Sunday, May 10, 2009

ಫೋನ್ ಮಾಡಿ ಬನ್ನಿ...

ಈಗೀಗ ಎಲ್ಲರೂ ಬ್ಯುಸಿ ಇರುತ್ತೇವೆ. ಕೆಲವರು ಮನೆಯ ಹೊರಗೆ, ಕೆಲವರು ಮನೆಯ ಒಳಗೆ. ಆತ್ಮೀಯರ ಆಗಮನ ಮೊದಲೇ ತಿಳಿದರೆ ನಾವು ನಮ್ಮ ಸಮಯವನ್ನು ಮರುವಿಂಗಡಿಸಿಕೊಳ್ಳಬಹುದು. ಇಲ್ಲದಿದ್ದರೆ ಅವರ ಪ್ರತಿ ಇರುವ ನಮ್ಮ ಗೌರವ ಮತ್ತು ಆತ್ಮೀಯತೆಯನ್ನು ಸರಿಯಾಗಿ ವ್ಯಕ್ತಪಡಿಸಲಾಗದೇ ಒದ್ದಾಡುವುದೇ ಹೆಚ್ಚು.

ಹೋದ ವಾರ ನಮ್ಮ ಮನೆಗೆ ದಂಪತಿಗಳು ಬಂದರು,ಅವರ ಮಗನ ಮದುವೆಗೆ ನಮ್ಮನ್ನು ಆಹ್ವಾನಿಸಲು. ಹೊಸ್ತಿಲು ದಾಟುತ್ತಿದ್ದಂತೆಯೇ, " ನಾವು ನಿಮ್ಮನ್ನು ಕರೆಯಲು ಬರುತ್ತಿರುವುದು ಇದು ಮೂರನೆಯ ಬಾರಿ. ಎರಡೂ ಸರ್ತಿ ಬಂದಾಗ ಮನೆ ಬೀಗ ಹಾಕಿತ್ತು. " ಅಂದರು. ನಮ್ಮಮ್ಮ, " ಓಹ್ ಹೌದೇ ? ಎಷ್ಟೊತ್ತಿಗೆ ಬಂದಿದ್ದಿರಿ ? " ಎಂದು ಕೇಳಲು, "ಮೊದಲನೆಯ ಸರ್ತಿ ಬೆಳಿಗ್ಗೆ ಹನ್ನೊಂದಕ್ಕೆ, ಎರಡನೆಯ ಸರ್ತಿ ಸಾಯಂಕಾಲ ಏಳಕ್ಕೆ "ಎಂದು ಉತ್ತರ ನೀಡಿದ್ದಲ್ಲದೇ, " ನೀವು ತುಂಬಾ ಬ್ಯುಸಿ ಬಿಡಿ..ಮಕ್ಕಳಿರೋಲ್ವೆ ಮನೆಯಲ್ಲಿ ?" ಅಂದು ನನ್ನ ಮತ್ತು ನನ್ನ ತಂಗಿಯ ಮುಖ ನೋಡಿದರು. ನಮ್ಮಮ್ಮ " ನಾನು ಸಾಯಂಕಾಲ ವಾಕಿಂಗ್ ಹೋಗಿರುತ್ತೇನೆ. ದೊಡ್ಡವಳು ಬೆಳಿಗ್ಗೆ ಹೊರಗೆ ಹೋದರೆ ಪಾಠ ಪ್ರವಚನ, ಆಫೀಸು, ಲೈಬ್ರರಿ ಅಂತ ವಾಪಸ್ಸು ಬರುವುದು ರಾತ್ರಿ ಎಂಟಕ್ಕೇ. ಚಿಕ್ಕವಳಿಗೆ ದ್ವಿತೀಯ ಪಿಯುಸಿ ಪಾಠ. ಬೆಳಿಗ್ಗೆ ನಾವು ದೇವಸ್ಥಾನ, ಮದುವೆ ಮುಂಜಿ ಮುಂತಾದ ಕಾರ್ಯಕ್ರಮಗಳಿಗೆ ಹೋಗುವುದಿರತ್ತೆ ನೋಡಿ.." ಅಂದರು. ಅದಕ್ಕೆ ಅವರು, "ನಾವು ಫೋನ್ ಮಾಡಿ ಬರೋಣಾ ಅಂತ ಇದ್ದೆವು. ಆದರೆ ಆತ್ಮೀಯರಿಗೆಂಥಾ ಫೋನು..ಯಾವಾಗ್ಲು ಮನೆಯಲ್ಲಿರುತ್ತಾರೆ ಅಂತ ಹಾಗೇ ಬಂದೆವು" ಅಂದರು.

ನಾವು ಆತ್ಮೀಯರು ಸರ್ವಾಂತರ್ಯಾಮಿಗಳೇ ಅಥವಾ ದೂರದೃಷ್ಟಿಯುಳ್ಳವರೇ ? ಎರಡು ಸರ್ತಿ ನಾವು ಮನೆಯಲ್ಲಿಲ್ಲದಿದ್ದಾಗಲು ಅವರು ಫೋನ್ ಮಾಡಿರಲಿಲ್ಲ. ಮೂರನೆಯ ಬಾರಿ ಕೂಡಾ ಮಾಡಿರಲಿಲ್ಲ. ಅಮ್ಮನಿಗೆ ಇದೆಲ್ಲ ಅಭ್ಯಾಸವಿರಬಹುದು, ಆದರೆ ನಾವು ಮೂವರು ಅವತ್ತು ಒಂದು ಬಹು ಮುಖ್ಯ ಕಾರ್ಯಕ್ರಮ ಒಂದಕ್ಕೆ ಹೊರಡಬೇಕಿತ್ತು. ನನಗೆ ಮತ್ತು ನನ್ನ ತಂಗಿಗೆ ಏನೂ ಮಾತಾಡಲು ತೋಚುತ್ತಿಲ್ಲ. ಅಮ್ಮ ಹಾಡಬೇಕಿತ್ತು. ಇವರ ಆಗಮನದಿಂದ ಮುಕ್ಕಾಲು ಘಂಟೆ ನಮಗೆ ಹೋಗಲು ತಡವಾಗಿ, ಅಲ್ಲಿನವರಿಗೆ ಫೋನಿಸಿ, ನಾವು ತಡವಾಗಿ ಆಗಮಿಸಬೇಕಾಗಿದ್ದಕ್ಕೆ ಕ್ಷಮೆ ಇರಲಿ ಎಂದು ಬೇಡಿಕೊಂಡಿದ್ದಾಯ್ತು. ಅವರು ನಮಗೆ ಎಷ್ಟು ಆತ್ಮೀಯರೆಂದರೆ ನಾವು ಅವರಿಗೆ ನಮ್ಮ ಪರಿಸ್ಥಿತಿ ಹೇಳಲೂ ಆಗುತ್ತಿಲ್ಲ, ಅವರ ಮೇಲಿರುವ ನಮ್ಮ ಪ್ರೀತಿ ವಿಶ್ವಾಸಗಳನ್ನು ಸರಿಯಾಗಿ ವ್ಯಕ್ತಪಡಿಸಲೂ ಆಗುತ್ತಿಲ್ಲ. ಈ ದ್ವಂದ್ವಕ್ಕೆ ನಾವು ನಿರುತ್ತರರು.ನಿಮಗೊಂದು ವಿಷಯ ಹೇಳಬೇಕು- ಬಂದಿದ್ದರಲ್ಲ ದಂಪತಿಗಳು, ಹೊರಟಾಗ ನುಡಿಮುತ್ತೊಂದನ್ನು ಆಡಿ ಹೋದರು- "You are most welcome to our house any time, But do give us a phone call before you come !"



ಆತ್ಮೀಯರ ಹಠಾತ್ ಆಗಮನದಿಂದ ಆನಂದದೊಂದಿಗೆ ಆಗುವ ಮುಜುಗರದ ಕೆಲವು ಉದಾಹರಣೆಗಳು :

1. ಅಮ್ಮ ಒಮ್ಮೆ ಮೆಣಸಿನಪುಡಿ ಮಾಡುತ್ತಿದ್ದರು...ಬಂದ ಅತಿಥಿಗಳು " ಏನಿದು ಸಿಕ್ಕಾಪಟ್ಟೆ ಘಾಟು ನಿಮ್ಮನೆ ? ಯಾವಾಗ್ಲು ಹೀಗೇನಾ ?" ಅಂದರಂತೆ !

2. ನಾನು ಒಮ್ಮೆ ಏಣಿ ಹತ್ತಿ ಅಟ್ಟ ಕ್ಲೀನ್ ಮಾಡುತ್ತಿದ್ದೆ, ಬಂದವರು ಯಾರೋ ಎಂದು ನೋಡುವ ರಭಸದಲ್ಲಿ ಬೇಗ ಅಟ್ಟ ಇಳಿಯಲು ಹೋಗಿ ಕಾಲು ಉಳುಕಿತು. ಬಂದವರು ನನ್ನ ಕುಂಟು ಕಾಲನ್ನು ಪ್ರಶ್ನಾರ್ಥಕವಾಗಿ ನೋಡಲು, ಅವರಿಗೆ ವಿವರಣೆ ನೀಡುವಷ್ಟರಲ್ಲಿ ನನಗೆ ಸಾಕುಬೇಕಾಗಿ ಹೋಯ್ತು !

3. ಒಬ್ಬರು ರಾತ್ರಿ ಹನ್ನೊಂದಕ್ಕೆ ಸಂಕ್ರಾಂತಿಯ ಎಳ್ಳು ಬೀರಲು ಬಂದರು ( ಹಬ್ಬವಾದ ಮೂರ್ನಾಲ್ಕು ದಿನಗಳಾದ ಮೇಲೆ) ಅವರು ಬಾಗಿಲು ಬಡಿದ ರಭಸಕ್ಕೆ ನಾವು ಮಲಗಿದ್ದವರು ಹೆದರಿ ಬಾಗಿಲು ತೆಗೆದೆವು..ಅವರು ಕೇಳಿದ ಪ್ರಶ್ನೆ- "ಮಲಗಿದ್ರಾ ? ಎಬ್ಬಿಸಿದೆವಾ ?"


ಹಿಂದಿನ ಕಾಲದಲ್ಲಾದರೆ ಗೋದಾಮಿನ ತುಂಬಾ ಧಾನ್ಯಗಳು, ಮನೆಯಲ್ಲಿ ಕಾಮಧೇನು ಕಲ್ಪವೃಕ್ಷಗಳಿರುತ್ತಿದ್ದವು. ಈಗ ಹಳ್ಳಿಗಳಲ್ಲಿ ಆ ಸ್ಥಿತಿ ಇರಬಹುದು, ನಾವು ನತದೃಷ್ಟ ನಗರವಾಸಿಗಳು. ಎಲ್ಲವನ್ನು ತಂದಿಟ್ಟುಕೊಂಡಿರಬೇಕಾಗತ್ತೆ. ನಮ್ಮ ಬ್ಯುಸಿ ಜೀವನದಲ್ಲಿ ಹಾಲು ಆಗೋಗಿದೆ ಅಂತ ಗೊತ್ತಾಗೋದು ಕಾಫಿಯ ನೆನಪಾದಾಗಲೇ ! ಇನ್ನು ಧಾನ್ಯ ತರಕಾರಿಗಳ ಬಗ್ಗೆ ಮಾತೇ ಇಲ್ಲ. ಅತಿಥಿಗಳು ಬಂದಾಗ ಸಾಮಾನು ತರಲು ಮುಜುಗರ, ಪಕ್ಕದ ಮನೆಯಲ್ಲಿ ಸಾಲ ಕೇಳಿದರೆ ಅವಮಾನ, ಬಂದವರ ಸತ್ಕಾರ ಮಾಡದಿದ್ದರೆ ನಿಷ್ಠುರರೆಂಬ ಪಟ್ಟ ಬೇರೆ !ಆಡುವಂತಿಲ್ಲ ಅನುಭವಿಸುವಂತಿಲ್ಲ. ಈ ಸಮಸ್ಯೆಗಳನ್ನೆಲ್ಲಾ ಒಂದು ಫೋನ್ ಕಾಲ್ ನಿವಾರಿಸುತ್ತದಲ್ಲವೇ?

ಇನ್ನು ಬಂದು ಹೋಗಲು ತಗಲುವ ಪೆಟ್ರೋಲ್ ಖರ್ಚು, ಬಸ್ ಚಾರ್ಜು ಏನು ಕಡಿಮೆಯೇ ? ಹೇಳದೆಯೇ ಬಂದು ಸರ್ಪ್ರೈಸ್ ಮಾಡಲು ಹೋಗಿ ಬೀಗ ನೋಡಿದಾಗ ಆಗುವ ಶಾಕನ್ನು ತಡೆದುಕೊಳ್ಳಲು ಸಾಧ್ಯವೇ ?

ಎಷ್ಟೋ ಬಾರಿ ನಾವೂ ಇಂತಹ ಪರಿಸ್ಥಿತಿ ಎದುರಿಸಿರುತ್ತೇವೆ, ಅದಕ್ಕಿಂತ ಹೆಚ್ಚಾಗಿ ನಾವು ಹಲವು ಜನರನ್ನು ಇಂಥದ್ದೇ ಪರಿಸ್ಥಿತಿಗೆ ಒಡ್ಡಿರುತ್ತೇವೆ. ಅಲ್ವಾ ? ನಾವು ತಿಳಿದೂ ತಿಳಿದೂ ತಪ್ಪು ಮಾಡುತ್ತೀವಾ ಅಥವಾ ಬೇರೆಯವರ ವಿಷಯದಲ್ಲಿ ನಿರಾಸಕ್ತಿ ತೋರಿಸಿ ನಮ್ಮ ಬುಡಕ್ಕೆ ಬಂದಾಗ ಮಾತ್ರ ಹೌಹಾರುತ್ತೀವಾ ?


ಸಕಲ service providers ಗಳೂ ಇದಕ್ಕಿಂತ ಹೆಚ್ಚಾಗಿ ಕಾಲ್ ದರಗಳನ್ನು ಕೆಳಗಿಳಿಸಲಾರರು. ಆದರೂ ಮಿಸ್ಡ್ ಕಾಲ್ ಮನೋಭಾವ ಜನರಿಂದ ಮಾಯವಾಗಿಲ್ಲ. ಏನೂ ಮಾಡೋಕಾಗಲ್ಲ. ಹೋಗಲಿ...ಮಿಸ್ಡ್ ಕಾಲ್ ಕೊಡಲಿ, ನಾವೇ ಫೋನಿಸೋಣಂತೆ.. ಫೋನ್ ಕರೆ ಮಾಡಿ ಆಮೇಲೆ ಮನೆಗೆ ಬರಬಾರದೆ ?

ನಾವೇಕೆ ಹೀಗೆ ?