ಟೈಟಲ್ ನೋಡಿದ ತಕ್ಷಣ ನನಗೇನಾಗಿದೆ ಅಂತ ನೀವು ಯೋಚಿಸೋದು ಸಹಜ. ಪರೀಕ್ಷೆಯ ಈ ಸಮಯದಲ್ಲಿ ಕರೆಂಟಿಲ್ಲದೇ, ಮಕ್ಕಳೆಲ್ಲ ಓದಲಾಗದೇ ಪರದಾಡುತ್ತಿರುವಾಗ, ಸಧ್ಯ ಕರೆಂಟು ಹೋಯ್ತು ಅಂತ ಉದ್ಗರಿಸುತ್ತಿದ್ದಾಳಲ್ಲಾ, ಇವಳೇಕೆ ಹೀಗೆ ಅಂತ ನೀವು ಪ್ರಶ್ನೆ ಕೇಳುವುದರಲ್ಲಿಯೂ ಖಂಡಿತಾ ಆಶ್ಚರ್ಯ ಇಲ್ಲ. ಆದರೆ ಹೀಗೆ ಉದ್ಗರಿಸಿದ್ದು ನಾನಲ್ಲ.
ನಾನಲ್ಲದಿದ್ದರೆ ಇನ್ಯಾರು ಹೀಗೆ ಉದ್ಗರಿಸಿದ್ದು ? ಯಾರದು ? ಅಂತ ಪ್ರಶ್ನೆ ಕೇಳಿ ನಿಮ್ಮ ಕುತೂಹಲ ಕೆರಳಿಸಲು ನಾನು ಬೆಳೆಗೆರೆಯ ಹಾಗೆ ಕ್ರೈಂ ಡೈರಿ ನಡೆಸಿಕೊಡುತ್ತಿಲ್ಲ. ಇದು ಒಂದು ಕಥೆಯೇ, ಕ್ರೈಂ ಇಲ್ಲದ ಕಥೆ. ತಾಳಿ ತಾಳಿ, ಇದು ಲವ್ ಸ್ಟೋರಿ ಅಂತ ಹೇಳ್ಬೇಡಿ. ಲವ್ ಸ್ಟೋರಿಯೂ ಅಲ್ಲ, ಟ್ರಾಜಿಡಿಯೂ ಅಲ್ಲ. ವಿಡಂಬನೆ, ವಿಪರ್ಯಾಸ.
ಈ ಕಥೆಯ ಕಥೆಗಾರ್ತಿ ನಾನಲ್ಲ. ಈ ವಿಷಯವನ್ನ ಹೇಳಿದ್ದು ನನ್ನ ಹಿರಿಯ ಸೋದರಿ. ಇದು ಅವರ ಅನುಭವಕ್ಕೆ ಬಂದ ವಿಷಯ. ಅವರು ನನ್ನ ಹತ್ತಿರ ಎಲ್ಲವನ್ನೂ ಸವಿಸ್ತಾರವಾಗಿ ಹೇಳಿ, "ನೀನು ಇದನ್ನ ಬ್ಲಾಗಿಗೆ ಹಾಕು. ನಿನ್ನ ಮೂಲಕ ಇದು ಹೆಚ್ಚು ಜನಕ್ಕೆ ತಲುಪಲಿ" ಅಂದರು. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಮಿಕ್ಕಿದ್ದು ನಿಮಗೆ ಬಿಟ್ಟಿದ್ದು.
ನಮ್ಮಕ್ಕ ಮತ್ತು ಅವರ ಕುಟುಂಬ ಅವರ ಗೆಳೆಯರೊಬ್ಬರ ಮನೆಗೆ ಯಾವುದೋ get together ಗಾಗಿ ಭೇಟಿ ನೀಡಿದ್ದ ಸಂದರ್ಭ. ಮನೆಯ ಕಲಶವೇ ಮೂರ್ಖರ ಪೆಟ್ಟಿಗೆಯಲ್ಲವೇ ? ಯಾತಕ್ಕೆ ಸೇರಿದ್ದೇವೆ ಎಂಬುದನ್ನೇ ಮರೆತ ಮಹಾಶಯರೆಲ್ಲರೂ ಮೂರ್ಖರ ಪೆಟ್ಟಿಗೆ ಮುಂದೆ ಸ್ಥಾಪಿತರಾದರು. ಎಂಥದ್ದೋ "ಚೆನ್ನಾಗಿರೋ" ಕಾರ್ಯಕ್ರಮ ಬರುತ್ತಿದ್ದಿರಬೇಕು, ಎಲ್ಲರೂ ತದೇಕಚಿತ್ತದಿಂದ ನೋಡುತ್ತಾ, ತಟ್ಟೆಯಲ್ಲಿದ್ದ ತಿಂಡಿಯನ್ನು ತಿನ್ನುತ್ತಿದ್ದರು. ಮಧ್ಯದಲ್ಲಿ ಕರೆಂಟು ಹೋಯ್ತು. ಎಲ್ಲರೂ " ಛೆ ! ಕರೆಂಟು ಹೋಯ್ತು !" ಎಂದು ಉದ್ಗರಿಸಿದರೆ ಒಂದು ಕ್ಷೀಣ ದನಿ "ಸಧ್ಯ ಕರೆಂಟು ಹೋಯ್ತು !" ಎಂದು ಉದ್ಗರಿಸಿತು. ಆಶ್ಚರ್ಯದಿಂದ ತಿರುಗಿ ನೋಡಿದರೆ ಧ್ವನಿ ಬಂದಿದ್ದು ಒಬ್ಬ ಪುಟ್ಟ ಬಾಲಕನಿಂದ. ಆತ, ಆ ಮನೆಯ ಮಗ. Mentally challenged (ಮನೋ ವಿಕಲ ಎಂಬ ಪದ ಬಳಸಲು ಮನಸ್ಸೊಪ್ಪುತ್ತಿಲ್ಲ. ಆಂಗ್ಲದಲ್ಲಿ ಬರೆದಿರುವುದು ಲೋಕ ಅವನಿಗೆ ಕೊಟ್ಟ ಬಿರುದು) ಹುಡುಗನಂತೆ ಆತ. "ಸಧ್ಯ ಕರೆಂಟು ಹೋಯ್ತು ! ಈಗ ಎಲ್ಲರೂ ನನ್ನ ಮಾತಾಡಿಸುತ್ತಾರೆ !" ಎಂದಾಗ ಅಲ್ಲಿ ಒಂದು ಕ್ಷಣ ಮೌನ.
ಬುದ್ಧಿಯಿಲ್ಲದವನೊಂದಿಗೆ ಮಾತೇಕೆ ಎಂದು ಅವನನ್ನೊಬ್ಬನನ್ನೇ ಬಿಟ್ಟು ಮಿಕ್ಕವರೊಟ್ಟಿಗೆ ಮಾತಾಡುತ್ತಾ (?) ಅಥವಾ ಟಿವಿ ನೋಡುತ್ತಿದ್ದ ಅವರೆಲ್ಲಾ ಬುದ್ಧಿವಂತರೇ ? ಬುದ್ಧಿಯೊಂದು ಸ್ವಲ್ಪ ಕಡಿಮೆ ಚುರುಕು ಎಂದ ಮಾತ್ರಕ್ಕೆ ಮನುಷ್ಯನೊಬ್ಬನನ್ನ ಅಸಹನೀಯ ಏಕಾಂತಕ್ಕೆ, ಅಮಾನುಷ ಬಹಿಷ್ಕಾರಕ್ಕೆ ನೂಕುವುದು "ಸ್ಥಿತಪ್ರಜ್ಞ(?)" ಮನುಷ್ಯರ ಲಕ್ಷಣವೇ ? ಅಥವಾ ಅವರೊಡನೆ ಬರೀ ಅನುಕಂಪದ ಮಾತಾಡಿ ಅವರಿಗೆ ಮತ್ತು ಮನೆಯವರಿಗೆ ಮತ್ತಷ್ಟು ಜಿಗುಪ್ಸೆ ತರಿಸುವುದು ಮನುಷ್ಯತ್ವವೇ ? ಅವರಿಗೆ ಅನುಕಂಪಕ್ಕಿಂತ ಹೆಚ್ಚು ಪ್ರೋತ್ಸಾಹದ ಅವಶ್ಯಕತೆ ಇರತ್ತೆ. ಅವರು ಮಾತಾಡುವುದನ್ನು ನಾವು ಕೇಳಿಸಿಕೊಂಡರೇನೇ ಅವರಿಗೆ ಎಷ್ಟೋ ಖುಷಿಯಾಗತ್ತೆ, ಕಣ್ಣಲ್ಲಿ ಸಾವಿರ ಸೂರ್ಯರ ಬೆಳಕು ಕಾಣುತ್ತದೆ. ಅವರ ಮುಖದ ಮಂದಹಾಸ ಅವರನ್ನೂ ನಮ್ಮನ್ನೂ ಸಂತೋಷ ಪಡಿಸುತ್ತದೆ. ಅಲ್ಲವೇ ?
ಮಹಾನಗರದಲ್ಲಿ ಇಂದು ನಾವು ಯಾರದರೊಬ್ಬರ ಮನೆಗೆ ಭೇಟಿ ಕೊಡಬೇಕಾದರೆ ಶನಿವಾರ ಭಾನುವಾರಗಳು ಬರುವ ವರೆಗೂ ಕಾಯಬೇಕು. ಒಂದು-ನಮಗೆ ಆಗ ಹೆಚ್ಚು ಬಿಡುವು. ಎರಡು-ವಾರದ ದಿನಗಳಲ್ಲಿ ನಮಗೆ ಬಿಡುವುದ್ದರೂ ನಾವು ಹೋಗುವ ಮನೆಯವರಿಗೆ ಬಿಡುವಿರೊಲ್ಲ; ಕಾರಣ- ಮೆಗಾ ಸೀರಿಯಲ್ಲುಗಳು !! ಸೊಸೆ ಅತ್ತೆಯನ್ನು ಸಾಯಿಸಿದಳೇ ? ಇವಳು ಹದಿನಾಲ್ಕನೇ ಬಾರಿ ಮದುವೆಯಾದಳೇ ? ನಾವು ಕಳೆದ ಜನ್ಮದಲ್ಲೂ ಮನುಷ್ಯರಾಗಿದ್ದೆವೆ ? ನಮ್ಮ ನಕ್ಷತ್ರಕ್ಕೆ ಶನಿ ಕಾಟವಿದೆಯೇ ? ಇವೆಲ್ಲಾ ಯೋಚನೆಗಳ ಮಧ್ಯೆ ಅತಿಥಿ ಸತ್ಕಾರಕ್ಕೆ ಬಿಡುವೆಲ್ಲಿ ? ನಮ್ಮನ್ನು ಕಣ್ಣಲ್ಲಿ ಒಳಗೆ ಕರೆದು ಕೈಸನ್ನೆ ಮಾಡಿ ಕೂರಿಸಿ, ಸೀರಿಯಲ್ ನಲ್ಲಿ ಬ್ರೇಕ್ ಬಂದಾಗ ಮಾತಾಡಿಸುವವರನ್ನು ಏನನ್ನೋಣ ? ಮೂರ್ಖರ ಪೆಟ್ಟಿಗೆ ನಮ್ಮನ್ನು ಎಷ್ಟು ಮೂರ್ಖರನ್ನಾಗಿಸಿದೆ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ?
ಭಾವನೆಗಳ ಅತಿರೇಕಗಳಿರುವ ಮಾಯಾಪರದೆಯ ಮುಂದೆ ಅನಗತ್ಯವಾಗಿ ಭಾವನೆಗಳ ಮಹಾಪೂರವನ್ನು ಹರಿಸುವ ನಾವು, ನಿಜವಾಗಲೂ ಭಾವನೆಗಳನ್ನು ವ್ಯಕ್ತಪಡಿಸುವ ಅವಶ್ಯಕತೆಯಿರುವಾಗ ನಿರ್ಭಾವುಕವಾಗಿ, ವ್ಯಾವಾಹಾರಿಕವಾಗಿ , ಬಹಳಷ್ಟು ಬಾರಿ ಅಮಾನುಷವಾಗಿ ವರ್ತಿಸುತ್ತೇವಲ್ಲಾ...ನಾವೇಕೆ ಹೀಗೆ ?