Sunday, November 22, 2009

ಸಂಸಾರ.....ವ್ಯಾಧಿ.....

ನಾನು ಅಧ್ಯಾಪಕಿಯಾದ ಮೇಲೆ ಮಕ್ಕಳಿಗೆ ಪರೀಕ್ಷೆಗಳನ್ನು ಕೊಟ್ಟೂ ಕೊಟ್ಟೂ ಅಭ್ಯಾಸ ಆಗಿ, ಈ ಬಾರಿ ನಿಮಗೂ ಪರೀಕ್ಷೆ ಕೊಡೋಣ ಅಂತ ಅನಿಸುತ್ತಿದೆ :) ಸಿಲಬಸ್ಸು ಏನು ,ಒಂದು ವಾಕ್ಯದ, ಐದು ವಾಕ್ಯದ ಪ್ರಶ್ನೋತ್ತರ ಇರುತ್ತದೆಯೇ ಅಂತೆಲ್ಲಾ ಹೆದರಬೇಡಿ. ಜಾಸ್ತಿ ಕಷ್ಟ ಏನು ಇಲ್ಲ. ನಾನು ಕೇಳೋದು ಎರಡೇ ಪ್ರಶ್ನೆಗಳು. ಮೊದಲ ಪ್ರಶ್ನೆ ಹೀಗಿದೆ-

ಖಾಲಿ ಬಿಟ್ಟ ಸ್ಥಳಗಳನ್ನು ತುಂಬಿರಿ- ಸಂಸಾರ........ವ್ಯಾಧಿ..........

ಸಿಕ್ಕಾಪಟ್ಟೆ ಸುಲಭದ ಪ್ರಶ್ನೆ ಅಂತೆಲ್ಲಾ ಹಿಗ್ಗಬೇಡಿ. ಪ್ರಶ್ನೆ ಇನ್ನು ಮುಗಿದಿಲ್ಲ. ನಾನು ಈಗ ಎರಡು ಘಟನೆಗಳನ್ನು ವಿವರಿಸುತ್ತೇನೆ. ಈ ಎರಡೂ ಘಟನೆಗಳ ಆಧಾರದ ಮೇಲೆ ನೀವು ಎರಡೂ ಸ್ಥಳಗಳನ್ನು ತುಂಬಬೇಕು. ಪರೀಕ್ಷೆಯ ನಿಯಮಗಳು ಇಂತಿವೆ.

ಒಂದೇ ಸ್ಥಳ ತುಂಬಿದರೆ ನಪಾಸು.ಕನಿಷ್ಟ/ಗರಿಷ್ಟ ಅಂಕಗಳೆಲ್ಲಾ ಇಲ್ಲ. ಎರಡೇ ದರ್ಜೆಗಳು - ಉತ್ತೀರ್ಣ/ಅನುತ್ತೀರ್ಣ.

ಈಗ ಎರಡು ಘಟನೆಗಳನ್ನು ವಿವರಿಸುತ್ತೇನೆ. ಗಮನವಿಟ್ಟು ಓದಿ.

ಘಟನೆ ೧:

ಎಚ್ ೧ ಎನ್ ೧ ಎಲ್ಲಾ ಪೇಪರಿನ ಹೆಡ್ಲೈನ್ ಆಗಿದ್ದ ಸಮಯ. ಚಿಕುನ್ ಗುನ್ಯಾ ಕೂಡಾ ತನ್ನ ಅಟ್ಟಹಾಸ ಮೆರೆಯುತ್ತಿತ್ತು. ಜ್ವರವಿಲ್ಲದವರೂ ಜ್ವರ ಬಂದವರಂತೆ ಆಡುತ್ತಿದ್ದರು. ಜ್ವರ ಬಂದವರು ಪ್ರಾಣದ ಮೇಲಿನ ಆಸೆ ಕಳೆದುಕೊಳ್ಳುತ್ತಿದ್ದರು. ಆಸ್ಪತ್ರೆಗಳು, ಲ್ಯಾಬ್ ಗಳು ರೋಗಿಗಳು ಮತ್ತು ಟೆಸ್ಟ್ ಮಾಡಿಸಿಕೊಳ್ಳುವವರಿಂದ ಕಿಕ್ಕಿರಿದಿತ್ತು. ನಾನು ಕಾಲೇಜಿಗೆ ಸೇರಿದ ಹೊಸದು. ವಿದ್ಯಾರ್ಥಿಗಳೂ ಮಾಸ್ಕು, ನಾವೂ ಮಾಸ್ಕು ! ಎಲ್ಲರೂ ನಮ್ಮನಮ್ಮ ಎಚ್ಚರದಲ್ಲಿದ್ದೆವು.

ಒಂದು ದಿನ ನಮ್ಮ ಸಂಬಂಧಿಕರೊಬ್ಬರಿಗೆ ಹುಷಾರಿಲ್ಲ ಅನ್ನುವುದು ಗೊತ್ತಾಯ್ತು.ನಮ್ಮ ತಂದೆ ತಾಯಿ ಅವರನ್ನು ನೋಡಿಕೊಂಡು ಬರಲು ಹೊರಟಿದ್ದರು. ದಾರಿಯಲ್ಲಿ ನಾನು ಸಿಕ್ಕೆ ಆದ್ದರಿಂದ ನಾನೂ ಅವರೊಟ್ಟಿಗೆ ಹೋದೆ.ಹೋದ ತಕ್ಷಣ ಅವರ ಕುಶಲ ವಿಚಾರಿಸಿ, ಇವೆಲ್ಲಾ ಯಾವಾಗ ಹೇಗಾಯ್ತು ಅಂತ ಕೇಳಲು ಅವರು ಎರಡು ವಾರಗಳಿಂದ ಹೀಗೆ ನರಳುತ್ತಿರುವುದಾಗಿ ಹೇಳಿದರು. ನಾವು ನಮಗೆ ಹೇಳಿದ್ದಿದ್ದರೆ ಅವರ ಊಟ ತಿಂಡಿ ವ್ಯವಸ್ಥೆ ಮಾಡಬಹುದಿತ್ತಲ್ಲಾ ಎಂದು ಹೇಳಿದೆವು. ನಿಮಗೇಕೆ ತೊಂದರೆ ಎಂದು ಅವರು ಹೇಳಿದರಾದರು ಅದು ನಮಗೆ ಖಂಡಿತಾ ತೊಂದರೆ ಆಗುತ್ತಿರಲಿಲ್ಲ. ಇವರು ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿಕೊಂಡು " ವೈರಲ್ ಇನ್ ಫೆಕ್ಷನ್ " ಎಂದಷ್ಟೇ ಹೇಳಿದರೂ ಅದು ಚಿಕುನ್ ಗುನ್ಯಾ ನೇ ಅಂತ ನೋಡಿದೊಡನೆ ಗೊತ್ತಗುತ್ತಿತ್ತು. ಇವರೂ ಯಾರಿಗೂ ಹೇಳದೇ ನರಳಿದ್ದಕ್ಕೆ ಅವರ ಮಕ್ಕಳೂ ಕೂಡಾ ಹಾಸಿಗೆ ಹಿಡಿದಿದ್ದರು. ಕಾಲೇಜುಗಳಿಗೆ ಅನಿವಾರ್ಯವಾಗಿ ರಜೆ ಹಾಕಿ, ಲ್ಯಾಬ್ ಮಿಸ್ಸ್ ಆಗಿದ್ದಕ್ಕೆ ನನ್ನ ಹತ್ತಿರ ಅಳಲು ತೋಡಿಕೊಂಡರು ಅವರ ಮಕ್ಕಳು. ಒಂದು ಮಾತು ನಮಗಾಗಲಿ, ಇನ್ಯಾರಿಗಾದರೂ ಹೇಳಿದ್ದಲ್ಲಿ ನಾವು ಅವರನ್ನು ಮನೆಗೆ ಕರೆಸಿಕೊಂಡು ರೋಗ ಹರಡುವುದನ್ನು ತಪ್ಪಿಸಬಹುದಿತ್ತು. ಬೇಕಿಲ್ಲದ ಕಡೆ ಸಂಕೋಚ ದಾಕ್ಷಿಣ್ಯ ತೋರಿಸಿ, ಕಡೆಗೆ ಜ್ವರ relapse ಆಗಿ ಇವರು ನಾವು ಹೋದಾಗ ಒದ್ದಾಡುತ್ತಿದ್ದರು. ರೋಗ ಬಂದಾಗ ಮುಚ್ಚಿಟ್ಟು ಅವರು ಅದೇನು ಸಾಧಿಸಿದರೋ, ಚಿಕುನ್ ಗುನ್ಯಾ ಅಂದಾಕ್ಷಣ ನಾವು ಅವರನ್ನು ಎಲ್ಲಿ ಬಹಿಷ್ಕರಿಸುತ್ತೇವೋ ಅಂತ ಹೆದರಿದರೋ ಗೊತ್ತಿಲ್ಲ.

ಇದು ಭಾರತದಲ್ಲಿ.

ಎಚ್೧ಎನ್೧ ಅನ್ನು ತಡೆಗಟ್ಟಲು ಲಂಡನ್ ನಗರಿ ಹೇಗೆ ಸಜ್ಜಾಗಬೇಕೆಂದು ಬ್ರಿಟನ್ ಸರ್ಕಾರ ಆಜ್ಞೆ ಮಾಡಿತು ಅನ್ನೋದನ್ನ ನೋಡೋಣ.ಪ್ರತಿಯೊಬ್ಬ ಎಚ್೧ಎನ್೧ ಪೀಡಿತ ಪ್ರಜೆಯೂ ತಮ್ಮ ಅತಿ ನಂಬಿಕಸ್ಥ ಮಿತ್ರನನ್ನ "flu friend" ಅಂತ ಗುರುತಿಸಬೇಕು. ಅವರ ಇತ್ಯೋಪರಿಯೆಲ್ಲಾ ಸರ್ಕಾರಕ್ಕೆ ತಿಳಿಸಬೇಕು.ರೋಗಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬಾರದು. ಔಷಧಿಗಳನ್ನು ಈ ಮಿತ್ರನಿಗೆ ಫೋನಿಸಿ ಹೇಳತಕ್ಕದ್ದು. ಈ flu friend ಔಷಧಾಲಯಕ್ಕೆ ಹೋಗಿ ಔಷಧ ತಂದು ಮನೆಯ ಮೈಲ್ ಬಾಕ್ಸ್ ಗೆ ಹಾಕತಕ್ಕದ್ದು.ಆ ಮಿತ್ರನಿಗೂ ರೋಗ ಹರಡದಂತೆ ಆಯ್ತು. ರೋಗಿಗಳ ಓಡಾಟದಿಂದ ರೋಗ ಹರಡುವುದು ತಪ್ಪಿತು !

ಘಟನೆ ೨ :

ಸುವರ್ಣ ಚಾನೆಲ್ ನಲ್ಲಿ " ಇದು ಕಥೆಯಲ್ಲ ಜೀವನ" ಅಂತ ಒಂದು ರಿಯಾಲಿಟಿ ಶೋ ಪ್ರಾರಂಭವಾಯ್ತು. ಮಿಕ್ಕಿದ್ದೆಲ್ಲಾ ಚಾನೆಲ್ ಗಳೂ ಜಟಕಾಬಂಡಿ, ಕಥೆ ಕಾದಂಬರಿ ಅಂತೆಲ್ಲಾ ಶುರುಹಚ್ಚಿಕೊಂಡವು. ಗಂಡ ಹೆಂಡಿರ ವಿರಸ, ರಂಪ ರಾದ್ಧಾಂತ, ಅನೈತಿಕ ಸಂಬಂಧಗಳು,ಕೋರ್ಟಿನ ವ್ಯಾಜ್ಯಗಳು, ಅಣ್ಣ ತಮ್ಮಂದಿರ ಆಸ್ತಿ ಜಗಳ ಮುಂತಾದವು ಎಲ್ಲರಿಗೂ ಗೊತ್ತಾಗುತ್ತಾ ಹೋದವು. ಅತ್ತೆ ತನ್ನ ಸ್ವಂತ ಸೊಸೆಗೇ ಇಲ್ಲಿ ಕಾಟಕೊಡುತ್ತಿದ್ದರೂ, ಟಿವಿಯಲ್ಲಿ ಶೋ ನೋಡುತ್ತಾ, " ಎಂಥಾ ಕ್ರೂರ ಅತ್ತೆ ! " ಎಂದು ಉದ್ಗರಿಸುತ್ತಿರುತ್ತಾರೆ. ಸೊಸೆ ತನ್ನ ಅತ್ತೆಯನ್ನೇ ಮನೆಯಿಂದ ಆಚೆಗೆ ಅಟ್ಟಿದ್ದರೂ, " ಎಂಥಾ ಅನ್ಯಾಯ" ಎಂದು ನಿರಾಶ್ರಿತ ಅತ್ತೆಗೆ ಮರುಗುತ್ತಿರುತ್ತಾರೆ. ಹಾಗಂತ ಅವರ ಬುದ್ಧಿಗೆ ತಾವು ಸುಧಾರಿಸಬೇಕು ಎಂದು ಹೊಳೆಯುತ್ತದೋ ಬಿಡುತ್ತದೋ ಅದು ಅವರವರ ಸಂಸ್ಕಾರಕ್ಕೆ ಬಿಟ್ಟಿದ್ದು. ಈ ರಿಯಾಲಿಟಿ ಶೋಗಳು ಸಮಸ್ಯೆಯನ್ನು ನೈಜವಾಗಿ ಬಿಂಬಿಸಿದರೂ ಅದಕ್ಕೆ ದೊರಕುವ ಪರಿಹಾರ ಮಾತ್ರ ನಾಟಕೀಯ. The problem is real, but the solution is just realistic. ಜನರ ಅಭಿಪ್ರಾಯವನ್ನೇ ನ್ಯಾಯ ಎಂದು ಪರಿಗಣಿಸುವುದಾಗಲೀ, ಎಸ್ ಎಮ್ ಎಸ್ಸುಗಳ ಮಹಾಪೂರ ಹರಿಸುವುದಾಗಲಿ ಸರಿಯೆಂದು ವೈಯಕ್ತಿವಾಗಿ ನನಗನ್ನಿಸುವುದಿಲ್ಲ.ಕೆಲವು ಕಡೆ ಮುಖವನ್ನು ಮರೆಮಾಡಿ ಶೋ ನಡೆಸಲಾಗುತ್ತೆ. ಈ ಪುರುಷಾರ್ಥಕ್ಕೆ ಅವರು ಟಿವಿ ಮುಂದೆ ಯಾಕೆ ? ಅವರವರೇ ಲಾಯರ್ ಬಳಿ ಮಾತಾಡಿ ಬಗೆಹರಿಸಿಕೊಳ್ಳಬಹುದಲ್ಲ, ತಮ್ಮ ಮುಖದ ಮೇಲಿನ ಹಾಗೂ ಮನಸ್ಸಿನೊಳಗಿನ ಪರದೆಯನ್ನು ಕಳಚಿ ! ಟಿವಿಯ ಆಚೆಗಿನ ಪ್ರಪಂಚದಲ್ಲಿ ಮಾಡಬಹುದಾದದ್ದನ್ನ ಮಾಡದೇ ಟಿವಿಯಲ್ಲಿ ನೋಡಿ ಸಮಸ್ಯೆಗೆ ಪರಿಹಾರ ಹುಡುಕುವುದು ಕನ್ನಡಿಯೊಳಗಿನ ಗಂಟನ್ನು ಹಿಡಿಯಲು ಹೋದಂತೆ. ಟಿವಿಯ ಟಿ ಆರ್ ಪಿ ದಾಹಕ್ಕೆ ನಾವು ಶೋಗಳನ್ನು ನೋಡುತ್ತಾ ಹೇಗೆ ಹಾಳಾಗುತ್ತಿದ್ದೇವೆ ಅಂತ ನಾನು ವಿವರಿಸಬೇಕಿಲ್ಲ.

ಈ ಎರಡೂ ಘಟನೆಗಳನ್ನು ಓದಿದಿರಲ್ಲಾ, ಈಗ ಖಾಲಿ ಬಿಟ್ಟ ಸ್ಥಳ ತುಂಬಿರಿ !

ಇನ್ನೊಂದು - ಪ್ರತಿ ಪೋಸ್ಟಿನ ಕಡೆಗೂ ನಾನು ಕೇಳುವ ಪ್ರಶ್ನೆ ಏನೂ ಅಂತ ಗೊತ್ತಲ್ಲಾ, ಅದೂ ಏನೆಂದು ಬರೆಯಿರಿ ! :)