Wednesday, January 7, 2009

ಕಡೆಗೋಲ ತಾರೆನ್ನ ಚಿನ್ನ....

ದಾಸರ ಪದದ ಸಾಲು ಇಲ್ಲೇಕೆ ಬಂತೆಂದು ಹುಬ್ಬೇರಿಸಬೇಡಿ. ಇದರ ಜೊತೆ ಕಾನೂರು ಹೆಗ್ಗಡಿತಿ ಕಾದಂಬರಿಯ ಕೆಲವು ಸಾಲುಗಳೂ ಬರಬೇಕಿತ್ತು. ಆದರೆ ಅದು ಯೋಚನೆಗಳ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಾಕೊಂಡಿದೆಯಾದ್ದರಿಂದ ಸದ್ಯಕ್ಕೆ ಇದನ್ನೇ ಅಡ್ಜಸ್ಟ್ ಮಾಡಿಕೊಳ್ಳಿ.

ನಮ್ಮ ತಂದೆ ತಾಯಿಗಳ ಜೊತೆ ನಾನು ತೀರ್ಥಯಾತ್ರೆಗೆ ಹೋಗಿದ್ದವಳು ಇಲ್ಲಿಗೆ ಬಂದು ಐದು ದಿನ ಆಯ್ತು. ನಾವು ಬರುವಷ್ಟರಲ್ಲಿ ನಮ್ಮ ತಂದೆಯ ಆಫೀಸಿಗೆ ಮಹಾಶಯರೊಬ್ಬರು ಕಾಲಿಟ್ಟು ಉಪದೇಶವೊಂದನ್ನು ಬಿಟ್ಟಿಯಾಗಿ ನೀಡಿ ಕಡೆಗೋಲೊಂದನ್ನು ಕೊಟ್ಟು ಹೋಗಿದ್ದಾರೆ. ಗಾಬರಿಯಾಗಬೇಡಿ. ನಿಜವಾಗಲೂ ಕಡೆಗೋಲನ್ನು ತಂದುಕೊಟ್ಟಿದ್ದಾರೆ.

ಏನು ಉಪದೇಶ ನೀಡಿದ್ದಾರೆ ಅಂದರೆ....

" ನೋಡಿ....ಮಥುರಾ ಇದೆಯಲ್ಲಾ...ಅದೇ ಕೃಷ್ಣ ಪರಮಾತ್ಮ ಇದ್ದ ಜಾಗ...ಅಲ್ಲೆಲ್ಲಾ ಮಜ್ಜಿಗೆ ಕಡಿತಿದ್ರು ಜನ. (ಪ್ರಪಂಚದಲ್ಲಿ ಇನ್ನೆಲ್ಲೂ ಮಜ್ಜಿಗೆ ಕಡಿಯುತ್ತಿರಲಿಲ್ಲವಾ ಅಂತ ನನಗೆ ಡೌಟಾಯ್ತು...ಆದ್ರೆ ದುರದೃಷ್ಟವಷಾತ್ ಕೇಳಲಾಗಲಿಲ್ಲ...ಯಾಕಂದ್ರೆ ನಾನು ಅಲ್ಲಿರಲಿಲ್ಲ)ಅವ್ರಿಗೆಲ್ಲಾ heart problem ಇರಲೇ ಇಲ್ಲ. ಇದನ್ನ research ನಲ್ಲಿ ಕೂಡಾ ಸಾಬೀತುಮಾಡಲಾಗಿದೆ.(Excellent job. ಆದ್ರೆ ಯಾರು ಮಾಡಿದ್ದಾರೆ ಅಂತ ಗೊತ್ತಾಗ್ಲಿಲ್ಲ. ನಾನು ಇನ್ನು ಗೂಗಲ್ಲಿಸಬೇಕಿದೆ) ಈಗ ನೋಡಿ,ಎಲ್ಲಾರು ನಂದಿನಿ ಮೊಸರಿಗೆ ಒಗ್ಗಿ ಹೋಗಿದ್ದಾರೆ.ಮಜ್ಜಿಗೆ ಎಲ್ಲಿ ಕಡಿಯುತ್ತೇವೆ? Naturally,ಮನೆಯಿಂದ ಕಡೆಗೋಲು ನಾಪತ್ತೆಯಾಗಿದೆ.ಅದಕ್ಕೆ, ಕಡೆಗೋಲು ಹಿಡಿದು ನಾವು ಮಜ್ಜಿಗೆ ಕಡೆಯೋ ಹಾಗೆ action ಮಾಡಿದ್ರೆ ನಮಗೆ heart problem ಬರಲ್ಲ.(ಚಿಕ್ಕ ಮಕ್ಕಳಾಗಿದ್ದಾಗ action songs ಮಾಡಿಸುತ್ತಿದ್ದರಲ್ಲ play home ಗಳಲ್ಲಿ, ಹಾಗಾ ? ಅಂತ ಕೇಳಬೇಕಿತ್ತು ನಾನು. ಆದ್ರೆ...) ಅದಕ್ಕೆ ಈ ಕಡೆಗೋಲು ಕೊಡುತ್ತಿರೋದು. ಇದನ್ನ ಎರಡು palmಗಳ ಮಧ್ಯ ಹೀಗೆ ಹಿಡಿದು churn ಮಾಡ್ಬೇಕು. ಆಗ, blood circulation ಚೆನ್ನಾಗಿ ಆಗಿ, ಹೃದಯ ಸಕತ್ತಾಗಿ ಕೆಲಸ ಮಾಡತ್ತೆ. ತಗೊಳ್ಳಿ. free ಆದಾಗಲೆಲ್ಲಾ ಹೀಗೆ ಮಾಡಿ. ನೋಡೀ ನಿಮಗೆ ಹಾರ್ಟ್ ಪ್ರಾಬ್ಲಮ್ ಬರಲ್ಲ."

ಇದು ಉಪದೇಶ. ನಮ್ಮ ಆಫೀಸಿನವರು ನಮ್ಮ ತಂದೆಗೆ ಹೇಳಿ, ಅವರು ನಮಗೆ ಹೇಳಿದ ಮೇಲೆ ನನಗೆ ಬಂದ ಅನುಮಾನಗಳಿವು. ಆ ಮಹಾಶಯ ಮತ್ತೆ ಸಿಕ್ಕರೆ ಇದನ್ನು ಕೇಳಬೇಕು ಅಂತ ಅಂದುಕೊಂಡಿದ್ದೀನಿ. ನಿಮಗೂ ಡೌಟುಗಳು ಬಂದರೆ ದಯವಿಟ್ಟು ಕಮೆಂಟ್ ಬಾಕ್ಸಿನಲ್ಲಿ ದಾಖಲಿಸಿ. ಕೇಳಿಯೇಬಿಡೋಣ. ಏನಂತೀರಿ ?

೧. ಮೆಟ್ಟಿಲು ಹತ್ತುವ ಬದಲು ಲಿಫ್ಟ್ ಹತ್ತಿ, ಕೊತ್ತಂಬರಿ ಸೊಪ್ಪು ತರಲು ಕಾರಿಯಲ್ಲಿ ಹೋಗಿ,ಮನೆಯ ಕಸವನ್ನು vacuum cleaner ನಲ್ಲಿ ಗುಡಿಸಿ, dish washer ನಲ್ಲಿ ಪಾತ್ರೆ ತೊಳೆದು,washing machine ನಲ್ಲಿ ಬಟ್ಟೆ ಒಗೆದು, mechanized blender ನಲ್ಲಿ ಬೆಣ್ಣೆ ತೆಗೆದು,ಅಂಕಲ್ ಚಿಪ್ಸ್, ಆಂಟಿ ಚಿಪ್ಸ್, ಕುರ್ಕುರೆ, ಸಮೋಸ, ಭೇಲ್ ಪುರಿ, ಪಿಜ್ಜಾ ಮತ್ತು ಕೋಕ್ ಗಳಿಂದ ಹೊಟ್ಟೆ ತುಂಬಿಸಿಕೊಂಡ ಮೇಲೆ ಕಡೆಗೋಲು ಹಿಡಿಯಬಹುದೇ ?

೨. ಇದನ್ನ ಏರೋಬಿಕ್ಸ್ ಸ್ಟೈಲಲ್ಲಿ ಮಾಡಬಹುದೇ ? ೧ ೨ ೩ ೪ ...೪ ೩ ೨ ೧ next change... ಆ ಥರ.

೩. ಎಷ್ಟು ದಿನಗಳ ಕೋರ್ಸ್ ಇದು ? ಇದಾದ ಮೇಲೆ ನಾವು ನಮ್ಮ regular routine ( visit to chat street daily) ಶುರು ಮಾಡಿಕೊಳ್ಳಬಹುದಲ್ಲವೇ ?

ನಿಮ್ಮ ಡೌಟುಗಳಿಗೆ ಸ್ವಾಗತ :)

ನನಗನ್ನಿಸಿದ್ದು ಇಷ್ಟು :

ನಮ್ಮ ಅಜ್ಜಿಯ ಕಾಲದವರು ಬಾವಿಯಲ್ಲಿ ನೀರು ಸೇದುತ್ತಿದ್ದರು...ರಟ್ಟೆ ಬಲವಾಗುತ್ತಿತ್ತು. ಕೊಡದಲ್ಲಿ ನೀರು ತರುತ್ತಿದ್ದರು, ಸೊಂಟ ಗಟ್ಟಿಯಿರುತ್ತಿತ್ತು. ಮನೆ ಗುಡಿಸಿ ಸಾರಿಸಿ ಮಾಡುತ್ತಿದ್ದರು,flexibility ಇರ್ತಿತ್ತು. ನಾವೀಗ ಹೇಗಿದ್ದೇವೆ ಅಂತ ನಾನೇನು ಹೇಳಬೇಕಿಲ್ಲ ಅಲ್ವಾ ?

ನಮ್ಮ ಮನೆಯ ಕೆಲಸವನ್ನ ನಾವೇ ಮಾಡಿಕೊಂಡರೆ(ಕೆಲಸದವರನ್ನಿಟ್ಟುಕೊಂಡರೂ ಮನಕೆಲಸ ಅಂತ ಇದ್ದೇ ಇರತ್ತೆ ಅಲ್ವಾ ?) ನಮಗೆ ವ್ಯಾಯಾಮವೂ ಆಗತ್ತೆ, ರೋಗಗಳನ್ನು ದೂರವೂ ಇಟ್ಟಂತಾಗುತ್ತದೆ ಅಲ್ಲವೇ ? ನಮ್ಮ ಶರೀರ ನಮಗೇ heavy ಅನ್ನಿಸದ ಹಾಗೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

ಮನೆಕೆಲಸ ಮಾಡುವುದನ್ನು ಬಿಟ್ಟು ದುಡ್ಡು ಕೊಟ್ಟು ಏರೋಬಿಕ್ಸ್ ಸೇರಿ... hand picking exercise, roof cleaning exercise,ಎಲ್ಲಾ ಮಾಡುತ್ತೀವಲ್ಲ...ನಾವೇಕೆ ಹೀಗೆ ?

18 comments:

  1. ಲಕ್ಷ್ಮಿ ಮೇಡಮ್,

    ಅವರ ಕಡೆಗೋಲು ಅಭಿಪ್ರಾಯ ಸರಿಯಿದೆ ಎನಿಸುತ್ತದೆ... ಏಕೆಂದರೆ ಈ ರೀತಿಯಲ್ಲಾದರೂ ವ್ಯಾಯಾಮ ಮಾಡಲಿ ಎಂದಿರಬಹುದು.....

    ReplyDelete
  2. ಕಡೆಗೋಲು ವ್ಯಾಪಾರ ಜೋರಾಗಿ ನಡೆಯುತ್ತಿದೆಯೇ? ಎಂದು ಕೇಳಿ.ಇದು ನನ್ನ ಡೌಟು.
    ಕಡೆಗಾಲ ಎಣಿಸುತ್ತಿರುವ ಕಡೆಗೋಲು ಒಂದಷ್ಟು ಸಮಯ ಉಸಿರಾಡಲು ಈ ಮಹಾತ್ಮರು ನೆರವಾದರಲ್ಲಾ ಭೇಷ್!
    ಮಿಕ್ಸಿಯಲ್ಲಿ ಮಜ್ಜಿಗೆ ಕಡೆದು ಬೆಣ್ಣೆ ತೆಗೆಯುತ್ತಾರೆ ಎಂದರಲ್ಲಾ ನೀವು ಬರೀಸುಳ್ಳು!
    ದುಡ್ಡು ಕೊಟ್ರೆ ಸಿಗೋಲ್ವಾ?ಯಾರ್ರಿ ಮೈಕೈ ಗಲೀಜು ಮಾಡ್ಕೊತಾರೆ?!!
    ಅಶೋಕ ಉಚ್ಚಂಗಿ.
    http://mysoremallige01.blogspot.com/

    ReplyDelete
  3. :)
    ಇದಾದ್ರೆ ಬರೀ ಕಡಗೋಲು ಅಷ್ಟೆ ಅಲ್ಲಾ.. ಅಲ್ಲದೇ ಎನೋ ವ್ಯಾಯಾಮ ಮಾಡಿದಂಗೂ ಆಯ್ತು. ಕೆಲವರು "ಅಯಸ್ಕಾಂತ ಹಾಸಿಗೆ (ಬರೀ ೯೦ ಸಾವಿರ!!)", "ಪ್ಲಾಟಿನಂ ಬಳೆ(ಬರೀ ೧೦ ಸಾವಿರ - ೧೦ ಸಾವಿರಕ್ಕೆ ಪ್ಲಾಟಿನಂ ಸಿಗುತ್ತಾ ಅಂತ ಕೇಳ್ಬೇಡಿ)", "ಕಿಸೆಯಲ್ಲಿರಿಸಿಕೊಳ್ಳಬಹುದಾದಂತಹ ಸೌರ ಫಲಕ (೧.೫ ಸಾವಿರ)" ಮೊದಲಾದವುಗಳಿಂದ ನೀವು ಹೇಳಿದ ಕಾಯಿಲೆ ಗುಣ ಪಡಿಸುವವರಿದ್ದಾರೆ.

    ಎಲ್ಲಿ ಮೋಸ ಹೋಗೋವ್ರು ಇರ್ತಾರೋ ಅಲ್ಲಿ ಮೋಸ ಮಾಡೋವ್ರು ಇರ್ತಾರೆ - "ಗೌರಿ ಗಣೇಶ" ಚಿತ್ರ ಎಲ್ಲರಿಗೂ ಇನ್ನೊಮ್ಮೆ ತೋರಿಸ್ಬೇಕು, ಏನಂತೀರಿ?

    ReplyDelete
  4. ಲಕ್ಶ್ಮೀಯವರೆ..

    ನಮ್ಮ ಕೆಲಸ ನಾವು ಮಾಡಿಕೊಳ್ಳುವದರಿಂದ ನಮ್ಮ ವ್ಯಾಯಾಮವಾಗುತ್ತದೆ..

    ಸರಿ....

    ಅದು ಕುರ್ಕುರೆ ತಿನ್ನುತ್ತ.. ಟಿವಿ ನೋಡಿ ಆದಮೇಲೋ..?
    ಕಂಪ್ಯುಟರ್ ಬಿಟ್ಟು ಎದ್ದ ಮೇಲೋ..?
    ಅಥವಾ...
    ಮಸಾಲೆ ಪೂರಿ.., ಪಾನಿ ಪೂರಿ.. ತಿಂದಾಮೇಲೋ..?
    .....................
    ಪಿಜ್ಜಾ, ಬರ್ಗರ್...!!??

    ಈ ಡೌಟಿನ ಬಾಲ ಬೆಳೆಯುತ್ತಿದೆ...

    ನಿಮ್ಮ ಬರಹ... ಚಾಟ್ಸ್ ತಿಂದ ಹಾಗಿರುತ್ತದೆ..
    ಅಭಿನಂದನೆಗಳು..

    ReplyDelete
  5. ನಿಮಗೆ ಮಜ್ಜಿಗೆ ಕಡೆಯೋದು ಇಷ್ಟ ಇಲ್ಲ ಅಂದ್ರೆ ಬಿಟ್ಬಿಡಿ! ಅದು ಬಿಟ್ಟು ಸುಮ್ನೆ ಯಾಕೆ ಕಡೆಗೋಲಿನ ಮೇಲೆ ಗೂಬೆ ಕೂರಿಸ್ತೀರಾ?

    ಮಜ್ಜಿಗೆ ಕಡೆಯೋದ್ರಿಂದ ಹೃದ್ರೋಗ ಕಮ್ಮಿ ಆಗುತ್ತೆ ಅಂತ ನಾನೂ ಕೇಳಿದೀನಿ ...

    ReplyDelete
  6. ಲಕ್ಷ್ಮೀ,

    ಕುಡುಗೋಲಿನಿಂದಾಗುವ ಪ್ರಯೋಜನಗಳು ಹಲವಾರು. ಇದು ಮಾತ್ರ ಸತ್ಯ. ಆದರೆ ಇಲ್ಲಿ ಅವರು ಕೇವಲ ಮಾರ್ಕೆಟಿಂಗ್‌ಗಾಗಿ ಮತ್ರ ಹೇಳುತ್ತಿದ್ದಾರೇನೋ ಅಷ್ಟೇ. ನೀವು ಹೇಳಿದ್ದೂ ಸರಿ. ಮೈಗಳ್ಳರಿಗೆಲ್ಲಾ ಕುಡಗೋಲು ಹೇಳಿಸಿದ್ದಲ್ಲ ಬಿಡಿ :)

    ReplyDelete
  7. ಏನಾದ್ರೂ ಹಣೆಬರಹ ಇದ್ದ ಹಾಗೇನೇ ಆಗೋದು ಬಿಡು... ;-)

    ReplyDelete
  8. ಲಕ್ಷ್ಮಿಯವರೆ,
    ನೀವೇಕೆ ಹೀಗೆ?

    ನಾಗಾಭರಣ

    ReplyDelete
  9. ಹಾಗೆ ನಿಮಗೆ ಸಹಾಯವಗಲೆಂದು ಕೆಲವೊಂದು ಆಂಗ್ಲ ಪದಗಳಿಗೆ ಕನ್ನಡ ಪದಗಳನ್ನು ಇಲ್ಲಿ ಬರೆದಿರುವೆ:
    heart problem - ಹೃದಯ ತೊಂದರೆ
    excellent job - ಉತ್ತಮವಾದ ಕೆಲಸ
    naturally - ಪ್ರಾಕೃತಿಕವಾಗಿ, ಸಹಜವಾಗಿ
    blood circulation - ರಕ್ತ ಪರಿಚಲನೆ
    free- ವಿರಾಮವಾದಾಗ
    doubt - ಸಂದೇಹ
    regular routine - ಸಹಜವಾದ ದಿನಚರಿ

    ಈ mechanized blender ಅಂದ್ರೇನು?

    ನೋಡೋಣ ನಿಮ್ಮ ಮುಂದಿನ ಬ್ಲಾಗ್ ಹೆಗಿರುತ್ತೆ.

    ನಾಗಾಭರಣ

    ReplyDelete
  10. ಆ ಹಳೇ ಕಾಲದೋರಿದ್ದಂಗೆಲ್ಲ ಎಲ್ಲಾರೂ ಇದ್ಬಿಟ್ರೆ ಆಮೇಲೆ ಇವತ್ತಿನ ಡಾಕ್ಟರುಗಳ ಗತಿ ಏನು?

    ReplyDelete
  11. ಏನೂ ಮಾಡಲಾಗುವುದಿಲ್ಲ! ನಾವಿರುವುದೇ ಹೀಗೆ :D. ಗಾದೆಯೇ ಇಲ್ಲವೆ? " ಕುದುರೆ ಕಂಡರೆ ಕಾಲು ನೋವು" ಎಂದು. ಕೈಗೊಂದು ಕಾಲಿಗೊಂದು ಆಳು ಊರಿನಲ್ಲಿ ಸಿಗುತ್ತಾರದ್ದರಿಂದ, ಮನೆಕೆಲಸ ಮಾಡಿ ಅದ್ಯಾರು ಮೈ ಕೈ ನೋಯಿಸಿಕೊಳ್ಳುತ್ತಾರೆ?;)

    ReplyDelete
  12. ಲಕ್ಷ್ಮಿ,
    ಕಡೆಗೋಲಿನ ಮಹಾತ್ಮೆಯನ್ನು ಇದೇ ಮೊದಲು ಕೇಳಿದ್ದು. ನಗು ಬಂತು. ನಿಮಗಿರುವ ಡೌಟುಗಳು ನನಗೂ ಇವೆ, ನೀವೇ ಕೇಳ್ತೀರಲ್ಲ, ಸಾಕು.

    ಒಳ್ಳೆಯ ಲೇಖನ, ಓದೋಕ್ಕಂತೂ ಖುಷಿಯಾಯ್ತು.

    ReplyDelete
  13. ಲಕ್ಷ್ಮಿ, ಹೇಗಿತ್ತು ನಿಮ್ಮ ಪ್ರವಾಸ ಹಾಗೂ ಪರೀಕ್ಷೆ?

    ನಿಮ್ಮ ಬರಹ ಬಹಳ ಜೀವಂತಿಕೆಯಿಂದಿದೆ. ಆದರೆ ಇದಕ್ಕೆ ಪ್ರತ್ಕ್ರಿಯೆ ಬರೆಯಲು ಹೋದರೆ ಅದೇ ಒಂದು ಲೇಖನವಾಗುತ್ತೆ.
    ಆರೋಗ್ಯ ಉಳಿಸಿಕೊಳ್ಳಲು ಇತ್ತೀಚೆಗೆ ಜನರಾಡುವ ದೊಂಬರಾಟ ಮೈ ಉರಿಸುತ್ತೆ. ಈಗಲೂ ಅಷ್ಟೆ ನಮ್ಮ ಯೋಗ ಟೀಚರ್ ಹೇಳುತ್ತಾರೆ " ನಿಮ್ಮ ಹೊಟ್ಟೆ ಕರಗಬೇಕಾದರೆ ದಿನಾ ಮನೆ ಸಾರಿಸುವ ಕೆಲಸ ಮಾಡಿ - ಆದರೆ ಕುಳಿತು ನೆಲ ಒರೆಸಿ " ಎಂದು!!.
    ಈಗಲೂ ಅನೇಕ ಜನ ಕಡಗೋಲಿನಲ್ಲಿ ಮಜ್ಜಿಗೆ ಕಡೆಯುತ್ತಾರೆ.ಆದರೆ ಖಾಯಿಲೆ ವಾಸಿಯಾಗಲಿ ಎಂದಲ್ಲ!

    ReplyDelete
  14. ನಿಮ್ಮ ಮನೆಯಲ್ಲಿ ಇದೆಯೋ ಇಲ್ವೋ? ನಮ್ಮ ಮನೆಯಲ್ಲಿ ಇದೆ ಕಡೆಗೋಲು.

    ಹಳೇ ಕಾಲದಲ್ಲಿ ಕೆಲಸದಲ್ಲೇ ವ್ಯಾಯಾಮ ಆಗಿರುತ್ತಿತ್ತು. ಈಗಿನ ಕಾಲದಲ್ಲಿ ಅದು ಇಲ್ಲ.

    ReplyDelete
  15. ಲಕ್ಷ್ಮಿ ಅವರೆ...
    ನಾನು ಬರೆದ ಈ ಸಲದ ಪೋಸ್ಟ್ ಅಲ್ಲಿ ಕಡೆಗೋಲಿಂದು ಚಿಕ್ಕ ಪಾತ್ರ ಇದೆ. ಇಲ್ಲಿ ಬಂದು ನೋಡ್ದೆ, ನನಗಿಂತ ಮೊದಲೇ ಕಡಗೋಲ ಬಗ್ಗೆನೇ ಲೇಖನ ಕೊಟ್ಟಿದೀರ, ಖುಷಿ ಖುಷಿಯಾಗಿ ಓದಿದೆ.
    ಕಡಗೋಲು ಅಂದ್ರೆ ನಂಗೆ ಒಂಥರಾ ಇಷ್ಟ.(ನನ್ನ ಮನೇಲಿಲ್ಲ. ಊರಲ್ಲಿ ಅಮ್ಮ, ಅತ್ತೆಯವರ ಮನೇಲೆಲ್ಲ ಇದೆ, ಉಪಯೋಗ್ಸಲ್ಲ ಬಿಡಿ :-)

    ಲೇಖನ ಪೂರ್ತಿ ತುಂಬ ಇಷ್ಟ ಆಗೋಯ್ತು. ಚಾಟ್ಸ್ ಬಗ್ಗೆನೂ ಬರ್ದಿದೀರ. ಚಾಟ್ಸ್ ಬಗ್ಗೆ ಏನೇ ಬರೆದ್ರೂ ಖುಷಿಯಾಗೋಗತ್ತೆ ನಂಗೆ :-)

    ನಿಜ, ಈಗೀಗ ಜನ ಮರುಳೋ, ಜಾತ್ರೆ ಮರುಳೋ ಅನ್ನೋಹಾಗೆ ಇಂಥ ಮೋಸಗಳನ್ನ ಮಾಡೋರು ಹೆಚ್ಚಾಗ್ತಾನೇ ಇದಾರೆ, ಮೋಸಹೋಗೋರು ಕೂಡ :-(
    ನವಿರುಹಾಸ್ಯದೊಂದಿಗೆ ಸಮಾಜಿಕ ಕಳಕಳಿಯನ್ನು ನೋಡಿ ಖುಷಿಯಾಯ್ತು. ಬರೀತಿರಿ.

    ReplyDelete
  16. Wonderful writing style, Keep going

    ReplyDelete
  17. ನೀವು ಇಷ್ಟೋಂದು ಬ್ಲಾಗ್ ಗಳನ್ನ ಹೇಗೆ ನಿಭಾಯಿಸುತ್ತಿರೊ ಗೊತ್ತಿಲ್ಲ. ನಿಮ್ಮ ಪ್ರಯತ್ನಕ್ಕೆ headsoff. ನನ್ನ ನೇರನುಡಿಗೂ ಒಮ್ಮೆ ಭೇಟಿ ಕೊಡಿ. ಧನ್ಯವಾದ.

    ReplyDelete