ನಳ ದಮಯಂತಿಯರ ಪ್ರೇಮಪ್ರಕರಣದಲ್ಲಿ ಹಂಸವೇ ದೂತ. ಹಂಸವನ್ನು ನಾವು ಮರೆತದ್ದೇವೆ.
ವೈನತೇಯ ಗರುಡನನ್ನ ವಿಷ್ಣುವಿನ ಫೋಟೋ ನೋಡಿದಾಗ ಮಾತ್ರ ನೆನಪಿಸಿಕೊಳ್ಳಲಿಚ್ಛಿಸುತ್ತೇವೆ.
ಪಾರಿವಾಳಗಳನ್ನ ಪಾರ್ಕಿಂಸನ್ ರೋಗಿಗಳಿಗೆ ಆಹಾರವಾಗಿ ಮಾಡಿ ಅವುಗಳು ಒಂದು ಕಾಲದಲ್ಲಿ ನಮ್ಮ ಪೋಸ್ಟ್ ಮ್ಯಾನ್ ಗಳಾಗಿದ್ದವೆಂಬುದನ್ನು ಮರೆತಿದ್ದೇವೆ.
ಗುಬ್ಬಚ್ಚಿಗಳನ್ನು ನಾವೇ ಬೆಂಗಳೂರಿನಿಂದ ಓಡಿಸಿದ್ದೇವೆ. ಕಳವಳ ವ್ಯಕ್ತಪಡಿಸುವುದಿರಲಿ, ಅವುಗಳ ಬಗ್ಗೆ ನಾವು ಮಾತಾಡುವುದನ್ನೂ ಮರೆತಿದ್ದೇವೆ.
ಕಾಗೆಗಳನ್ನು ಎಂಜಲು ಕೈಯಲ್ಲಿಯೂ ಓಡಿಸದೇ ಗಾದೆಯ ಸತ್ಯವನ್ನು ಉಳಿಸಿದ್ದೇವೆ.
ಹೌದು . . .ಪಕ್ಷಿಗಳನ್ನು ನಾವು ಮರೆತಿದ್ದೇವೆ.
ಈ ಲೇಖನ ಬರೆಯುವುದಕ್ಕೆ ಕಾರಣ, ಪ್ರವಾಸದಿಂದ ಮರಳಿ ಬಂದ ನಮ್ಮ ಬಾಂಧವರೊಬ್ಬರು ಹೇಳಿದ ಪ್ರವಾಸ ಕಥನ ಮತ್ತು ನಮ್ಮ ಮನೆಯ ಸಜ್ಜೆಯ ಮೇಲಿನ ಎಸಿ ಡಬ್ಬದ ಹಿಂದಿದ್ದ ಪಾರಿವಾಳದ ಗೂಡು.
ಮೊನ್ನೆ ಅಮೇರಿಕೆಗೆ ಪ್ರವಾಸಕ್ಕೆ ಎಂದು ಹೋಗಿದ್ದ ನಮ್ಮ ದೊಡ್ದಪ್ಪ ದೊಡ್ದಮ್ಮ ಬಂದಿದ್ದರು ಮನೆಗೆ. ಅಲ್ಲಿಯ ಕೆಲವು ಜಾಗಗಳು ಮತ್ತವುಗಳ ವೈಶಿಷ್ಟ್ಯಗಳ ಬಗ್ಗೆ ದೀರ್ಘವಾಗಿಯೇ ಮಾತಾಡಿದರು. ಅಲ್ಲಿನ ಮಕ್ಕಳು ಮತ್ತು ಕೆಲವು ಹಿರಿಯರು ಮನೆಯ ಮುಂದೆ ಅಥವಾ ಮನೆಯ ಮೇಲೆ, ಲಾನ್ ಗಳಲ್ಲಿ ಹಕ್ಕಿಯ ಗೂಡುಗಳನ್ನು ಮಾಡಿ ನೀರು ಮತ್ತು ಧಾನ್ಯದ ಕಾಳುಗಳನ್ನು ಹಾಕುತ್ತಾರಂತೆ...ಅಲ್ಲಿನ ಪಕ್ಷಿಗಳಿಗೆ. ಇವರು ಅದನ್ನು ಮಕ್ಕಳ creativity ಮತ್ತು ದೊಡ್ದವರ ಔದಾರ್ಯ ಎನ್ನುವಂತೆ ಬಿಂಬಿಸಿದರು. ಆದರೆ ಅವರು ಒಂದು ವಿಷಯ ಮರೆತಂತಿತ್ತು. ಭಾರತೀಯರು ಭಾರತದಲ್ಲಿ ಮನೆಯಲ್ಲಿ ಯಾವುದೇ ಹಬ್ಬಆಚರಿಸಲಿ, ಅಥವ ಮನೆಯಲ್ಲಿ ಪಾಯಸದ ಊಟವಾಗಲಿ ದೇವರಿಗೆ ನೈವೇದ್ಯವಾದ ನಂತರ ಸಣ್ಣ ವೀಳ್ಯದೆಲೆ ಮೇಲೋ ಅಥವಾ ಬಾಳೇ ಎಲೆಯ ಮೇಲೋ ಮಾಡಿದ ಊಟವೆಲ್ಲವನ್ನೂ ಸ್ವಲ್ಪ ಸ್ವಲ್ಪ ಹಾಕಿ ಮಕ್ಕಳಿಗೆ " ತಾರ್ಸಿ ಮೇಲಿಟ್ಟು ಬಾ....ಆಮೇಲೆ ಊಟ ಮಾಡೋಣ " ಎಂದು ಹೇಳುತ್ತಿದ್ದುದನ್ನು ಅವರು ಮರೆತಿದ್ದಾರೆ. ನಮ್ಮ ತಾತ ನನಗೆ ಹೇಳುತ್ತಿದ್ದರು ಈ ಕೆಲಸ, ನಮ್ಮ ತಂದೆ ಈಗಲೂ ನನಗೇ ಹೇಳುತ್ತಾರೆ ಇದನ್ನ. ಅಮೇರಿಕದವರು ಅದನ್ನ ಈಗೀಗ ಅಳವಡಿಸಿಕೊಂಡರು...ನಾನು ಅದನ್ನು ವರ್ಷಾನುಗಟ್ಟಲೆಇಂದ ಈ ಥರದ ನೈವೇದ್ಯದೆಲೆ ಅರ್ಪಣ ಮತ್ತು ಕಾಗೆಗಳಿಗೆ ಪಿಂಡಪ್ರದಾನ ಮಾಡುವ ಮೂಲಕ ಆಚರಿಸಿಕೊಂಡು ಬರುತ್ತಿದ್ದೇವೆ.
ಒಂದು ತಿಂಗಳ ಹಿಂದಿನ ಮಾತು . ಮಟಮಟ ಮಧ್ಯಾಹ್ನದಲ್ಲಿ ಒಮ್ಮೆ "ಗುಟುರ್ಗೂ ಗುಟುರ್ಗು... " ಎಂಬ ಶಬ್ದ ಕಿಟಕಿಯ ಮೂಲಕ ಬಂದು ನಿದ್ದೆಯಿಂದ ನನ್ನನ್ನು ಎಬ್ಬಿಸಿತು. ಟೆರೇಸಿನ ಬಾಗಿಲ ತೆಗೆದು ಎಸಿ ಡಬ್ಬಕ್ಕೇನಾಗಿರಬಹುದೆಂದು ಪರೀಕ್ಷಿಸಲು ಹೋದೆ. ಅಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು !! ಪಾರಿವಾಳಗಳೆರಡು ಅಲ್ಲಿ ಗೂಡು ಕಟ್ಟಲು ಸಣ್ಣ ಸಣ್ಣ ಟೊಂಗೆಗಳನ್ನು ಒಟ್ಟುಗೂಡಿಸುತ್ತಿದ್ದವು. ಸತ್ಯವಾಗಲೂ ಹೇಳುತ್ತೇನೆ....ನಾನು ಹಿಂದೆಂದೂ ಪಾರಿವಾಳಗಳನ್ನು ಅಷ್ಟು ಹತ್ತಿರದಿಂದ ನೋಡಿಯೇ ಇರಲಿಲ್ಲ !! ಅವು ನನ್ನನ್ನು ನೋಡಿದಾಕ್ಷಣ ಪಾಪ ಹೆದರಿ ಹಾರಿ ಹೋದವು. ನಾನವಕ್ಕೆ ಏನೂ ಮಾಡುವುದಿಲ್ಲ ಎಂದು ಹೇಳಲು ನನಗೆ ಅವುಗಳ ಭಾಷೆ ಗೊತ್ತಿಲ್ಲ !! ಆದರೆ ಮನೆಗೆ ಬಂದಿರುವ ಈ ಪುಟ್ಟ ಅತಿಥಿಗಳಿಗೆ ನಾನು ಸತ್ಕರಿಸದಿರುವುದು ನನ್ನ ಸಂಸ್ಕಾರಕ್ಕೆ ಸರಿ ಬರಲಿಲ್ಲ. ಅವಕ್ಕೆ ನೋವಾಗದಂತೆ, ಉಪಯೋಗವಾಗುವಂತೆ ನಾನೇನಾದರೂ ಮಾಡಲೇಬೇಕಿತ್ತು. ಸರಿ, ಬೆಳಿಗ್ಗೆ ನಾನು ಕಾಲೇಜಿಗೆ ಹೋಗುವಾಗ ಮತ್ತು ಸಾಯಂಕಾಲ ಅವು ಮರಳಿ ಬರುವ ಸ್ವಲ್ಪ ಹೊತ್ತಿನ ಮುಂಚೆ ಒಂದು ಹಿಡಿ ಅಕ್ಕಿ ಕಾಳನ್ನು ಕಾಂಪೌಂಡ್ ಬಳಿ ಹಾಕಿರುತ್ತಿದ್ದೆ. ಅವಲ್ಲದಿದ್ದರೂ ಬೇರೆ ಹಕ್ಕಿಗಳಾದರೂ ಬಂದು ತಿಂದುಕೊಂಡು ಹೋಗಲಿ ಎಂದು ನಾನು ದಿನಾಗಲೂ ಒಂದು ಹಿಡಿ ಅಕ್ಕಿ ಕಾಳನ್ನು ತಾರ್ಸಿಯ ಮೇಲೆ ಹಾಕುವುದನ್ನು ಶುರು ಮಾಡಿದ್ದೇನೆ.
ಎರಡು ವಾರ....ಗೂಡಲ್ಲಿ ಒಂದು ಮೊಟ್ಟೆ ಕಂಡಿತು !!
ನನಗೆ ಪಾರಿವಾಳಗಳ ಸಂಸಾರದ ಹೊಸ ಸದಸ್ಯನ ನೋಡಲು ದಿನಾ ಕಾತರ !! ತಾಯಿ ಪಾರಿವಾಳ ಅದಕ್ಕೆ ಕಾವೂ ಕೊಡಬೇಕಿತ್ತು, ಸುತ್ತ ಹಾರಾಡುತ್ತಿದ್ದ ಹದ್ದುಗಳಿಂದ ತನ್ನ ಗೂಡನ್ನೂ ರಕ್ಷಿಸಿಕೊಳ್ಳಬೇಕಿತ್ತು. ನಾನು ಹತ್ತು ನಿಮಿಷದ ಮಟ್ಟಿಗೆ ಎಸಿ ಆನ್ ಮಾಡಿ ಶಾಖ ಉತ್ಪತ್ತಿ ಮಾಡಿ ತಾಯಿ ಪಾರಿವಾಳ ಹಾರಿ ಹೋದಾಗ ಗೂಡಲ್ಲಿ ಶಾಖ ತಲುಪುವಂತೆ ಮಾಡಲು ಪ್ರಯತ್ನಿಸಿದೆ. ಆ ಶಾಖ ಪಾರಿವಾಳ ಕೊಡುವ ಕಾವಿಗೆ ಸಮವೋ ಇಲ್ಲವೋ ನನಗೆ ತಿಳಿಯದು ... ಆದರೆ ನನಗೆ ಅವಕ್ಕೆ ಸಹಾಯ ಮಾಡಬೇಕೆಂದು ಬಹಳ ಅನಿಸುತ್ತಿತ್ತು. ಸದ್ಯೋಜಾತನಿಗೆ ನನ್ನ ಬಯಕೆ ಪೂರೈಸುವ ಇಚ್ಛೆ ಇರಲಿಲ್ಲ ಎಂದೆನಿಸುತ್ತದೆ...ಹದ್ದೊಂದು ಬಂದು ಆ ಗೂಡನ್ನು ಧ್ವಂಸ ಮಾಡಿ ಹೋಗಿತ್ತು ಎಂದು ಕಾಣತ್ತೆ ಮೊನ್ನೆ !! ಆ ಪುಟ್ಟ ಅತಿಥಿ ಈ ಪ್ರಪಂಚವನ್ನು ತನ್ನಪುಟ್ಟ ಪಿಳಿ ಪಿಳಿ ಕಣ್ಣಲ್ಲಿ ನೋಡಿತೋ ಇಲ್ಲವೋ ನಾನು ತಿಳಿಯಲಾಗಲೇ ಇಲ್ಲ . ಅಂದೇ ನಮ್ಮ ದೊಡ್ದಪ್ಪ ದೊಡ್ದಮ್ಮ ಈ ಹಕ್ಕಿಗೂಡುಗಳ ವಿಷಯ ಪ್ರಸ್ತಾಪಿಸಿದ್ದು ಕಾಕತಾಳೀಯ ಎನಿಸಿತು !
ಈಗೀಗ ಹಬ್ಬದ ಆಚರಣೆ ಮಹತ್ವ ಕಳೆದುಕೊಂಡು ಯಾಂತ್ರಿಕವೆನಿಸುತ್ತಿವೆ, ಶ್ರಾದ್ಧವು ನಂಬುಗೆಯನ್ನಾಧರಿಸಿ ಪ್ರಶ್ನಾರ್ಥಕವಾಗಿ ನಿಂತಿದೆ. ನಮ್ಮ ಬದುಕಿನಲ್ಲಿ ನಾವು ತಿಂದು, ಬೇರೆಯವರಿಗೆ ಹಾಕುವಷ್ಟು ಧನ ಧಾನ್ಯಗಳಿದ್ದರೂ ನಾವು ತೃಪ್ತಿ ಹೊಂದದೇ ಮತ್ತಷ್ಟು ಗಳಿಸಲು ನಿರಂತರ ಹೋರಾಟ ನಡೆಸಿದ್ದೇವೆ. ಹಕ್ಕಿಗಳಿಗೆ ಒಂದು ಹಿಡಿ ಕಾಳು ಹಾಕದ ನಾವು, ಹೋಟೇಲುಗಳಲ್ಲಿ ದುಡ್ದು ಕೊಟ್ಟು, ಆಹಾರವನ್ನು ಚೆಲ್ಲುತ್ತೇವೆ !!
ಅಮೇರಿಕೆಯವರನ್ನು ಅನುಕರಿಸುವುದರಲ್ಲಿಯೇ ನಮಗಾನಂದ ಲಭಿಸುವ ಹಾಗೆ ಕಾಣುತ್ತದೆ. ನಮ್ಮ ದೇಶದ ಆಚರಣೆಗಳನ್ನು ಅರಿಯುವುದನ್ನು ಮರೆತಿದ್ದೇವೆಯೇ ? ನಾವು ನಮ್ಮ ಧರ್ಮವನ್ನು ಮರೆತಿದ್ದೇವೆಯೇ ?
ನಾವೇಕೆ ಹೀಗೆ ?