ನನಗೆ ಕೀಚೈನುಗಳನ್ನು ಕಲೆ ಹಾಕುವ ಒಂದು ಹವ್ಯಾಸವಿದೆ. ಗಾಂಧಿಬಜಾರಿಂದ ಹಿಡಿದು,ಜಯನಗರ,ಮಲ್ಲೇಶ್ವರ, ವಿಜಯನಗರ, ಇವೇ ಮುಂತಾದ ಜಾಗಗಳಲ್ಲಿ ನಾನು ಅವ್ಯಾಹತವಾಗಿ ಓಡಾಡುವ ಕಾರಣ ನನ್ನ ಕೀಚೈನಿನ ಕಲೆಕ್ಷನ್ನು ಅವಿರತವಾಗಿ ನಡೆದುಕೊಂಡು ಬಂದಿದೆ. ನಾನು ಎಮ್.ಫಿಲ್ ಮಾಡುತ್ತಿದ್ದ ಕಾಲ.[೨೦೧೧] ಲ್ಯಾಬಲ್ಲಿ ನನ್ನ ಪ್ರಯೋಗ ಸತತ ಹದಿನಾಲ್ಕನೇ ಬಾರಿ ಕೈಕೊಟ್ಟ ಶುಭಸಂದರ್ಭದಲ್ಲಿ, ನಾನು ಬೇರೇನೂ ಮಾಡಲು ತೋಚದೆ ಲ್ಯಾಬಿಂದ ಹೊರಬಿದ್ದು ಜಯನಗರದಲ್ಲಿ ಬೀದಿಗಳಲ್ಲಿ ಒಂದು ಸುತ್ತು ಹಾಕಿದೆ. ಯಥಾಪ್ರಕಾರ ಸೀರೆ, ಚಿನ್ನ, ಕಾರು ಇವೇ ಮುಂತಾದವುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಹೊಸ ಸೀರೆಯ ಡಿಸೈನು, ಚಿನ್ನದ ಹೊಸ ಪ್ಯಾಟರ್ನು, ಮತ್ತು ಆ ಕ್ಷಣದ ಚಿನ್ನದ ರೇಟು, ಹೊಸ ಕಾರುಗಳ ಸಾಧಕ ಬಾಧಕಗಳು, ಇವೇ ಮುಂತಾದ ವಿಷಯಗಳ ಬಗ್ಗೆ ಯೋಚನೆ ಮಾಡುತ್ತಾ, ಜಯನಗರ ಮಾರ್ಕೆಟ್ಟನ್ನು ದಾಟಿ, ಕೀಚೈನು ದೊರೆಯುವ ಅಂಗಡಿಯ ಬಳಿ ಬಂದು ನಿಂತೆ, ಹೊಸ ಮಾದರಿಯ ಕೀಚೈನು ಕಂಡರೆ ಅದನ್ನು ಕೊಂಡುಕೊಳ್ಳಲು. ಅಲ್ಲಿ ನನ್ನ ಕಣ್ಣಿಗೆ ಒಂದು ವಿಚಿತ್ರ ವಸ್ತು ಕಾಣಿಸಿತು. ಒಂದು ನಿಂಬೆಹಣ್ಣು ಮತ್ತು ನಾಲ್ಕು ಮೆಣಸಿನಕಾಯನ್ನು ಪ್ಲಾಸ್ಟಿಕ್ ನಲ್ಲಿ ಮಾಡಿ, ಕಾರುಗಳಿಗೆ ಮತ್ತು ಆಫೀಸುಗಳ ಮುಂದೆ ನೇತುಹಾಕಲು ಅನುಕೂಲವಾಗುವಂತೆ ದಾರವನ್ನು ಇಳಿಬಿಡಲಾಗಿತ್ತು. ದೂರದಿಂದ ನಿಜವಾದದ್ದೇನೋ ಅನ್ನಿಸುತ್ತಿತ್ತು. ನಾನು ಅದನ್ನು ಸ್ವಲ್ಪ ತೀಕ್ಷ್ಣವಾಗಿ ನೋಡುತ್ತಿದ್ದುದನ್ನು ಗಮನಿಸಿದ ಅಂಗಡಿಯ ಮಾಲೀಕರು, "ಮೇಡಂ, ದೃಷ್ಟಿ ಪರಿಹಾರ ಆಗತ್ತೆ. ವಾರ ವಾರಕ್ಕೆ ನಿಂಬೇಹಣ್ಣು ಮೆಣಸಿನಕಾಯಿ ಬದಲಿಸುವ ಕೆಲಸ ತಪ್ಪತ್ತೆ.ತಗೊಳ್ಳಿ" ಅಂದರು.ನಾನು "ಬರಿ ಅವುಗಳ ಬಣ್ಣದಿಂದ ದೃಷ್ಟಿ ಪರಿಹಾರ ಆಗಲ್ಲ ಬಿಡಿ" ಎಂದು ಬರಿಗೈಯಲ್ಲಿ ಹಾಗೇ ಮುನ್ನಡೆದೆ. ದೃಷ್ಟಿ, ನಂಬಿಕೆ,ಮೂಢನಂಬಿಕೆ ಮತ್ತು ವಿಜ್ಞಾನಕ್ಕೆ ನನ್ನದೇ ರೀತಿಯ ತರ್ಕಬದ್ಧ ಸಂಬಂಧವನ್ನು ಯೋಚಿಸುತ್ತಾ.
ಕೆಲವು ಆಚರಣೆಗಳಿಗೆ ವೈಜ್ಞಾನಿಕ ಪುರಾವೆ ಇದೆ. ಇನ್ನು ಕೆಲವಕ್ಕೆ ನಾನು ಇನ್ನು ಸಾಕ್ಷಿಗಳ ಹುಡುಕಾಟದಲ್ಲಿ ತೊಡಗಿದ್ದೇನೆ. ನೀವು ಆ ಹುಡುಕಾಟದಲ್ಲಿ ನನ್ನ ಸಹಾಯಕ್ಕೆ ಬರುವಿರಿ ಎಂದು ಭಾವಿಸಿ, ನನ್ನ ತರ್ಕವನ್ನು ಇಲ್ಲಿ ಮಂಡಿಸುತ್ತಿದ್ದೇನೆ.ನನ್ನ ಆಲೋಚನಾ ಶಕ್ತಿಗೆ ಹೊಳೆದದ್ದಿಷ್ಟು.
ಮೊದಲು ಈ ದೃಷ್ಟಿ ಎಂದರೇನು ಎಂಬುದಕ್ಕೆ ಒಂದು ವಾದ ಇರಬೇಕು ಅನ್ನಿಸಿತು. ಪ್ರಪಂಚದ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ನಾದ ಮತ್ತು ತರಂಗ ಇರುತ್ತದೆ. (wave, vibration, frequency).ಎಲ್ಲರಿಗೂ ತಿಳಿದಿರುವಂತೆ ನಮ್ಮ ಪ್ರಪಂಚದ ತುಂಬೆಲ್ಲಾ electromagnetic ತರಂಗಗಳಿವೆ. ನಮಗೆ ಗೋಚರಿಸುವ ಬೆಳಕು ಕೂಡಾ ಈ ತರಂಗಗಳ ಒಂದು ಭಾಗವೇ. ಈ ಪ್ರಪಂಚದಲ್ಲಿನ ಸಕಲ ವಸ್ತುಗಳು electromagnetic spectrum ನಲ್ಲಿನ ಕೆಲ ತರಂಗಗಳನ್ನು ಸ್ವೀಕರಿಸಿ ಮಿಕ್ಕವುಗಳನ್ನು ಪ್ರತಿಫಲಿಸುತ್ತವೆ. ವಸ್ತುಗಳ ಬಣ್ಣಗಳ ಹಿಂದಿರುವ ಕಾರಣ ಇದೇ.ಕಪ್ಪು ಎಲ್ಲ ತರಂಗಗಗಳನ್ನು ತನ್ನೊಳಗೆ ಹೀರಿದರೆ, ಬಿಳುಪು ಎಲ್ಲ ಬಣ್ಣಗಳನ್ನು ಪ್ರತಿಫಲಿಸುತ್ತದೆ.ನಮ್ಮ ದೇಹ ಬಿಸಿ ಇರುವ ಕಾರಣ infra red ತರಂಗಗಳನ್ನು ಹೊರಹೊಮ್ಮಿಸುತ್ತದೆ. (Night shot photography ಮಾಡಿರುವವರಿಗೆ ಪ್ರಾಯಶಃ ಇದರ ಬಗ್ಗೆ ಹೆಚ್ಚು ತಿಳಿದಿರುತ್ತದೆ.)
ನಮ್ಮ ಭಾವನೆಗಳು, ಕ್ರಿಯೆ ಪ್ರತಿಕ್ರಿಯೆಗಳು ಮತ್ತು ವರ್ತನೆಗಳು ಬದಲಾಗುತ್ತಾ ಹೋದಾಗ ನಮ್ಮ ದೇಹದ ತಾಪಮಾನದಲ್ಲಿ ಸ್ವಲ್ಪ ಏರು ಪೇರಾಗುತ್ತದೆ. ಉದಾಹರಣೆಗೆ ನಮಗೆ ಕೋಪ ಬಂದಾಗ ನಮ್ಮ ದೇಹ ಬಿಸಿಯಾಗುತ್ತದೆ. ಆಸೆ, ಅಸೂಯೆ ಮತ್ತು "ಅಯ್ಯೋ, ಇದು ನಮ್ಮ ಪಾಲಿಗಿಲ್ಲವಲ್ಲ"ಎಂದು ಜನ ಹಲುಬಿದಾಗ ಅವರ ದೇಹದ ತರಂಗಗಳಲ್ಲಿ ಉಂಟಾಗುವ ಏರುಪೇರು infra red ತರಂಗಗಳಾಗಿ ಸ್ವಲ್ಪ ಹೆಚ್ಚು ಬಲವಾಗಿ ಇತರರಿಗೂ ರವಾನಿಸಲ್ಪಡುತ್ತವೆ. ನಮಗರಿವಿಲ್ಲದೆಯೇ ಈ ತರಹದ ಏರುಪೇರುಗಳು ನಮ್ಮ ದೇಹದಲ್ಲಿ ನಿರಂತರವಾಗಿ ಆಗುತ್ತಿರುತ್ತದೆ. ಆದರೆ ಇದರ ಪರಿಣಾಮ ನಮ್ಮ ಅರಿವಿಗೆ ಬರುತ್ತದೆ. ಹೀಗೆ ಹಲುಬುವವರಿಂದ ಹೊರಟ ತರಂಗ ನಮಗೆ ತಲುಪಿ ದೇಹದ ತಾಪಮಾನ ಸ್ವಲ್ಪ ಮಟ್ಟಿಗೆ ಏರಿ ನಮಗೆ ಕಿರಿಕಿರಿಯಾಗಬೇಕು.ದೃಷ್ಟಿ ತಾಗುವುದೆಂದರೇ ಇದೇ ಇರಬೇಕು.
ದೃಷ್ಟಿ ತಾಗುವುದು ಎಂದರೆ ಇದೇ ಆದರೆ, ನಮ್ಮ ಮುಂದಿನ ಪ್ರಶ್ನೆ ದೃಷ್ಟಿ ನಿವಾರಣೆ ಎಂದರೇನು ಎಂಬುದಾಗಿರುತ್ತದೆ. ಹೇಗೂ ಯೋಚನೆ ಮಾಡಕ್ಕೆ ಶುರು ಮಾಡಿದ್ದಾಗಿತ್ತಲ್ಲ, ಈ ಪ್ರಶ್ನೆಗೂ ಉತ್ತರ ಯೋಚನೆ ಮಾಡುವುದನ್ನು ಮುಂದುವರೆಸಿದೆ. ಎಲ್ಲ electromagnetic ತರಂಗಗಳನ್ನು ಹೀರಬಲ್ಲ ಶಕ್ತಿ ಕಪ್ಪು ಬಣ್ಣಕ್ಕೆ ಇದೆ. ಭೌತಶಾಸ್ತ್ರದಲ್ಲಿ ನಾವು ಕಪ್ಪುಬಣ್ಣಕ್ಕೆ, ಕೃಷ್ಣಕಾಯಗಳಿಗೆ(black body) ವಿಶೇಷವಾದ ಸ್ಥಾನಮಾನವನ್ನು ಕೊಟ್ಟಿದ್ದೇವೆ. ಹಾಗಾಗಿ ದೃಷ್ಟಿ ನಿವಾರಿಸಲು ಪೊರಕೆಗೆ ಬೆಂಕಿ ಹಚ್ಚಿ, ಅಪ್ರದಕ್ಷಿಣವಾಗಿ ನೀವಾಳಿಸಿ ಹೊತ್ತಿಸಲಾಗುತ್ತದೆ.[ಶುಭಕ್ಕೆ ಪ್ರದಕ್ಷಿಣೆ, ಅಶುಭಕ್ಕೆ ಪ್ರದಕ್ಷಿಣೆ ಅನ್ನೋದು ಶಾಸ್ತ್ರವಂತೆ...ವೈಜ್ಞಾನಿಕವಾಗಿ ಈ ರೀತಿಯ ನಿಬಂಧನೆಗಳೇನೂ ಇಲ್ಲ] ಪೊರಕೆ ಬೇಗ ಸುಟ್ಟು ಕಪ್ಪಾದಷ್ಟು ದೃಷ್ಟಿ ಹೆಚ್ಚುತಾಗಿದೆಯಂತೆ ![ಪೊರಕೆ ಸುಡುವುದು ಮುಖ್ಯವೇ ಹೊರತು ಅದು ಎಷ್ಟು ಬೇಗ ಸುಡುತ್ತದೆ ಅನ್ನೋದು ಅಲ್ಲ ] ಆನಂತರ ಕರಿಯನ್ನು ಹಣೆಯ ಎಡಭಾಗ, ಎಡಗೈ ಮತ್ತು ಎಡಗಾಲಿಗೆ ಇಡಲಾಗುತ್ತದೆ.[ಶುಭಕ್ಕೆ ಬಲ, ಅಶುಭಕ್ಕೆ ಎಡ ಅನ್ನೋದು ಶಾಸ್ತ್ರವೇ ಹೊರತು ಇದಕ್ಕೆ ವೈಜ್ಞಾನಿಕ ಪುರಾವೆ ಸಿಕ್ಕಿಲ್ಲ] ಸುಲಭವಾಗಿ ಸುಡಬಲ್ಲ ವಸ್ತುಗಳನ್ನು ಕೃಷ್ಣಕಾಯಗಳನ್ನಾಗಿ ಪರಿವರ್ತಿಸಿ ದೃಷ್ಟಿತೆಗೆಯುವ ಈ ಪದ್ಧತಿ, ಕಪ್ಪು ಬಣ್ಣ ನಮಗೆ ತಲುಪಿರುವ ಹೆಚ್ಚುವರಿ infra red ತರಂಗಗಳನ್ನು ಹೀರುತ್ತದೆ ಎಂಬುದು ನಮ್ಮ ಪೂರ್ವಿಕರಿಗೆ ಮುಂಚೆಯೇ ಗೊತ್ತಿತ್ತೇ?
ಉಪ್ಪು ನಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ನಮ್ಮೊಂದಿಗೆ ಒಂದಲ್ಲಾ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತಲೇ ಇರುತ್ತದೆ. ಸಾಮಾನ್ಯವಾಗಿ ದೃಷ್ಟಿ ತಾಗಿದೆ ಎಂದರೆ ಹರಳುಪ್ಪನ್ನು ಅಪ್ರದಕ್ಷಿಣವಾಗಿ ನೀವಾಳಿಸಿ ನೀರಲ್ಲಿ ನೆನೆಸಲಾಗುತ್ತದೆ. ಉಪ್ಪು ಬೇಗ ಕರಗಿದರೆ ಹೆಚ್ಚು ದೃಷ್ಟಿ ತಾಗಿದೆ ಎಂದು ಭಾವಿಸಲಾಗುತ್ತದೆ. ಉಪ್ಪು ನೀರಲ್ಲಿ ಕರಗುವುದಕ್ಕೆ ಶಾಖದ ಅವಶ್ಯಕತೆ ಇರುತ್ತದೆ. ಆ ಶಾಖವನ್ನು ಈ ತರಂಗಗಳು ಒದಗಿಸುತ್ತವೆ ಎಂದು ತರ್ಕಿಸಬಹುದು. ಉಪ್ಪು infrared ತರಂಗಗಳನ್ನು ಹೀರುವಲ್ಲಿ ಎತ್ತಿದ ಕೈ ! ನಾನು ಚಿಕ್ಕವಯಸ್ಸಿನಿಂದ ನಮ್ಮ ಅಜ್ಜಿ-ತಾತ ಅಪ್ಪ ಅಮ್ಮನ್ನ ಪೀಡಿಸಿ ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿತು. ಆದರೆ ಕುಂಬಳಕಾಯಿ ಕಟ್ಟುವ ಮತ್ತು ನೆಟ್ಟಿಕೆ ಮುರಿದು ದೃಷ್ಟಿ ತೆಗೆಯುವ ಹಿಂದಿರುವ ವೈಜ್ಞಾನಿಕ ತರ್ಕ ನನಗೆ ಇನ್ನೂ ಹುಡುಕಲಾಗಿಲ್ಲ.
ಇನ್ನು ನಿಂಬೆಹಣ್ಣಿನ ವಿಷಯ. ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳು ಮೂಲಭೂತವಾಗಿ ಆಮ್ಲದ ವಸ್ತುಗಳು(acidic).ಇವು infra red ತರಂಗಗಳನ್ನು ಹೀರುವಲ್ಲಿ ಸಕ್ಷಮ. ಗೋಲ ವಸ್ತುವಾದ ನಿಂಬೇಹಣ್ಣು, ಸ್ವಲ್ಪ ಚೂಪಾದ ಮೆಣಸಿನಕಾಯಿ ಎರಡನ್ನೂ ಸುಟ್ಟರೆ ಎಲ್ಲಾ ಕೋನಗಳಿಂದಲೂ ಅದು ತರಂಗಳನ್ನು ಸಮರ್ಪಕವಾಗಿ ಹೀರಬಲ್ಲುದು ಎಂದು ತರ್ಕ ಮಾಡಬಹುದು.ಆದರೆ ನಿಂಬೇಹಣ್ಣು ಮತ್ತು ಮೆಣಸಿನಕಾಯಿ ಎರಡೂ ಕಪ್ಪಗಿರಬೇಕಾದದ್ದು ಗಮನಾರ್ಹ. ಅದು ಬಿಟ್ಟು ಕಪ್ಪೇ ಆಗಿರದ, ತರಂಗಗಳನ್ನು ಹೀರಬಲ್ಲ ಆಮ್ಲದ ಅಂಶರಹಿತ ಪ್ಲಾಸ್ಟಿಕ್ ನಿಂಬೇಹಣ್ಣು ಮತ್ತು ಮೆಣಸಿನಕಾಯಿ ನೇತುಹಾಕುವುದರಿಂದ ಆಗುವ ಪ್ರಯೋಜನವಾದರೂ ಏನು ?
ದೃಷ್ಟಿ ಸಿದ್ಧಾಂತವನ್ನು ನಂಬದೆಯೇ ಇರುವವರಲ್ಲಿ ನಾನೂ ಒಬ್ಬಳಾಗಿದ್ದೆ. ಆಚರಣೆಗಳಿಗೆ ವೈಜ್ಞಾನಿಕ ವಿವರಣೆಯನ್ನು ಹುಡುಕುತ್ತಾ ಸಾಗುವಾಗ ನನಗೆ logical and scientific ಅನಿಸುವ ಪದ್ಧತಿ/ಶಾಸ್ತ್ರ ಮತ್ತು ಸಂಪ್ರದಾಯಗಳನ್ನು ನಂಬಲು ಪ್ರಾರಂಭಿಸಿದೆ.ಒಂದು ವಿಷಯದ ಅಥವಾ ಒಂದು ಆಚರಣೆಯ ಪೂರ್ವಾಪರ ತಿಳಿಯದೇ ಬರಿಯ ಢಂಭಾಚರಣೆ ಮಾಡುವುದು ಎಷ್ಟು ಸಾಧು ? ಅಥವಾ ಬೇರೆಯವರನ್ನು ತೃಪ್ತಿಪಡಿಸಲೋ, ನಾವೂ ಮಹಾ ಆಚಾರವಂತರು ಎಂದು ತೋರಿಸಿಕೊಳ್ಳಲೋ ಮಾಡುವ ಆಚರಣೆಯ ಔಚಿತ್ಯ ಮತ್ತು ಸಾರ್ಥಕತೆ ಏನು? ನಿಂಬೆಹಣ್ಣು ಮತ್ತು ಮೆಣಸಿನಕಾಯಿ ದುಬಾರಿ ಎನಿಸಿದರೆ ಉಪ್ಪಿಲ್ಲವೆ ? ಅದಕ್ಕೆ ಪ್ಲಾಸ್ಟಿಕ್ ನಿಂಬೇಹಣ್ಣು ಬೇಕೆ ?
ನಾವೇಕೆ ಹೀಗೆ ?!