ಮೊನ್ನೆ ನಾವೆಲ್ಲೋ ಹೋಗುತ್ತಿದ್ದಾಗ ನಮ್ಮ ತಂದೆ ಯಾವುದೋ ಒಂದು ದೇವಸ್ಥಾನವನ್ನು ತೋರಿಸುತ್ತಾ ಅದರ ಮುಂದಿರುವ ಕೆಲವು ಹಾಳಾಗಿ ಹೋದ ಪಟಗಳು, ಭಿನ್ನವಾದ ವಿಗ್ರಹಗಳನ್ನು ತೋರಿಸುತ್ತಾ...ಇವೆಲ್ಲ ಯಾಕಿಟ್ಟಿರಬಹುದೆಂದು ನಮ್ಮನ್ನು ಕೇಳಿದರು. ನಾವು, ಅವು ಒಡೆದು ಹೋಗಿವೆಯಲ್ಲ, ಮನೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲವಾದ್ದರಿಂದ, ದೇವಸ್ಥಾನದಲ್ಲಿಟ್ಟರೆ ದೋಷವಿರುವುದಿಲ್ಲವಾದ್ದರಿಂದ ಹಾಗಿಟ್ಟಿದ್ದಾರೆಂದು ಹೇಳಿದೆವು. ಸರಿ ನಮ್ಮ ತಂದೆ ಆ ದೇವಸ್ಥಾನದ ಮುಂದೆಯೇ ಗಾಡಿ ನಿಲ್ಲಿಸಿ, ಎಲ್ಲಾ ಪಟಗಳನ್ನೊಮ್ಮೆ ಸರಿಯಾಗಿ ನೋಡಿ ಬನ್ನಿ ಎನ್ನಲು, ನಾವು ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಪ್ರಾರಂಭಿಸಿದೆವು. ಆಗ, ಕೆಲವು ಪಟಗಳು ಒಂದು ಚೂರೂ ಹಾಳಾಗಿಲ್ಲವಾದರೂ, ಅದು ಅನಾಥವಾಗಿ ಅಶ್ವತ್ಥಕಟ್ಟೆಯ ಮುಂದೆ, ದೇವಸ್ಥಾನದ ಪ್ರಾಕಾರದಲ್ಲಿ ಇರುವುದು ಕಂಡುಬಂದಿತು. ನಾವು ಈ ತರಹದ ಪಟಗಳು ಏಕೆ ಅನಾಥವಾಗಿವೆ ಎಂದು ಕಾರಣ ಹುಡುಕುವುದು ಕಷ್ಟವಾಯ್ತು. ಆಗ ನಮ್ಮ ತಂದೆಯೇ ಅದಕ್ಕೆ ಕಾರಣ ನೀಡಿದರು - " ಈ ದೇವರುಗಳು ಅವರುಗಳಿಗೆ ಆಗಬಂದಿಲ್ಲ !!!!"
ನನಗೆ ಈ ಕಾರಣ ಕೇಳಿಯೇ ಆಶ್ಚರ್ಯವಾಯ್ತು. ನನ್ನ ಆಶ್ಚರ್ಯವನ್ನು ಗಮನಿಸಿದ ನಮ್ಮ ತಂದೆ ವಿಷಯವನ್ನು ವಿಸ್ತಾರವಾಗಿ ಹೇಳತೊಡಗಿದರು. " ಕೆಲವರು ತಮ್ಮ ಮನೆಯ ದೇವರುಮನೆಗಳಲ್ಲಿ ಹಾಕಿಕೊಳ್ಳಲು, ಕ್ಯಾಲೆಂಡರ್ಗಳಲ್ಲಿರುವ ದೇವರುಗಳ ಫೋಟೋಗಳನ್ನು ಪಟಗಳನ್ನಾಗಿ ಪರಿವರ್ತಿಸುತ್ತಾರೆ.ಮತ್ತೆ ಕೆಲವರು ಫೋಟೋಫ್ರೇಮ್ ಅಂಗಡಿಗಳಲ್ಲಿ ಖರೀದಿಸುತ್ತಾರೆ ಸಹ. ಕ್ಯಾಲೆಂಡರ್ ರೂಪದಲ್ಲಿ ಆಗಿಬಂದ ದೇವರುಗಳು ಪಟಗಳಾದ ತತ್ಕ್ಷಣ ಆಗಬಾರದ್ದಾಗುತ್ತವೆ.ಅದು ದೇವರುಮನೆಗೆ ಕಾಲಿಟ್ಟ ಮೇಲೆ ಇವರ ಜೀವನದಲ್ಲಿ ಏನೋ ಆಗಬಾರದ್ದಾಗಿ ಹೋದ ಹಾಗೆ ಇವರಿಗೆ ಅನ್ನಿಸಲು ಶುರುವಾಗುತ್ತದೆ. ಸಂಬಳ ಒಂದು ದಿನ ತಡವಾದರೆ ಅದಕ್ಕೆ ಈ ಪಟದ ದೇವರೇ ಕಾರಣನಾಗುತ್ತಾನೆ. ಮಕ್ಕಳು ಆಟವಾಡುತ್ತ ಹಿಂದೊಮ್ಮೆ ಸಾವಿರ ಸಲ ಬಿದ್ದರೂ ಇವರು ತಲೆಕೆಡಿಸಿಕೊಂಡಿರುವುದಿಲ್ಲ. ಆದರೆ ದೇವರ ಆಗಮನವಾದ ಮೇಲೆ ಮಗು ಬಿದ್ದರೆ ಅದಕ್ಕೆ ಈ ದೇವರೇ ಹೊಣೆ. ಇದೆಲ್ಲಾ ನೋಡಿದ ಮೇಲೆ ಇವರಿಗೆ ಈ ದೇವರು ದೇವರೇ ಅಲ್ಲವೆಂದು, ಈ ದೇವರು ನಮಗೆ "ಆಗ"ಬರುವುದಿಲ್ಲವೆಂದು ಅನ್ನಿಸಿ, ಪೂಜೆ ಮಾಡುತ್ತಿದ್ದ ದೇವರನ್ನು "ಸಾಗುಹಾಕಲು" ಪ್ರಯತ್ನಿಸುತ್ತಾರೆ. ಅವರಿಗೆ ತೋಚುವ ಸೂಕ್ತ ಸ್ಥಳವೇ ದೇವಸ್ಥಾನದ ಅಶ್ವತ್ಥಕಟ್ಟೆ ಮತ್ತು ಪ್ರಾಕಾರ. ದೇವಸ್ಥಾನದ ಆಡಳಿತ ಮಂಡಳಿಯವರನ್ನು ಹೇಳದೇ ಕೇಳದೇ,ಸುಮ್ಮನೆ ಬಂದು ಅಲ್ಲಿ ಅದನ್ನು ಇಟ್ಟು ಹೋಗಿಬಿಡುತ್ತಾರೆ."
ನಾನು ಕೇಳಿದೆ - " ಅಣ್ಣ, ಇದು ಅವರ ಭಾವನೆಗೆ ಸಂಬಂಧ ಪಟ್ಟ ಪ್ರಶ್ನೆ ಅಲ್ಲವೇ ? ದೇವರು ಅನ್ನುವುದು ಕೆಲವರಿಗೆ ಕಲ್ಪನೆ, ಕೆಲವರಿಗೆ ಭಯ, ಕೆಲವರಿಗೆ ಭಕ್ತಿ, ಕೆಲವರ ಶಕ್ತಿ. ದೇವರು ನಮಗೆ ಕಾಣಿಸನು. ಆದರೂ ಅವನಿದ್ದಾನೆಂದು ನಮ್ಮ ಮನಸ್ಸಿಗೆ ತಿಳಿಯುತ್ತದೆ. ಅವರಿಗೆ ಇದು ಸರಿಹೊಂದುವುದಿಲ್ಲವೆಂದ ಮೇಲೆ ಅದರ ಪೂಜೆ ಬಿಡುವುದರಲ್ಲಿ ತಪ್ಪೇನಿದೆ ?"
ಆಗ ನಮ್ಮ ತಂದೆ ಒಂದು ಪ್ರಶ್ನೆ ಕೇಳಿದರು - " ನಾವು ದೇವರು ಎಂಬುವುವನನ್ನು ನಂಬುವುದು ಯಾಕೆ ?"
ನಾನು ಏನೂ ಉತ್ತರಿಸಲಿಲ್ಲ.
ಆಗ ಅವರೇ ಮುಂದುವರೆಸುತ್ತಾ " ನೋಡು, ನಿನ್ನದೇ ಭಾಷೆಯಲ್ಲಿ ಹೇಳುವುದಾದರೆ, ದೇವರು ಎನ್ನುವ entity ಇರುವುದೇ ನಮ್ಮನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುವುದಕ್ಕೆ. ಅವನು ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಕೊಡುವವ. ನೀನು ಒಳ್ಳೆ ಪ್ರಯತ್ನ ಮಾಡಿದರೆ ನಿನಗೆ ಒಳ್ಳೆ ಫಲದೊರೆಯುತ್ತದೆ. ನೀನು ಏನೂ ಪ್ರಯತ್ನ ಮಾಡದಿದ್ದರೆ ಏನೂ ದೊರೆಯದು.
ದೇವರು ನಮಗೆ ಖಂಡಿತಾ ಕೆಟ್ಟದ್ದು ಮಾಡುವುದಿಲ್ಲ ಎಂಬುದೇ ಸಕಲ ವೇದಾಂತದ ಸ್ಥೂಲ ಸಾರಂಶ. ದೇವರು ನಮಗೆ ಆಗಬಂದಿಲ್ಲ ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ. ಅವರು ಅದಕ್ಕೆ ಇಲ್ಲಸಲ್ಲದ್ದನ್ನು ಹೊಂದಿಸಿ ಹೇಳುತ್ತಿರುತಾರೆ ಹೊರತು ಸತ್ಯ ಅದಲ್ಲ.ಕೆಟ್ಟ ದೇವರು ಎಂದು ಎಲ್ಲಾದರೂ ಇದೆಯೇ ?ಹೇಳು ನೋಡೋಣ ? " ಎಂದರು.
ನಾನು ಹಾಗೇ ಯೋಚಿಸುತ್ತಿದ್ದೆ.ಆಗ ಅಮ್ಮ," ಭಿನ್ನವಾದ ವಿಗ್ರಹಗಳನ್ನೆಲ್ಲಾ ಪುಣ್ಯಕ್ಷೇತ್ರದ ನದಿಗಳಲ್ಲಿ ತೇಲಿಬಿಡುವುದನ್ನು ನೋಡಿದ್ದೇನೆ. ಕೆಲವರು ಹಳೆಯ ಫೋಟೋಗಳನ್ನು ಕೂಡಾ ತೇಲಿಬಿಡುವುದನ್ನು ನೋಡಿದ್ದೇನೆ." ಅಂದರು.
ಆಗ ನಮ್ಮ ತಂದೆ, "ಇದರಲ್ಲಿ ಅನುಕೂಲತೆಗಳಿಗಿಂತ ಅನಾನುಕೂಲತೆಯೇ ಹೆಚ್ಚು. ಕೆಲ ಬುದ್ಧಿವಂತರು ಹಳೆಯ ಫೋಟೋಗಳನ್ನು ಫ್ರೇಮ್ ಸಮೇತ,ಗಾಜಿನ ಸಮೇತ ನದಿಯಲ್ಲಿ ತೇಲಿಬಿಡುತ್ತಾರೆ.ಅದು ತೇಲುತ್ತಾ ನದಿಯಲ್ಲಿ ಬಂಡೆಗಳಿಗೆ ತಾಗಿ ಒಡೆದು ಚೂರಾಗಿಹೋಗುತ್ತದೆ. ಮೊಳೆಗಳು, ಫ್ರೇಮಿನ ಗಾಜು ನದಿಯ ಜೀವಿಗಳಿಗೆ ಹಾನಿ ಉಂಟು ಮಾಡದೆಯೆ ಇರುತ್ತವೆಯೇ ? ಇವರ ಈ ಮೌಢ್ಯದಿಂದ ಎಷ್ಟೋ ಮೀನುಗಳು ಪಾಪ ನೋವನ್ನು ಅನುಭವಿಸುತ್ತಿವೆ. ಅದರ ಬದಲು ಫ್ರೇಮನ್ನು ತೆಗೆದು, ಗಾಜನ್ನು ಫ್ರೇಮಿನವರಿಗೇ ಕೊಟ್ಟರೆ ಅದು ಉಪಯೋಗವಾಗುತ್ತದೆಯಲ್ಲವೇ ? ಬರೀ ಫೋಟೋವನ್ನು ನದಿಯಲ್ಲಿ ತೇಲಿಬಿಡುವ ಬದಲು ಅದನ್ನ ಹರಿದು ಮಣ್ಣಿಗೆ ಹಾಕಲಿ. ಗೊಬ್ಬರವಾಗುತ್ತದೆ. ನೀರಿಗೆ ಬಿಟ್ಟರೂ ಅದು ಹರಿದೇ ಹರಿಯುತ್ತದೆ ಅಲ್ಲವೇ ? ಅದು ಹೀಗೆ ಉಪಯೋಗವಾಗಲಿ ಬಿಡು. ಫ್ರೇಮೂ ಹಾಳಾಗಿ ಹೋಗಿದ್ದರೆ ಅದನ್ನು ಹೋಮಕ್ಕೆ ಕಟ್ಟಿಗೆಯಂತೆ ಉಪಯೋಗಿಸಿಕೊಳ್ಳಲಿ ಬೇಕಿದ್ದರೆ. ಸಮಿತ್ತನ್ನು ಯಜ್ಞೇಶ್ವರನಿಗೆ ಅರ್ಪಿಸುವ ಮೊದಲು ಈ ಕಟ್ಟಿಗೆಯಿಂದ ಯಜ್ಞೇಶ್ವರನನ್ನು ಆಹ್ವಾನಿಸಿದರೆ ತಪ್ಪೇನು ಇಲ್ಲ. ಅಲ್ಲವೇ ?
ಇನ್ನು ಭಿನ್ನವಾದ ವಿಗ್ರಹಗಳನ್ನು, ಮೂರ್ತಿಗಳನ್ನು,ಶಿಲ್ಪಕಾರರಿಗೆ,ಮೂರ್ತಿ ಮಾಡುವವರಿಗೇ ಮತ್ತೆ ಕೊಡಲಿ...ಅವರಾದರೂ ಉಪಯೋಗಿಸಿಕೊಳ್ಳುತಾರೆ. "
ನಾನು ಕೇಳಿದೆ " ಇದೆಲ್ಲಾ ಸರಿ ಅಣ್ಣಾ... ಆದರೆ ಇದು ತಪ್ಪು, ಹೀಗೆ ಮಾಡಬೇಡಿ, ಹೀಗೆ ಮಾಡಿ ಎಂದು ಇವರಿಗೆ ತಿಳಿಸಿಹೇಳುವವರು ಯಾರು ? "
ಅಣ್ಣ ಉತ್ತರಿಸಿದರು- " ಇದೆಲ್ಲಾ ಆಗಬೇಕಿರುವು ಧರ್ಮಗುರುಗಳಿಂದ . ಗುರುಪೀಠದ ಮೇಲೆ ಕುಳಿತು ಮಾತನಾಡುವ ಅವರ ಮಾತುಗಳಿಗೆ ಬೆಲೆಯಿದೆ. ಜನರಿಗೆ ಅವರುಗಳ ಮೇಲೆ ನಂಬಿಕೆಯಿದೆ. ಅವರುಗಳು ಇದರ ಬಗ್ಗೆ ಗಮನ ಹರಿಸಿ ಜನರಿಗೆ ತಿಳಿಹೇಳಿದರೆ ಉತ್ತಮ."
ಕಾರಿನಲ್ಲಿ ವಾಪಸ್ಸು ಹೋಗುತ್ತಾ ನಾನು ಯೋಚನೆ ಮಾಡುತ್ತಿದ್ದೆ- ಅಲ್ಲ...ದೇವರನ್ನು ನಾವು ಸೃಷ್ಟಿಸಿದೆವೋ, ಅಥವಾ ಅವನೇ ನಮ್ಮನ್ನು ಸೃಷ್ಟಿಸಿದನೋ ಆ ಪ್ರಶ್ನೆ ಆಮೇಲೆ. ಆದರೆ, ನಾವು ಪರಸ್ಪರ ವಿರುದ್ಧವಾದ ಸಂಗತಿಗಳನ್ನು ಕ್ಷಣಮಾತ್ರವೂ ಚಿಂತಿಸದೇ, ಅದನ್ನು ಹಾಗೆಯೇ ನಂಬಿ ಮೌಢ್ಯತೆಯಿಂದ ಮೆರೆಯುತ್ತಿದ್ದು, ನಾವು ಪ್ರಗತಿಪರರು ಎಂದು ಬಿಂಬಿಸಿಕೊಳ್ಳುತ್ತಿದ್ದೇವಲ್ಲ...ನಾವೇಕೆ ಹೀಗೆ ?