Tuesday, October 23, 2007

ವಿಜಯ ದಶ ’me’

ವಿಜಯ ದಶಮಿ ಬಂದಿದ್ದು ಆಯ್ತು...ಹೋಗಿದ್ದು ಆಯ್ತು...ನಾವೆಲ್ಲ ಈ ಹಬ್ಬಕ್ಕೆ ನೂರೆಂಟು ಕಥೆಗಳನ್ನು ಹೇಳುತ್ತೀವಿ, ಬೊಂಬೆಗಳನ್ನ ಇಡುತ್ತೀವಿ ಎಲ್ಲಾ ಮಾಡುತ್ತೀವಿ...ಎಲ್ಲಾ ಸಂಪ್ರದಾಯಕ್ಕೋಸ್ಕರ.ಆದರೆ, ಈ ಸಂಪ್ರದಾಯದ ಹಿಂದಿನ ಉದ್ದೇಶ ನಾವು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ.

ನಾವೇಕೆ ಹೀಗೆ ?

ಹಿರಿಯರು ರಾಮಯಣ ಹಾಗೂ ಮಹಾಭಾರತವನ್ನು ರಚನೆ ಮಾಡಿರುವುದು ನಾವು ಸಂಸ್ಕಾರ ಬೆಳೆಸಿಕೊಳ್ಳಲಿ ಎಂಬ ಒಂದೇ ಉದ್ದೇಶದಿಂದಲ್ಲ. ಅದಕ್ಕೆ ಇನ್ನೊಂದು ಮುಖವಿದೆ. ಅದೇ ಈ ಮಹಕಾವ್ಯಗಳ ಪಾತ್ರಗಳನ್ನು ಮನಸ್ಸಿನ ಒಂದೊಂದು ಕೋನಗಳನ್ನಾಗಿ ನೋಡುವುದು.ರಾಮನ ಅಸ್ತಿತ್ವಕ್ಕೆ ಹೋರಾಟ ಮಾಡುವುದಕ್ಕಿಂತ ಅವನು ನಮ್ಮ ಮನಸ್ಸಿನಲ್ಲಿದ್ದಾನೆ ಎಂದು ತಿಳಿದುಕೊಳ್ಳುವುದು ಒಳಿತಲ್ಲವೇ ?

ರಾಮಾಯಣದಲ್ಲಿ ರಾವಣನಿಗೆ ಹತ್ತು ತಲೆ. ನಾವು ಅವನನ್ನು ಮನುಷ್ಯನನ್ನಾಗಿ ಕಲ್ಪಿಸಿಕೊಂದು, ಹೆದರಿ, ನಕ್ಕು ಎಲ್ಲ ಆಗಿದೆ. ಆದರೆ ಅವನನ್ನು ಮನಸ್ಸಿನ ದೃಷ್ಟಿಯಲ್ಲಿ ನೋಡುವ ಪ್ರಯತ್ನ ಮಾಡೋಣ.

ನಮ್ಮೆಲ್ಲರ ಮನಸ್ಸಿನಲ್ಲಿಯೂ ರಾವಣನಿದ್ದಾನೆ.
ರಾವಣನ ಈ ಹತ್ತು ತಲೆಗಳು ನಮ್ಮಲ್ಲಿಯೂ ಇದೆ.
೧. ಕಾಮ
೨.ಕ್ರೋಧ
೩.ಮದ
೪.ಮೋಹ
೫.ಲೋಭ
೬.ಮಾತ್ಸರ್ಯ
೭.ಅಹಂಕಾರ
೮.ಹುಂಬತನ
೯.ಕೀಳರಿಮೆ
೧೦.ಗರ್ವ

ರಾವಣನ ಈ ಹತ್ತು ದುಷ್ಟ ತಲೆಗಳಿಗೆ ರಾಮಬಾಣವೇ ವಿವೇಕ . ನಾವು ಈ ವಿವೇಕದಿಂದಲೇ ರಾವಣನ ಮೇಲೆ ವಿಜಯ ಸಾಧಿಸಬೇಕು. ಆದ್ದರಿಂದ ಇದು ಬರೀ ವಿಜಯದಶಮಿಯಲ್ಲ, ವಿಜಯ "ದಶ" "me".ನಮಗೆ ಈ ಹತ್ತರ ವಿರುದ್ಧ ವಿಜಯ ಬೇಕು. ರಾಮನ ಆ ಆದರ್ಶ- ನಮ್ಮಲ್ಲಿ ಬೆಳೆಯಬೇಕಾದ ಸಕಾರಾತ್ಮಕ ಮನೋಭಾವನೆಗಳು ಮತ್ತು ಹುಟ್ಟಬೇಕಾಗಿರುವ ನಾಯಕತ್ವದ ಸ್ವಭಾವ ಮತ್ತು ಛಲಗಳು. ಇಷ್ಟು ದಿನ ರಾವಣನನ್ನು ಬೆಳಸಿದ್ದಾಯಿತು. ಅವನು ನಮ್ಮ ಜೀವನ ಎಂಬ ಸೀತೆಯನ್ನು ಬಹು ಮೋಸದಿಂದ ಅಪಹರಿಸಿದ್ದಾನೆ. ಇನ್ನಾದರೂ ರಾಮಬಾಣ ಬಿಡಲು ನಾವು ಸಿದ್ಧರಾಗಬೇಡವೇ ?

4 comments:

ಅಂತರ್ವಾಣಿ said...

bahaLa chennagi bardideera Lakshmi.
namma dEhadoLagina raavaNanannu ODisuva raamabaaNa koTTidakke DhanyavaadagaLu

Parisarapremi said...

ಉಪಮೆ ರೂಪಕಗಳು ಸೊಗಸಾಗಿವೆ...

ದಿಟ. ನಮ್ಮೊಳಗಿನ ರಾವಣನ ದಶಶಿರವನ್ನು ಜಸಗೊಳಿಸಲು ಬೇಕಾದ ವಿವೇಕವೆಂಬ ರಾಮಬಾಣವನ್ನು ಸಂಪಾದಿಸಲು ಅಗತ್ಯವಾದ ಸಕಲ ಸಾಮರ್ಥ್ಯ ಸಿಗಲಿ! :-)

Rohini Joshi said...

Hi,
Hmm tumba chennagi bardidiya...udaharaNegaLu samanjasavaagive matte barahakke koTTa shirshike nange tumba iSTa aaitu..:-).............keep writing dear good luck..:-)

ROHINI

Srinivasa Rajan (Aniruddha Bhattaraka) said...

ಈ ಲೇಖನವನ್ನೋದಿ ನನಗೆ ಈ ಕಗ್ಗ ನೆನಪಾಯಿತು..

ರಾವಣನ ದಶಶಿರವದೇಂ? ನರನು ಶತಶಿರನು!
ಸಾವಿರಾಸ್ಯಗಳನೊಂದರೊಳಣಗಿಸಿಹನು!
ಹಾವಾಗಿ, ಹುಲಿಯಾಗಿ, ಕಪ್ಪೆ-ಹುಲ್ಲೆಯುಮಾಗಿ
ಭೂವ್ಯೋಮಕತಿಶಯನು! - ಮಂಕುತಿಮ್ಮ....

ಈ ನರನಲ್ಲಿರುವ ನೂರಾರು-ಸಹಸ್ರಾರು ಮುಖಗಳನ್ನು ಕಡಿಯಬಲ್ಲ ರಾಮಬಾಣ ಜನರಿಗೆ ಸುಲಭದಲ್ಲಿ ದೊರಕಲಿ..