ನಮ್ಮ ಮನೆಯ ಹಿಂದೆ ದೇವಸ್ಥಾನವೊಂದಿದೆ. ಆ ದೇವಸ್ಥಾನದ ಸಮಿತಿಯವರು ದೇವಸ್ಥಾನದ ಎದುರುಗಡೆ ಪ್ರವಚನ ಮಂದಿರವೊಂದನ್ನು ಕಟ್ಟಿಸಿದರು. ಪ್ರವಚನಕ್ಕಾಗಿ ಮಾತ್ರ ಕೊಡುತ್ತೇವೆ ಎಂದು ಡಂಗುರ ಹೊಡೆಸಿದ ಅವರು, ಮುಂದೆ ಪ್ರವಚನಗಳಿಗೆ ಕಡಿಮೆ ಒತ್ತು ಕೊಟ್ಟು ಮದುವೆ ಮುಂಜಿ ಇತ್ಯಾದಿ ಸಮಾರಂಭಗಳಿಗೆ ಇದನ್ನು ಕೊಡಲಾರಂಭಿಸಿದರು. ದೇವಸ್ಥಾನದ ಆದಾಯ ಹೆಚ್ಚಿತು, ಮಂದಿರದ ಬೇದಿಕೆಯೂ ಹೆಚ್ಚಿತು. ಅದಕ್ಕಾಗಿ, ಈಗಿರುವ ಮಂದಿರದ ಮೇಲೆ ಮತ್ತೊಂದು ಚತ್ರವನ್ನು ಕಟ್ಟಿಸುವ ನಿರ್ಧಾರವನ್ನು ಈ ಸಮಿತಿ ಕೈಗೊಂಡಿತು. ಕಾಂಪೌಂಡನ್ನೂ ಬಿಡದೆ ಕಟ್ಟಿದ್ದ ಪ್ರವಚನ ಮಂದಿರದ ಪಕ್ಕದಲ್ಲಿ ಮರವೊಂದು ಬೆಳೆದಿತ್ತು.ಆ ಮರಕ್ಕೂ ಈ ಮಂದಿರಕ್ಕೂ ನಡುವೆ ಸ್ವಲ್ಪ ಜಾಗವಿತ್ತು. ಇವರು ಕಾಂಪೌಂಡನ್ನೂ ಬಿಡದೆ ಈ ಮಂದಿರವನ್ನು ಕಾಂಪೌಂಡಿಗೇ ಅಂಟಿಸಿ ಕಟ್ಟಿದ್ದಾರೆ. ಆ ಮರ ಬಹಳ ಸೊಂಪಾಗಿ ಬೆಳೆದಿತ್ತು. ಗಿಳಿಗಳಿಗೆ, ಪಾರಿವಾಳಗಳಿಗೆ ಆಶ್ರಯ ತಾಣವಾಗಿತ್ತು.

ಪ್ರತಿ ಸಾಯಂಕಾಲ ಒಂದೇ ಮರದಲ್ಲಿ ಕೆಲವು ಕಾಂಡ ಕತ್ತಲಲ್ಲಿ, ಮತ್ತೊಂದಿಷ್ಟು ಕಾಂಡಗಳು ಸೂರ್ಯನ ಬೆಳಕಿನಲ್ಲಿ ಮಿನುಗುತ್ತಿರುವ ದೃಶ್ಯವನ್ನು ನಾನು ವರ್ಷಾನುಗಟ್ಟಲೆ ನೋಡಿ ಆನಂದಿಸಿದ್ದೇನೆ.

ಈ ಮರದೊಂದಿಗೆ ನನ್ನ ಎಷ್ಟೋ ನೆನಪುಗಳು ಸೇರಿಕೊಂಡಿವೆ.ಪ್ರತಿ ಬೆಳಿಗ್ಗೆಯ ಮೊದಲ "ಗುಡ್ ಮಾರ್ನಿಂಗ್ " ಅನ್ನು ಈ ಮರವೇ ಹೇಳುತ್ತಿದ್ದ ಹಾಗೆನಿಸುತ್ತಿತ್ತು. ಸಾಯಂಕಾಲ ನಾನು ಕಿಟಕಿಯಿಂದ ಕತ್ತು ಹೊರಹಾಕಿದರೆ ಈ ಮರ ನನ್ನನ್ನು ನೋಡಿ ನಕ್ಕು, "ಹೇಗಿದ್ದೀಯಾ ? ಹೇಗಿತ್ತು ಇವತ್ತಿನ ದಿನ ?" ಅಂತ ಕೇಳುತ್ತಿದ್ದ ಹಾಗಾಗುತ್ತಿತ್ತು. ನಮ್ಮ ಮಧ್ಯ ಮೌನದ ಮಾತುಕತೆಗಳು ಗಂಟಾನುಗಟ್ಟಲೆ ನಡೆಯುತ್ತಿತ್ತು. ಈ ಮರ ಒಂದು ರೀತಿಯಲ್ಲಿ ನನ್ನ ಗೆಳತಿಯಾಗಿತ್ತು. ನವೆಂಬರ್ ಹದಿನಾಲ್ಕನೇ ತಾರೀಖು ಶುಕ್ರವಾರ ನಾನು ಮೈಸೂರಿಗೆ ಹೋದವಳು ನೆನ್ನೆ ರಾತ್ರಿ ಬಂದೆ. ಪ್ರಯಾಣದ ಆಯಾಸ, ಮಲಗಿಬಿಟ್ಟೆ. ಬೆಳಿಗ್ಗೆ ಎದ್ದೊಡನೆ ನನ್ನ ತಂಗಿ, " ಹಿಂದಿದ್ದ ಮರ ಕಡಿದಿದ್ದಾರೆ " ಎಂದಾಗ ಬಲಗಡೆ ಏಳುವ ಬದಲು ಹಾಗೇ ನೇರ ಮಂಚದಿಂದ ಕಿಟಕಿಯ ಬಳಿ ಎಗರಿದೆ. ಹೊಟ್ಟೆಯಲ್ಲಿ ಸಂಕಟ, ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಅದು ಹೇಗೆ ತಡೆದೆನೋ ನನಗೆ ಈಗಲೂ ನೆನಪಾಗುತ್ತಿಲ್ಲ. ನನ್ನ ಕಣ್ಣಿಗೆ ಬಿದ್ದ ದೃಶ್ಯಗಳು ಇವು.



ಎಷ್ಟರ ಮಟ್ಟಿಗೆ ನಿರ್ದಯರಾಗಬಲ್ಲರು ಜನ ? ತಮ್ಮ ಸ್ವಾರ್ಥಕ್ಕೆ ಮರವನ್ನೇ ಕಡಿದುಬಿಟ್ಟರಲ್ಲಾ...
ಮರವಿದ್ದಷ್ಟು ಸ್ಥಳವನ್ನು " ಬಾಲ್ಕನಿ" ಥರ ಬಿಟ್ಟಿದ್ದಿದ್ದರೆ, ಚತ್ರಕ್ಕೆ ವೈವಿಧ್ಯತೆಯೂ ಇರುತ್ತಿತ್ತು, ಅಲ್ಲಿ ಊಟವೂ ಹಾಕಬಹುದಿತ್ತು. ಉಪಯೋಗವೂ ಇತ್ತು, ಮರವೂ ಉಳಿಯುತ್ತಿತ್ತು. ಅಲ್ಲವೇ ?
ಸಾಯಂಕಾಲ ಹಾರಿಬರುತ್ತಿದ್ದ ಗಿಣಿಗಳು ಪಾಪ ಎಲ್ಲಿ ಹೋದವೋ...ಕಾಗೆಗಳು ಅದೆಷ್ಟು ಕೂಗಾಡಿ ತಮ್ಮ ಬೇಜಾರು ತೋಡಿಕೊಂಡವೋ...
ನಮ್ಮ ಎ. ಸಿ ಡಬ್ಬದ ಹಿಂದಿರುವ ಪಾರಿವಾಳಗಳೂ ಯಾಕೋ ಬೇಜಾರುಯುಕ್ತ "ಗುಟರ್ಗೂ" ಕೂಗುತ್ತಿವೆ. ನಾನೂ ಮೌನವಾಗಿ ಮಮ್ಮಲಮರುಗುತ್ತಿದ್ದೇನೆ. ಮನುಷ್ಯರು ಸತ್ತಾಗ ಮಾತ್ರ ಅಳಬೇಕೆ ? ಮರಗಳಿಗೂ ಜೀವ ಇದೆಯಲ್ಲವೇ ? ಮರಗಳನ್ನು ಕಡಿದರೂ ಅದನ್ನು ಸಾಯಿಸಿದ ಹಾಗಾಗಲಿಲ್ಲವೇ ? ದಯಮಾಡಿ ಈ ಪ್ರಶ್ನೆಗೆ ಉತ್ತರಿಸಿ.