Tuesday, February 17, 2009

ಕ್ಲಬ್ಬು..ಪಾರ್ಟಿ ಮತ್ತು ನಾನು !

ನಾನು ಓದು ಮುಗಿಸಿದ್ದೇ ಮಹಾಪರಾಧ ಆಗೋಯ್ತು ಅಂತ ಅನಿಸುತ್ತಿದೆ. ಮನೆ ಬಿಟ್ಟರೆ ಕಾಲೇಜು, ಓದು, ಅಲ್ಲಿನ ಸ್ನೇಹಿತೆಯರ ಜೊತೆ ಸುತ್ತಾಟ,ಮತ್ತೆ ಮನೆ, ಹೀಗಿತ್ತು ನನ್ನ ದಿನಚರಿ ಬಿಟ್ಟರೆ,ನನಗೆ ಈ ಪಾರ್ಟಿಗಳು, ಕ್ಲಬ್ಬಿನ ಮಿಟಿಂಗುಗಳನ್ನು attend ಮಾಡಿ ಅಭ್ಯಾಸವೇ ಇರಲಿಲ್ಲ.ಎಲ್ಲದಿಕ್ಕಿಂತಲೂ ಹೆಚ್ಚಾಗಿ, ನನ್ನನ್ನು ಇನ್ನು "ಚಿಕ್ಕವಳು" ಎಂದೇ ಭಾವಿಸಿದ್ದರು ಎಲ್ಲಾರು ಆದ್ದರಿಂದ, ನನ್ನನ್ನ ಕರೆಯುತ್ತಲೂ ಇರಲಿಲ್ಲ, ನಾನು ಕೇಳುವ ಗೋಜಿಗೂ ಹೋಗಿರಲಿಲ್ಲ. ಸ್ನಾತಕೋತ್ತರ ಪದವಿ ಮುಗಿಸಿದ ಮೇಲೆ ನಾನು ಬೆಳೆದಿದ್ದೇನೆ ಮತ್ತು ನಾನು ಕ್ಲಬ್ಬು, ಮೀಟಿಂಗುಗಳನ್ನು attend ಮಾಡುವ "ಯೋಗ್ಯತೆ"(ಕರ್ಮಕಾಂಡ!)ಯನ್ನು ಸಂಪಾದಿಸಿದ್ದೇನೆ ಅಂತ ಎಲ್ಲರೂ ಭಾವಿಸಿದ್ದಾರೆ.:(

ನಮ್ಮಮ್ಮ ಲೇಡಿಸ್ ಕ್ಲಬ್ ಗೆ ಹೋಗೋದನ್ನ ಬಹಳ ವರ್ಷಗಳ ಹಿಂದೆಯೇ ನಿಲ್ಲಿಸಿಬಿಟ್ಟಿದ್ದರು. "ಯಾಕಮ್ಮಾ ? ಹೋಗಲ್ವಾ?" ಅಂತ ನಾವು ಕೇಳುತ್ತಿದ್ದರೆ,ಅಮ್ಮ "ಬೇಜಾರು !" ಅಂತ ಒಂದೆಳೆಯ ಉತ್ತರ ಕೊಡುತ್ತಿದ್ದರು. ಅಣ್ಣ ಕೂಡಾ " ಅಮ್ಮನಿಗೆ ಇಷ್ಟ ಇಲ್ಲ ಅಂದರೆ ನೀನ್ಯಾಕೆ ಕೇಳಿ instigate ಮಾಡ್ತಿಯಾ ? " ಅನ್ನೋರು. ನಾನು ಪಿಳಿಪಿಳಿ ನೋಡುತ್ತಿದ್ದರೆ ಅಣ್ಣ "ಚಿಕ್ಕವರಿಗೆಲ್ಲಾ ಅರ್ಥ ಆಗಲ್ಲ" ಅಂತ ಥಣ್ಣಗೆ ಹೇಳಿಬಿಡುತ್ತಿದ್ದರು. ನಾನು ಪುಸ್ತಕದೊಳಗೆ ಮತ್ತೆ ತಲೆ ಹುದುಗಿಸಿಬಿಡುತ್ತಿದ್ದೆ. ಆಗ ಏನೂ ತೊಂದರೆ ಇರ್ಲಿಲ್ಲ. ಆಮೇಲೆ ಯಾವಾಗಲೋ ಲೇಡೀಸ್ ಕ್ಲಬ್ಬಿನ ಮುಖ್ಯಸ್ಥೆ ನಮ್ಮ ಮನೆಗೆ ಫೋನ್ ಮಾಡಿ ನಮ್ಮಮ್ಮನಿಗೆ " ಬನ್ರಿ ಸಾಕು..ಏನ್ ಹೀಗೆಲ್ಲಾ ಮಾಡ್ತಿರಾ ? ತಿಂಗಳಿಗೆ ಒಂದ್ ಸರ್ತಿ ಬರಕ್ಕೆ ಆಗಲ್ವೆನ್ರಿ ?" ಅಂತೆಲ್ಲಾ ಝಾಡಿಸಿದ್ದಾರೆ. ನಮ್ಮಮ್ಮ ಒಲ್ಲದ ಮನಸ್ಸಿನಿಂದ ಒಪ್ಪಿದ್ದಾರೆ. ನನ್ನ ಕರ್ಮಕ್ಕೆ ಅದೇ ಸಮಯಕ್ಕೆ ನನ್ನ ಪರೀಕ್ಷೆಯೂ ಮುಗಿದು ಹೋಯ್ತು. ಓದು ಮುಗಿದಿದೆ ಅಂತ ಆಯ್ತು.ಪರೀಕ್ಷೆ ಮುಗಿದ ಮೇಲೆ ನಮ್ಮಮ್ಮ "ಮನೇಲಿ ಕೂತು ಕಂಪ್ಯೂಟರ್ ನೇ ನೋಡಿದ್ದು ಸಾಕು...ಒಂದ್ ಸರ್ತಿ ಹೊರ್ಗಡೆ ಬಾ" ಅಂತ ಒತ್ತಾಯ ಮಾಡಿ ಲೇಡೀಸ್ ಕ್ಲಬ್ ಗೆ ಕರ್ಕೊಂಡು ಹೋದ್ರು. ಘನತೆ ಯೋಗ್ಯತೆ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಆದರೂ..as a lady, ನಾನು ಕ್ಲಬ್ಬಿಗೆ ಕಾಲಿಟ್ಟೆ.

ಆವತ್ತು ಯಾವ್ದೋ ಶಾವಿಗೆ ಕಂಪನಿಯವರು ಶಾವಿಗೆಯ ವಿವಿಧ ಬಗೆಯ ತಿಂಡಿಯ ಒಂದು demonstration ಕೊಡುವವರಿದ್ದರು. ಅವರು ಅವರ ತಯಾರಿಯಲ್ಲಿ ಮಗ್ನರಾಗಿದ್ದರು. ಕ್ಲಬ್ಬಿನ ಮುಖ್ಯಸ್ಥೆ ನಾವು ಬಂದ ಕೂಡಲೆ " ಓಹ್ ! ಬನ್ನಿ ಬನ್ನಿ ! so good to see you !" ಅಂದಿದ್ದೇ...ನೆರೆದವರಿಗೆಲ್ಲ " ladies ! look who is here !" ಅಂದರು. ನಮ್ಮನ್ನು ನೋಡಿದ್ದೆ ಎಲ್ಲರು " ಓಓಓಓಓಓಓ" ಅಂತ ಜೋರಾಗಿ ಕಿರುಚಿದರು. ನನಗೆ ನಮ್ಮ ಕಾಲೇಜ್ fest ನೆನಪಾಯ್ತು. ಇವರು ನಮ್ಮನ್ನೂ ಮೀರಿಸುತ್ತಾರೆ ಕಿರುಚೋದ್ರಲ್ಲಿ...ಎಷ್ಟೇ ಆಗಲಿ ಅಮ್ಮಂದಿರು ಅಂದುಕೊಂಡು ನಾನು ಹಲ್ಲು ಕಿರಿದೆ. ಅದೇ ತಪ್ಪಾಗಿ ಹೋಯ್ತು. ಎಲ್ಲರು ಒಟ್ಟೊಟ್ಟಿಗೆ ನನಗೆ ಪ್ರಶ್ನೆ ಹಾಕುತ್ತಿದ್ದರು." ಏನಮ್ಮಾ ? ಹೇಗಿದ್ಯಾ ? ಕಾಣಲೇ ಇಲ್ಲ ? ಏನ್ ಮಾಡ್ತಿದ್ಯಾ ? ಏನ್ ಓದ್ತಿದ್ಯಾ ? ಎಕ್ಸಾಂ ಆಯ್ತ ? ರಿಸಲ್ಟ್ ಯಾವಾಗ ? ಎಮ್.ಎಸ್ಸಿ ಮಾಡ್ತಿದ್ಯಂತೆ ? ಯಾಕ್ ಇಂಜಿನೀರಿಂಗ್ ಮಾಡ್ಲಿಲ್ಲ ? medicine ಇಷ್ಟ ಇಲ್ಲಾ ಅಂದ್ಯಂತೆ ಯಾಕೆ? ಎಲ್ಲಿ ಓದಿದ್ದು ಅಂದೆ ? ಯಾವುದರಲ್ಲಿ ಎಮ್.ಎಸ್ಸಿ ? ph.D ಬೇರೆ ಮಾಡ್ಬೇಕು ಅಂತ ಇದ್ಯಂತೆ ? ಯಾವಾಗ್ಲೂ ಓದುತ್ತಿದ್ದರೆ ಹೇಗೆ ? " ಅಂತ ಕೇಳುತ್ತಿದ್ದರೆ ನಾನು ಯಾವ ಪ್ರಶ್ನೆಗೆ ಹೇಗೆ ಉತ್ತರಿಸಲಿ ? ನನ್ನನ್ನು ಮಾತಾಡಲು ಬಿಟ್ಟರೆ ತಾನೆ !ನಾನು ಪಡುತ್ತಿರುವ ಕಷ್ಟ ಆ ದೇವರಿಗೆ ಗೊತ್ತಾಗಿ ಆ ಶಾವಿಗೆ ಕಂಪನಿಯವರ ಕೈಯಲ್ಲಿ ನನ್ನ ಪ್ರಾಬ್ಲೆಮ್ ಸಾಲ್ವ್ ಮಾಡಿಸಿದ. ಅವರು " demonstration ಶುರು" ಅಂದ ಕೂಡಲೆ ಹಾಲು ಸ್ತಬ್ಧವಾಯ್ತು. ಎಲ್ಲರು ಚೇರು ಸರಿ ಮಾಡಿಕೊಂಡು ಕೂತರು. ನಾನು ಬೀಸುವ ದೊಣ್ಣೆಯನ್ನು ತಪ್ಪಿಸಿಕೊಂಡಿದ್ದೆ.

ಶಾವಿಗೆ demo ಮಾಡುವವವರು ಬಹಳ ಚೆನ್ನಾಗಿ ವಿವಿಧ ರೀತಿಯ ಖಾದ್ಯಗಳನ್ನು ಮಾಡಿ ತೋರಿಸುತ್ತಿದ್ದರು. ಆದರೆ ಇವರೆಲ್ಲಾ ಮಧ್ಯದಲ್ಲೇ ಮಾತಾಡಿ ಮಾತಾಡಿ ಆ demo ಅವರನ್ನು ಪೀಡಿಸುತ್ತಿದ್ದರು. ಗಮನವಿಟ್ಟು ಕೇಳೀಕೊಳ್ಳದೇ ರೆಸಿಪಿಗಳನ್ನು ಮತ್ತೆ ಮತ್ತೆ ಕೇಳುತ್ತಿದ್ದರು. ಅವರು ಪಾಪಾ್ ಅದಕ್ಕೆ ಉತ್ತರಿಸಿ, ರುಚಿ ನೋಡೀ ಆಂತ ಖಾದ್ಯವನ್ನು ಒಂದು ಸ್ಪೂನಿನ ಕಾಲು ಭಾಗದಷ್ಟು ಎಲ್ಲರಿಗೂ ಕೊಡುತ್ತಿದ್ದರು. ನಾನು ಎಂಥದ್ದೋ ಒಂದು ಹೊಸ ರುಚಿಯ ರುಚಿ ನೋಡಿದೆ. ರುಚಿಯೇ ಗೊತ್ತಾಗಲಿಲ್ಲ. ಬಿಸಿಯಾಗಿತ್ತು. ಮಾತಿಲ್ಲದೇ ಹೊಟ್ಟೆ ಸೇರಿತು. ಆದರೆ ನಾಲಿಗೆ ಬ್ರೈನಿಗೆ ಏನೂ ಮಾಹಿತಿ ಕಳಿಸಿರಲಿಲ್ಲ. ಉಪ್ಪೋ ಹುಳಿಯೋ ಸಿಹಿಯೋ ಖಾರವೋ ಕಹಿಯೋ ಏನೂ ಗೊತ್ತಾಗಲಿಲ್ಲ. ಪಕ್ಕದವರು ಅದೇ ಖಾದ್ಯವನ್ನು ತಿಂದು "ಸೂಪರ್ ! ಕಲಿಯಬೇಕು ಇದನ್ನ. ಮನೆಗೆ ಹೋಗಿ ಮಾಡೋದೆ. recipe please !" ಅಂದರು. ನಾನು ಇವರ ನಿಘಂಟಿನಲ್ಲಿ "super" ಪದದ ಅರ್ಥ ಏನು ಅಂತ ತಿಳಿಯಲಾರದೇ confuse ಆಗಿದ್ದೆ. ಅವರ ಮನೆಯವರಿಗೆ ಅಂದು ಸಂಜೆ ಒದಗಲಿರುವ ಸ್ಥಿತಿಯ ಬಗ್ಗೆ ಅನುಕಂಪವನ್ನು ಮನಸ್ಸಿನಲ್ಲೇ ವ್ಯಕ್ತಪಡಿಸಿದೆ. ಒಂದುವರೆಘಂಟೆಯಲ್ಲಿ ಐದು ಬಗೆಯ ಖಾದ್ಯವನ್ನು ಮಾಡಿ ತೋರಿಸಿ ಚಪ್ಪಾಳೆ ಗಿಟ್ಟಿಸಿಕೊಂಡ ಮೇಲೆ ಶ್ಯಾವಿಗೆಯವರು ತಾವು ತಂದಿದ್ದ ಶ್ಯಾವಿಗೆಯನ್ನು ನಿಜವಾದ ಬೆಲೆಗಿಂತ ಐದು ರುಪಾಯಿ ಕಡಿಮೆ ಬೆಲೆಗೆ ಮಾರಿದರು. ಎಲ್ಲಾ ಮಹಿಳಾಮಣಿಗಳು ಅದನ್ನು ಕೊಳ್ಳಲು ದುಂಬಾಲು ಬಿದ್ದರು. ನಮ್ಮಮ್ಮ ನನ್ನ ಮುಖ ನೋಡಿದರು. ಅಮ್ಮನಿಗೂ ಖಾದ್ಯಗಳು ಇಷ್ಟವಾಗಿರಲಿಕ್ಕಿಲ್ಲ. "ನಾನು ತಗೊಳಲ್ಲ" ಅಂದರು. ನಾನು "ಒಳ್ಳೇದು. ತಗೋಬೇಡ" ಅಂದೆ. ನಮ್ಮನ್ನು ಒಂಥರ ನೋಡಿದರು ಆ ಶಾವಿಗೆಯವರು. ದಟ್ಟ ದರಿದ್ರ ಲುಕ್ಕುಗಳನ್ನು ನೀಡುವಲ್ಲಿ ನಿಸ್ಸೀಮಳು ಅನ್ನೋ ಬಿರುದನ್ನು ನನಗೆ ನನ್ನ ಗೆಳತಿಯರು ಪ್ರದಾನ ಮಾಡಿದ್ದಾರೆ ಆದ್ರಿಂದ ನಾನು ಆ ಲುಕ್ಕನ್ನು ಇನ್ನೂ ದಟ್ಟದರಿದ್ರವಾಗಿಸಿ ಆ ಶಾವಿಗೆಯವರಿಗೆ most ದಟ್ಟ ದರಿದ್ರ look ಒಂದನ್ನು ಬಿಸಾಕಿದೆ. ನಮ್ಮಮ್ಮ ಸುಮ್ನೆ ನೋಡಿದರು. ನಾನೇ " ಎಷ್ಟೇ ಆಗಲಿ ಬಿಸಿರಕ್ತ ನನ್ನದು " ಅಂದುಕೊಂಡು ಸುಮ್ಮನಾದೆ.ಆ ಶಾವಿಗೆಯವರು ವ್ಯಾಪಾರ ಮುಗಿಸಿಕೊಂಡು ಹೊರಟರು.

ನಾನೂ ಎದ್ದು, " ಹೊರಡೋಣ ಬಾಮ್ಮ !" ಅಂದೆ. ಅದಕ್ಕೆ ಅಮ್ಮ "ಇಲ್ಲ ಇಲ್ಲ ಇನ್ನೂ ಮುಗಿದಿಲ್ಲ. ಹೌಸಿ ಹೌಸಿ ಆಟ ಆಡೋಕೆ ಇದೆ. ಆಮೇಲೆ ತಿಂಡಿ ಕಾಫಿ ಎಲ್ಲಾ ಕೊಡ್ತಾರೆ. ನಿನಗೆ ಸಖತ್ ಮಜಾ ಬರತ್ತೆ. ಕೂತ್ಕೋ" ಅಂದರು. ನಾನು ನಮ್ಮಮ್ಮನ ವ್ಯಂಗ್ಯವನ್ನು ಅರ್ಥ ಮಾಡಿಕೊಂಡು "ಕರ್ಮಕಾಂಡ !" ಎನ್ನುತ್ತಾ ಕೂತೆ. ಒಂದು ಹತ್ತು ನಿಮಿಷಕ್ಕೆ ಇವರೆಲ್ಲ ಚೇರುಗಳನ್ನು ವೃತ್ತಾಕಾರದಲ್ಲಿ ಹಾಕಿಕೊಂಡು ಕುಳಿತರು. ಐದು ರುಪಾಯಿಗೆ ಟಿಕೆಟ್ಟುಗಳನ್ನು ಕೊಂಡರು. ಅಮ್ಮ ಬಂದ ತಪ್ಪಿಗೆ ಆಡಲು ಕೂತಿದ್ದರು. ನಾನು ಟಿಕೆಟ್ಟು ಕೊಂಡಿರಲಿಲ್ಲ.ಹಣವನ್ನು ಒಂದು ಡಬ್ಬಿಯಲ್ಲಿ ಹಾಕಲಾಯ್ತು. ಈ ಕಡೆ ಕ್ಲಬ್ಬಿನ ಮುಖ್ಯಸ್ಥರು ನಂಬರ್ಗಳನ್ನು ಕೂಗುತ್ತಿದ್ದರೆ ಆಕಡೆಯಿಂದ ಎಲ್ಲಾರು "ಯಾ...ನೋ....ಓಹ್ ನನ್ನದು ರೋ ಮುಗಿತು ! ಕಾಲಂ ಮುಗಿತು ! star ಆಯ್ತು ! full house !" ಅಂತೆಲ್ಲಾ ಕಿರುಚಾಡುತ್ತಿದ್ದರು. ನನಗೆ ಗಣಿತದ matrices ಮತ್ತು star tv ಯ full house ನಡುವಿನ ಸಂಬಂಧ ತಿಳಿಯದಾಯ್ತು.ನಾನು ಅಮ್ಮನ ಕಡೆಗೆ ಒಂದು ಅಸಹಾಯಕ ನೋಟ ಬೀರಿದೆ. ಅವರು ನಕ್ಕು ನನ್ನನ್ನು ಮತ್ತಷ್ಟು ನಿರಾಸೆಗೊಳಿಸಿಬಿಟ್ಟರು !ಸ್ಪರ್ಧೆಯಲ್ಲಿ ಗೆದ್ದವರಿಗೆ ಅದೇ ಡಬ್ಬಿಯಿಂದ ದುಡ್ಡನ್ನು ಬಹುಮಾನವಾಗಿ ಕೊಡಲಾಯ್ತು.


ಈ ಅರ್ಥವಾಗದ ಆಟದ ನಂತರ ತಿಂಡಿಯ ಸಮಾರಾಧನೆ ಇತ್ತು. ಹಿರಿಯ ಆಂಟಿಗಳೆಲ್ಲರು ಎರಡೆರಡು ಸ್ವೀಟುಗಳನ್ನು ತಿನ್ನುತ್ತಿದ್ದುದನ್ನು ನೋಡಿ ನನಗೆ ಗಾಬರಿಯಾಯ್ತು. ನಾನು " ಅಮ್ಮಾ...ಇವ್ರೆಲ್ಲಾ ಸಕ್ಕರೆ ಖಾಯಿಲೆ ಇರೋರು ಅಲ್ವಾ ? ಏನಮ್ಮ ಎರಡೆರಡು ಸ್ವೀಟುಗಳನ್ನ ಲಗಾಯಿಸುತ್ತಿದ್ದಾರಲ್ಲ!" ಅಂತ ಕೇಳಿದೆ. ಅದಕ್ಕೆ ನಮ್ಮಮ್ಮ..."ಇದನ್ನ ಒಮ್ಮೆ ಅವರನ್ನೇ ಕೇಳಿನೋಡು" ಎಂದರು. ನಾನು ಒಬ್ಬರ ಹತ್ತಿರ ಹೋಗಿ ಪ್ರಶ್ನಿಸಿಯೇಬಿಟ್ಟೆ. ಅದಕ್ಕೆ ಬಂದ ಉತ್ತರ ಹೀಗಿದೆ- " ಅಯ್ಯೋ...ಹೌದು ! ನನಗೆ ಸಕ್ಕರೆ ಖಾಯಿಲೆ ಇದೆ. ಹಾಗಂತ ಬದುಕೋದನ್ನ ಬಿಡಕ್ಕೆ ಆಗತ್ತಾ ? ಸ್ವೀಟಲ್ಲೇ ಮುಳುಗಿ ಎದ್ದಿರುವ ನಾನು ಸಿಹಿ ತಿನ್ನೋದನ್ನ ಖಂಡಿತಾ ಬಿಡಲ್ಲ !ಚೆನ್ನಾಗಿ ತಿನ್ನೋದು, insulin ಚುಚ್ಚಿಕೊಳ್ಳೋದು. ಮನೇಲಿ ಹೋಗಿ ನಿದ್ದೆ ಮಾಡೋದು.ಸಾಯಂಕಾಲ ಎದ್ದು ಸೀರಿಯಲ್ಲು ನೋಡಕ್ಕೆ ಕೂರೋದು. ಅಷ್ಟೇ !"

ನಾನು "exercise ? walking ? diet ?" ಅಂದೆ.

ಉತ್ತರ:"ಅವೆಲ್ಲಾ ಮಾಡಕ್ಕೆ ಆಗಲ್ಲಮ್ಮಾ...obesity. ಮೈಭಾರ. ಏಳಕ್ಕೇ ಕಷ್ಟ. ತೊಡೆಗೆ injection ಚುಚ್ಚಿ ಚುಚ್ಚಿ ನಡೆಯಲು ಕಷ್ಟ ಆಗತ್ತೆ. ಇರೋ ಅಷ್ಟು ದಿನ ಬಿಂದಾಸಾಗಿ ಮಜಾ ಮಾಡ್ತಿನಿ" ಅಂದ್ರು. ನನಗೆ ಇವರು ಆಸ್ಪತ್ರೆ ಸೇರಿದ್ದು, ಮಗ ಸೊಸೆ ಮಗಳು ಅಳಿಯ ಇವರನ್ನು ಉಳಿಸಿಕೊಳ್ಳಲು ಹೆಣಗಾಡಿದ್ದು, ಎಲ್ಲ ಕಣ್ಮುಂದೆ ಹಾಗೇ ಒಮ್ಮೆ ಬಂದು ಹೋಯ್ತು.

ನಾನು ಹಾಗೆ ಒಂದು ಸ್ಮೈಲ್ ಕೊಟ್ಟು ಮುಂದೆ ನಡೆದೆ.ಇದು ನಾರೀಮಣಿಗಳೆಲ್ಲ ಸೇರುವ ಕ್ಲಬ್ಬಾದರೂ ಅಲ್ಲಲ್ಲೇ ಸಣ್ಣ ಸಣ್ಣ ಗುಂಪುಗಳು ಇದ್ದವು. ಒಂದು ಗುಂಪಿಗೂ ಇನ್ನೊಂದು ಗುಂಪಿಗೂ ಆಗುತ್ತಿರಲಿಲ್ಲ ಎಂದು ಹೇಳಬೇಕಿಲ್ಲ ಅಲ್ಲವೇ ? ;-) ನಾನು ಒಂದು ಮೂಲೆಯಲ್ಲಿ ಬೇಕಂತಲೇ ನಮ್ಮಮ್ಮನಿಂದ ಬೇರ್ಪಟ್ಟು ಕುಳಿತು ತಿಂಡಿ ತಿನ್ನುತ್ತಿದ್ದೆ. ಆಗ ಕೇಳಿದ ಮಾತುಗಳಿವು:

"ನೋಡ್ರಿ...ಹೊಸಾ ಸೀರೆ. ಕಲಾಮಂದಿರದಲ್ಲಿ ತಗೊಳ್ಳಲೇಬೇಕು ಅಂತ ಊಟ ತಿಂಡಿ ಬಿಟ್ಟು ಗಲಾಟೆ ಮಾಡಿದೆ. ಅದಕ್ಕೆ ನಮ್ ಯಜಮಾನ್ರು ಕರ್ಕೊಂಡು ಹೋಗಿ ಕೊಡಿಸಿದ್ರು. just 10 thousand rupees you know !"[ಎಲ್ಲರೂ ಮನಸಸಲ್ಲೇ sketch ಹಾಕುತ್ತಿದ್ದರು ಅಂತ ಹೇಳಬೇಕಿಲ್ಲ ಅಲ್ಲವೇ ? ನಮ್ಮ ತಂದೆಯ instigate ಪದ ಪ್ರಯೋಗದ ಒಳಾರ್ಥ ನನಗೆ ಆಗ ಅರ್ಥ ಆಯ್ತು.]

"ಅಯ್ಯೋ ಯಾಕ್ ಕೇಳ್ತಿರ ನಮ್ಮ ಯಜಮಾನರ ಕಥೆ. ಸೀರೆ ಕೊಡಿಸುವ ಮಾತು ಪಕ್ಕಕ್ಕಿರಲಿ. ನನ್ನನ್ನು ನೋಡಕ್ಕೆ ಅವರಿಗೆ ಪುರ್ಸೊತ್ತಿಲ್ಲ ಅಂತಿನಿ! ಬರ್ತಾರೆ, ಊಟ ಮಾಡ್ತಾರೆ, ಆ ದರಿದ್ರ NDTV news ಹಾಕೊಂಡು ಕೂತಿರ್ತಾರೆ. ಆಮೇಲೆ ಹೋಗಿ ಗೊರ್ಕೆ ಹೊಡಿತಾರೆ. ಬೆಳಿಗ್ಗೆ ಎದ್ದು ಆಫೀಸ್ ಗೆ ಹೊರಡ್ತಾರೆ. ಇವರ ಆ NDTV ಹುಚ್ಚಿಂದ ನನಗೆ ಸೀರಿಯಲ್ಲುಗಳ repeat telecast-ಏ ಗತಿಯಾಗಿ ಹೋಗಿದೆ ಹೊರತು...ರಾತ್ರಿ ಸೀರಿಯಲ್ಲು ನೋಡುತ್ತಾ ಅಳುವ ಭಾಗ್ಯವೇ ಇಲ್ಲದಾಗಿ ಹೋಗಿದೆ !" [ಇದಾದ ನಂತರ ಸಾಮೂಹಿಕ ಲೊಚಗುಟ್ಟುವಿಕೆ]

"My husband is a hopeless fellow I tell you. fit for nothing. absolutely useless ರಿ. ಎಲ್ಲ ಕೆಲಸ ನನ್ ಕೈಲೇ ಮಾಡಿಸ್ತಾರೆ. ನನಗೆ ಸಮಾನ ಹಕ್ಕೇ ಇಲ್ವಾ ಮನೆಲಿ ? ಹೊರಗೆ ಅವರು ದುಡಿತಾರೆ ಅಂತ ಮನೇಲಿರೋ ಎಲ್ಲಾ ಕೆಲ್ಸ ನೂ ನಾನೇ ಮಾಡ್ಬೆಕಾ ? ನಾನು ಮನೆಲೂ ದುಡಿದು ಹೊರಗೂ ಹೋಗಿ ತರ್ಕಾರಿ ತರಲ್ವಾ ? ಹಾಗೇ ಇವ್ರಿಗೂ ಮನೆಗೆ ಬಂದು ಪೊರಕೆ ಹಿಡಿದು ಸಂಜೆ ಕಸ ಗುಡಿಸಕ್ಕೆ ಏನ್ರಿ ಧಾಡಿ ? ಏನೋ ಪ್ರತಿ ತಿಂಗಳು ಒಂದು ಐದು ಹತ್ತು ಗ್ರಾಂ ಚಿನ್ನ ನ ಕೊಡಿಸ್ತಾರೆ ಬಿಟ್ಟರೆ ಕೆಲಸ ಏನೂ ಕೇಳ್ಬೇಡಿ." [ ಸಾಮೂಹಿಕ ಪಾಪಗುಟ್ಟುವಿಕೆ]

"ನಮ್ಮತ್ತೆ ಸೀರಿಯಲ್ ನೋಡಿ ನೋಡಿ ಪೂರ್ತಿ ಹಾಳಾಗಿ ಹೋಗಿದಾರೆ. ಆ ಮುತ್ತಿನ ತೋರಣ ಸೀರಿಯಲ್ ನಲ್ಲಿ ಅತ್ತೆ ಸೊಸೆಗೆ ಕಾಟ ಕೊಡ್ತಿರ್ಲಿಲ್ವಾ ? ಹಾಗೇ ಈಗ mild ಆಗಿ ತೊಂದ್ರೆ ಕೊಡಕ್ಕೆ ಶುರು ಮಾಡಿದಾರೆ. ಅದಕ್ಕೆ ನಾನು ಮನೆಯೊಂದು ಮೂರು ಬಾಗಿಲು ಸೀರಿಯಲ್ ನ ಸೊಸೆ ಥರ ತಿರುಗಿ ಬೀಳಣಾ ಅಂತ ಇದ್ದೀನಿ." [ಸಾಮೂಹಿಕ ಶಬ್ಬಾಸ್ ಗಿರಿಗಳು]

" one gram gold ವಾಸಿ ಅನ್ಸತ್ತೆ ಕಂಡ್ರಿ ನಿಜ್ವಾದ್ ಚಿನ್ನಕ್ಕಿಂತ. ನಾನು ನಿಜವಾದ ತಾಳಿನ ಲಾಕರ್ ನಲ್ಲಿ ಇಟ್ಟು one gram ತಾಳಿ ತಗೋತಿನಿ ನಮ್ಮ wedding anniversary ಗೆ." [ ಸಾಮೂಹಿಕ ವಾಹ್ ವಾಹ್ ಗಳು]

" ಸಾಸಿವೆ ಡಬ್ಬದಲ್ಲಿ ಉಳಿಸಿಟ್ಟ ಹಣವನ್ನೆಲ್ಲಾ ನಾನು ಚೀಟಿ ವ್ಯವಹಾರಕ್ಕೆ ತೊಡಗಿಸಿದ್ದೀನಿ. ವಿನಿವಿಂಕ್ ಥರಾ ಅಲ್ಲ ರಿ ಇದು. ನನ್ನನ್ನ ನಂಬಿ ನೀವೂ ದುಡ್ಡ್ ಹಾಕಿ ಹೇಳ್ತಿನಿ. ಒಳ್ಳೆ ರಿಟರ್ನ್ಸ್ ಇರತ್ತೆ." [ಸಾಮೂಹಿಕ ಏರಿದ ಹುಬ್ಬುಗಳು]

"ಗೋಲ್ಡ್ ಫೇಷಿಯಲ್ ನ ಪ್ರತಿ ತಿಂಗಳು ಮಾಡಿಸ್ಕೊಂಡ್ರೆ ನೆ young ಆಗಿ ಇರಕ್ಕೆ ಸಾಧ್ಯ ನಾವು ತಿಳ್ಕೊಳಿ. we are just in mid 50's. ಒಂದೇ ಮೊಮ್ಮಗು ಇರೋದು ಇನ್ನು ಅಷ್ಟೆ. ನನ್ನ ಮೊಮ್ಮಗು ನನ್ನನ್ನ ಅಜ್ಜಿ ಅಂತ ಕರಿಯೋದು ನನಗೆ ಇಷ್ಟ ಇಲ್ಲ. ಈಗ ಅದಕ್ಕೆ ಇನ್ನೊಂದು ಪದ ಹುಡುಕಬೇಕು.ಅದಿರ್ಲಿ,ನಮ್ಮ ಔಷಧಿ ಗೆ ಒಂದೆಡು ಸಾವಿರ. ಮಣಿಪಾಲ್ ಆಸ್ಪತ್ರೆಯಲ್ಲಿ ಚೆಕಪ್ ಐದು ಸಾವಿರ, ನಮ್ಮ ಮೇಕಪ್ ಪೆಡಿಕ್ಯೂರ್ ಇತ್ಯಾದಿಗಳಿಗೆ ಒಂದೈದು ಸಾವಿರ, ಸಣ್ಣ ಪುಟ್ಟ ಖರ್ಚು ಎಲ್ಲಾ ಸೇರಿ ನಮಗೇ ತಿಂಗಳಿಗೆ ಹದಿನೈದು ಸಾವಿರ ಬೇಕಾಗತ್ತೆ. ನಾನು ದುಡಿದ ದುಡ್ಡನ್ನೆಲ್ಲಾ fixed deposit ನಲ್ಲಿ ಇಟ್ಟಿದಿನಲ್ಲ, ಬಡ್ಡಿಯನ್ನ ಪೂರ್ತಿ ನನ್ನ ಖರ್ಚಿಗೇ ಬಳಸಿಕೊಳ್ಳುತ್ತೇನೆ. ಯಾರ ಮುಂದೆಯೂ ಕೈ ಚಾಚಲ್ಲ ನಾನು."[ಸಾಮೂಹಿಕವಾಗಿ ಎಲ್ಲರಿಂದ "you are great !" ವಾಕ್ಯ ಪಾರಾಯಣ]

ನಮ್ಮಮ್ಮ ಊಟ ಮುಗಿಸಿ, ಎಲ್ಲಾರಿಗೂ ಬೈ ಬೈ ಗಳನ್ನು ಹೇಳಿಬಂದ ಮೇಲೆ ನಾವು ಹೊರಟೆವು. ಆ 10 thousand rupee ಸೀರೆ ಆಂಟಿ ನಮ್ಮನ್ನು ತಡೆದು ನಿಲ್ಲಿಸಿ, ತಾವು ನಮ್ಮ ಜೊತೆ ಬರುವುದಾಗಿ ಹೇಳಿ ಒಳ ಹೋದರು. ಹೋಗುವವರು ಕುಂಕುಮ ತಗೊಳ್ಳಬೇಕೆಂದು ನಮ್ಮನ್ನೂ ಒಳ ಕರೆದರು. ಆಲ್ಲಿ "my husband is a hopeless fellow" ಎಂಬ ಘೋಷವಾಕ್ಯವನ್ನು ನೀಡಿದ ಆಂಟಿ ತಾಳಿಗೆ ಅರಿಶಿನ ಕುಂಕುಮ ಹಚ್ಚುತ್ತಾ ತಮ್ಮ ಗಂಡನನ್ನು ಹಳಿಯುತ್ತಿರುವುದನ್ನು ಕಂಡು ನನಗೆ ಮೂರ್ಛೆ ಹೋಗುವಂತಾಯ್ತು. ಸೀರೆ ಆಂಟಿ ಒಂದೈದು ನಿಮಿಷ ಬಿಟ್ಟು ಬಂದರು. ದಾರಿಯುದ್ದಕ್ಕೂ ಅವರ ಬಾಯಿಂದ ಉದುರಿದ ಆಣಿಮುತ್ತುಗಳು:

" ನೀವು ಕ್ಲಬ್ ಗೆ ಬರದಿದ್ದರೆ ನಿಮ್ಮ ಕ್ಲಾಸ್ ಗೆ ಅವಮಾನ. ಅಲ್ಲಾ ರಿ..ಕ್ಲಬ್ಬಿಗೆ ಬರೋದ್ ಬೇಡ ಹಾಳಾಗೋಗ್ಲಿ..ತಿಂಗಳಿಗೊಂದು kittie party ಮಾಡಕ್ಕೆ ಏನ್ರಿ ನಿಮಗೆ ? ನಿಮ್ಮ ಹಸ್ಬೆಂಡ್ ಒಂದೈದು ಸಾವಿರ ಕೊಡಲ್ಲಾ ಅಂತಾರಾ ? ಅಥ್ವಾ ನಿಮ್ಮನೇಲಿ ಅಕ್ಕಿಗೆ ದೊಡ್ಡ ಡಬ್ಬ ಇಟ್ಟಿಲ್ವಾ ? ಅಕ್ಕಿ ಜತೆ ದುಡ್ಡೂ ಇಡಕ್ಕೆ ! ನೋಡಿ, ಕಿಟ್ಟೀ ಪಾರ್ಟಿಗಳೆಲ್ಲಾ ನಮ್ಮ status maintain ಮಾಡ್ಕೊಳ್ಳೋಕೆ ತುಂಬಾ ಮುಖ್ಯ. it is so important in terms of information exchange and especially gossip. ಹೌಸಿ, ಇಸ್ಪೀಟುಗಳನ್ನ ಆಡದೇ ಇರೋಕೆ ಹೇಗೆ ಮನಸ್ಸು ಬರತ್ತೆ ರಿ ನಿಮಗೆ ? ಒಂದೆರಡ್ ಮೂರು ಸ್ವೀಟು, ರುಮಾಲಿ ರೋಟಿ, ಮೊಸರನ್ನ ನ ಒಂದು ಐವತ್ತು ಜನಕ್ಕೆ ಮಾಡಿ ಹಾಕ್ಸಕ್ಕೆ ಆಗಲ್ವೆನ್ರಿ ನಿಮಗೆ ತಿಂಗಳಿಗೆ ಒಂದು ಸರ್ತಿ ? ಹಾ? "

ಹಾಗೇ ಮಾತಾಡುತ್ತಾ ತರಕಾರಿ ಅಂಗಡಿಲ್ಲಿ ತರಕಾರಿ ತರಬೇಕೆಂದು ನಿಂತ 10 thousand rupee saree aunty, ಹತ್ತು ರುಪಾಯಿಗೆ ಐದು ನಿಂಬೆಹಣ್ಣಿನ ಬದಲು ಎಂಟು ನಿಂಬೆ ಹಣ್ಣು ಕೊಡು ಎಂದು ಅವನ ಜೊತೆ ಕಚ್ಚಾಡತೊಡಗಿದರು. ಆರು ನಿಂಬೆಹಣ್ಣು ಕೊಡಲು ಅವನು ಒಪ್ಪಿದ. ಇವರಿಗೆ ಬೇಕಿದ್ದಿದ್ದು ಆರೇ. ಆದರೂ ಎಂಟು ಕೊಬೇಕೆಂದು ಅವನನ್ನು ಸತಾಯಿಸುತ್ತಿದ್ದರು. ಬಾರ್ ಗೈನ್ ಮಾಡಬೇಕು ನಿಜ. ನಾನೂ ಮಾಡುತ್ತೇನೆ. ಅವರೂ ಒಂದೆರಡು ಮೂರು ರುಪಾಯಿ ಕಡಿಮೆ ಹಾಕಿಕೊಡುತ್ತಾರೆ. ಬೇಕಂತಲೇ ಜಾಸ್ತಿ ಹೇಳಿ ಆಮೇಲೆ ಕಡೀಮೆ ಮಾಡಿ ಅವರ ಲಾಭಕ್ಕೆ ಧಕ್ಕೆ ಬರದ ಹಾಗೆ ನೋಡಿಕೊಳ್ಳುವುದು ವ್ಯಾಪಾರಸ್ಥರ ಲಕ್ಷಣ. ತೀರಾ ಇವರು ಅವನ ಬುಡಕ್ಕೆ ಕೊಡಲಿ ಇಟ್ಟರೆ ಹೇಗೆ ?

ನನಗೆ ತಲೆಕೆಟ್ಟು ದಿಕ್ಕಾಪಾಲಾಗಿ ಹೋಗಿತ್ತು. ಕಿಟ್ಟಿ ಪಾರ್ಟಿ ಸಂಸ್ಕೃತಿ ಅದು ಯಾವಾಗ ಕಾಲಿಟ್ಟಿತೋ ಪಾ...ಮನೆಗಳೆಲ್ಲಾ ಚಿತ್ರಾನ್ನ ಅಗೋದವು.status ಎಂಬ ಪದ ದಿನಾ ಮನೆಜಗಳಕ್ಕೆ ನಾಂದಿ ಹಾಡಿತು. ನೆಮ್ಮದಿಯಿಂದಿದ್ದವರು ಐಷಾರಾಮ ಎಂಬ ಭೃಂಗದ ಬೆನ್ನೇರಿ ಹೊರಟರು. ನಮ್ಮ ಪೂರ್ವೀಕರು ತಿಂಗಳಿಗೆ ಒಂದು ದೊಡ್ಡ ಹಬ್ಬವನ್ನು ಆಚರಣೆಗೆ ತಂದು ಬಂಧು ಬಾಂಧವರು, ಮಿತ್ರರು ಆತ್ಮೀಯರನ್ನು ಕರೆದು ಔತಣ ನೀಡುವ ಪದ್ಧತಿಯನ್ನ ಬಹಳ ಅಚ್ಚುಕಟ್ಟಾಗಿ, ನಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ, ಜೇಬಿಗೂ ಕತ್ತರಿ ಬೀಳದಂತೆ ಆಚರಿಸುವ ಒಳ್ಳೆ ವ್ಯವಸ್ಥೆ ಮಾಡಿದ್ದರು. ಈಗ ಜನ ಹಬ್ಬದಾಚರಣೆಯನ್ನು waste of money ಎಂದು ಜರಿದು kittie party ಗಳನ್ನು ಉತ್ಸವದ ರೀತಿಯಲ್ಲಿ ಆಚರಣೆ ಮಾಡುವುದು ವಿಪರ್ಯಾಸ. ಸೌಂದರ್ಯ ಲಹರಿ, ಶಿವಾನಂದ ಲಹರಿ,ಹರಿಭಕ್ತಿಸಾರ, ಲಕ್ಷ್ಮೀ ಶೋಭಾನೆ ಇವುಗಳನ್ನ ಹೇಳೋದು ಬಿಟ್ಟು ಹೌಸಿ ಇಸ್ಪೀಟುಗಳಿಗೆ ಸಮಯ ನೀಡುತ್ತಿರುವುದು ದುರಂತ. ಈಗೀಗ ಆ ಸಂಘಗಳ ಸಂಖ್ಯೆಯೂ ಜಾಸ್ತಿಯಾದರೂ, ಸ್ತ್ರೀಕುಲದ ಜನ್ಮಸಿದ್ಧ ಹಕ್ಕಾದ gossip ಅಲ್ಲಿಯೂ ತಾಂಡವವಾಡುತ್ತಿರುವುದು ಶೋಚನೀಯ. gossip ಮಾಡಲು ನನ್ನ ಅಸಮ್ಮತಿಯೇನು ಇಲ್ಲ, ಅದು ಉಪ್ಪಿನಕಾಯಿಯಾಗುವ ಬದಲು ಊಟವಾಗಬಾರದಲ್ಲವೇ ?

ನಾರೀಮಣಿಯರ ಟೀವಿ ಚಾಳಿಯಿಂದ ಮನೆಯಲ್ಲಿ ರಿಮೋಟ್ ವಾರ್ ಗಳು ಶುರುವಾಗಿವೆ. ವಯಸ್ಸಾದವರೆಲ್ಲಾ ಚಿಕ್ಕವರಾಗಿ ಕಾಣುವ ಹಂಬಲ ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ ಎಲ್ಲಾ ಕಾಸ್ಮೆಟಿಕ್ಕುಗಳ ಬೆಲೆ ಗಗನಮುಖಿಯಾಗಿವೆ. ಹರ್ಬಲ್ ಪ್ರಾಡಕ್ಟುಗಳ ಹೆಸರಿನಲ್ಲಿ ತಿಂಗಳಿಗೊಂದು ಹೊಸ ಸೌಂದರ್ಯವರ್ಧಕ ಸಾಧನಗಳ ಉಪಯೋಗದಿಂದ ಆರೋಗ್ಯ ಸಮತೋಲನ ಕಳೆದುಕೊಂಡಿದೆ. ನಾವು ಯುವತಿಯರೇ "back to ಕಡಲೆಹಿಟ್ಟು" ಅಭಿಯಾನವನ್ನು ಆರಂಭಿಸಿರುವಾಗ ನಮ್ಮ ಅಜ್ಜಿಯ ಮತ್ತು ಅಮ್ಮನ ವಯಸ್ಸಿನವರು lakme revlon ಮೊರೆ ಹೋಗಿರುವುದು ಸಖೇದಾಶ್ಚರ್ಯಕರವಾಗಿದೆ.

ನಾನಂತೂ ಪ್ರತಿಜ್ಞೆ ಮಾಡಿದ್ದೇನೆ. ನಾನು ಕ್ಲಬ್ಬಿಗೂ ಸೇರೊಲ್ಲ, ನಮ್ಮಮ್ಮನ್ನ ಕೂಡಾ ಕ್ಲಬ್ಬಿಗೆ ಕಳಿಸೊಲ್ಲ ಅಂತ !

ಸಭೆ ಸೇರುವುದು ಉತ್ತಮ. ಅದೂ ಸ್ತ್ರೀಯರು ಸಭೆ ಸೇರುವುದು ಅತ್ಯುತ್ತಮ. ಅದು ಕರಕುಶಲ ಕಲಾ ವಿನಿಮಯಕ್ಕೋ, ಹಾಡಿಗೋ, ಸಮಾಜದ ಉದ್ಧಾರಕ್ಕೋ ಆಗದೇ ಬರೀ ಗಾಸಿಪ್ಪಿಗೇ ಒತ್ತು ಕೊಡುತ್ತಿದೆ.ವಿಚಾರ ಸಂಕಿರಣಗಳ ಹೆಸರಿನಲ್ಲಿ ಜಗಳ ನಡೆಯುತ್ತದೆ ಹೊರತು ವಿಚಾರ ವಿನಿಮಯ ನಡೆಯೊಲ್ಲ. ಅದೇ fun fair ಅದೇ ಹೌಸಿ, ಅದೇ ಲಕ್ಕಿ ಡ್ರಾ.ಹೊಸತನ್ನು ನಾನು ಯಾವ ಕ್ಲಬ್ಬಿನಲ್ಲೂ ಕಾಣಲಿಲ್ಲ. ಇಷ್ಟೆಲ್ಲಾ ಓಡಾಡಿ ದುಡ್ಡನ್ನು ಅನವಶ್ಯವಾಗಿ ಪೋಲು ಮಾಡೋದು ಬಿಟ್ಟು, ಅದನ್ನು ಕೂಡಿಟ್ಟೋ, ದಾನಮಾಡೋ, ದೇವಸ್ಥಾನಕ್ಕೆ ನೀಡಿ ಸೇವೆ ಮಾಡಿಸಿಯೋ, ದೇಣಿಗೆ ನೀಡಿಯೋ ಇಸ್ಪೀಟಿನ ಆಟಕ್ಕಿಂತ ಹೆಚ್ಚಿನ ನೆಮ್ಮದಿ ಮತ್ತು ಸಂತೋಷ ಪಡೆಯಬಹುದಲ್ಲವೇ ? ನಾವೇಕೆ ಹೀಗೆ ?