ಇದರ ಬಗ್ಗೆ ಬರೆಯಬೇಕೆಂದು ನನಗೆ ಬಹಳ ದಿನಗಳಿಂದ ಅನಿಸಿತ್ತು. ಸಮಯದ ಅಭಾವದಿಂದ ಬರೆಯಲು ಆಗಿರಲಿಲ್ಲ. ಇನ್ನೊಂದು ವಾರದಲ್ಲಿ ನನಗೆ ಒಂದು ಬಹುಮುಖ್ಯ ಪರೀಕ್ಷೆಯಿದ್ದರೂ ಇವತ್ತು ಇದರ ಬಗ್ಗೆ ಬರೆಯಬೇಕೆಂದು ನಿಶ್ಚಯಿಸಿಯೇ ಕುಳಿತಿದ್ದೇನೆ.
ನನಗೆ ವಿಕಲಚೇತನರು ಎಂಬ ಶಬ್ದದ ಬಗ್ಗೆ ತೀವ್ರ ಅಸಮಾಧಾನವಿದೆ. ಚೈತನ್ಯಕ್ಕೆ ವಿಕಲತೆ ಕಾಡುವುದುಂಟೇ? ಈ ಪದಪ್ರಯೋಗವೇ ನಮ್ಮ ಚೈತನ್ಯಕ್ಕೆ ವಿಕಲತೆಯುಂಟಾಗಿಸುತ್ತದೆ ಎಂದು ನಾನು ಭಾವಿಸುತ್ತೇನೆ.
ಬಸ್ಸಿನಲ್ಲಿ ಹೋಗುವಾಗ " ಅಂಗ ವಿಕಲರಿಗೆ" ಎಂಬ ತಲೆಬರಹದಲ್ಲಿ ಗಟ್ಟಿಮುಟ್ಟಾದವರು ಕುಳಿತಿರುವುದು ಕಂಡಾಗ, ಲೋಫ್ಲೋರ್ ಬಸ್ಸಿನ ಹೈ ಬಜೆಟ್ ದರಗಳನ್ನು ಭರಿಸಲಾಗದೇ ಮಾಮೂಲಿ ಬಸ್ಸು ಹತ್ತಲು ಪರದಾಡುವ ಅಂಗವಿಕಲರನ್ನ, ಅವರು ಬಸ್ಸನ್ನು ಹತ್ತಲು ಸಹಕರಿಸುವ ಬದಲು ಸುಮ್ಮನೆ ತೆಪ್ಪಗಿದ್ದುಬಿಡುವ, ಕೆಲವರು ಸಹಕರಿಸಿದರೂ " ಅಯ್ಯೋ ಪಾಪ"ದ ನೋಟ ಬೀರಿ ಅವರನ್ನು ಕಣ್ಣಲ್ಲಿಯೇ ಇರಿಯುವ ಜನರ ವರ್ತನೆಗಳನ್ನು ನೋಡಿದಾಗಲೆಲ್ಲಾ ನನಗೆ ಮನಸ್ಸಿಗೆ ಬೇಜಾರಿಗಿದ್ದಿದೆ. ಅವರಿಗೆ ಅನುಕಂಪದ ಅವಶ್ಯಕತೆ ಇಲ್ಲ, ಉತ್ತೇಜನದ ಅವಶ್ಯಕತೆ ಇದೆ ಎಂದು ಇವರಿಗೇಕೆ ಅನ್ನಿಸುವುದಿಲ್ಲ ಎಂದು ನನಗೆ ಅನ್ನಿಸುತ್ತದೆ.
ಬ್ಲಾಗ್ ಪ್ರಪಂಚಕ್ಕೆ ನಾನು ಕಾಲಿಟ್ಟು ಇನ್ನು ಒಂದು ವರ್ಷ ಸಂದಿದೆ ಅಷ್ಟೆ. ಈ ಪ್ರಪಂಚ ನನಗೆ ಅಪಾರ ಸಂಖ್ಯೆಯ ಹೊಸ ಸ್ನೇಹಿತರನ್ನು ಪರಿಚಯಿಸಿದೆ. ಕೆಲವರಂತೂ ನನ್ನ ಪರಮಾಪ್ತ ಬಳಗಕ್ಕೆ ಬಹಳ ಬೇಗ ಸೇರಿಕೊಂಡುಬಿಟ್ಟಿದ್ದಾರೆ. ಅಂತಹವರಲ್ಲಿ ಒಬ್ಬರು ತೇಜಸ್ವಿನಿ. ಅವರು ಅನಾರೋಗ್ಯವಾಗಿದ್ದ ಪರಿಸ್ಥಿಯಲ್ಲಿ ಪಟ್ಟ ಅವಸ್ಥೆ ನಮ್ಮ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ನನ್ನ ಭಾವನೆಯನ್ನು ಅರ್ಥೈಸಿಕೊಂಡು ನನಗೆ ಧೈರ್ಯ ಹೇಳಿದ ಅವರ ಇಚ್ಛಾಶಕ್ತಿಯನ್ನು ಹೊಗಳಲು ನನ್ನ ಬಳಿ ಶಬ್ದಗಳಿಲ್ಲ.
ಕೆಲವರು ಹೀಗೆ ಹೇಳುತ್ತಾರೆ, " ಅನುಭವಿಸಿದವರಿಗೆ ಮಾತ್ರ ಕಷ್ಟದ ಅರಿವಿರುತ್ತದೆ " ಎಂದು. ನಿಜ, ಅಂಗವಿಕಲಳಾಗಿಯೋ ಬುದ್ಧಿಮಾಂದ್ಯಳಾಗಿಯೋ ಹುಟ್ಟಬೇಕಿದ್ದ ನಾನು ಕೂದಲೆಳೆಯಲ್ಲಿ ಪಾರಾದ ಅನುಭವ, ಅಪಘಾತದಲ್ಲಿ ಅನ್ಯಾಯವಾಗಿ ಒಂದು ಕಣ್ಣನ್ನು ಕಳೆದುಕೊಂಡ ನಮ್ಮ ತಂದೆ ಅನುಭವಿಸಿದ, ಅನುಭವಿಸುತ್ತಿರುವ ಯಾತನೆ ಮತ್ತು ಸಮಾಜ ಅವರಿಗೆ ಅಂದ ಮತ್ತು ಅನ್ನುತ್ತಿರುವ ಮಾತುಗಳು ನಮಗೆ ಜನ್ಮಜನ್ಮಾಂತರಕ್ಕೆ ಶೇಖರಿಸಿಟ್ಟುಕೊಳ್ಳುವಷ್ಟು ಅನುಭವಗಳನ್ನು ನೀಡಿದೆ. ನನಗೆ ಮತ್ತು ನನ್ನ ತಂದೆಗೆ ಆಗಿರುವ ಅನ್ಯಾಯಕ್ಕೆ ನಾವು ಮುಸುಕು ಹಾಕಿಕೊಂಡು ಕೂರಬೇಕಿತ್ತು. ಸಮಾಜದ ಪ್ರಕಾರ ನಮ್ಮ ತಂದೆಯಂತೂ ಹೊರಗೆ ಬರಲೇಬಾರದು ಅವರಿರುವ ಸ್ಥಿತಿಗೆ . ಆದರೆ ಇಂದು ನಾನು ನಿಮ್ಮ ಮುಂದೆ ನನ್ನ ಬರಹಗಳನ್ನು ಪ್ರಸ್ತುತಪಡಿಸುತ್ತಾ ಕುಳಿತಿದ್ದೇನೆ, ಮತ್ತು ನನ್ನ ತಂದೆ ನಮ್ಮೆಲ್ಲರನ್ನು ಸಾಕಿ ಸಲಹಿ ಬೆಳೆಸಿದ್ದಾರೆ, ಮತ್ತು ಅವರು ಹುಟ್ಟುಹಾಕಿದ ಸಂಸ್ಥೆಯ ಊರುಗೋಲಾಗಿ, ಅದು ಚದುರಿ ಹೋಗದಂತೆ ಕಾಪಾಡಿಕೊಂಡು ಬಂದಿದ್ದಾರೆ. ನನಗೆ ಅತ್ಯಂತ ಬೇಜಾರು ತರಿಸುವ ವಿಷಯವೇನೆಂದರೆ, ನಾವು ಹೀಗಾಗಿದ್ದು ಹಣೆಬರಹ, ಆದರೆ ನಾವು ಬೆಳೆದು ಬಂದದ್ದು "ಪವಾಡ". ಇದು ಸಮಾಜ ಅಂಗವಿಕಲರ ಜೀವನಕ್ಕೆ ನೀಡುವ ಒಂದೆಳೆಯ ವಿಶ್ಲೇಷಣೆ. ಪವಾಡ ಯಾರೋ ಮಾಡಿದ್ದಲ್ಲ, ಅದು ನಾವು ಪಟ್ಟ ಪರಿಶ್ರಮ . ಈ ಸಮಾಜಕ್ಕೆ sympathize ಮಾಡಲು ಬರುತ್ತದೆಯೇ ಹೊರತು empathize ಮಾಡಲು ಅದೇಕೋ ಬರುವುದೇ ಇಲ್ಲ. ಅವರ ಅನುಕಂಪದ ನೋಟ ನಮಗೆ ಅಗ್ನಿಜ್ವಾಲೆಯ ಸಮಾನ. ಅವರ ಒಂದೊಂದು ಪ್ರಶ್ನೆ ನಮಗೆ ವಿಷದ ಮುಳ್ಳಿನ ಇರಿತ. ನಮ್ಮ ಸಾಧನೆಗಳೆಲ್ಲ ನಮ್ಮ ದೌರ್ಬಲ್ಯದ ಮುಂದೆ ಗೌಣ ! ಎಲ್ಲರು ಮೊದಲು ನಮ್ಮ ವೈಕಲ್ಯ ಮತ್ತು ದೌರ್ಬಲ್ಯದ ಕಡೆಗೇ ಮೊದಲು ಗಮನ ಹರಿಸುತ್ತಾರೆ ಹೊರತು ನಮ್ಮ ಸಾಧನೆ ಮತ್ತು ಸಕಾರಾತ್ಮಕತೆಯ ಕಡೆಗಲ್ಲ. ಸಮಾಜದ ದೃಷ್ಟಿಯೇ ನಕಾರಾತ್ಮಕವೇ ?
ಎಲ್ಲಿಯವರೆಗೂ ಒಣ ಅನುಕಂಪ ಇಲ್ಲದ ನಿಜ ಸಹಾನುಭೂತಿ, ನಕಾರತ್ಮಕತೆಯ ಪೊರೆಯಿಲ್ಲದ ದೃಷ್ಟಿ ಮತ್ತು ಒಳ್ಳೆಯದನ್ನೇ ನೋಡುವ, ಮಾಡುವ ಪ್ರಜ್ಞೆ ಸಮಾಜದಲ್ಲಿ ಜಾಗೃತವಾಗುವುದಿಲ್ಲವೋ, ಅಲ್ಲಿಯವರೆಗೂ ನಮ್ಮೆಲ್ಲರ ಪಾಡು ಇಷ್ಟೆ ಅನ್ನಿಸುತ್ತದೆ. ಅಂಗ ವಿಕಲವಾಗಿದ್ದರೂ ಅದಮ್ಯ ಚೇತನದಿಂದ ಮುಂಬರಲಿಚ್ಛಿಸುವವರನ್ನು " ವಿಕಲಚೇತನರು " ಎಂದು ಪ್ರತ್ಯೇಕಿಸಿ ಚೇತನವನ್ನೇ ವಿಕಲಗೊಳಿಸುತ್ತಿದ್ದೇವಲ್ಲಾ...ನಾವೇಕೆ ಹೀಗೆ ?