿವೆ -

"ನೋಡ್ರಿ ನಾವು real estate ನಲ್ಲಿ invest ಮಾಡಿದ್ವಿ....ಅನ್ಯಾಯ ಬೆಲೆಗಳು ಇಳಿದು ಹೋದವು...(ಅಷ್ಟೊತ್ತಿಗೆ ತಾಳಿಯ ತಟ್ಟೆ ಬರತ್ತೆ) ಓಹ್ ತಾಳಿ ! (ಅದನ್ನು ಎಡಗೈಲಿ ಮುಟ್ಟಿಕೊಂಡು ಮಾತನ್ನು ಮುಂದುವರಿಸುತ್ತ)...ಹಾಳಾಗೋಯ್ತು !!!

"ಎನ್ರಿ ನೀವು ಅವತ್ತು ನಮ್ಮ ಮಾವನ ಶ್ರಾದ್ಧಕ್ಕೆ ಬರಲೇ ಇಲ್ಲ ? ನಾವೆಲ್ಲ ನೆನಪೇ ಇಲ್ಲವೇ ..? (ತಾಳಿಯ ಆಗಮನ)...ಬಹಳ ಅನ್ಯಾಯ !!"

" ದಮ್ರೋಟಿನಲ್ಲಿ ಜಿಡ್ಡು ಜಾಸ್ತಿ...ಪಾನಕ ಸರಿಗೆ ಇಲ್ಲ...ಸಕ್ಕರೆ ಕಮ್ಮಿ..." (ತಾಳಿಯನ್ನು ಪರೀಕ್ಷಿಸುತ್ತ...) ಬಹಳ ತೆಳು ತಾಳಿ ! ಬೇಗ ಸವೆದು ಹೋಗುತ್ತೆ !"

ಇವು ಸಭಿಕರು, ಅಲ್ಲಲ್ಲ, ವಧು ವರರ "ಹಿತ ಚಿಂತಕರು " ತಾಳಿಗೆ ನೀಡುವ ಆಶೀರ್ವಾದಗಳು !!!

ಬೇಕೆ ಇವೆಲ್ಲ ಮದುವೆಯಲ್ಲಿ ?

ನನಗೆ ಇದೆಲ್ಲ ನೋಡಿದರೆ ಮದುವೆಯ ಉದ್ದೇಶದ ಸಾರ್ಥಕ್ಯದ ಬಗ್ಗೆಯೇ ಪ್ರಶ್ನೆಗಳು ಹುಟ್ಟುತ್ತವೆ. ಮದುವೆ ಅನ್ನೋದು ಎರಡು ಜೀವಗಳ,ಪರಿವಾರಗಳ ಮಿಲನ.ಒಂದು ಆಟಕ್ಕೆ ತಂಡವನ್ನು ಕಟ್ಟಬೇಕಾದರೆ ಆಟಗಾರರನ್ನು ಹೇಗೆ ತಯಾರು ಮಾಡುತ್ತಾರೋ ಹಾಗೆಯೇ ಮಂತ್ರಗಳಲ್ಲಿ ಈ ನೂತನ,ಪವಿತ್ರ ಬಂಧನದ ಉದ್ದೇಶ,ಮಹತ್ವ,ಮತ್ತು ಗಂಡು-ಹೆಣ್ಣುಗಳಿಗೆ ಇರುವ ಜವಾಬ್ದಾರಿಯನ್ನು ವಧು ವರರಿಗೆ ತಿಳಿಸಿಕೊಟ್ಟು, ಅವರನ್ನು ಮುಂದಿನ ಜೀವನಕ್ಕೆ ತಯಾರು ಮಾಡುವುದೇ ಈ ಮಂತ್ರಗಳ ಹಿಂದಿರುವ ಅರ್ಥ.ಇದು ಅವರವರ ಸಂಪ್ರದಾಯಗಳ ಕಟ್ಟಳೆಗೆ ಒಳಪಟ್ಟವು. ಕೆಲವು ಪುರೋಹಿತರಂತೂ ಪ್ರತಿಯೊಂದು ಮಂತ್ರದ ಅರ್ಥವನ್ನು ತಿಳಿಸಿ ಮದುವೆಯನ್ನು ಮಾಡಿಸುತ್ತಾರೆ. ಆದರೆ ಅದನ್ನು ಅರ್ಥಮಾಡಿಕೊಳ್ಳುವ ವ್ಯವಧಾನವಾಗಲಿ,ಸಹನೆಯಾಗಲಿ ವಧು ವರರಿಗೆ ಮತ್ತು ಅವರ ಪರಿವಾರದವರಿಗೇ ಇಲ್ಲದಿರುವುದು ತೀರ ದೊಡ್ಡ ದುರಂತ.

ನಮ್ಮ ಬಂಧು ಮಿತ್ರರರನ್ನು ಆಹ್ವಾನಿಸಿ ನಮ್ಮ ಸಂತೋಷವನ್ನು ಹಂಚಿಕೊಳ್ಳುವುದು ಆಚರಣೆಯೇ ಹೊರತು ಸಂಪ್ರದಾಯವೇನಲ್ಲ !!!ಮದುವೆಯಲ್ಲಿ ಮಾಂಗಲ್ಯ ಧಾರಣೆ ಮತ್ತು ಆಶೀರ್ವಾದಗಳು ಮುಖ್ಯವೇ ಹೊರತು ಚಿರೋಟಿ ಊಟವಲ್ಲ, ಕೊಡುವ ಉಡುಗೊರೆಗಳಲ್ಲ !!! ದೇವತೆಗಳು ಸೂಕ್ಷ್ಮ ರೂಪದಲ್ಲಿ ಆಗಮಿಸಿ ಮಾಡುವ ಆಶೀರ್ವಾದವು ಎಷ್ಟು ಮುಖ್ಯವೋ,ಉಪಸ್ಥಿತರಿರುವ ಎಲ್ಲಾ ಬಾಂಧವರು ಒಳ್ಳೇ ಮನಸ್ಸಿನಿಂದ ಆಶೀರ್ವಾದ ಮಾಡುವುದು ಅಷ್ಟೇ ಮುಖ್ಯ. ಮೇಲಿನ ತರಹದ ಜನರ ಆಶೀರ್ವಾದದ ತರಹ ಅಲ್ಲ !!!ಆದ್ದರಿಂದ ವಿವಾಹಕ್ಕೆ ಆಹ್ವಾನಿಸಲ್ಪಟ್ಟವರು ಮದುವೆಯ ಮಹತ್ವವನ್ನು ತಿಳಿದವರಾಗಿರಬೇಕು. ಮನಸೋ ಇಚ್ಛೆ ದಂಪತಿಗಳ ಸುಖದಾಂಪತ್ಯವನ್ನು ಹಾರೈಸಬೇಕು.ಸಾವಿರಾರು ಆಹ್ವಾನ ಪತ್ರಿಕೆಯನ್ನು ಮಾಡಿಸಿದ್ದರ ಸಮರ್ಥ ಉಪಯೋಗವಾಗಬೇಕು. ಇಲ್ಲದಿದ್ದರೆ ಅದು ನಿಜವಾಗಿಯೂ ದುಂದುವೇಚ್ಛವಲ್ಲವೇ ?

ಇನ್ನು ಮದುವೆಗಳ ಅದ್ದೂರಿತನದ ಬಗ್ಗೆ ಎರಡು ಮಾತು:

ನಾಲ್ಕು ನಾಲ್ಕು ಸ್ವೀಟುಗಳು, ಐದಾರು ಬಜ್ಜಿಗಳು, ತರಹ ತರಹದ ದೇಶಿ-ವಿದೇಶಿ ತಿನಿಸುಗಳನ್ನು ಎಲೆಯ ಮೇಲೆ ಹಾಕಿ, ಜನ ಅದನ್ನು ತಿನ್ನಲಿಕ್ಕೂ ಬಿಡದಷ್ಟು ಬೇಗ ಬೇಗ ಬಡಿಸಿ,ಎಂಜಲು ಕೈಯಲ್ಲೇ ತಾಂಬೂಲ ತೆಗೆದುಕೊಂಡು ಹೋಗುವ ಹಾಗೆ ಮಾಡುವ ಅದ್ದೂರಿ ಮದುವೆಗಳಿಗೆ ನನ್ನ ತಿರಸ್ಕಾರವಿದೆ. ಬಂದವರಿಗೆಲ್ಲಾ ಕಾಸಿಗಿಂತ ಸ್ವಲ್ಪ ದೊಡ್ದ ತಟ್ಟೆ,ಚಟಾಕಿಗಿಂತ ಸ್ವಲ್ಪ ಚಿಕ್ಕ ಲೋಟಗಳನ್ನು ಕೊಟ್ಟು ನಾವು ನಿಮಗೆ "return gift " ಕೊಟ್ಟೆವು ಎಂದು ಸಮಾಧಾನ ಪಟ್ಟುಕೊಳ್ಳುವ ಆಚರಣೆಯನ್ನು ನಾನು ಸಮ್ಮತಿಸುವುದಿಲ್ಲ.ನಮಗೆ ಒಳ್ಳೆಯ ಆತಿಥ್ಯ ಮುಖ್ಯ. ಅವರೂ ನಮ್ಮವರು ಅನ್ನುವ ಭಾವನೆ ಮುಖ್ಯ. ತಟ್ಟೆ ಲೋಟಗಳಲ್ಲ !!!

ಆರತಕ್ಷತೆಯ ವೇಳೆ ಆರ್ಕೇಸ್ತ್ರಾಗಳನ್ನು ಇಡಿಸಿ "ಅಶ್ವಮೇಧ...ಅಶ್ವಮೇಧಾ...." ಮತ್ತು " ಈ ದೇಹದಿಂದ ದೂರವಾದೆ ಏಕೆ ಆತ್ಮನೇ " ಅಂತಹ ಸಂದರ್ಭಕ್ಕೆ ವಿರುದ್ಧದ ಹಾಡನ್ನು ಹಾಡಿಸುವ ಆಯೋಜಕರಿಗೆ ನನ್ನ ತಿರಸ್ಕಾರಯುತ ಧಿಕ್ಕಾರವಿದೆ.

ನನ್ನ ಪ್ರಕಾರ ಸಾರ್ಥಕವಾದ ಮದುವೆ ಅಂದರೆ ಇದು :

ಕನ್ಯಾದಾನ ಮನೆಯಲ್ಲೇ ನಡೆದರೆ ಅದು ಅತ್ಯಂತ ಶ್ರೇಷ್ಠ.ಅನುಷ್ಟಾನ ಮಾಡುವ ಬ್ರಾಹ್ಮಣರು, ನಮ್ಮ ಅತ್ಯಂತ ನಿಕಟ ಸಂಬಂಧಿಕರು, ಪ್ರಾಣ ಸ್ನೇಹಿತರು ನಿಜವಾದ ಹಿತಚಿಂತಕರನ್ನಷ್ಟೇ ಆಹ್ವಾನಿಸಿದರೆ ಮನೆಯಲ್ಲೇ ಮದುವೆ ಮಾಡಬಹುದು.ಇದಕ್ಕೆ ವರನ ಕಡೆಯವರದೂ ಅನುಮೋದನೆ ಇದ್ದರೆ ಒಬ್ಬಟ್ಟಿಗೆ ತುಪ್ಪ ಹಾಕಿದಂತೆ. ಇಲ್ಲದಿದ್ದರೆ, ನಮ್ಮ ಸಂಪ್ರದಾಯದ ಮಠಗಳಲ್ಲೋ, ದೇವರ ಸನ್ನಿಧಿಯಲ್ಲೋ ಮದುವೆಯಾದರೆ, ಆಗ ಅವರೆಲ್ಲರ ಆಶೀರ್ವಾದ ಮತ್ತಷ್ಟು ಘನವಾಗಿರುತ್ತದೆ.ಅವರ ಹಾರೈಕೆ ಖಂಡಿತಾ ಫಲಿಸುತ್ತವೆ. ಇನ್ನು ಆರತಕ್ಷತೆಗೆಂದು ಒಂದು ದಿನದ ಮಟ್ಟಿಗೆ ಛತ್ರವೊಂದನ್ನು ಮಾಡಿದರೆ,ಬೆಳಗ್ಗಿಂದ ಸಾಯಂಕಾಲದ ವರೆಗೂ ವಧು ವರರೂ ಮತ್ತು ಆಹ್ವಾನಿತ ಮಿತ್ರರೂ ಮನಃಪೂರ್ವಕವಾಗಿ ಮಾತಾಡಿ, ಸಂತೋಷಿಸಿ ,ಔತಣದ ಸವಿಯನ್ನು ಸವಿಯಬಹುದು. ಇಲ್ಲದಿದ್ದರೆ, ಕಾದು ಕಾದು ಸುಸ್ತಾಗಿ, ಬಲವಂತದ ನಗೆ ಬೀರಿ ,ಒಂದು ಕ್ಷಣವಷ್ಟೇ ಮಾತಾಡಿ,ಭಾರಿ ವೀಡಿಯೋಗಳ ತುಣುಕುಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಏನಿದೆ ? ಈಗಿನ ಮದುವೆಯ ವೆಚ್ಚವೇ ಹತ್ತು ಲಕ್ಷದ ವರೆಗೂ ಬರುತ್ತದೆ.ಇಂತಹಾ ಸುಲಭದ ಉಪಾಯದಿಂದ ನಾವೆಷ್ಟು ದುಡ್ದನ್ನು ಉಳಿಸಬಹುದು ?ಅದನ್ನು ನಮ್ಮ ಇತರ ಕೆಲಸಗಳಿಗೆ ಬಳಸಿಕೊಳ್ಳಬಹುದಲ್ಲವೇ ?

ಸುಲಭವಾದ ಸಂಪ್ರದಾಯಕ್ಕಿಂತ ಕ್ಲಿಷ್ಟ ಮತ್ತು ಅನಗತ್ಯ ಆಚರಣೆಗಳಿಗೇ ನಾವು ಹೆಚ್ಚು ಒತ್ತು ಕೊಡುತ್ತೀವಲ್ಲಾ....ನಾವೇಕೆ ಹೀಗೆ ?

Saturday, January 5, 2008

ಶ್ರಾದ್ಧ

ಮೊನ್ನೆ ನಮಗೆ ಬಹಳ ಬೇಕಾದವರ ಮನೆಯಲ್ಲಿ ಒಂದು ಶ್ರಾದ್ಧವಿತ್ತು. ನನಗೆ ಜನವರಿಯಲ್ಲಿ ರಜೆಗಳೇ ಇರುತ್ತಿರಲಿಲ್ಲ ಇಷ್ಟು ವರ್ಷ.exam,testಗಳಿಂದ ಅವರು ನನ್ನ ಬಹು ನೆಚ್ಚಿನ , ಪ್ರೀತಿಯ ಅಜ್ಜಿಯಾಗಿದ್ದರೂ ಅವರ ಶ್ರಾದ್ಧಕ್ಕೆ ನನಗೆ ಹೋಗಲು ಆಗುತ್ತಲೇ ಇರಲಿಲ್ಲ.ಆದರೆ ಈ ಬಾರಿ ಅವರು ನನ್ನನ್ನು ಕರೆಸಿಕೊಳ್ಳಲು ಮನಸ್ಸು ಮಾಡಿದ್ದರು ಎಂದು ಅನ್ನಿಸುತ್ತದೆ. ಮೊನ್ನೆ ನಮ್ಮ ಅಮ್ಮನನ್ನೂ ಕರೆದುಕೊಂಡು ಬಸ್ಸಿನಲ್ಲಿ ಅವರ ಮನೆಗೆ ಹೊರಟೆ. ಹನ್ನೆರಡು ಮುಕ್ಕಾಲಿಗೆ ಮನೆ ಬಿಟ್ಟ ನಾವು ಅವರ ಮನೆ ತಲುಪಿದ್ದು ಎರಡು ಗಂಟೆಗೆ.ಹೋದ ತಕ್ಷಣ ನಮ್ಮನ್ನು ಬಹು ಆದರಿಂದ ಬರಮಾಡಿಕೊಂದ ಮನೆಯವರು ಕಾಫಿ ಮುಂತಾದ ಉಪಚಾರಗಳನ್ನು ಬಹಳ ಆತ್ಮೀಯತೆಯಿಂದ ಮಾಡಿದರು.ಅಲ್ಲೇ ಇದ್ದ ಅಜ್ಜಿಯ ಫೋಟೋಗೆ ನಮಸ್ಕರಿಸಿ ಸೋಫಾ ಮೇಲೆ ಕುಳಿತೆ. ಕೈಗೆ ಸಿಕ್ಕ ಡಿಸೆಂಬರ್ ಮೂವತ್ತೊಂದರ ದಿನಪತ್ರಿಕೆಯ ಪದಬಂಧದಲ್ಲಿ ಮುಳುಗಿದೆ.೧೦ ನಿಮಿಷಗಳಲ್ಲಿ ಕಾಫಿಯೂ ಆಯಿತು,ಪದಬಂಧವೂ ಮುಗಿಯಿತು. ಆಮೇಲೆ ಅಜ್ಜಿ ಬದುಕಿದ್ದಾಗ ಅವರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ಮೆಲುಕು ಹಾಕುತ್ತಾ ಕುಳಿತೆ.

ಆಗ ಪ್ರತ್ಯಕ್ಷವಾಯಿತು ನೋಡಿ ಅವರ ನಿಕಟವರ್ತಿಗಳ ಮತ್ತು ರಕ್ತಸಂಬಂಧಿಗಳ ಹಿಂಡು.ಬಂದದ್ದೇ, "ಏನು ಬಿಸಿಲು ! ಪಾನಕ ಬೇಕು !" ಎನ್ನೋದೆ ? ನಂತರ ಅವರ ಮಿಕ್ಕ ಬಾಂಧವರೊಡನೆ ಮಾತಾಡಲು ಶುರು ಹಚ್ಚಿಕೊಂಡರು. ಅವರು ಹೊಸದಾಗಿ ಖರೀದಿಸಿದ ಸೈಟು, ಮಗನಿಗೆ ಸಿಕ್ಕ ಕೆಲಸದ ಬಡ್ತಿ, ಅವರಿಗೆ ಇತರ ಸಮಾರಂಭಗಳಲ್ಲಿ ದೊರೆತ ಸೀರೆ-ಒಡವೆಗಳ ಬಗ್ಗೆ ಮಾತಾಡಲು ಆರಂಭಿಸಿ, ತಾವೇ ಭುವನದ ಅತ್ಯಂತ ಸುಖಿಗಳು ಅನ್ನುವ ಮಾತನ್ನು ಪ್ರತಿಪಾದಿಸಲು ಪ್ರಯತ್ನಿಸುತಿದ್ದರು.ಅವರು ಬಂದ ಉದ್ದೇಶವನ್ನೇ ಮರೆತ ಅವರು, "ಊಟ ಯಾವಾಗ ?" ಎಂದಷ್ಟೇ ಕೇಳಿದರೇ ಹೊರತು, "ನಮಸ್ಕಾರ ಯಾವಾಗ ? " ಎಂದು ಕೇಳಲಿಲ್ಲ ! ಬಂದವರು ಫೋಟೋ ಗೆ ನಮಸ್ಕರಿವುದಿರಲಿ, ಆ ಕಡೆ ತಿರುಗಿಯೂ ನೋಡಲಿಲ್ಲ !!
ಕಣ್ಣೀರು ಹಾಕಿ ಗೋಳಾಡುವುದು ಬೇಡ. ಸುಮ್ಮನಾದರೂ ಇರಬಾರದೇ ? ಪಿಂಡ ರೂಪದಲ್ಲಿ ಆಹ್ವಾನಿಸಲ್ಪಟ್ಟ ಹಿರಿಯರೊಂದಿಗೆ ಮೌನ ಸಂಭಾಷಣೆ ನಡೆಸಕೂಡದೆ ? ಅವರನ್ನು ನಾವು ಇಂದಿಗೂ ಮರೆತಿಲ್ಲ,ಅವರು ಹಾಕಿಕೊಟ್ಟ ನಿಯಮಗಳನ್ನ ಮರೆತಿಲ್ಲ, ಅವರ ಸ್ಥಾನ ನಮ್ಮ ಹೃದಯದಲ್ಲಿ ಸ್ಥಿರವೆಂದು ಅವರಿಗೆ ಗೌರವ ತೋರಿಸಬೇಕಲ್ಲವೇ ? ರಕ್ತ ಸಂಬಂಧಿಗಳಾದ ಇವರಿಗೇ ಇದು ತೋಚದಿರುವುದನ್ನು ಕಂಡು ನಾನು ಚಕಿತಳಾದೆ,ಬೇಜಾರು ಪಟ್ಟುಕೊಂಡೆ.

ಒಂದನ್ನು ನೋಡಿ ಸಲ್ಪ ನೆಮ್ಮದಿಯಾಯಿತು. ನಮ್ಮೊಂದಿಗೆ, ಸತ್ತವರ ಮಕ್ಕಳು, ಮೊಮ್ಮಕ್ಕಳು ಮಾತ್ರ ಮೌನವಾಗಿದ್ದರು.

ಇದು ಒಂದು ಉದಾಹರಣೆ ಅಷ್ಟೇ !! ಇದಕ್ಕಿಂತ ಘೋರ ಪರಿಸ್ಥಿತಿಗಳನ್ನೂ ನೋಡಿದ್ದೇನೆ. ಆಗ ಬರೆಯಲು ಸಮಯವಿರಲಿಲ್ಲ. ಈಗ ಸಿಕ್ಕಿದೆ, ಬರೆಯುತ್ತಿದ್ದೇನೆ. ಒಂದು ಕೋಣೆಯಲ್ಲಿ ಕಾರ್ಯ ನಡೆಯುತ್ತಿದ್ದರೆ ಮತ್ತೊಂದು ಕೋಣೆಯಲ್ಲಿ ಇಸ್ಪೀಟು ಆಟ ನಡೆಯುತ್ತಿರುತ್ತದೆ. ಇಂತಹ ಕಾರ್ಯಗಳಿಗೆ ಬಟ್ಟೆ ಸಾಮಾನ್ಯ ಕಪ್ಪು ಬಣ್ಣದ್ದು, ಹತ್ತಿಯದ್ದೂ ಆಗಿರಬೇಕೆಂದು ನಿಯಮ. ಕಪ್ಪು ಶೋಕದ ಸಂಕೇತವಲ್ಲವೇ? ಅದಕ್ಕೆ. ಅದು ಬಿಟ್ಟು ರಂಗಿನ ರೇಷ್ಮೆ ಸೀರೆಗಳು, ಇತರರಿಗೆ ತೋರಿಸಲೆಂದೇ ಒಡವೆಗಳು ಹೇರಿಕೊಂಡರೆ, ಶುಭಕ್ಕೂ ಅಶುಭಕ್ಕೂ ಎನಾದರೂ ವ್ಯತ್ಯಾಸವಿರುತ್ತದೆಯೇ ? ಇನ್ನು ಜಾಗತೀಕರಣದ, ಅಂಧಾನುಕರಣೆಯ ಭೂತಾರಾಧನೆ ಮಾಡುವವರು ಜೀನ್ಸ್ ನಲ್ಲಿ ಬರುತ್ತಾರೆ !ಗಂಡಸರು ಮಾತ್ರವಲ್ಲ, ಹೆಂಗಸರೂ ಸಹ !!!

ಶ್ರದ್ಧೆ ಇಂದ ಮಾಡುವ ಕಾರ್ಯವನ್ನು ಶ್ರಾದ್ಧವೆನ್ನುತ್ತಾರೆ. ನಮ್ಮ ತಂದೆ ತಾಯಿಗಳು, ಆಪ್ತರು, ಅವರು ಬದುಕಿದ್ದ ಕಾಲದಲ್ಲಿ ನಮಗೆ ಮಾಡಿದ ಉಪಚಾರ, ಉಪಕಾರಗಳಿಗೆ ನಾವು ಮಾಡುವ ಗೌರವಾರ್ಪಣೆ, ಪ್ರತ್ಯುಪಕಾರವೇ ಶ್ರಾದ್ಧ. ಧರ್ಮದ ನಂಬುಗೆ ಇಲ್ಲದವರಿಗೆ ತಿಳಿಸಿ ಹೇಳಬೇಕೆಂದರೆ, ಇದ್ದಾಗ ಇದ್ದ "energy" ಹೋದ ಮೇಲೆ ತನ್ನ ರೂಪ, ಆಕಾರಗಳನ್ನು ಬದಲಿಸುತ್ತದೆ ಹೊರತು ತನ್ನ ಗುಣವನ್ನಲ್ಲ. ನಾವು ಶ್ರಾದ್ಧದಲ್ಲಿ ಅದರ ಗುಣಕ್ಕೆ ಗೌರವ ಸಲ್ಲಿಸುತ್ತೇವೆ.energy is always conserverd in this universe ಎಂಬುದು ಸರ್ವ ವಿದಿತ, ಸರ್ವಥಾ ಪ್ರಯೋಗ ಸಿದ್ಧ ನಿಯಮ. ನಾವು ಈ ನಿಯಮವನ್ನು ಈ ರೀತಿ ಪಾಲಿಸುತ್ತಿದ್ದೇವೆ ಅಷ್ಟೆ.

ಧರ್ಮದ ಗಂಧವಿರದೇ,ಆಚರಣೆಯ ಅರಿವಿಲ್ಲದೇ ಇರುವವರು, " ನನಗೆ ಪಿಂಡವನ್ನು ನೋಡಿದರೆ ಹೆದರಿಕೆಯಾಗುತ್ತಪ್ಪ !!!ನಮ್ಮ ತಂದೆ ತಾಯಿಯನ್ನು ಹೀಗೆ ಹೇಗೆ ನೋಡುವುದು" ಎನ್ನುವವರು ಇದ್ದಾರೆ ! ಇದ್ದಾಗ ಎಷ್ಟರ ಮಟ್ಟಿಗೆ ಅವರ ರೂಪನ್ನು, ಆಕಾರವನ್ನು, ಸ್ವಭಾವನ್ನು ಅರ್ಥ ಮಾಡಿಕೊಂಡಿದ್ದರು ಎಂಬುದು ನಾನರಿಯೆ ! ಇದರಿಂದ ಶ್ರಾದ್ಧದ ಬಗ್ಗೆ ಗೌರವಕ್ಕಿಂತ ಜನರಲ್ಲಿ ಭಯವೇ ಹೆಚ್ಚು ವ್ಯಾಪಿಸಿದಂತಿದೆ. ಇದಕ್ಕೆಲ್ಲ ಕಾರಣ ನಮ್ಮ ignorance ಹೊರತು ಆಚರಣೆಯಲ್ಲ, ಧರ್ಮವಂತು ಅಲ್ಲವೇ ಅಲ್ಲ. ಧರ್ಮವನ್ನು, ಶಾಸ್ತ್ರವನ್ನು ಕ್ಲಿಷ್ಟ ಎನ್ನುವವರು ನನ್ನ ಪ್ರಕಾರ ಮೂರ್ಖರೇ.

ಶ್ರದ್ಧೆಯು ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಮಾತ್ರ ಇದ್ದರೆ ಸಾಲದು. ಆಪ್ತರಿಗೂ ಇರಬೇಕು. ಆಗಲೇ ಶ್ರಾಧ್ಧದ ಉದ್ದೇಶ ಸಾರ್ಥಕವಾಗುವುದು. ಇಲ್ಲದಿದ್ದರೆ ಅದು ಪಾಪಕ್ಕೇ ಸಮನಾದದ್ದು ಎಂದು ನನ್ನ ಅಭಿಮತ.

ನಿಜವಾಗಲೂ....ನಾವೇಕೆ ಹೀಗೆ ?