Friday, August 15, 2008

ನಮ್ಮಮ್ಮನ ಷಷ್ಟಿಪೂರ್ತಿ

ಹೌದು ! ಇಂದು ನಮ್ಮಮನ ಷಷ್ಟಿಪೂರ್ತಿ ! ಮುನ್ನೂರು ವರ್ಷ ಪಾಪ ನಮ್ಮಮ್ಮನನ್ನ ಆಂಗ್ಲರು ಬಹಳ ನೋಯಿಸಿದ್ದಾರೆ !ಅವಳ ಬಳಿ ಇದ್ದ ಅಪಾರ ಸಂಪತ್ತನ್ನು ಕೊಳ್ಳೆ ಹೊಡೆದು ಅವಳಿಗೆ ನೋವನ್ನು ಮಾತ್ರ ಉಳಿಸಿ ಹೋಗಿದ್ದಾರೆ. ಅದಕ್ಕಿಂತ ಮುಂಚೆಯೂ ಆಕೆ ಪಾಪ ಯಾರ ಯಾರ ಕೈಲೋ ಸಿಕ್ಕಿ ನೋವುಂಡು ಹಲುಬಿ ಹಣ್ಣಾಗಿ ಹೋಗಿದ್ದಳು. ಕಡೆಗೆ ಇವಳ ಮೌನ ವೇದನೆಯನ್ನು ನೋಡಲಾಗದೇ, ಅವಳ ಮುತ್ತಿನಂಥಾ ಮಕ್ಕಳು ಎಲ್ಲರೂ ಸೇರಿ ಆಂಗ್ಲರನ್ನು ಒದ್ದೋಡಿಸಿದರು. ಅಂದು, ಆಗಸ್ಟ್ ೧೫, ೧೯೪೭ರಂದು ನಮ್ಮಮ್ಮ ಮತ್ತೆ ಹುಟ್ಟಿದಳು ! ಸ್ವತಂತ್ರಳಾಗಿ ! ಭಾರತಿಯಾಗಿ ! ಅಮ್ಮ....ಹುಟ್ಟು ಹಬ್ಬದ ಶುಭಾಶಯಗಳು !

ನಮ್ಮಮ್ಮ ಯಾರೆಂದು ಗೊತ್ತಾಯ್ತಲ್ಲ ?

ಹೌದು...ಇಂದು ಸ್ವತಂತ್ರ ಭಾರತದ ೬೦ನೆಯ ಸ್ವಾತಂತ್ರ್ಯೋತ್ಸವ. ಅವಳ ಮಕ್ಕಳಾದ ನಮ್ಮೆಲ್ಲರಿಗೂ ಇದು ಸಂತೋಷದ ದಿನ. ಯಾರಿಗೆ ಇದರ ಸಂಭ್ರಮ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ, ನನಗಂತೂ ಸಂಭ್ರಮದ ದಿನವೇ !

ನಿಜ ಹೇಳುತ್ತಿದ್ದೇನೆ, ಇಷ್ಟು ವರ್ಷ ಸ್ವಾತಂತ್ರೋತ್ಸವದ ಬಗ್ಗೆ ನನಗೇನೂ ವಿಶೇಷ ಆಸಕ್ತಿ, ಆಸ್ಥೆ ಇರಲಿಲ್ಲ. ದಿನಾ ಬೆಳಿಗ್ಗೆ ದಿನ ಪತ್ರಿಕೆಯಲ್ಲಿ ದೇಶದ ವ್ಯವಸ್ಥೆ ಹದಗೆಡುತ್ತಿರುವುದನ್ನು ಓದಿದಾಗಲೆಲ್ಲ " ನಮ್ಮ ದೇಶ ಉದ್ಧಾರವಾಗೋದೇ ಇಲ್ಲ " ಎಂದೇ ಗೊಣಗುತ್ತಿದ್ದೆ. ಮೊನ್ನೆಯವರೆಗೂ ! ಆದರೆ ನನ್ನ ಕಣ್ಣು ತೆರೆಸಿದ್ದು ಒಂದು ಪುಸ್ತಕ !

ಅಮೇರಿಕಾದಲ್ಲಿ ಗೊರೂರು ಎಂಬ ಪುಸ್ತಕವನ್ನು ಹೋದ ಶುಕ್ರವಾರದಷ್ಟೇ ಕೊಂಡು ತಂದೆ. ಗೊರೂರರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ಅಮೇರಿಕೆಗೆ ಹೋಗಿದ್ದು ಅವರ ಎಂಭತ್ತನೆಯ ವಯಸ್ಸಿನಲ್ಲಂತೆ! ಅಲ್ಲಿನ ಸುಖಗಳನ್ನ ಹೊಗಳಿದರೂ ಅವರು ನಮ್ಮ ದೇಶದ ಅಭಿಮಾನವನ್ನು ಬಿಡಲಿಲ್ಲ. ಛೆ ! ನಮ್ಮ ದೇಶದಲ್ಲಿ ಇವೆಲ್ಲ ಏನೂ ಇಲ್ಲ ! ನಮ್ಮ ದೇಶದ ವ್ಯವಸ್ಥೆ ಸರಿಯಿಲ್ಲ...ಅಂತೆಲ್ಲ ಅವರು ಗೊಣಗಲಿಲ್ಲ ! ಮಹಾತ್ಮರು ಅವರು !

ಈ ಪುಸ್ತಕವನ್ನು ಓದುತ್ತಾ ಹೋದಂತೆ ನನಗನ್ನಿಸಿತು...ನನಗೆ ಈ ದೇಶದ ಬಗ್ಗೆ ಗೊಣಗಲು ನಿಜವಾಗಲೂ ಹಕ್ಕಿದೆಯೇ ? ನಾನು ನನ್ನ ದೇಶಕ್ಕೆ ಏನು ಸಹಾಯ ಮಾಡಿದ್ದೇನೆ ? ಗೊಣಗುವುದು, ಬೈಯ್ಯುವುದು ಬಿಟ್ಟರೆ ನಾನೇನೂ ಮಾಡಿಲ್ಲ. ಸಮಾಜ ಸೇವೆ ? ಉಹು ! ಏನೂ ಮಾಡದೇ ನಾನು ಅನ್ನುವುದು ಸರಿಯೇ ?

ಹೀಗೆ ಯೋಚಿಸುತ್ತಿರುವಾಗಲೇ ನನಗೊಂದು ಈಮೈಲ್ ಬಂದಿತು...ಅದರಲ್ಲಿ ಒಂದು quote ನನ್ನ ಕಣ್ತೆರೆಸಿತು. ಮಾಜಿ ರಾಷ್ಟ್ರಪತಿ ಡಾ|| ಏ.ಪಿ.ಜೆ .ಅಬ್ದುಲ್ ಕಲಾಮ್ ಅವರು ಹೈದ್ರಾಬಾದಿನಲ್ಲಿ ಮಾತನಾಡುತ್ತಾ , ನಾವು ಯಾಕೆ ನಕಾರಾತ್ಮಕ ಮನೋಭಾವಗಳಾನ್ನು ಹೊಂದಿದ್ದೇವೆ ಎಂದು ಪ್ರಶ್ನಿಸುತ್ತಾ, ಅಮೇರಿಕೆಯ ಅಧ್ಯಕ್ಷ ಜಾನ್ ಎಫ್ ಕೆನ್ನೆಡಿಯ ಮಾತೊಂದನ್ನು ಉಲ್ಲೇಖಿಸುತ್ತಾರೆ- "ask not what your country can do for you -- ask what can you do for your country."

ಇದನ್ನು ಓದಿದ ಮೇಲೆ ನನಗೆ ನಾನು ಮಾಡುತ್ತಿದ್ದ ತಪ್ಪಿನ ಅರಿವಾಯ್ತು. ಈ ಸ್ವಾತಂತ್ರೋತ್ಸವದ ದಿನ ನಾನು ನಮ್ಮಮ್ಮನಿಗೆ ಶುಭಾಶಯ ಕೋರುತ್ತಾ ಅವಳಿಗೆ ಈತರಹದ ಉಡುಗೊರೆ ಕೊಡಲಿಚ್ಛಿಸುತ್ತೇನೆ -

"ಅಮ್ಮ, ಇನ್ನು ಮುಂದೆಯಿಂದ ನಾನು ವ್ಯವಸ್ಥೆಯನ್ನು ಬೈಯ್ಯುವುದಿಲ್ಲ. ಅವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾದಷ್ಟು ಪ್ರಯತ್ನ ಪಡುತ್ತೇನೆ, ನಿಜವಾಗಿಯೂ. ನನ್ನೊಬ್ಬಳಿಂದ ಅದು ಆಗದಿದ್ದರೆ ನನಗೆ ಗೊತ್ತಿಲ್ಲ. ನನ್ನ ಕೈಯಲ್ಲಿ ಕೊಡಲ್ಲು ಸಾಧ್ಯವಾಗುವುದು ಇಷ್ಟೆ ಕಣಮ್ಮ- ಪ್ರಯತ್ನ "

9 comments:

Radha said...

I Love My India..

ಅಂತರ್ವಾಣಿ said...

ನಿನ್ನ ಮಾತು ನಿಜ ಕಣಮ್ಮ! ನಾವೆಲ್ಲರು ಸರಿಯಾಗಿದ್ದರೆ...ಇಡೀ ದೇಶಾನೆ ಚೆನ್ನಾಗಿರುತ್ತೆ

Srikanth - ಶ್ರೀಕಾಂತ said...

ಸ್ವಾತ್ರಂತ್ರ್ಯ? ಯಾವ ಸ್ವಾತಂತ್ರ್ಯ? ಎಲ್ಲಿಯ ಸ್ವಾತಂತ್ರ್ಯ? ಹೆಸರಿಗೆ ಸ್ವಾತಂತ್ರ್ಯವಷ್ಟೇ. ಅನುಷ್ಟಾನದಲ್ಲಿರುವುದು ಪರತಂತ್ರ್ಯವೇ. ಒಂದಷ್ಟು ಉದಾಹರಣೆ...

೧. ಬರೀ ಇಂಗ್ಲೀಷಿನವರನ್ನು ಒದ್ದು ಓಡಿಸಿದೆವು. ಅವರ ಸಂಸ್ಕೃತಿ ಮಾತ್ರ ನಮ್ಮಲ್ಲೇ ಇಟ್ಟು ನಮ್ಮ ಸಂಸ್ಕೃತಿಗಿಂತ ಹೆಚ್ಚು ಗೌರವಿಸಿದೆವು. ಅವರ ಶೈಲಿಯ ಉಡುಗೆಯೇ ತೊಟ್ಟೆವು. ಅವರ ಸಂಸ್ಕೃತಿಯೇ ಪಾಲಿಸಿದೆವು. ನಮ್ಮ ನಿಜವಾದ ಸಂಸ್ಕೃತಿ ಏನೆಂದು ಇಂದಿನ ಮಕ್ಕಳಿಗೆ ಅರಿಯದಂಥ ಪರಿಸ್ಥಿತಿ ನಿರ್ಮಾಣ ಮಾಡಿದೆವು. ಈಗ ಆ ಪರಿಸ್ಥಿತಿಯಲ್ಲಿ ನಾವೂ ಸಿಕ್ಕಿಕೊಂಡು ನಮ್ಮ ಸಂಸ್ಕೃತಿಯ ಪಾಲನೆಯನ್ನು ಮತ್ತೆಂದೂ ಮಾಡಲಾಗದ ದುರವಸ್ಥೆಯಲ್ಲಿದ್ದೇವೆ.

೨. ಇನ್ನೂ ಎಷ್ಟೋ ವಿಚಾರಗಳಲ್ಲಿ ನಾವು ಪರರಾಷ್ಟ್ರಗಳ ಮೇಲೆ ಅವಲಂಬಿತರಾಗಿದ್ದೇವೆ. ಉದಾಹರಣೆಗೆ ಪೆಟ್ರೋಲ್ ಇದೆ ನೋಡಿ.

೩. ಭಾರತದ ಎರಡು ಮೂಲೆಯಲ್ಲಿರುವ ಇಬ್ಬರು ಪರಸ್ಪರ ಮಾತಾಡಲು ಇವತ್ತಿಗೂ ಆಂಗ್ಲವೇ ಹೆಚ್ಚಿನವರು ಉಪಯೋಗಿಸುವುದು. ರಾಷ್ಟ್ರಭಾಷೆಯಾದ ಹಿಂದಿಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯವಿದ್ದಷ್ಟು ಮಹತ್ವವೇ ಇಲ್ಲ. ಮಾತೃಭಾಷೆಯನ್ನೇ ಮರೆಯುವ ನಮ್ಮವರು ರಾಷ್ಟ್ರಭಾಷೆಯನ್ನು ಮರೆಯುವುದರಲ್ಲಿ ಆಶ್ಚರ್ಯವಿಲ್ಲ ಬಿಡಿ.

೪. ಯುಗ-ಯುಗಗಳ ಭಾರತದ ಇತಿಹಾಸ ಹೇಳುವ ಮಹಾಗ್ರಂಥಗಳನ್ನು ಓದಲು ನಮ್ಮಿಂದಾಗದು. ಕೆಲವು ಪರರಾಷ್ಟ್ರದವರು ಸೇರಿ ಇತ್ತೀಚಿನವರು ದಾಖಲಿಸಿದ ಕೆಲವು ನೂರು ವರ್ಷದ ಇತಿಹಾಸವನ್ನು ಓದಿಕೊಂಡು, ನಮ್ಮ ಬಗ್ಗೆ ನಮಗೇ ಸರಿಯಾಗಿ ಗೊತ್ತಿಲ್ಲದ ಸ್ಥಿತಿಯಲ್ಲಿ ಇದ್ದೇವೆ. ನಮ್ಮ ಎಲ್ಲಾ ಭಾಷೆಗಳಿಗೆ ಮೂಲವಾದ ಸಂಸ್ಕೃತವನ್ನು ಅರ್ಥಮಾಡಿಕೊಳ್ಳುವವರೇ ಅಲ್ಲೊಬ್ಬರು ಇಲ್ಲೊಬ್ಬರು ಅಷ್ಟೇ. ನಮ್ಮ ಭಾಷೆಯನ್ನು ನಮಗಿಂತ ಪರರೇ ಆಸಕ್ತಿಯಿಟ್ಟು ಕಲೆಯುವಂತಾಗಿದೆ.


ಆದರೂ, ಇಷ್ಟೆಲ್ಲಾ ದೋಶಗಳಿದ್ದರೂ, ದೇಶದ ಜನರನ್ನು ಒಗ್ಗೂಡಿಸುವ ದಿನವಾದ ಆಗಸ್ಟ್ ೧೫ ನಮಗೊಂದು ಮಹಾದಿನವೇ. ಆ ಕಾರಣಕ್ಕಾಗಿ ಭಾರತದ ಜನರಿಗೆ, ಭಾರತ ಮಾತೆಗೆ ಅಭಿನಂದನೆಗಳು. ಮುಂದೆಂದಾದರೂ ಭಾರತ ನಿಜವಾಗಿಯೂ ಸ್ವತಂತ್ರವಾಗಲೆಂದು ಹಾರೈಸುತ್ತೇನೆ.

Parisarapremi said...

ಒಳ್ಳೇ ಸ್ವಾತಂತ್ರ್ಯ.

Sridhar said...

oLLe parisarapremi.... :-)
oLLe comment -u.. :-)

Lakshmi S said...

@ ರಾಧೆ :

ನಿನ್ನದೊಬ್ಬಳದೇ ಇಂಡಿಯಾ ಅಂದುಕೋಬೇಡ್ವೇ ತಾಯಿ ! I love my India ಅಲ್ಲ... We love our India ಅದು ! :-)

@ಅಂತರ್ವಾಣಿ :

ಹು !

@ ಶ್ರೀಕಾಂತ್ :

ನಿಮ್ಮ ಕಳವಳ ಕಳೆದು ನಿಜವಾಗಿಯೂ ನಮಗೆ ಸ್ವಾತಂತ್ರ್ಯ ಸಿಗಲಿ ಎಂದು ನಾನೂ ಹಾರೈಸುತ್ತೇನೆ, ಪ್ರಯತ್ನಿಸುತ್ತೇನೆ ಸಹ !

@ ಪರಿಸರಪ್ರೇಮಿ:

ಹು ಗುರುಗಳೇ, ಒಳ್ಳೆ ಸ್ವಾತಂತ್ರ್ಯ ನೇ !

@ ಶ್ರೀಧರ್:

ಕರ್ಮಕಾಂಡ ಪ್ರಭುಗಳೇ...ಇದು ಗುರುಗಳ ಕಮ್ಮೆಂಟಿನ ಶ್ಲಾಘನೆ ಆಯ್ತು. ನಿಮ್ಮ ಕಮೆಂಟ್ ಎಲ್ಲಿ ?

Srikanth - ಶ್ರೀಕಾಂತ said...

@ಶ್ರೀಧರ - ಕರ್ಮಕಾಂಡದ ಪರಮಾವಧಿ! ಗಾಳಿಯಲ್ಲಿ ಚಪ್ಪಾಳೆ ಹೊಡೆದು ಸೊಳ್ಳೆ ಸಾಯಿಸಿದೆ ಎಂದು ಹೇಳಿದಂತಾಯ್ತು ನೀನು ಮಾಡಿದ್ದು.

Jagali bhaagavata ಜಗಲಿ ಭಾಗವತ said...

"ರಾಷ್ಟ್ರಭಾಷೆಯಾದ ಹಿಂದಿಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯವಿದ್ದಷ್ಟು ಮಹತ್ವವೇ ಇಲ್ಲ"

ಹಿಂದಿ ರಾಷ್ಟ್ರಭಾಷೆ ಅಲ್ಲ.

http://www.constitution.org/cons/india/p17343.html
Hindi is official language, but not a national language. A country as diverse as India may not need one single language accorded with national language status.

ವಿಕಾಸ್ ಹೆಗಡೆ/Vikas Hegde said...

ಕೊನೆ ಪ್ಯಾರಾ ಸ್ವಲ್ಪ ಬದಲಾಯಿಸುತ್ತೇನೆ.

ಇಷ್ಟು ದಿನ ಮಾಡುತ್ತಿದ್ದ ಹಾಗೆ ಇನ್ನು ಮುಂದೆಯೂ ಕೂಡ ವ್ಯವಸ್ಥೆಯನ್ನು ಬೈಯುತ್ತಲೇ ಅವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಾದಷ್ಟು ಪ್ರಯತ್ನ ಪಡುತ್ತೇನೆ. ನಿಜವಾಗಿಯೂ. ನನ್ನೊಬ್ಬನಿಂದ ಅದು ಆಗದಿದ್ದರೆ ನನಗೆ ಗೊತ್ತಿಲ್ಲ. ಆದರೆ ನನ್ನ ಕೈಲಾಗುವುದು ಇಷ್ಟೆ ಮಾತ್ರ ಅಲ್ಲಮ್ಮ - ಪ್ರಯತ್ನ"